ಅಯೋಧ್ಯೆಯಲ್ಲಿ ಸೂರ್ಯವಂಶ, ರಾಮಾಯಣದ ಸಾಹಸಗಾಥೆಗಳನ್ನು ವಿವರಿಸುವ ಕುಶೀಲವ ಗಾನ

ಅಜ್ಜನ ಅಪ್ಪಣೆಯಂತೆ ಕುಶೀಲವರು ಊರೂರುಗಳಲ್ಲಿ ರಾಮಾಯಣ ಹಾಡುತ್ತ ಹಾಡುತ್ತ ಇದೀಗ ಅಯೋಧ್ಯೆಗೆ ಬಂದಿದ್ದಾರೆ. ಚೌಕಗಳಲ್ಲಿ, ದೇಗುಲಗಳಲ್ಲಿ, ಸೌಧಗಳಲ್ಲಿ ಅವರ ರಾಮಾಯಣ ಗಾನ ಗಂಗೆ ಹರಿಯುತ್ತಿದೆ.
ಲವ-ಕುಶ
ಲವ-ಕುಶ
"ಅದೇನು ಕಂಠ; ಅದೇನು ರೂಪ; ಅದೆಂತಹ ಅಭಿನಯ! ಈ ಪುಟ್ಟರ ಬಾಯಲ್ಲಿ ದೊಡ್ಡ ಕಥೆ; ದೊಡ್ಡವರ ಕಥೆ; ನಮ್ಮ ರಾಜರ ಕಥೆ; ರಾಜಾರಾಮರ ಕಥೆ. ಅವರ ಜನನದ ಹಿನ್ನೆಲೆ, ಅದ್ಭುತ ಸೃಷ್ಟಿ, ವಿಶ್ವಮಿತ್ರ ವಿಶೇಷ, ತಾಟಕಾ ಸಂಹಾರ, ಗಂಗಾವತರಣ, ಉಮಾ ವಿವಾಹ, ಅಹಲ್ಯಾ ಪ್ರಸಂಗ, ಸೀತಾ ಕಲ್ಯಾಣ... ಒಂದೇ ಎರಡೇ ? ನಮಗೇ ಗೊತ್ತಿರದ ಅನೇಕ ವಿಷಯಗಳು; ರಹಸ್ಯ ಪ್ರಸಂಗಗಳು; ನಾವು ತಪ್ಪಾಗಿ ತಿಳಿದುಕೊಂಡದ್ದರ ನಿಜ ನಿರೂಪಣೆ; ಅನಂತರ ಅರಮನೆಯ ಒಳಗಿನ ಅಂತಃಕಲಹ, ಗುಪ್ತ ಮಾತ್ಸರ್ಯ, ಬೂದಿ ಮುಚ್ಚಿದ ಕೆಂಡದ ಸವತಿ ಸಮರ... ಓಹ್!... ರಾಮರಿಗೆ ಬಂದ ಕಷ್ಟ, ಅದನ್ನವರು ಎದುರಿಸಿದ ರೀತಿ, ಅವರ ಧೀರ ನಿಲುವು, ಸೀತಾ ನಿಷ್ಠೆ, ಅನುಜ ಲಕ್ಷ್ಮಣನ ಅನುಸರಣೆ.... ಅಬ್ಬಬ್ಬ! ಏನೆಲ್ಲ ನೆಡೆದಿವೆ! ಎಂತಹ ಧರ್ಮಸೂಕ್ಷ್ಮಗಳು ! ನಮಗೆ ಇವುಗಳ ಅರಿವೇ ಇಲ್ಲ. ಕೇಳಿರುವುದೆಲ್ಲ ಏನೇನೋ. ಏಷ್ಟೋ ಸುಳ್ಳುಗಳು, ಎಷ್ಟೆಷ್ಟೋ ಅಡ್ಡಹಾದಿ ಹಿಡಿದ ಕಥೆಗಳು... " ಸಾವಿರ ಉದ್ಗಾರಗಳು ಅಯೋಧ್ಯಾ ನಿವಾಸಿಗರಿಂದ. 
