ರಾಮಾಯಣ ಕಾವ್ಯಕ್ಕೆ ಬ್ರಹ್ಮ ಬೆಂಬಲ, ಅನುಮೋದನೆ, ಆಶೀರ್ವಾದ, ನಾಮಕರಣ

ಗೊಂದಲದಿಂದ ಹೊರಬಂದ ವಾಲ್ಮೀಕಿ ಕೇಳಿದರು, " ಹಾಗಾದರೆ ಇವೆಲ್ಲಾ ನಿನ್ನ ಯೋಜನೆಯೋ ? " ಖಚಿತ ಧ್ವನಿ ಬ್ರಹ್ಮನದು .
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ಗೊಂದಲದಿಂದ ಹೊರಬಂದ ವಾಲ್ಮೀಕಿ ಕೇಳಿದರು, " ಹಾಗಾದರೆ ಇವೆಲ್ಲಾ ನಿನ್ನ ಯೋಜನೆಯೋ ? " ಖಚಿತ ಧ್ವನಿ ಬ್ರಹ್ಮನದು . ಇದೊಂದೇ ಏನು , ಚರಾ ಚರಗಳಲ್ಲಿ ಏನೇನು ನಡೆಯುವುದೋ ಅವೆಲ್ಲವೂ ನನ್ನ ಸಂಕಲ್ಪವೇ !! ನನ್ನ ಇಚ್ಛೆಯಿಂದಲೇ ನಾರದ ಬಂದು ನಿನಗೆ ಉಪದೇಶಿಸಿದ್ದು. ಕೇಳಿದ್ದು ಬರವಣಿಗೆಗೆ ಇಳಿಯಬೇಕಲ್ಲ?.... ಅದರ ರಸೋತ್ಪತ್ತಿಗಾಗಿಯೇ ವ್ಯಾಧ-ಕ್ರೌಂಚ ಪ್ರಸಂಗ . ಅದು ನಿನ್ನನ್ನು ಕದಲಿಸಿಬಿಟ್ಟಿತು . ಭಾವನೆಗಳು ಉಕ್ಕಿ ಹರಿಯತೊಡಗಿದೆ . ಈಗ ಆ ಕರುಣಾ ರಸಾರ್ದ್ರ ಹೃದಯದಿಂದ ಕಾವ್ಯೋತ್ಪತ್ತಿಯಾಗಲೇ ಬೇಕಿದೆ . ಅದನ್ನು ನಿನ್ನಿಂದ ಮಾಡಿಸಲೇ ನಾನು ಬಂದದ್ದು . " 
ಮಾತಾಡದೇ ಗುರುವಾಣೆಗೆ ಕಿವಿಗೊಟ್ಟ ವಾಲ್ಮೀಕಿಗಳನ್ನುದ್ದೇಶಿಸಿ ಬ್ರಹ್ಮ ಭರವಸೆಯ ಬೆನ್ನುತಟ್ಟಿದ . " ನಾರದ ಹೇಳಿದಂತೆ ಕಾವ್ಯ ರಚನೆ ಮಾಡು . ರಾಮ , ಸೀತೆ , ಲಕ್ಷ್ಮಣ , ದಶಕಂಠ , ಕುಂಭಕರ್ಣ .... ಈ ಎಲ್ಲರೂ ಏನೇನು ಮಾತನಾಡಿದರೋ , ಅದು ಗುಟ್ಟಾಗಿರಲಿ , ಬಹಿರಂಗವಾಗಿರಲಿ , ಆ ಎಲ್ಲವೂ ನಿನಗೆ ಗೋಚರಿಸಲಿ . ಅದು ಕಾರಣ ನಿನ್ನ ಕಾವ್ಯದಲ್ಲಿ ಸುಳ್ಳು ಸುಳಿಯದೇ ಇರಲಿ . " ವೃತ್ತಂ ಕಥಯ ವೀರಸ್ಯ ಯಥಾ ತೇ ನಾರದಚ್ಛೃತಂ
ರಹಸ್ಯಂಚ ಪ್ರಕಾಶಂಚ ಯದ್‌ವೃತ್ತಂ ತಸ್ಯ ಧೀಮತಃ ನ ತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ"
