ನಾನು ಬರೆದಿರುವುದು ಗದ್ಯವೂ ಅಲ್ಲ , ಪ್ರಬಂಧವೂ ಅಲ್ಲ , ನೀಳ್ಗವಿತೆಯೂ ಅಲ್ಲ , ಅದೊಂದು ಕಾವ್ಯ . ಸರ್ಗಗಳಾಗಿ ವಿಭಜಿಸಿದ್ದೇನೆ . ಅಲಂಕಾರಗಳ ಸೌಮ್ಯ ನಗಗಳನ್ನು ಕಾವ್ಯ ದೇವಿಗೆ ಒಪ್ಪಿಸಿದ್ದೇನೆ . ಮಂದಾನಿಲ ಗತಿಯ ಶೈಲಿ ನನ್ನ ಈ ಕಾವ್ಯಕ್ಕೆ ಇದೆ . ನಾಯಕ , ನಾಯಕಿ , ಪ್ರತಿನಾಯಕ .... ಇತ್ಯಾದಿ ಔಚಿತ್ಯ ಪಾತ್ರ ಪ್ರಪಂಚವಿದೆ . ಹಿತಮಿತವಾದ ರಸಪುಷ್ಟಿಯೂ ಇದೆ . ಅತ್ಯಂತ ಪ್ರಸನ್ನವಾಗಿ ಓದುಗನಿಗೆ ಕಷ್ಟಕೊಡದೆ ಸುಲಭವಾಗಿ ಓದಿಸಿಕೊಂಡೂ ಹೋಗುತ್ತದೆ . ಈ ಎಲ್ಲಕ್ಕಿನ್ನ ಮುಖ್ಯವಾಗಿ ಶ್ರೀರಾಮರ ನಡೆ ಗಮನಾರ್ಹವಾಗಿದೆ . ತಮಗೆ ಬಂದ ಸಂಕಟಗಳಿಗೆ , ಸವಾಲುಗಳಿಗೆ , ಸಮಸ್ಯೆಗಳಿಗೆ ಅವರು ಏನು ಪರಿಹಾರ ಕಂಡುಕೊಂಡರೆಂಬುದು ಪ್ರಮುಖವಾಗಬೇಕಾಗಿದೆ . ಅದೇ ನಮ್ಮ ಅಧ್ಯಯನವಾಗಬೇಕಿದೆ ಕೂಡ . ರಾಮರ ಬದುಕೇ ಒಂದು ನೀತಿಪಾಠ . ಅವರ ನಡೆಯೇ ನಮ್ಮ ಬದುಕಿನ ಬಟ್ಟೆ , ಅವರ ನುಡಿಯೇ ನಮ್ಮ ಜೀವನದ ಮಂತ್ರ ಎಂದಾಗಬೇಕಿದೆ . ಎಂದಮೇಲೆ ನನ್ನ ಕೃತಿ ಒಂದು ಕಾವ್ಯ ; ಮಹಾಕಾವ್ಯ ; ಅದಿಕಾವ್ಯ ; ಅನುಕರಣೀಯ ಕಾವ್ಯ ; ರಸಕಾವ್ಯ ! ಇದು ರಾಮರ ನಡೆ ; ರಾಮರ ಗತಿ ; ರಾಮಧರ್ಮ ; ರಾಮಮಾರ್ಗ ; ರಾಮಪಥ ! ಅದೇ ರಾಮಾಯಣ. ಅದೇ ಅದೇ ಪ್ರಪಂಚ ಪ್ರಥಮ ಕಾವ್ಯರಾಜ ; ಅದೇ ಪುಣ್ಯ ಕಾವ್ಯ ; ಅದೇ ಮಾರ್ಗಕಾವ್ಯ ; ಅದೇ ನವ್ಯಕಾವ್ಯ ; ಅದೇ ನಿತ್ಯಕಾವ್ಯ ; ಅದೇ ಸತ್ಯಕಾವ್ಯ ; ಅದೇ ನಿತ್ಯನೂತನ ಕಾವ್ಯ ; ಅದೇ ರಾಮಾಯಣಂ !