ಶ್ರೀರಾಮ
ಶ್ರೀರಾಮ

ಸೂರ್ಯ ವಂಶದ ಭದ್ರ ಬುನಾದಿ: ಶ್ರೀರಾಮನ ವಂಶಕ್ಕೆ ಮೂಲವ್ಯಕ್ತಿ ಮರೀಚಿ

ಚತುರ್ಮುಖನಿಗೆ 10 ಮಂದಿ ಮಾನಸ ಪುತ್ರರು. ಅವರೇ ಆದಿ ಋಷಿ ಪ್ರಮುಖರಾದ; ನಮ್ಮ ನಾಯಕನ ಅವತಾರ ವಂಶಕ್ಕೆ ಮೂಲವ್ಯಕ್ತಿಯಾದ ಮರೀಚಿ, ಮರೀಚಿಯ ಮಗನೇ ಕಶ್ಯಪ ಬ್ರಹ್ಮರ್ಷಿ ದಿತಿ ಹಾಗು ಅದಿತಿ...
ನಮ್ಮ ಸೃಷ್ಟಿಕರ್ತ, ಈ ಭುವಿಯ; ಈ ಗುಡ್ಡಬೆಟ್ಟಗಳ; ಈ ಸಸ್ಯ ಶ್ಯಾಮಲೆಯ; ಈ ಅಡವೀ ಮೃಗಗಳ; ಹಾಡುವ ಹಕ್ಕಿಗಳ; ಜಲ ಜೀವಿಗಳ; ಎಲ್ಲದಕ್ಕೂ ಕಿರೀಟದಂತೆ ನಮ್ಮ ಮನುಷ್ಯರ ಹುಟ್ಟಿಗೆ ಕಾರಣ ಈ ನಾಲ್ಮೊಗ ಬ್ರಹ್ಮನೇ. ಹುಟ್ಟು ಪಡೆದದ್ದು ಸಾಯಲೇ ಬೇಕು. ಇದೊಂದು ಅನುಲ್ಲಂಘನೀಯ ಶಾಸನ. ಒಂದೇ ಅಪವಾದ. ಅದೇ ಪರಬ್ರಹ್ಮನ್. ಎಂದೆಂದಿಗೂ ಇರುವ ಸನಾತನ ಶಾಶ್ವತ ಸತ್ಯ.
ಆ ನಿರಂತರ ಸತ್ಯದಿಂದ ಹೊರಬಂದದ್ದೇ ಈ ಚತುರ್ಮುಖ ಬ್ರಹ್ಮ. ಎಂದರೆ ಈ ಲೋಕದ ವಿಸ್ಮಯದ ಮಹಾನ್ ಅಚ್ಚರಿ. ಗಂಡಾಗಿ ಭಾವಿಸಿದ್ದ; ಗಂಡಾಗಿ ಕಾಣಿಸಿದ್ದ; ಗಂಡಾಗಿ ಆಕಾರ ಪಡಿದಿದ್ದ; ಆ ಗಂಡು ಶಕ್ತಿಯಿಂದಲೇ ಮತ್ತೊಂದು ಪುರುಷನ ಉತ್ಪತ್ತಿ !! ಎಂದರೆ ಗಂಡಿನಿಂದಲೇ ಗಂಡು !! ಮುಂದೆಂದೋ ಮತ್ತೆ ಈ ಘಟನೆ ಪುನರಾವರ್ತನೆಯಾದಾತೋ? ನೋಡೋಣ... ಈ ನಾಲ್ಮೊಗನಿಗೂ ಆಯುಷ್ಯ ನಿರ್ಣಯ. (ಏಕೆಂದರೆ ಆತ ಹುಟ್ಟಿದ . ಹುಟ್ಟಿದ್ದರಿಂದ ಸಾಯಲೇ ಬೇಕಲ್ಲ ?) ಎಷ್ಟು ಕಾಲ ಈತನ ಜೀವನ? ಕೇವಲ ನೂರು ವರ್ಷಗಳು ಮಾತ್ರ. ಅಷ್ಟೇನೇ ? ಆದರೆ ಸಾವಿರಾರು ವರ್ಷಗಳಿಂದಿರುವ ಗ್ರಂಥಗಳೆಲ್ಲಾ ಈ ವಿರಿಂಚಿಯನ್ನು ವಿವರಿಸುತ್ತಿವೆ. ನಿಲ್ಲಿ ನಿಲ್ಲಿ. ಇಲ್ಲೇ ಈ ಗೊಂದಲ. ಇದರ ಪರಿಹಾರ ಆಗಬೇಕಲ್ಲ? ಹೌದು.
