ಇಕ್ಷ್ವಾಕು ವಂಶ: ಮನುವಿನ ಮಗ ತಂದೆಯನ್ನೇ ಮೀರಿಸಿದ ಗಣ್ಯ!

ಈ ಮನುವಿನ ಮಗ ತಂದೆಯನ್ನೇ ಮೀರಿಸಿದ ಗಣ್ಯ. ತಂದೆ ಕೊಟ್ಟ ಹೆಸರೇ ಅಳಿಸಿ ಹೋಗುವಂತೆ; ಅದರ ಜಾಗದಲ್ಲಿ ತನ್ನ ಸಂಶೋಧನೆಯಿಂದಲೇ ತನ್ನ ಹೆಸರನ್ನು ಗುರುತಿಸಿಕೊಂಡಾತ.
ಇಕ್ಷುವಿನಿಂದ ಶರ್ಕರವನ್ನು (ಸಕ್ಕರೆಯನ್ನು) ಹೊರೆತಗೆದವನು ಇಕ್ಷ್ವಾಕು (ಸಾಂಕೇತಿಕ ಚಿತ್ರ)
ಇಕ್ಷುವಿನಿಂದ ಶರ್ಕರವನ್ನು (ಸಕ್ಕರೆಯನ್ನು) ಹೊರೆತಗೆದವನು ಇಕ್ಷ್ವಾಕು (ಸಾಂಕೇತಿಕ ಚಿತ್ರ)
ಸೂರ್ಯ. ಈತನಿದ್ದಾಗ ಈತನ ಬೆಲೆ ನಾವು ಅರಿಯೆವು. ಈತನಿರದೆಡೆ ಜೀವವೇ ಇಲ್ಲ. ಧ್ರುವಗಳಲ್ಲಿ ಬೆರಳಣಿಕೆಯ ಸಂತತಿ. ಎಸ್ಕಿಮೋಗಳಂತೆ! ಪಾಪ. ಕೇವಲ ಹಿಮ, ಹಿಮ,  ಹಿಮ. ಅಲ್ಲೇನುಂಟು? ಆಹಾರಕ್ಕೆ ಯಾವ ಸಸ್ಯವುಂಟು? ಸಸ್ಯವೇ ಇಲ್ಲದ ಮೇಲೆ ಆಮ್ಲಜನಕ ಎಲ್ಲುಂಟು? ಇನ್ನು ಉಸಿರಾಟವೆಂತುಂಟು? 
ಓಹ್... ಈ ಆದಿತ್ಯ ನಮ್ಮ ಪ್ರಾಣ; ನಮ್ಮ ಜೀವಾಳ. ಆತನಿಂದಲೇ ನಮಗೆ ನೀರು. ಮೂರನೇ ಎರಡು ಭಾಗದಷ್ಟು ಭೂಮಿಯನ್ನೇ ಸಮುದ್ರ ಆವರಿಸಿದ್ದರೂ, ಹನಿ ನೀರನ್ನಾದರೂ ಕುಡಿಯಲಾದೀತೇ ಹಾಗೇ? ಸಿಹಿ ನೀರು ನಮಗೆ ಸಿಗಬೇಕಿದ್ದರೆ ಇದೇ ಸೂರ್ಯ, ಆ ಸಮುದ್ರದ ನೀರನ್ನು ಹೀರಿ (ಸೆಳೆಯುವಾಗ ಅಪಾರ ಉಪ್ಪನ್ನು ಅಂಬುಧಿಯಲ್ಲೇ ಉಳಿಸಿ) ಅದನ್ನು ಮೋಡವಾಗಿಸಿ, ತೇಲಿಸಿ ನಮ್ಮೂರ ಮೇಲೆ ನೂಕಿ, ಅಲ್ಲಿ ಮಳೆಗರೆಸಿ ಜಲದಾನ ಮಾಡಬೇಕು. ಅಷ್ಟೇನೇ? ಸಸ್ಯಗಳಿಗೆ ಹರಿತ್ತನ್ನಿತ್ತು ಅವು ನಿಂತಲ್ಲೇ ದವಸಧಾನ್ಯಗಳಿಂದ ತೊನೆಯುವಂತೆ ಮಾಡಿ ನಮಗೆ ಊಟ ಕೊಡುವಾತ. (ಮಾಂಸಾಹಾರಿಗಳಿಗೂ ಈತನದೇ ವರ. ಅವರು ಆಧರಿಸುವ ಕೋಳಿ, ಕುರಿ, ಮೇಕೆ, ಹಂದಿ... ಇವೆಲ್ಲ ಸಸ್ಯಾಹಾರಿಗಳು ತಾನೆ ? ಸಸ್ಯದಿಂದ ಅವು, ಅವನ್ನುಂಡ ಇವ) ಇವೆಲ್ಲಕ್ಕಿನ್ನ ಮುಖ್ಯವಾಗಿ ಆತನ ಬಿಸುಪು ನಮ್ಮಲ್ಲಿರುವಷ್ಟು ಕಾಲವೇ ನಮ್ಮ ಬದುಕು. ಯಾವ ಕ್ಷಣದಲ್ಲಿ ದೇಹ ತಣ್ಣಗಾಯಿತೋ, ಅಲ್ಲಿಗೆ ನಮ್ಮ ಪಯಣ ಮುಕ್ತಾಯ. ಹೀಗೆ ಈ ಸೂರ್ಯ ಮಾನವನ ಆಧಾರ; ಮಾನವರ ಅಭ್ಯುದಯ ಕಾರಣ; ಮಾನವರ ಮೂಲ ತ್ರಾಣ-ಪ್ರಾಣ.
ಈತನ ಮುಂದಿನದೇ ರವಿವಂಶ. ಈ ರವಿವಂಶ ಮುಂದುವರಿದು ಬಂದವರಲ್ಲಿ ಇಬ್ಬರು ಪ್ರಧಾನರು. ಇಬ್ಬರೂ ವೈವಸ್ವತರೇ. ಒಬ್ಬಾತ ಮೃತ್ಯುಲೋಕಕ್ಕೊಡೆಯ ಯಮಧರ್ಮ. ಇನ್ನೊಬ್ಬಾತ ಜೀವ ಜಗತ್ತಿನ ಆದಿ. ಈತನೇ ವೈವಸ್ವತ ಮನು. ಈತನಿಂದಲೇ ಮಾನವನ ಅಭಿವೃದ್ಧಿ. (ಮನುವಿನಿಂದ ಮನುಷ್ಯ). ವಿಷ್ಣುವಿನ ಪ್ರಥಮ ಮತ್ಸ್ಯಾವತಾರ ಈತನ ಸಾಕ್ಷ್ಯದಲ್ಲಿ. ಅಂದು ಜಲಪ್ರಳಯವಾದಾಗ ಜೀವ ಜಗತ್ತಿನ ಪ್ರತಿಯೊಂದು ಜೀವಿಯ ಸ್ತ್ರೀ - ಪುರುಷ ಮಾದರಿಯನ್ನು ರಕ್ಷಿಸಿದಾತ. ಅವರಿದ್ದ ಆ ನಾವೆಯನ್ನೆಳೆದೊಯ್ದ ಮತ್ಸ್ಯರೂಪಿ ವಿಷ್ಣು, ಪ್ರಳಯಾನಂತರ ಸೃಷ್ಟಿಗೆ ಆಧಾರವಾದಾತ. ಮರುಹುಟ್ಟಿಗೆ ಮತ್ತೆ ಜನ್ಮವಿತ್ತಾತ. ನಮ್ಮಲ್ಲಿ 24 ಸ್ಮೃತಿಗಳಿದ್ದರೂ ಇಂದಿಗೂ ಪ್ರಸಿದ್ಧವಾಗಿರುವುದೂ, ನಮ್ಮ ಕಥಾನಾಯಕರು ಸಂಕೀರ್ಣ ಸನ್ನಿವೇಶಗಳಲ್ಲಿ ನೆನಪಿಸಿಕೊಳ್ಳುತ್ತಿದ್ದುದೂ; ತಮ್ಮ ನಿರ್ಣಯಗಳಿಗೆ ಆಧರಿಸುತ್ತಿದ್ದುದೂ, ಈ ಮನುಮಹಾರಾಜ ವಿರಚಿತ "ಮನುಧರ್ಮಶಾಸ್ತ್ರ".
ಈ ಮನುವೇ ಅಂದು ಕಟ್ಟಿದ್ದು ಸತ್ಯನಗರ. ರಾಜ್ಯದ ಹೆಸರೇ ಸತ್ಯಪುರವೆಂದಾದಾಗ, ಆ ರಾಜರ ಗುರಿಯೂ ಸತ್ಯಮಾರ್ಗವೇ ಆಗಿರಬೇಕಲ್ಲ?! ಈ ಸತ್ಯಪುರದ ಸುತ್ತಲೂ ಎಂತಹ ಅದ್ಭುತವಾದ, ಅಗಮ್ಯವಾದ ಕೋಟೆ ಕಟ್ಟಿದ್ದನೆಂದರೆ, ಯಾವ ಶತ್ರುವೂ ಅದನ್ನೇರಿ ಬರಲು ಸಾಧ್ಯವಾಗುತ್ತಿರಲಿಲ್ಲ. ಯಾವ ಯೋಧನೂ ಅದನ್ನು ಭೇದಿಸಲಾಗದ್ದರಿಂದ ಜನರು ತಮ್ಮ ಪಟ್ಟಣವನ್ನು " ಅ-ಯೋಧ್ಯ " (ಅಯೋಧ್ಯಾ) ಎಂದು ಕರೆಯಲಾರಂಭಿಸಿ ಕೊನೆಗೆ ಅದೇ ಅನ್ವರ್ಥವಾಗಿಬಿಟ್ಟಿತು. 
(ಅಯೋಧ್ಯಾ ನಾಮ ನಗರೀ ತತ್ರಾಸೀಲ್ಲೋಕ ವಿಶ್ರುತ 
ಮನುವಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಂ)
ಈ ಮನುವಿನ ಮಗ ತಂದೆಯನ್ನೇ ಮೀರಿಸಿದ ಗಣ್ಯ. ತಂದೆ ