'ಸೀತಾಚರಿತ್ರೆ'ಗೆ ಸೀತೆಯಿಂದಲೇ ವಿರೋಧ!

ಕೈಜೋಡಿಸಿ ಹೇಳಿದಳು ಸೀತೆ; ನೀವು ಬರೆದಿದ್ದರಲ್ಲಿ ಯಾವ ದೋಷವೂ ಇಲ್ಲ , ಸುಳ್ಳೂ ಇಲ್ಲ. ಆದರೆ.... ಶೀರ್ಷಿಕೆ ಮಾತ್ರ ಸರಿಹೊಂದುತ್ತಿಲ್ಲವೆಂದು ಅನಿಸುತ್ತಿದೆ. ಅವರೆಲ್ಲಿ ನಾನೆಲ್ಲಿ ?!
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಮ್ಮ ಚರಿತ್ರೆಯನ್ನೇ ಮಹರ್ಷಿಗಳು ಬರೆದಿರುವುದು ಕೇಳಿ ಕುತೂಹಲ, ರೋಮಾಂಚನಗಳನ್ನು ಹೊದ್ದು ಕುಳಿತ ಸೀತೆ, ಕೇಳುತ್ತ ಕೇಳುತ್ತ ನಕ್ಕಿದ್ದೆಷ್ಟೋ , ಅತ್ತಿದ್ದೆಷ್ಟೋ, ನೊಂದದ್ದೆಷ್ಟೋ, ತಲೆದೂಗಿದ್ದೆಷ್ಟೋ, ಸುಖಿಸಿದ್ದೆಷ್ಟೋ... ಸುಮಾರು ದಿನಗಳು ಕೇಳಿ ಕೇಳಿ ಮುಕ್ತಾಯವಾದಾಗ, ಕಾಲಿಗೆ ಬಿದ್ದ ಸಾಧ್ವಿ ಹೇಳಿದಳು; " ನಾನೆಷ್ಟು ಋಣಿ ! ಅನಾಥಳಾದ ನನಗೆ ಆಶ್ರಯವಿತ್ತಿರಿ, ಮಕ್ಕಳಿಗೆ ಪೋಷಕರಾದಿರಿ, ಮಕ್ಕಳು ತಂದೆಯ ಬಗ್ಗೆ ಕೇಳುತ್ತಿದ್ದರೆ, ಹೆಂಡತಿಯನ್ನು ತೊರೆದ ಗಂಡನೆಂದು ಅವರು ಭಾವಿಸಿ ನನ್ನ ಪತಿಯ ಬಗ್ಗೆ ಅವರೆಲ್ಲಿ ಕೆಟ್ಟ ಅಭಿಪ್ರಾಯ ತಾಳುವರೋ ಎಂದು ಕುದಿಯುತ್ತಿದ್ದೆ. ಇದೀಗ ತಾವು ಬರೆದ ರಾಮ ಕಾವ್ಯವನ್ನು ಅವರು ಓದಿದರೆ , ರಾಮರ ದಿವ್ಯ ಚರಿತ್ರೆಯನ್ನು ಕೇಳಿ ಅವರ ತಲೆ ಬಾಗದೆ ಇರದು.