ಬ್ರಹ್ಮ ಮಾತನಾಡುತ್ತಿದ್ದರೂ ವಾಲ್ಮೀಕಿಗಳು ತಮ್ಮ ದಿವ್ಯ ಪ್ರಙ್ಞೆಯಲ್ಲಿ ಮುಳುಗಿಬಿಟ್ಟಿದ್ದರು . ಕಣ್ಣ ಮುಂದೆ ನೂರು ನೂರು ಜನರ ಓಡಾಟ . ಅವರ ಮನಸ್ಸಿನಲ್ಲಿ ದಶರಥನಿಂದ ಹಿಡಿದು ದಶಕಂಠನ ವರೆಗಿನ ಪ್ರತಿ ಕ್ಷಣದ , ಪ್ರತಿ ಮಾತಿನ ಪುನರಭಿನಯವಾಗುತ್ತಿದೆ . ಬ್ರಹ್ಮ ವರದಿಂದ ಪದ್ಮಾಸನಸ್ಥ ವಾಲ್ಮೀಕಿಯ ಕಣ್ಣ ಮುಂದೆ ರಾಮ ವಂಶ , ರಾಮ ಜನನ , ವಿದ್ಯಾಭ್ಯಾಸ , ತಾಟಕಾ ವಧೆ , ವಿವಾಹ , ಕೈಕೆ ಪ್ರಸಂಗ , ದಂಡಕಾರಣ್ಯ ಪ್ರವೇಶ , ಶೂರ್ಪಣಖಾಗಮನ , ಸುಗ್ರೀವ ಭೇಟಿ , ಸಮುದ್ರೋಲ್ಲಂಘನ , ರಾವಣ ಪತನ ..... ಎಲ್ಲವೂ ಕಾಣುತ್ತಿವೆ. ಘಂಟೆಗಳೇ ಕರಗಿಹೋಯಿತೇನೋ ! ಸಂಜೆ ಸರಿದು ರಾತ್ರಿಯಾದಾಗ ಕಣ್ಣು ಬಿಟ್ಟ ವಾಲ್ಮೀಕಿಯ ತಲೆ ಸವರಿ ಬ್ರಹ್ಮ ವರವಿತ್ತ ; " ವಾಲ್ಮೀಕಿ , ರಾಮ ಕಾವ್ಯ ರಚಿಸು . ಆ ಆದಿಕಾವ್ಯ ದಿನ ಕಳೆದಂತೆಲ್ಲ ವಿಸ್ತರಿಸುತ್ತಲೇ ಇರುತ್ತದೆ . ಭಾರತದ ಅಂಚೂ ದಾಟಿ ವಿಶ್ವದೆಲ್ಲ ಊರುಗಳಲ್ಲಿಯೂ ಇದರ ಸಂಕೀರ್ತನೆ ನಡೆಯುತ್ತದೆ . ಸಂತುಷ್ಟನಾಗಿ ನಾನು ನಿನಗೆ ಈ ವರ ಕೊಡುತ್ತಿರುವೆ ತಗೆದುಕೊ. " ಕಮಂಡಲದ ನೀರನ್ನು ವಾಲ್ಮೀಕಿಗಳ ಮೇಲೆ ಸಿಂಪಡಿಸಿ ಆಶೀರ್ವದಿಸಿದ ಆ ಬ್ರಹ್ಮ " ಭೂಮಿಮೇಲೆಲ್ಲಿವರೆಗಿರುವುದೋ ನದಿ ಬೆಟ್ಟ  ಅಲ್ಲಿತನಕೀ ಕಾವ್ಯ ಪ್ರಸರಿಸಲಿ ಜಗವೆಲ್ಲ ಎಲ್ಲಿವರಿಗೀ ಕಾವ್ಯ ಓಡಾಡುತಿರುವುದೋ  ಅಲ್ಲಿವರೆವಿಗೆ ನಿನಗೆ ಸ್ವಾಗತವು ಎಲ್ಲೆಲ್ಲು ವೈಕುಂಠ ಕೈಲಾಸ ಸತ್ಯಲೋಕಕ್ಕೆಲ್ಲ ನಿನಗೆ ಮುಕ್ತ ಪ್ರವೇಶ ಅಮರರಾಜ್ಯಕ್ಕೂ " 
                   ( ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ
                 ತಾವದ್ ರಾಮಾಯಣ ಕಥಾ ಲೋಕೇಷು ಪ್ರಚರಿಷ್ಯತಿ
