ಸೃಷ್ಟಿ ರಹಸ್ಯ: ನಾವು ಮಾತ್ರ ಸಾಧಾರ, ಭೂಮಿ, ಗ್ರಹ-ನಕ್ಷತ್ರಗಳು ಸೂರ್ಯ ನಿರಾಧಾರ!

ಆ ಸೂರ್ಯನಿಗೂ ಆಧಾರವಿಲ್ಲ !!! ಆಧಾರವಿಲ್ಲದ ಭೂಮಿ, ಆಧಾರವಿಲ್ಲದ ಗ್ರಹ-ನಕ್ಷತ್ರಗಳು, ಆಧಾರವಿಲ್ಲದ ಸೂರ್ಯ, ಆದರೆ ನಾವು ಮಾತ್ರ ಸಾಧಾರ !!
ಸೃಷ್ಟಿ ರಹಸ್ಯ: ನಾವು ಮಾತ್ರ ಸಾಧಾರ, ಭೂಮಿ, ಗ್ರಹ-ನಕ್ಷತ್ರಗಳು ಸೂರ್ಯ ನಿರಾಧಾರ!
"ಕೇಳಿ ಕೇಳಿ, ನಾವು ಕೀರ್ತಿಸಲಿರುವ ರಾಮ ಚರಿತ್ರೆಗೊಂದು ಭವ್ಯ ಇತಿಹಾಸವಿದೆ . ರಾಮ ರಿಂದು ಇಷ್ಟು ಪ್ರಸಿದ್ಧರಾಗಿರಲು ಕಾರಣ , ಅವರ ಪೂರ್ವಿಕರೆಂತಹವರು , ಅವರು ಸಾಧಿಸಿದ ಘನ ಕಾರ್ಯಗಳಾವುವು , ಅಸಲು ರಾಮಾಗಮನಕ್ಕೆ ಮುನ್ನ ಪಥ ಬೆಳಗಿದ ದೀಪ ಸ್ತಂಭಗಳ ತೇಜವೆಂತಹುವುದು?...ಇವುಗಳನ್ನೆಲ್ಲ ವರ್ಣಿಸಲಿದ್ದೇವೆ. ಸಾವಧಾನವಾಗಿ ಆಲಿಸಿರಿ... " ಮೃದು ಕಂಠಗಳು ಜೋಡಿಯಾಗಿ ಹಾಡುತ್ತಿವೆ.....
(ನಮ್ಮ ಈ ಪುಟ್ಟ ಭೂಮಿಯೊಟ್ಟಿಗೇ ಗ್ರಹಗಳು, ತಾರೆಗಳು, ಉಲ್ಕಾಪಾತಗಳು, ಆಕಾಶಕಾಯಗಳು... ಮತ್ತಿನ್ನೇನೇನೇನೇನೋ ನಮಗೆ ಗೊತ್ತಿಲ್ಲದ ಲೋಕಗಳು. ಇವುಗಳನ್ನೆಲ್ಲ ತನ್ನೊಡಲಿನಲ್ಲಿ ಹೊತ್ತಿರುವ ಕ್ಷೀರ ಪಥ . ಆ ಬಿಳಿ ದಾರಿಯ ಎಲ್ಲ ದಿಸೆಗಳಲ್ಲೂ ಹಬ್ಬಿರುವ ಅಸೀಮ , ಅನಂತ , ಕೊನೆ - ಮೊದಲಿಲ್ಲದ , ವಿಸ್ತರಿಸುತ್ತಲೇ ಇರುವ ಈ ಗಗನ . ಈ ಆಕಾಶದಲ್ಲಿ ಮತ್ತೆಷ್ಟೋ ಸೂರ್ಯಮಂಡಲಗಳಂತೆ, ಒಂದೊಂದು ಸೂರ್ಯನ ಸುತ್ತಲೂ ಮತ್ತೆಷ್ಟೆಷ್ಟೋ ಗ್ರಹಗಳಂತೆ... ಇದೊಂದು ಅಯೋಮಯ ಸೃಷ್ಟಿ. ಹೌದು, ಈ ಸೃಷ್ಟಿಯ ಹುಟ್ಟು ಹೇಗೆ ? ಏನೇನೋ ಸಿದ್ಧಾಂತಗಳನ್ನು ವಿಙ್ಞಾನಿಗಳು ಮಂಡಿಸಿದ್ದಾರೆ, ಆದರೆ ಅವು ಯಾವುವೂ ಸತ್ಯಸ್ಯ ಸತ್ಯ ಎಂದು ನಿರ್ಧರಿತವಾಗಿಲ್ಲ. ಹೇಗೆ ತೀರ್ಮಾನಿಸಲು ಸಾಧ್ಯ ? ಕೋಟಿ ಕೋಟಿ ಸಾವಿರ ಕೋಟಿ ಕೋಟಿ ವರ್ಷಗಳ ಹಿಂದಿನ ಈ ವಿಶ್ವ ಜನನದ ಪ್ರಥಮ ಮುಹೂರ್ತಕ್ಕೆ ಹೋಗಿ ಕಾಣಲು ಸಾಧ್ಯ ಯಾರಿಗೆ ? ಕಷ್ಟಪಟ್ಟು ಹುಟ್ಟಿರುವುದೇನೆಂದು ವರ್ಣಿಸಬಹುದಾಗಲಿ , ಹೇಗೆ ಹುಟ್ಟಿತು, ಏಕೆ ಹುಟ್ಟಿತು, ಈ ಪ್ರಶ್ನೆಗಳಿಗೆ ಯಾವ ವಿಙ್ಞಾನಿಯೂ ಖಚಿತ ಮಾಹಿತಿ ಕೊಡಲಾರ. ಈ ಪರಿಸ್ಥಿತಿಯಲ್ಲಿ ಭೂಮಿಯ ಎಲ್ಲ ಜನಾಂಗಗಳೂ ತಮ್ಮ ತಮ್ಮ ತಪಸ್ಸಿನ ಫಲವಾಗಿ ಕಂಡ ಸೃಷ್ಟಿಯ ವಿವರಗಳನ್ನು ಹೇಳುತ್ತಾ ಹೊರಟವು. ನಮ್ಮ ಈ ಭಾರತದಲ್ಲಿಯೂ ಇಂತಹ ಆಲೋಚನೆಗಳ ಹಾದಿ ಹಲವು. ಪ್ರಕೃತ ರಾಮಾಯಣದಲ್ಲಿನ ಸೂಚನೆಗಳಿಗೆ , ಪಟ್ಟಿಗೆ , ಹೆಸರುಗಳಿಗೆ ಅನ್ಯ ಗ್ರಂಥಗಳ ನೆರವಿನಿಂದ ಒಂದಷ್ಟು ರಕ್ತ - ಮಾಂಸ ತುಂಬುವ. -ಲೇ )
ಈ ಸೃಷ್ಟಿಯ ಮೂಲ ಕಾರಣವನ್ನು ನಮ್ಮವರು ಹುಡುಕುತ್ತ ಹೊರಟರು. ಇದೆಂತಿದೆ, ಹೇಗಿದೆ, ಎಲ್ಲಿದೆ, ಈ ಪ್ರಶ್ನೆಗಳಿಗೆ ಉತ್ತರ ಕಾಣಲು ಋಷಿಗಳು ಯತ್ನಿಸಿದರು. ಕಾಣಲು ಸಾಧ್ಯವಿಲ್ಲ, ಇರುವ ನೆಲೆ ಗೊತ್ತಿಲ್ಲ ಎಂದಮೇಲೆ ಹೋಗಿ ಭೇಟಿ ಮಾಡಲು ಆಗುವುದೇ ಇಲ್ಲ. ಮತ್ತೆ ಮಾರ್ಗವೇನು? ಆ ಸೃಷ್ಟಿ ಶಕ್ತಿಯಲ್ಲೇ ಮೊರೆ ಇಡುವುದು; ಪ್ರಾರ್ಥಿಸುವುದು; ಧ್ಯಾನ ಮಾಡುವುದು; ತಪಸ್ಸು ಮಾಡುವುದು...
ನಾವು ಬದುಕಿದ್ದೇವೆ. ಸುತ್ತಲೂ ಕಾಣುತ್ತಿದ್ದೇವೆ. ನಮ್ಮ ಅತ್ತಿತ್ತಲೆಲ್ಲ ಅಯೋಮಯವಾದ, ಅನೇಕವಾದ, ಹಲವರ್ಣಗಳ ತರಹೇವಾರಿ ಜೀವರಾಶಿಗಳು. ಏಕಾಣುವಿನಿಂದ ಹಿಡಿದು ತಿಮಿಂಗಿಲಗಳ ತನಕ; ಜಲಚರಗಳಿಂದ ಹಿಡಿದು ಗಗನ ಗಾಮಿಗಳವರೆವಿಗೆ; ನಾಲ್ಕು, ನೂರು, ಸಾವಿರ ಕಾಲುಗಳ ಜೀವಿಗಳು ವಿಕಸಿಸಿ, ಈ ಎರಡು ಕಾಲಿನ ಮಾನವನವರೆವಿಗೆ. ತೆವಳುವ ಉರಗಗಳು, ಮಲಗಿಯೇ ಕುಬ್ಜಕಾಲುಗಳಲ್ಲಿ ಚಲಿಸುವ ಹಲ್ಲಿ, ಆಮೆ, ಮೊಸಳೆಗಳು; ನಡೆದಾಡುವ ನರಿ, ಹುಲಿ, ಆನೆ , ಸಿಂಹಗಳು; ನೀರೊಳಗೆ ಮುಳುಗಿದರೆ ಸಾಯುವ ಪ್ರಾಣಿಗಳು, ನೀರಿಂದ ಹೊರಬಂದರೆ ಮರಣಿಸುವ ಮತ್ಸ್ಯಕೋಟಿಗಳು. ಸಾಧು ಪ್ರಾಣಿಗಳನ್ನು ಬದುಕಿದ್ದಂತೆಯೇ ಭಕ್ಷಿಸುವ ಕ್ರೂರ ಮೃಗಗಳು, ಮಾಂಸವೇ ಮುಟ್ಟದ ಬೃಹತ್ ಗಜಪಡೆಗಳು. ಗರ್ಭದಿಂದ ಜಾರುವ ಜೀವಿಗಳು, ಮೊಟ್ಟೆಯೊಡುದು ಬರುವ ಹಕ್ಕಿ - ಹಾವುಗಳು... ಓಹ್ ... ಇದೇ ಒಂದು ವಿಸ್ಮಯವಾದರೆ, ನಿಂತಲ್ಲೇ ಊಟ ತಯಾರಿಸಿಕೊಳ್ಳುವ ಸಸ್ಯ ವಿಸ್ತಾರ; ಬಳಿಬಂದರೆ ತನ್ನ ರೆಂಬೆ - ಕೊಂಬೆಗಳಿಂದ ಬಂಧಿಸಿ ನುಂಗಿ ನೀರು ಕುಡಿಯುವ ವೃಕ್ಷ ರಾಕ್ಷಸರು !! ಇಂತಹ ವೈವಿಧ್ಯ ಪ್ರಾಣಿ ಸಂಕುಲ, ಸಸ್ಯ ಸಂಪತ್ತುಗಳಲ್ಲಿ ಹುಟ್ಟಿ, ಬದುಕಿ, ಸತ್ತು, ಹುಟ್ಟಿ, ಬದುಕಿ.... ಈ ಹುಟ್ಟೂ ಸಾವಿನ ಚಕ್ರ ಇಷ್ಟು ವ್ಯವಸ್ಥಿತವಾಗಿ ನಡೆಯುತ್ತಿರಬೇಕಿದ್ದರೆ ಖಂಡಿತ ಈ ಸೃಷ್ಟಿಗೊಬ್ಬ ನಿಯಂತ್ರಕನಿರಲೇಬೇಕು.
ನಾವು ಅಲ್ಲಾಡದೆ, ಮುಗ್ಗರಿಸದೆ, ಬೀಳದೆ, ನೆಟ್ಟಗಿರಬೇಕಿದ್ದರೆ ನಮಗೆ ಆಧಾರ ಈ ಭದ್ರ ಭೂಮಿ. ಆದರೆ ಈ ಭೂಮಿಗೆ ಯಾವ ಆಧಾರ? ಕ್ಷಣವೂ ಸುಮ್ಮನಿರದೇ ಸದಾ ಸುತ್ತುತ್ತಿರುವ ಈ ಪೃಥ್ವಿ ನಿರಾಧಾರ. ಕೇವಲ ನಿಂತಲೇ ಸುತ್ತುತ್ತಿಲ್ಲ; ತಾನು ಸುತ್ತುತ್ತಲೇ ಚಲಿಸುತ್ತಿದೆ. ನಡೆಯುತ್ತಲೇ ಸೂರ್ಯನಿಗೆ ಪ್ರದಕ್ಷಿಣೆ ಮಾಡುತ್ತಿದೆ. ಅಸಂಖ್ಯ ವರ್ಷಗಳಿಂದ ಈ ಸುತ್ತಾಟ ನಿಂತಿಲ್ಲ. ಸೂರ್ಯನಿಂದ ದೂರವೂ ಸಾಗಿಲ್ಲ, ಹತ್ತಿರಕ್ಕೂ ಹೋಗಿಲ್ಲ. ಒಂದೇ ಅಂತರ. ಹೀಗೆ ಸೂರ್ಯನ ಸುತ್ತ ಸುತ್ತುತ್ತಿರುವ ಉಳಿದ ಗ್ರಹಗಳು. ಅವೂ ಅಷ್ಟೇ ನಿರಾಧಾರ. ಅವೂ ಸತತ ಚಾಲಿತ. ಈ ಎಲ್ಲವೂ ಆದಿತ್ಯನ ಅಂಕೆಗೆ ಒಳಪಟ್ಟಿವೆ. ಆ ಮಾರ್ತಾಂಡನೋ, ಅದೊಂದು ಬೆಂಕಿಯ ಗೋಳ. ಬಳಿಯಲ್ಲ, ಸಾವಿರ ಸಾವಿರ ಮೈಲುಗಳ ದೂರದಲ್ಲೇ ಸರ್ವವೂ ಸುಟ್ಟು ಬೂದಿಯಾಗುವಷ್ಟು ತೀಕ್ಷ್ಣ. ಬೆಳಕಿನ ಉತ್ಪನ್ನ ಕ್ಷಣ-ಕ್ಷಣಕ್ಕೂ. ಆ ಸೂರ್ಯನಿಗೂ ಆಧಾರವಿಲ್ಲ !!! ಆಧಾರವಿಲ್ಲದ ಭೂಮಿ, ಆಧಾರವಿಲ್ಲದ ಗ್ರಹ-ನಕ್ಷತ್ರಗಳು, ಆಧಾರವಿಲ್ಲದ ಸೂರ್ಯ, ಆದರೆ ನಾವು ಮಾತ್ರ ಸಾಧಾರ !!  
ಈ ಯಾವುವೂ ಮುಷ್ಕರ ಹೂಡುತ್ತಿಲ್ಲ. ಪರಸ್ಪರ ಒಂದಕ್ಕೊಂದು ಢಿಕ್ಕಿ ಹೊಡೆಯುತ್ತಿಲ್ಲ. ಕಾಲ ಬದಲಾವಣೆಯಿಲ್ಲ, ಕ್ಷಣ ತಡವಿಲ್ಲ, ಅರೆಕ್ಷಣ ಮೊದಲಿಲ್ಲ. ಎಂತಹ ಅದ್ಭುತ ಸೃಷ್ಟಿ ! ಇದು ಇಷ್ಟು ವ್ಯವಸ್ಥಿತವಾಗಿ ಇರಬೇಕಿದ್ದರೆ ಇದರ ನಿಯಂತ್ರಣ ಹೇಗೆ? ಯಾರು ನಿಯಂತ್ರಿಸುತ್ತಿದ್ದಾರೆ? ಯಾರೋ ನಾಯಕನಿರಬೇಕೋ? ನಾಯಕ ಎನ್ನುತ್ತಿದಂತೆಯೇ ಅದು ಗಂಡೇ ಆಗಿರಬೇಕಲ್ಲ? ಹೆಣ್ಣೂ ಆಗಿರಬಹುದೇನೋ !! ಇದೆಲ್ಲ ನಮ್ಮ ಪ್ರಾಣಿ ಮಿತಿಯ ಲೆಕ್ಕಾಚಾರ. ಅದು ಶಕ್ತಿ. ಹೌದು ಹೌದು, ಅದು ಶಕ್ತಿ.
ಗಗನ, ಗಾಳಿ, ಬೆಳಕು, ಮಳೆ, ನಗು, ಕೋಪ, ಸಂತಸ, ಅಳು, ನೋವು, ಸುಖ, ಬಯಕೆ, ಹಶಿವು, ತೃಪ್ತಿ... ಇವೆಲ್ಲ ಯಾವ ಲಿಂಗ? ಲಿಂಗಾತೀತವಲ್ಲವೇ? ನಮಗೆ ಅರ್ಥವಾಗುವ ಈ ಭಾವಗಳೇ ಸ್ತ್ರೀ-ಪುರುಷ ಮಿತಿ ಮೀರಿರಬೇಕಿದ್ದರೆ, ಆ ಸೃಷ್ಟಿ ಶಕ್ತಿಗೆ ಯಾವ ಲಿಂಗ , ಯಾವ ಆಕಾರ ?! ಅದು ಗಂಡೂ ಅಲ್ಲದ, ಹೆಣ್ಣೂ ಅಲ್ಲದ ನಮ್ಮ ಪದಗಳಲ್ಲಿ ಹೇಳಲಾಗದ ಯಾವುದೋ ಒಂದು ದಿವ್ಯ ಶಕ್ತಿ. (" ಯತೋ ವಾಚೋ ನಿವರ್ತಂತೇ ಅಪ್ರಾಪ್ಸ್ಯ ಮನಸಾಸಃ ") ಹೇಗಿರಬೇಕದು? ಎಂತು ಕಂಡಾತದು? (ಮುಗಿದಿಲ್ಲ !! ) 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com