ನನಗೀಗ ಸಮಾಧಾನವಾಗಿದೆ. ಹೇಗೆ ತೀರಿಸಲಿ ನಿಮ್ಮ ಋಣ ?! ಆದರೆ.... " ಸೀತೆಯ ಮಾತು ಮುರಿದಿತ್ತು. " ಏನದು? ಏನಾದರೂ ತಪ್ಪು ಬರೆದಿರುವೆನೇ ?! ಬ್ರಹ್ಮ ವರದಿಂದ ಸುಳ್ಳು ಬರಲು ಸಾಧ್ಯವೇ ಇಲ್ಲವಲ್ಲ! " ಗೊಂದಲದ ನುಡಿಯಲ್ಲಿ ಕೇಳಿದ ಮಹರ್ಷಿಗಳಿಗೆ ಮತ್ತೊಮ್ಮೆ ಕೈಜೋಡಿಸಿ ಹೇಳಿದಳು ಸೀತೆ; " ನೀವು ಬರೆದಿದ್ದರಲ್ಲಿ ಯಾವ  ದೋಷವೂ ಇಲ್ಲ ,ಸುಳ್ಳೂ ಇಲ್ಲ. ಆದರೆ.... ಶೀರ್ಷಿಕೆ ಮಾತ್ರ ಸರಿಹೊಂದುತ್ತಿಲ್ಲವೆಂದು ಅನಿಸುತ್ತಿದೆ. ಅವರೆಲ್ಲಿ ನಾನೆಲ್ಲಿ ?! ಅವರ ಆ ಸಾತ್ವಿಕ ಧೀಮಂತ ವ್ಯಕ್ತಿತ್ವವೆಲ್ಲಿ , ಕುಗ್ಗಿ ಹಿಗ್ಗುವ ಏರಿಳಿತದ ನನ್ನ ಮನಸ್ಥಿತಿಯೆಲ್ಲಿ ? ಅವರಿಲ್ಲದೆ ; ಅವರ ಆಶ್ರಯವಿಲ್ಲದೆ ಅವರ ಬೆಂಗಾವಲಿಲ್ಲದೆ ನಾನೆಲ್ಲಿ ?! ನಾನೇನಾದರೂ ಇದ್ದರೆ, ಬದುಕಿದ್ದರೆ, ನಿಮ್ಮ ಕಣ್ಣಲ್ಲಿ ಏನಾದರೂ ನಿರ್ದೋಷಳಾಗಿ ಕಂಡಿದ್ದರೆ ಅದು ಕೇವಲ ರಾಮ ನಾಮ ಸ್ಮರಣೆಯಿಂದ; ಅವರ ಆಶೀರ್ವಾದದಿಂದ ಮಾತ್ರ. ಅವರಿಗೆ ನನ್ನಿಂದ ಎಷ್ಟು ತೊಂದರೆಯಾಗಿದೆ, ಎಷ್ಟು ಕಷ್ಟಪಟ್ಟರು, ಈಗಲೂ ನನ್ನಿಂದಾಗಿ ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದು ನನಗೇ ಗೊತ್ತು. ನನ್ನ ಪಾಪ ಪ್ರಙ್ಞೆ ನನ್ನನ್ನು ದಹಿಸುತ್ತಿದೆ . ದಯವಿಟ್ಟು ತಾವಿಟ್ಟಿರುವ ಶಿರೋನಾಮೆಯನ್ನು ಬದಲಿಸಿದರೆ ನನಗೆ ಮಹಾ ಸಮಾಧಾನ". ಹೇಳುತ್ತ ಹೇಳುತ್ತ ಸೆರಗನ್ನು ಬಾಯಿಗಡ್ಡವಿಟ್ಟು ಅಳುವನ್ನು ನಿಲ್ಲಿಸುವ ಪ್ರಯತ್ನದಲ್ಲಿ ಸೋತು, ಬಿಕ್ಕಳಿಸುತ್ತ ಎದ್ದು ಹೋಗಿಬಿಟ್ಟಳು ತನ್ನ ಗುಡಿಸಿಲಿಗೆ .
ಅವಾಕ್ ಆದರು ಮಹರ್ಷಿಗಳು. ಬ್ರಹ್ಮ ವರವಿತ್ತಾಗ ಹೇಳಿದ್ದೇನು ? ತಾನು ಸುಳ್ಳು ಬರೆಯುವುದಿಲ್ಲ ಎಂದು. ಆದರೆ ಹೀಗೇಕೆ ತಾನು ಬರೆದಿದ್ದು ಮತ್ತೆ ? ಈಕೆ ನೋಡಿದರೆ ತಾನು ಗಂಡನಿಗೆ ನೋವಿತ್ತೆನೆಂದೂ, ಈಗ್ಗೂ ಆತನ ನೋವಿಗೆ ತಾನೇ ಕಾರಣಳೆಂದೂ ಅಳುತ್ತಿದ್ದಾಳೆ. ಜನಾಭಿಪ್ರಾಯಕ್ಕೆ ಮನ್ನಣೆಯಿತ್ತು ರಾಮರು ಆಕೆಯನ್ನು ತ್ಯಜಿಸಿದ್ದರೆ, ಆ ಜನರೋ , ಅವರಲ್ಲಿ ಹಲ ಮಂದಿ ಶ್ರೀರಾಮರು ಸೀತೆಯನ್ನು ಅನಾಥಳನ್ನಾಗಿಸಿದ್ದು ಸರಿಯಲ್ಲವೆಂದು ಹೇಳುತ್ತಿದ್ದಾರಂತೆ. ಹೇಗೆ ಮಾಡಿದರೂ ಒಟ್ಟಾಗಿ ಜನರನ್ನು ಮೆಚ್ಚಿಸುವವರಾರು ? ಇತ್ತ ನೋಡಿದರೆ ಈ ಸೀತೆ ಗಂಡನ ಬಗ್ಗೆ ಒಂದೇ ಒಂದು ಕಹಿನುಡಿಯನ್ನೂ ಇಲ್ಲಿಯ ವರೆವಿಗೆ, ಇಷ್ಟು ತಿಂಗಳುಗಳಾದರೂ ಒಮ್ಮೆಯಾದರೂ ನುಡಿದಿಲ್ಲ. ಅಲ್ಲದೇ ಇಂದು ತಪ್ಪೊಪ್ಪಿಗೆ ಬೇರೆ !