               ಯಾವದ್ ರಾಮಾಯಣ ಕಥಾ ತ್ವತ್ಕೃತಾ ಪ್ರಚರಿಷ್ಯತಿ
               ತಾವದೂರ್ಧ ಮದಶ್ಚತ್ವಂ ಮಲ್ಲೋಕೇಷು ನಿವತ್ಸ್ಯಸಿ )
ದ್ವಿತೀಯ ನಾಮಕರಣ:
ಎಷ್ಟು ವರ್ಷಗಳು ಹಿಡಿಯಿತೋ ಕಾವ್ಯ ಪೂರ್ಣವಾಗಲು. ಇದೀಗ ಅದಕ್ಕೆ ಹೆಸರಿಡಬೇಕಲ್ಲ ! ಅವರ ಮನದ ತುಂಬ ಸೀತಾ ಚಿತ್ರ. ಎಂತಹ ಸಾಧ್ವಿ ! ಗಂಡನನ್ನು ಬಿಟ್ಟಿರದ ಪತಿವ್ರತೆ . ಕಾಡಿನಲ್ಲಿ ಅನುಸರಣೆ. ಎಂತಹ ವಿಪತ್ತುಗಳನ್ನು ಎದುರಿಸಿದಳು ! ರಾವಣನಂತಹ ಸುಂದರ, ಪರಾಕ್ರಮಿ, ಧನಿಕ, ಚಿನ್ನದಲ್ಲೇ ಕಟ್ಟಿದ ಅರಮನೆಯ ಒಡೆಯ, ಎಲ್ಲ ದೇವತೆಗಳಿಗೂ ಶಾಸಕ ,ಇಂತಹ ರಾವಣ ಅವಳ ಮುಂದೆ ಬೇಡಿ ಅಂಗಲಾಚಿದರೂ , ರಾಕ್ಷಸಿಯರ ಮೂಲಕ ಹೆದರಿಸಿದರೂ , ಕೊನೆಗೆ ಬೆಳಗಿನ ತಿಂಡಿಗಾಗಿ ಅವಳನ್ನೇ ಚೂರು ಚೂರು ಮಾಡುತ್ತೇನೆಂದರೂ... ಏನೇ ಹರ ಸಾಹಸಪಟ್ಟರೂ ಒಲಿದಳೇ ? ಒಮ್ಮೆಯಾದರೂ ಮೆಚ್ಚುಗೆಯಿಂದ ರಾವಣ ಬೇಡ , ಲಂಕೆಯನ್ನಾದರೂ ನೋಡಿದಳೇ ? ಶತ್ರುಕ್ಷೇತ್ರದಲ್ಲಿ , ಒಬ್ಬಂಟಿಯಾಗಿ, ನಗುಮೊಗದ ಆಹ್ವಾನವಿರದ ಆ ವೈರಭೂಮಿಯಲ್ಲಿ, ಅದೆಂತು ಸಂಯಮದಿಂದಿದ್ದಳು? ಅದೆಂತು ಆ ಸಂಕಷ್ಟದ ಸರೆಮಾಲೆಯನ್ನು ಧರಿಸಿದ್ದರೂ ಸಾಯದೇ ಜೀವ ಹಿಡಿದಿದ್ದಳು?... ಹೀಗೆ ಏನೇನೋ ತಲೆತುಂಬಿ ತಮ್ಮ ಕಾವ್ಯಕ್ಕೆ ಹೆಸರಿಟ್ಟುಬಿಟ್ಟರು, " ಸೀತಾಮಹಾಚರಿತ್ರೆ " ( ಸೀತಾಯಾಶ್ಚರಿತಮ್ ಮಹತ್).
ತಾವು ಬರೆದಿದ್ದನ್ನೇ ಒಂದೆರಡು ಬಾರಿ ಓದಿ ಆನಂತರ , " ಏತಕ್ಕೂ ಇರಲಿ , ಪ್ರತ್ಯಕ್ಷ ಸಾಕ್ಷಿ ಹೇಗೂ ಇಲ್ಲೇ ಇದ್ದಾಳೆ . ಆಕೆಯ ಎದುರೇ ಓದಿ ಬಿಡೋಣ. ಏನಾದರೂ ತಪ್ಪಿದ್ದರೆ, ಬದಲಾವಣೆಗಳಿದ್ದರೆ ಸರಿಪಡಿಸಿಬಿಡೋಣ ಎಂದು ಸೀತೆಯನ್ನು ಆಹ್ವಾನಿಸಿದರು.
(ಮುಗಿದಿಲ್ಲ !! ) 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com