ಅಜ್ಜನ ಅಪ್ಪಣೆಯಂತೆ ಕುಶೀಲವರು ಊರೂರುಗಳಲ್ಲಿ ರಾಮಾಯಣ ಹಾಡುತ್ತ ಹಾಡುತ್ತ ಇದೀಗ ಅಯೋಧ್ಯೆಗೆ ಬಂದಿದ್ದಾರೆ. ಚೌಕಗಳಲ್ಲಿ, ದೇಗುಲಗಳಲ್ಲಿ, ಸೌಧಗಳಲ್ಲಿ ಅವರ ರಾಮಾಯಣ ಗಾನ ಗಂಗೆ ಹರಿಯುತ್ತಿದೆ. ಅವರೆಲ್ಲಿ ಹಾಡಿದರೂ ಜನರು ಮೈಮರೆತು ನೆರೆಯುತ್ತಿದ್ದಾರೆ. ತಮ್ಮ ರಾಜರ ಕಥೆಯನ್ನು ಕೇಳುತ್ತಿದ್ದಾರೆ; ಆನಂದಿಸುತ್ತಿದ್ದಾರೆ.
ವಾರ್ತೆ ಹಬ್ಬಿ ಅರಮನೆಯ ಸೇವಕರು, ಅಧಿಕಾರಿಗಳು ಅವರ ಕಥೆ ಕೇಳಲು ಬಂದು ಮೈಮರೆತರು. ಮಂತ್ರಿಗಳೂ ತಮ್ಮ ರಾಜರ ಕಥೆ ಕೇಳಿ ಕೊನೆಗೊಮ್ಮೆ ರಾಮರ ಮುಂದೆ ತಮ್ಮ ಬಯಕೆಯನ್ನು ಬಿಚ್ಚಿಟ್ಟರು. " ತಮ್ಮದೇ ದಿವ್ಯಕಥೆ. ಯಾರೋ ಮುನಿ ಕುಮಾರರು ಅದೆಷ್ಟು ಭವ್ಯವಾಗಿ ಹಾಡುತ್ತಿದ್ದಾರೆ ! ಜನರೆಲ್ಲ ಮುಗ್ಧರಾಗಿ ಹೋಗಿದ್ದಾರೆ. ಅಷ್ಟು ವಿವರವಾಗಿ ನಮಗೇ ಗೊತ್ತಿರಲಿಲ್ಲ. ನಮ್ಮ ಹಿಂದಿನವರ ಕಥೆಗಳನ್ನೆಲ್ಲ ಹೇಳುತ್ತಿದ್ದಾರೆ. ತಮ್ಮ ವಂಶವನ್ನೆಲ್ಲ ವರ್ಣಿಸುತ್ತಿದ್ದಾರೆ. ಹಿರಿಯರ ಸಾಹಸ ಗಾಥೆಗಳನ್ನು ವಿವರಿಸುತ್ತಿದ್ದಾರೆ. ಸೂರ್ಯವಂಶವೆಂದರೇನೆಂದು ಪರಿಚಯಿಸುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಹೆಸರು ಬಂದ ಪರಿಯನ್ನು ಹೇಳುತ್ತಿದ್ದಾರೆ. ತಮ್ಮ ಧರ್ಮಬುದ್ಧಿಯನ್ನು, ತಮ್ಮ ಪಿತೃಭಕ್ತಿಯನ್ನು, ಎಂತಹ ಕಷ್ಟ ಬಂದರೂ ತಪ್ಪದ ತಮ್ಮ ನ್ಯಾಯ ಪಥವನ್ನು, ಸತ್ಯ ಸ್ಥಾಪನೆಗಾಗಿ ತಮ್ಮ ಕಠೋರ ಬದುಕನ್ನು ವಿಧವಿಧವಾಗಿ ಬಣ್ಣಿಸುತ್ತಿದ್ದಾರೆ. ಸ್ವಾಮಿ, ತಾವು ಅನುಮತಿಸಿದರೆ ಅವರನ್ನು ಅರಮನೆಗೆ ಸ್ವಾಗತಿಸಿ ತಮ್ಮ ಮುಂದೆ ರಾಮಾಯಣವನ್ನು ಹೇಳಿಸುವ ಆಸೆ. " 