ಸಾಮಾನ್ಯವಾಗಿ ಮನುಷ್ಯನ ಆಯುಷ್ಯವನ್ನು ನೂರು ವತ್ಸರಗಳೆಂದರು. ಅಂತೆಯೇ ಈ ಕಮಲಾಸನನ ಕಾಲವೂ ನೂರೆಂದರು. ಆದರೆ ಈತನ ನೂರು ವರ್ಷಗಳ ಲೆಕ್ಕಾಚಾರವೇ ಬಹು ದೊಡ್ಡದು. ಒಂದು ವರ್ಷವೆಂದರೆ ಏನೆಂಬುದು ನಮಗೆ ಗೊತ್ತಿದೆ . ಇಂತಹ ವರ್ಷಗಳು ನಾಲಕ್ಕು ಲಕ್ಷ ಮೂವತ್ತೆರಡು ಸಾವಿರವಾದರೆ ಕಲಿಯುಗ ಮುಗಿಯುತ್ತದೆ ! ಎಂದರೆ ಕಲಿಯುಗದ ಆಯುಃಪ್ರಮಾಣ 4,32,000 ವರ್ಷಗಳು. ಅಂತೆಯೇ ದ್ವಾಪರಯುಗಕ್ಕೆ 8,64,000 ವರ್ಷಗಳು. ನಂತರ ತ್ರೇತಾಯುಗದ ಆಯುರ್ಮಾನ 12,96,000 ವರ್ಷಗಳು. ಅನಂತರದ ಕೃತಯುಗಕ್ಕೆ 17,28,000 ವರ್ಷಗಳು. ಈ ನಾಲ್ಕು ಯುಗಗಳ ಒಟ್ಟು ಕಾಲಮಾನ 43,20,000 ವರ್ಷಗಳು . ಇಂತಹ 43,20,000 ವರ್ಷಗಳು ಮತ್ತೆ ಮತ್ತೆ 1000 ಬಂದರೆ ನಮ್ಮ ಬ್ರಹ್ಮನಿಗೆ ಒಂದು ದಿನವಂತೆ !!! ಇಂತಹ ದಿನಗಳು ಮೂವತ್ತಾದರೆ ತಿಂಗಳು, ಅಂತಹ ತಿಂಗಳುಗಳು ಹನ್ನೆರಡಾದರೆ ವರ್ಷ. 
                     (ಧರೆಯೊಳು ಚತುರ್ಯುಗಂಗಳು ಮರಳಿ ಮರಳಿ
 ಸಾವಿರ ಬಾರಿ ಬಂದೊಡೆ ಅಜಗೆ ಒಂದು ದಿನ ಆ ದಿನದ
ಪರಿ ದಿನಂ ಮೂವತ್ತು ಬರಲೇಕ ಮಾಸ ಆ ಮಾಸ ಹನ್ನೆರಡಾಗಲು ವರುಷ ) 
ಗಮನಿಸಿ. ಇಂತಹ ವರ್ಷಗಳು ನೂರಾಗಬೇಕು ನಮ್ಮೀ ಬ್ರಹ್ಮನ ಮುಕ್ತಿಗೆ. ಎಂದರೆ ಬಹುಶಃ ಆತ ಆಗ ಮಾಯವಾಗಿ ಆ ನಾರಾಯಣನಲ್ಲಿ ಐಕ್ಯವಾಗುತ್ತಾನೋ ?! ಮತ್ತೆ ನಮ್ಮ ಸೃಷ್ಟಿಯ ಗತಿ ? ಚಿಂತೆ ಏನಿಲ್ಲ. ಏಕೆ ? ಹೇಗೆ ? ಆ ಜಾಗಕ್ಕೆ ಬರಲು ಈಗಾಗಲೇ ಒಬ್ಬ ಮಹಾನ್ ಸಂತ; ಮಹಾನ್ ಸನ್ಯಾಸಿ; ಮಹಾನ್ ಧೀರ; ಮಹಾನ್ ಪ್ರಾಙ್ಞ; ಮಹಾನ್ ಭಕ್ತ ಸಿದ್ಧನಾಗುತ್ತಿದ್ದಾನೆ. ಸಿದ್ಧವಾಗುವುದೆಂದರೇನು ? ತಪಸ್ಸು ಮಾಡುತ್ತಿದ್ದಾನೆ. ಮುಂದಿನ ಅಷ್ಟು ದೀರ್ಘಾವಧಿಯ ಮಹಾನ್ ಕಾಯಕಕ್ಕೆ ಶಕ್ತಿ ಸಂಪಾದಿಸುತ್ತಿದ್ದಾನೆ. ಯಾರದು ? ಯಾರಾತ ? ನಮಗೆಲ್ಲರಿಗೂ ಚಿರಪರಿಚಿತ; ಹಳ್ಳಿ ಹಳ್ಳಿಗಳಲ್ಲೂ ಪೂಜ್ಯ; ವ್ಯಾಯಾಮ ಶಾಲೆಗಳಲ್ಲಿ ವಂದನೀಯ; ಭೀತರಿಗೆ ರಕ್ಷಕ; ವಿದ್ಯಾರ್ಥಿಗಳಿಗೆ ನವವ್ಯಾಕರಣ ಪಂಡಿತ; ಭಕ್ತರಿಗೆ ಅಭೀಷ್ಟಪ್ರದ; ಆತನೇ. ಆತನೇ ! ರಾಮಪ್ರಿಯ, ರಾಮದಾಸ, ರಾಮಸಚಿವ, ರಾಮಸಖ, ರಾಮಾನುಜ ಪ್ರಾಣದಾತ. ಆತನೇ ನಮ್ಮ ಕನ್ನಡಿಗ ಹನುಮಂತ; ಮುದ್ದಿನ ಮಾರುತಿ; ಆಪ್ತ ಆಂಜನೇಯ.... 
ಓಹ್ ! ಎಲ್ಲಿಂದೆಲ್ಲಿಗೂ ಬಂದೆ. ಬನ್ನಿ ಬನ್ನಿ , ಮತ್ತೆ ಆ ಅಜನ ಹತ್ತಿರ ಹೋಗೋಣ. ಆ ಚತುರ್ಮುಖನಿಗೆ 10 ಮಂದಿ ಮಾನಸ ಪುತ್ರರು. ಅವರೇ ಆದಿ ಋಷಿ ಪ್ರಮುಖರಾದ; ನಮ್ಮ ನಾಯಕನ ಅವತಾರ ವಂಶಕ್ಕೆ ಮೂಲವ್ಯಕ್ತಿಯಾದ ಮರೀಚಿ (1)  ( ತಸ್ಮಾನ್ ಮರೀಚಿಃ ಸಂಜಙ್ಞೇ ), ತ್ರಿಮೂರ್ತಿ ಸ್ವರೂಪರಾಗಿ , ತ್ರಿಮೂರ್ತಿಗಳೂ ಏಕೀಕರಿಸಿದ ದತ್ತಾತ್ರೇಯನ ತಂದೆಯಾದ ಅತ್ರಿ ಮಹರ್ಷಿ ( 2 ), ಅಂಗಿರಸ ( 3 ), ಖಳನಾಯಕನಾದ , ಅನೀತಿ ಮೊತ್ತವಾದ; ಸ್ತ್ರೀ ಲಂಪಟನಾದ; ಸಭ್ಯ ಸಂಹಾರಕನಾದ; ಅಸುರ ಜಾತಿಗೇ ಕಳಂಕನಾದ; ರಾವಣನ ವಂಶ ಮೂಲವಾದ ಪುಲಸ್ತ್ಯ ( 4 ), ಪುಲಹ ( 5 ), ಕ್ರತು ( 6 ), ನಮ್ಮೀ ಕಾವ್ಯಜನಕನಾದ ವಾಲ್ಮೀಕಿಯ ಮೂಲ ಮಹರ್ಷಿಯಾದ ಪ್ರಚೇತಸ್ ( 7 ) , ಸಾತ್ವಿಕತೆಯೇ ಮೂರ್ತಿವೆತ್ತು ಅಯೋಧ್ಯಾಧಿಪತಿಗೆ ಆಚಾರ್ಯನಾದ ವಸಿಷ್ಠ ( 8 ), ದುಷ್ಟ ಸಂಹರಣಕ್ಕಾಗಿ 21 ಬಾರಿ ಭೂಮಿ ಸುತ್ತಿದ ಪರುಶುರಾಮರ ವಂಶಾರಂಭದ ಭೃಗು ಮಹರ್ಷಿ ( 9 ), ಈ ದಿವ್ಯ ಕಾವ್ಯಕ್ಕೆ ಕಾರಣರಾಗಿ , ಇದರ ಪ್ರಥಮ ಬೋಧಕರಾಗಿ ವಾಲ್ಮೀಕಿ ಗುರುಗಳಾದ ನಾರದ ಮಹರ್ಷಿಗಳು ( 10 ). ಇವರುಗಳೇ ಆ ಬ್ರಹ್ಮನ 10 ಮಾನಸ ಪುತ್ರರು . 