ಇದ್ದಾತು. ಗಂಡನ ಗಾಂಭೀರ್ಯ, ಗೌರವ, ಗತ್ತು, ಗಣ್ಯ ನಿಲುವು, ಗುರಿ, ಗಹನತೆಗಳು ಹೆಂಡತಿಗಲ್ಲದೇ ಮತ್ತಾರಿಗೆ ಗೊತ್ತು ? ರಾಮರಲ್ಲಿ ಆ ಭೂರಿ ನಿಲುವಿಲ್ಲದೇ ಇದ್ದಿದ್ದರೆ ಸೀತೆ ಆತನಿಗಾಗಿ ಈಗಿರಲಿ ಆಗ; ಲಂಕೆಯಲ್ಲಿ; ಅಶೋಕವನದಲ್ಲಿ ಕಾಯುತ್ತಿದ್ದಳೇ ? ಮರೆಯಲ್ಲಿದ್ದೂ ಮರ್ಯಾದಿಸುತ್ತಿದ್ದಳೇ ? ಆಂಜನೇಯನ ಮುಂದೆ ದೀನಳಾಗಿ ಕೊರಗುತ್ತಿದ್ದಳೇ ? ಹೌದು - ಹೌದು; ತಾನು ಅನರ್ಘ್ಯ ಎಂದು ಬೆಲೆ ಕಟ್ಟಿದ ಸೀತೆ ರಾಮರನ್ನು ತನ್ನ ತಲೆಮೇಲೆ ಕೂಡಿಸಿಕೊಂಡಿರಬೇಕಿದ್ದರೆ; ರಾಮ ನೆನಪಿನಲ್ಲಿಯೇ ತನ್ನ ಶೇಷಾಯುಷ್ಯವನ್ನು ಕಳೆಯಬೇಕೆಂದಿದ್ದರೆ, ನಿಜಕ್ಕೂ ರಾಮರದು ಧವಳಚರಿತ್ರೆಯೇ ಇರಬೇಕು, ಸ್ಫಟಿಕ ಶೀಲವೇ ಇರಬೇಕು, ತೆರೆದ ಹೃದಯವೇ ಇರಬೇಕು, ಶುದ್ಧ ನಡೆಯೇ ಇರಬೇಕು. ಸ್ಥಿರ ನುಡಿಯೇ ಇರಬೇಕು, ಮಂಗಳ ಮನವೇ ಇರಬೇಕು.
ಮತ್ತೊಮ್ಮೆ ರಾಮಚರಿತ್ರೆ ಅವರ ಕಣ್ಣ ಮುಂದೆ ಹಾದು ಹೋಯಿತು. ಸಾಮಾನ್ಯರು ಕಷ್ಟ ಪಡುವಂತೇನು ; ಅದಕ್ಕಿನ್ನ ಮಿಗಿಲು ನಲುಗಿದ್ದಾರೆ . ನಮಗೆ ಬರಬಹುದಾದ ಸಾವಿರ ಪಟ್ಟು ಸಮಸ್ಯೆಗಳ ತೀವ್ರ ಸವಾಲುಗಳನ್ನವರು ಎದುರಿಸಿದ್ದಾರೆ. ಎಂತೆಂತಹ ಭಾವುಕ ಸನ್ನಿವೇಶಗಳ ಸೆಳೆತಕ್ಕೂ ಸಿಗದೇ, ಕೇವಲ ಧರ್ಮೈಕ ದೃಷ್ಟಿಯಿಂದ ಜೀವಿಸಿದ್ದಾರೆ. ನೂರರಲ್ಲೊಂದು ಅಂಶ ರಾಜಿಮಾಡಿಕೊಂಡಿದ್ದರೂ ಕಷ್ಟಗಳೆಷ್ಟೋ ಕರಗುತ್ತಿತ್ತು . ಇಲ್ಲ ! ನೂರಕ್ಕೆ ನೂರೂ ಅಪ್ಪಟ ಚಿನ್ನ ಅವರು. ಯಾರೂ ನೋಡದಿದ್ದರೂ, ಅಡವಿಯ ಗರ್ಭದಲ್ಲಿದ್ದರೂ ಎಂದೂ ಎಲ್ಲೂ ಧರ್ಮಚ್ಯುತಿ ಇಲ್ಲ. ಎಲ್ಲ ವಿಷಯಗಳಲ್ಲೂ ಸಾಮಾನ್ಯರಂತೆಯೇ ಬದುಕಿದ್ದರೂ, ಧರ್ಮಪ್ರಶ್ನೆ ಬಂದಾಗ ನಮಗಿನ್ನ ಆತ ಬಹು ಎತ್ತರಕ್ಕೆ ಏರಿದ ಮಹಾನುಭಾವ . ಧರ್ಮ ಪ್ರಙ್ಞೆಗಾಗಿ , ಧರ್ಮ ಜಾಗೃತಿಗಾಗಿ , ಧರ್ಮ ಸ್ಥಾಪನೆಗಾಗಿ , ಧರ್ಮ ಜಯಕ್ಕಾಗಿ ಕಷ್ಟ ಬಟ್ಟೆಯುಟ್ಟು ನಷ್ಟ ಉತ್ತರೀಯ ಹೊದ್ದಾತ. ನಿಜ-ನಿಜ, ಶ್ರೀರಾಮರು ಧರ್ಮ ಪುತ್ಥಳಿ. ಸೀತೆ ಹೇಳಿದ್ದು ಸರಿ. ತಮ್ಮ ಕಾವ್ಯ ನಾಯಕ ಶ್ರೀರಾಮರೇ. 
ಎಂತಹ ಮೊಂಕು ನನಗೆ ! ನಾನು ಏನೋ ಬರೆದು ಬ್ರಹ್ಮನ ಮರೆಯಲ್ಲಿ ಬಚ್ಚಿಟ್ಟುಕೊಳ್ಳ ಹೋಗುತ್ತಿದ್ದೇನೆ. ನಾನು ಬರೆದದ್ದು ಸುಳ್ಳಾಗದು ಎಂದು ಹೇಳಿದ್ದ ಅದೇ ಬ್ರಹ್ಮ, ತನ್ನ ಕಾವ್ಯದ ಶೀರ್ಷಿಕೆಯನ್ನೂ ಹೇಳಿಬಿಟ್ಟನಲ್ಲ ! ಅದನ್ನೇಕೆ ಮರೆತೆ ನಾನು ? ವಿರಿಂಚಿ ಹೇಳಿದ್ದೇನು? " ಪುಣ್ಯ ಶೀಲವಾದ ರಾಮ ಕಥೆಯನ್ನು ಬರೆ". ( ಕುರು ರಾಮಕಥಾಂ ಪುಣ್ಯಾಂ ). ಬ್ರಹ್ಮನೇ ಪ್ರೋತ್ಸಾಹಿಸಿ , ಬ್ರಹ್ಮನೇ ಮಗನಿಂದ ಕಥೆ ಹೇಳಿಸಿ , ಬ್ರಹ್ಮನೇ ಹೆಸರಿಟ್ಟ ಕಾವ್ಯ ಇದು . ಹೌದು , ತಾನು ಅತಿಬುದ್ಧಿವಂತಿಕೆಯಿಂದ ಏನೋ ಹೆಸರಿಸಹೋದೆ. ಅದು ತಪ್ಪು. ಈಗ ಮುಟ್ಟಿದ್ದಕ್ಕೆ ಮೂರನೆಯ ಬಾರಿ ಅತಿಸರಳ, ಅತಿ ಗೂಢ, ಅತಿ ಗಹನ, ಅತ್ಯಸಾಧಾರಣ ಹೆಸರಿಡಬೇಕು. (ಮುಂದುವರೆಯುವುದು...) 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com