ಸಾವಿರ ಸ್ತಂಭಗಳ ಸದನ, ರಾಜಭವನ. ಅದು ರಾಮರ ಒಡ್ಡೋಲಗ. ಸಾವಿರಾರು ಆಸನಗಳು. ಸಾಲು ಸಾಲಾಗಿ ಮಾಂಡಲಿಕರು, ಪುರ ಪ್ರಮುಖರು, ಭಕ್ಷಿಗಳು, ಸೇನಾಪತಿಗಳು, ಪುರೋಹಿತರು, ಮಂತ್ರಿಗಳು, ವರ್ತಕರು, ಗ್ರಾಮಾಧಿಕಾರಿಗಳು, ಪರ ಊರಿನ ಆಮಂತ್ರಿತರು.... ಸಾವಿರ ಸಾವಿರ ಸಂಖೆಯಲ್ಲಿ ನೆರೆದಿದ್ದಾರೆ. ಪೂರ್ವದಲ್ಲಿ ಸೂರ್ಯನ ಭವ್ಯ ವಿಗ್ರಹ ಸಪ್ತಾಶ್ವಗಳ ರಥದಲ್ಲಿ. ಅದರ ಕೆಳಗೆ ನವರತ್ನ ಸಿಂಹಾಸನ. ಅದರೊಳಗೆ ನೀಲ ಮೇಘ ಶ್ಯಾಮ ರಾಮರ ದಿವ್ಯ ಆಕೃತಿ. ದೃಢ ಶರೀರಿ. ವಯಸ್ಸಾಗುತ್ತಿದ್ದರೂ ಕಾಂತಿಯುತ ಶರೀರ, ತುಂಬಿದ ಬಾಹುಗಳು, ಧನುದಾರವನ್ನೆಳೆದೆಳೆದು, ಉಜ್ಜಿ - ಉಜ್ಜಿ, ಎಡಗೈಯ ಒಳಚರ್ಮ ಜಡ್ಡುಗಟ್ಟಿ ಮಾಸಲು ಬಣ್ಣ. ಮುಖದಲ್ಲಿ ಅದೇನು ಕಾಂತಿ; ಅದೇನು ತೇಜ; ಅದೇನು ಕರುಣೆ; ಅದೇನು ಪ್ರಸನ್ನತೆ; ಅದೇನು ವಾತ್ಸಲ್ಯ; ಅದೇನು ಅಭಯ.... ಒಮ್ಮೆ ನೋಡಿದರೆ ಸಾಕು. ಸಂಭಾಷಣೆಯೇ ಇಲ್ಲದೇ ಸಮಾಧಾನ. ಏನೋ ತೃಪ್ತಿ. ಏನೋ ಆನಂದ. ಏನೋ ಸಾರ್ಥಕ್ಯ.
ಈ ಎಲ್ಲ ನೋಟಕರ ಅನಿಸಿಕೆಗಳ ನಡುವೆ ಈ ಎಲ್ಲ ಧನಾತ್ಮಕ ಸುಂದರ ವದನದಲ್ಲಿ ಕಂಡೂ ಕಾಣದ ಶೋಕ ಗೆರೆ. ಸೀತಾ ತ್ಯಾಗದ ಮನ ಕೊರೆಯುತ್ತಿರುವ ಚಿಂತೆ . ಜೀವನದಲ್ಲಿ ಕಳೆದುಹೋಗಿರುವ ಆಸಕ್ತಿ . ಕೇವಲ ಕರ್ತವ್ಯ ನಿರ್ವಹಣೆ . ಕಿರೀಟದಡಿಯ ಮುಖ ರಾಜಮುಖವಷ್ಟೇ;  ನಿಜ ರಾಮ ವದನವಲ್ಲ. ಅದರಲ್ಲಿ ಸಂತೋಷ, ನೆಮ್ಮದಿ , ಸಮಾಧಾನಗಳು ಬತ್ತಿ ಹೋಗಿವೆ. ಸಂಗಾತಿ ಇದ್ದೂ ಇಲ್ಲದ; ಹೆಂಡತಿಯಿದ್ದೂ ವಿಧುರನಾದ;[?] ಎಲ್ಲ ಇದ್ದೂ ಏನೂ ಇಲ್ಲದ ಅನಾಥ ಸ್ಥಿತಿ. ಯಾರಿಗೂ ಕಾಣದ ಈ ನೋವಿನ ಮುಖಕ್ಕೆ ಶ್ರೀರಾಮರ ಶ್ರೀಮದ್ ಗಾಂಭೀರ್ಯ. 
ಸಭಾ ಮಧ್ಯದಲ್ಲಿ ಅತ್ಯಂತ ನಿಧಾನವಾಗಿ ತಿರುಗುತ್ತಿರುವ ಹಲಗೆ. ಅದರ ಮೇಲೆ ಅಶ್ವಿನಿ ಕುಮಾರರಂತಹ ಕುಶೀಲವರು . ಬಾಲವೀಣೆಗಳನ್ನು ಎದೆಗೆ ಕಟ್ಟಿ ಅನುಮತಿಗೆ ಕಾಯುತ್ತಿದ್ದಾರೆ. ಅವರನ್ನು ನೋಡಿದೊಡನೆಯೇ ರಾಮರ ಎದೆ ಇರಿತ . ತನ್ನಂತೆಯೇ , ತಾನು ಬಾಲಕನಾಗಿದ್ದಾಗ ಕಂಡಿರಬಹುದಾದಂತೆಯೇ ಇರುವ ಪ್ರತಿರೂಪಕರು . ಮತ್ತೆ ಫಕ್ಕನೆ ಸೀತಾಮುಖ . ಏನೋ ಅರ್ಥವಾಗದ , ಏನೋ ತಳಮಳದ , ಏನೋ ದುಃಖದ , ಒಟ್ಟಿಗೇ ಅವರನ್ನು ಕಂಡಾಗ ಉಂಟಾಗುವ ರೋಮಾಂಚನದ , ಏನೋ ಒಂದು ತರಹದ ಸಂಭ್ರಮದ ದಿವ್ಯಾನುಭೂತಿ . ನೋವು , ನಲಿವು , ಹರ್ಷ , ಶೋಕ , ಸಂತಸ , ಕರುಣೆ , ಧನ್ಯತೆ , ಅಪರಾಧೀ ಭಾವಗಳ ಸಂಯುಕ್ತ ಸ್ಥಿತಿ . ತನ್ನೆಡೆಗೇ ನೋಡುತ್ತಿದ್ದ ಪ್ರಧಾನ ಸಚಿವನಿಗೆ ಕಣ್ಣಲ್ಲಿ ಆದೇಶವಿತ್ತರು ರಾಮರು . ಅದು ಹಾದು ಕುಶೀಲವರನ್ನು ತಲುಪಿತು . ರಾಮಾಯಣ ಪ್ರವಚನ ಶುರುವಾಯಿತು . 
ವೀಣೆಗಳ ಝೇಂಕಾರ, ಎರಡಲ್ಲ ಒಂದೇ ಆದ ಆ ಮನಮೋಹಕ ಧ್ವನಿ, ಕೇಳುಗರನ್ನು ಸೆಳೆಯುವ ಸುಶ್ರಾವ್ಯ ಕಂಠ, ನಿಮಿಷ ಮಾತ್ರದಲ್ಲಿ ಸಭಾಸದರೆಲ್ಲ ಕುಶೀಲವ ವಶರಾಗಿಬಿಟ್ಟರು. ಗಾಯಕರೊಟ್ಟಿಗೇ ಅವರು ಗತಕಾಲಕ್ಕೇ ಹಾರಿಬಿಟ್ಟರು. ನಿಧಾನವಾಗಿ ಶ್ರೀರಾಮರೂ ತಮ್ಮ ಗಟ್ಟಿ ನೆಟ್ಟ ನಿಲುವನ್ನು ಸಡಿಲಿಸಿ, ಸಿಂಹಾಸನಕ್ಕೊರಗಿ, ಕಣ್ಮುಚ್ಚಿ , ಬಾಲ ಗಂಧರ್ವರ ಗಾನದಲ್ಲಿ ಮುಳುಗಿಬಿಟ್ಟರು. (ಸಚಾಪಿ ರಾಮಃ ಪರಿಷದ್ಗತಃ ಶನೈ ರ್ಭಬೂಷಯಾಸಕ್ತ ಮನಾ ಬಭೂವಃ) (ಮುಗಿದಿಲ್ಲ !! ) 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com