ಶ್ಲೋಕವಾದ ವಾಲ್ಮೀಕಿಗಳ ಶೋಕ, ಬ್ರಹ್ಮನ ಆಗಮನ

ಪಕ್ಕದಲ್ಲಿ ಬರುತ್ತಿದ್ದ ಶಿಷ್ಯನಿಗೆ ಹೇಳಿದರು , " ಭರದ್ವಾಜ , ಶ್ಲೋಕ ಹುಟ್ಟಿದ್ದು ನೋಡು . ಶೋಕ ಹೋಗಿ ಶ್ಲೋಕವಾಗಿಬಿಟ್ಟಿತು ! ಕಾವ್ಯ ಸೃಷ್ಟಿ ನಮ್ಮ ಕೈಲಿಲ್ಲ.
ಶ್ಲೋಕವಾದ ವಾಲ್ಮೀಕಿಗಳ ಶೋಕ, ಬ್ರಹ್ಮನ ಆಗಮನ
ಬಿಸಿ ಕಡಿಮೆಯಾದಮೇಲೆ ಅವರಿಗನ್ನಿಸಿತು , " ಇದಾವ ಸೀಮೆ ಶಾಪ ? ಯಾವ ಪ್ರತಿಷ್ಠೆ ತಾನೆ ಶಾಶ್ವತವಾಗಿರುತ್ತದೆ ? ಎಲ್ಲರೂ ಅಶಾಶ್ವತರೇ . ತಾವೇನೂ ಅಂತಹ ಶಾಪವನ್ನೇ ಕೊಡಲಿಲ್ಲ . ಏನೊ ಉದ್ವೇಗ ; ಏನೋ ನೋವು ; ಏನೋ ತಳಮಳ ; ಅದು ಏನೋ ಬಾಯಿಂದ ಹೊರದಬ್ಬಿತು . ಆದರೆ ಇದೇನು ಆಶ್ಚರ್ಯ ?! ತಾವು ಶಾಪದಂತೆ ಕೊಟ್ಟಿದ್ದು ಶಾಸ್ತ್ರದಂತೆ ಗಣಗಳಿಂದ ಕೂಡಿದೆ ; ನಾಲ್ಕಕ್ಷರಗಳು ರಿಂಗಣಗುಣಿದಿದೆ . ಎರಡು ಸಾಲುಗಳಲ್ಲಿ 32 ಅಕ್ಷರಗಳ ಶ್ಲೋಕವೊಂದು ಹೊರಹೊಮ್ಮಿದೆ !  ಪಕ್ಕದಲ್ಲಿ ಬರುತ್ತಿದ್ದ ಶಿಷ್ಯನಿಗೆ ಹೇಳಿದರು , " ಭರದ್ವಾಜ , ಶ್ಲೋಕ ಹುಟ್ಟಿದ್ದು ನೋಡು . ಶೋಕ ಹೋಗಿ ಶ್ಲೋಕವಾಗಿಬಿಟ್ಟಿತು ! ಕಾವ್ಯ ಸೃಷ್ಟಿ ನಮ್ಮ ಕೈಲಿಲ್ಲ. ತನ್ನಿಂದ ತಾನೇ ಮೊಗ್ಗರಳಬೇಕು. ವೀಣೆಯಲ್ಲಿ ನುಡಿಸುವಂತಿದೆ. ಗೇಯ ಗುಣ ಹೊಂದಿದೆ. ಏರಿಳಿತಗಳಿಗೆ ಆಧಾರವಾಗಿದೆ . ಅಕ್ಷರಸಮೂಹವು ಗಣಗಳಾಗಿ ವಿಭಜಿಸಲ್ಪಟ್ಟಿದೆ . ನಾನು ನುಡಿದದ್ದು ಶ್ಲೋಕ ಛಂದಸ್ಸೇ ! " 
                (ಪಾದಬದ್ಧೋಕ್ಷರಸಮಂ ತಂತ್ರೀ ಲಯ ಸಮನ್ವಿತಃ