( ಮರೀಚಿ ಮತ್ರ್ಯಂಗಿರಸೌ ಪುಲಸ್ತ್ಯಂ ಪುಲಹಂ ಕ್ರತುಂ
ಪ್ರಚೇತಸಂ ವಸಿಷ್ಠಂಚ ಭೃಗುಂ ನಾರದಮೇವಚ )
ಪ್ರಕೃತ ಕಥೆಗೆ ಅನಿವಾರ್ಯವಾದ ಮರೀಚಿಯ ಮಗನೇ ಕಶ್ಯಪ ಬ್ರಹ್ಮರ್ಷಿ. ಪ್ರಧಾನ ಪತ್ನಿಯರಿಬ್ಬರು ಈತನಿಗೆ. ದಿತಿ ಹಾಗು ಅದಿತಿ. ದಿತಿಯಲ್ಲಿ ದೈತ್ಯ ಸಂತತಿ. ಅದಿತಿಯಲ್ಲಿ ಆದಿತ್ಯ. ಇವರ ಸಂಖ್ಯೆ 12. ಅದಕ್ಕೇ ಅವರನ್ನು ದ್ವಾದಶಾದಿತ್ಯರೆಂದರು. ಅವರೇ ಧಾತೃ, ಅರ್ಯಮ, ಮಿತ್ರ, ವರುಣ, ಅಂಶ, ಭಗ, ಇಂದ್ರ, ವಿವಸ್ವಾನ್, ಪರ್ಜನ್ಯ, ಪೂಷ, ತ್ವಷ್ಟ್ರು ಮತ್ತು ವಿಷ್ಣು ಎಂಬುವರು.  ಎಂಟನೆಯಾತನೇ ವಿವಸ್ವಂತ . ಈತನೇ ಗಗನದಲ್ಲಿ ಸೂರ್ಯನಾಗಿ ಪ್ರಜ್ವಲಿಸುತ್ತಿರುವಾತ. ನಮಗೆ ಪ್ರಾಣದಾತ. ಸಾಗರ ನೀರನ್ನೆಳೆದು ಮೋಡಗಳನ್ನಾಗಿ ಮಾಡಿ ನಮ್ಮೂರಮೇಲೆ ಸುರಿಸಿ ಸಿಹಿನೀರು ಕೊಡುವಾತ. ಸಸ್ಯಗಳಿಗೆ ಹರಿತ್ತಿತ್ತು ದವಸ ಧಾನ್ಯಗಳಿಗೆ ಕಾರಣನಾಗಿ ನಮಗೆ ಊಟ ಕೊಡುವಾತ. ದೇಹದಲ್ಲಿ ಶಾಖವಾಗಿರುವ ಪ್ರಾಣದಾತ. ಈತನೇ ರಾಮ ವಂಶದ ಮೂಲ ಪುರುಷ. ಆ ವಂಶವೇ ಸೂರ್ಯವಂಶ, ಆದಿತ್ಯವಂಶ, ರವಿವಂಶ. (ಮುಗಿದಿಲ್ಲ !! ) 
-ಡಾ.ಪಾವಗಡ ಪ್ರಕಾಶ್ ರಾವ್

Related Stories

No stories found.

Advertisement

X
Kannada Prabha
www.kannadaprabha.com