           ಶೋಕಾರ್ತಸ್ಯ ಪ್ರವೃತ್ತೋಮೇ ಶ್ಲೋಕೋ ಭವತು ನಾನ್ಯಥಾ )
ಬ್ರಹ್ಮಾಗಮನ:-
ಶಿಷ್ಯರು ದಡಬಡಿಸಿ ಒಳಬಂದರು. ಮುಖದಲ್ಲಿ ಆತಂಕ , ಹೆದರಿಕೆ , ಗಡಿಬಿಡಿ , ತೊದಲುತ್ತಿದ್ದಾರೆ, "ಗುರುಗಳೇ ! ನಾವೆಂದೂ ಕಂಡಿರದಷ್ಟು ದೊಡ್ಡ ಹಂಸ ; ಇಡೀ ಆಶ್ರಮದಷ್ಟು ಅಗಲ, ತೆಂಗಿನಮರದಷ್ಟು ಎತ್ತರ , ಈಗತಾನೇ ಆಕಾಶದಿಂದ ಇಳಿಯಿತು . ಭಯದಿಂದ ಏನೂ ತೋಚದೇ ಮೂಕರಾಗಿ ಮರಗಟ್ಟಿದ್ದಾಗ , ವೃದ್ಧರೊಬ್ಬರು ಅದರಿಂದ ಇಳಿದರು. ನಿಮಗೆ ಹೇಳಲು ಓಡಿಬಂದೆವು. "
ಧಿಗ್ಗನೆದ್ದ ವಾಲ್ಮೀಕಿಗಳಿಗೆ ಹರ್ಷ , ಆತಂಕ , ಉತ್ಸಾಹ . ಅರೆ ! ಬೆಳಿಗ್ಗೆ ಮಗ ಬಂದಿದ್ದ . ಈಗ ಅಪ್ಪ ಬಂದರು ! ಚುರುಕು ನಡಿಗೆಯಿಂದ ಹೊರಬರುವ ಹೊತ್ತಿಗೆ ಎಲೆಮನೆಯ ಬಾಗಿಲಿಗೇ ಬ್ರಹ್ಮ ಬಂದಿದ್ದ. 
ಸಾಷ್ಟಾಂಗ , ಪಾದಪ್ರಕ್ಷಾಳನ , ಸ್ವಾಗತ , ಅರ್ಘ್ಯ , ಮಧುಪರ್ಕ , ಕುಶಲೋಪರಿ... ಎಲ್ಲಾ ಶಾಸ್ತ್ರೀಯವಾಗಿ ನಡೆಯಿತು. ಬ್ರಹ್ಮನದು ಆಜಾನಬಾಹು ಶರೀರ. ಮುಖದಲ್ಲಿ ಸದಾ ಮಂದಹಾಸ. ಸ್ಥಿತಪ್ರಙ್ಞ. ಅರಳಿದ ಕಣ್ಣುಗಳು. ನಯನಗಳಲ್ಲಿ ಚುರುಕುತನ. ಕೆನ್ನೆ ತುಂಬಿದ ಗಡ್ಡದಲ್ಲಿ ಅರ್ಧಭಾಗ ಪೂರ್ಣ ಬಿಳುಪು. ಇನ್ನರ್ಧ ಕಪ್ಪು ; ಕಡುಗಪ್ಪು. ನೋಟಕ್ಕೆ ಮುದುಕ. ಆದರೆ ಸದಾ ಜವ್ವನಿಗ. ಎದೆಯನ್ನು ಮುಚ್ಚಿದ ರೇಶಿಮೆ ಶಲ್ಯ. ನಡು ಬಿಗಿದು ಕಟ್ಟಿದ ಕಚ್ಚೆ ಮೊಗಟ. ಜಪಮಾಲೆ, ದಂಡ , ಕಮಂಡಲ , ಅಭಯಗಳ ಕೈ. ಸದಾ ತಪಸ್ಸು , ಙ್ಞಾನ , ಜಪಗಳ ಪ್ರತೀಕ . ಪ್ರತಿಕ್ಷಣವೂ ಸೃಷ್ಟಿಕ್ರಿಯೆ . ಅದಕ್ಕೆ ಸದಾ ತಯಾರಿ . ಗುಣಾವಗುಣಗಳ ಅಳತೆ. ಯಮನಿಂದ ಬಂದ ಆ ಜೀವಿ ಮಾಡಿರುವ ಪುಣ್ಯ - ಪಾಪಗಳ ಯಾದಿ. ಹಿಂದಿನ ಜನ್ಮಗಳಲ್ಲಿ ಸಂಗ್ರಹಿಸಿದ ಪಾಪ ಪುಣ್ಯಗಳ ಸಂಚಿತ ರಾಶಿ . ಈಗಾಗಲೇ ಅನುಭವಿಸಲು ಆರಂಭಿಸಿದ ಪ್ರಾರಬ್ಧ . ಅದರಲ್ಲಿ ಆಗಿರುವ ಖರ್ಚು ; ಉಳಿದದ್ದರ ನೋಟ. ಕಳೆದ ಹುಟ್ಟುಗಳಲ್ಲಿ ಆ ಜೀವಿ ಯಾರನ್ನು ನೋಯಿಸಿತು, ಎಷ್ಟು ಸಂತಸವನ್ನು ಎಷ್ಟು ಜನರಿಗೆ ನೀಡಿತು , ಪರೋಪಕಾರಿಯೇ , ಪರಿಸರ ನಾಶಕನೇ , ಸ್ವಾರ್ಥಿಯೇ , ಅರ್ಥಿಯೇ , ಪರಾರ್ಥಿಯೇ , ದಾನಿಯೇ , ಕೃಪಣನೇ , ಧಾರ್ಮಿಕನೇ , ಅಧಾರ್ಮಿಕನೇ ..... ಈ ಎಲ್ಲದರ ತುಲನೆ . ಕೊನೆಗೆ ಆ ಜೀವಿಗೆ ಯಾವ ದೇಹ ಕೊಡಬೇಕು ? ಜಲಚರವೋ , ಹಾರುವ ಹಕ್ಕಿಯೋ , ತೆವಳುವ ಹಾವೋ - ಮೊಸಳೆಯೋ , ಜಡ್ಡುಗಟ್ಟಿದ ಮರವೋ , ಮನುಷ್ಯನೋ ಎಂಬುದರ ಲೆಕ್ಕಾಚಾರ . ಎಂತಹ ಜೀವನ , ಎಷ್ಟು ಕಾಲ ಇರಬೇಕು , ಧನ ಸಂಗ್ರಹವೋ , ದಾರಿದ್ರ್ಯವೋ , ಭೋಗವೋ , ರೋಗವೋ ಙ್ಞಾನವೋ , ಅಙ್ಞಾನವೋ , ಎಲ್ಲದರ ತೂಕ . ಹೀಗೆ ಪ್ರತಿ ಜೀವಿಯ ಸೃಷ್ಟಿಯ ಹಿನ್ನೆಲೆಯಲ್ಲಿ ಸತತ ಮಗ್ನ . ಕೋಟಿ ಕೋಟಿ ಜೀವಿಗಳ ಪ್ರತಿ ಕ್ಷಣದ ಜನನಕ್ಕೂ ಬ್ರಮ್ಹನ ಬಳಲದ ಬರಹ . 
ಸದಾ ಕಾರ್ಯ ತತ್ಪರನಾದ ಬ್ರಮ್ಹ ದೇವರು ಬಂದಿದ್ದಾರೆ ತನ್ನ ನೆಲೆಗೆ. ಈ ಎಲ್ಲ ಆಲೋಚನೆಗಳ ಹಿನ್ನೆಲೆಯಾಗಿ ಆ ಹಕ್ಕಿಯ ಮರಣ , ದಯನೀಯ ಹೆಣ್ಣು ಹಕ್ಕಿಯ ಆಕ್ರಂದನ , ತಾನಿತ್ತ ಅರ್ಥಹೀನ ಶಾಪ , ಈ ಎಲ್ಲ ಗೊಂದಲ ವಾಲ್ಮೀಕಿ ಮುಖದಲ್ಲಿ. 
ಎಲ್ಲವನ್ನೂ ಅರಿಯಬಲ್ಲ ಬ್ರಹ್ಮ ಕೇಳಿದ ; ವಾಲ್ಮೀಕಿಯ ಕಳವಳದ ಕಾರಣವನ್ನು . ಬೆಳಿಗ್ಗಿನಿಂದ ನಡೆದದ್ದೆಲ್ಲವನ್ನೂ ವಿವರಿಸಿ ಹೇಳಿದ ವಾಲ್ಮೀಕಿಗಳು ಕೊನೆಯಲ್ಲಿ ಕೇಳಿದರು , " ಯಾರಿಗೂ ಹಿಂಸೆ ಕೊಡೆನೆಂಬ ಪ್ರತಿಙ್ಞೆ ಮಾಡಿ ಸನ್ಯಾಸಿಯಾದ ನಾನು ಇಂದೇಕೆ ಆ ಬೇಡನಿಗೆ ಶಾಪ ಕೊಟ್ಟೆ ? ಏಕೆ ನನ್ನ ಮನಸ್ಸು ನೊಂದಿದೆ ? ಏಕೋ ಏನೋ ಏನೂ ಗೊತ್ತಾಗುತ್ತಿಲ್ಲ . ಕೇವಲ ತಳಮಳ . ಕೇವಲ ಗೊಂದಲ . " ಹೇಗೆ ಮಾತು ಮುಗಿಸುವುದೆಂದು ಅರಿಯದೆ ವಾಲ್ಮೀಕಿಗಳು ಸುಮ್ಮನಾದರು.
ನಗು ಮೊಗದ ವಿರಿಂಚಿ ಬಾಯಿಬಿಟ್ಟ . " ನಿನಗೆ ನೀನೇನೋ ಮಾಡಿದೆನೆಂಬ ಭ್ರಮೆ ಏಕೆ ? ಇಷ್ಟು ತಪಸ್ಸು ಮಾಡಿದ್ದೀಯೆ , ಇಷ್ಟು ವರ್ಷಗಳ ಚಿಂತನೆ ನಡೆಸಿದ್ದೀಯೆ , ಎಷ್ಟೆಷ್ಟೋ ಮುನಿಗಳ ಮಧ್ಯೆ ಚರ್ಚಿಸಿದ್ದೀಯೆ , ಯಾವುದೂ ನಿನ್ನ ಕೈಲಿಲ್ಲವೆಂದೂ , ಎಲ್ಲವೂ ದೈವೇಚ್ಛೆ ಎಂದೂ, ಏನೇ ಆದರೂ ಅದು ಪೂರ್ವ ನಿಯಾಮಕವೆಂದೂ ನೀನು ತಿಳಿದಿಲ್ಲವೇ ? ಇದ್ದಕ್ಕಿದ್ದಂತೆಯೇ ನಾರದ ಬಂದದ್ದು, ಬೇಡನೊಬ್ಬ ಹಕ್ಕಿ ಹೊಡೆದದ್ದು, ನೀನು ಶಾಪ ಕೊಟ್ಟದ್ದು, ಈಗ ನಾನು ಬಂದಿರುವುದು... ಇವೆಲ್ಲಾ ಯೋಜಿಸಿದಂತೆ ನಡೆಯುತ್ತಿದೆ ಎಂದು ಅನಿಸುತ್ತಿಲ್ಲವೇ? ಅಥವ ಇವುಗಳೆಲ್ಲ ಆಕಸ್ಮಿಕ ಅಂದುಕೊಳ್ಳುತ್ತಿದ್ದೀಯೋ."  (ಮುಗಿದಿಲ್ಲ !! ) 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com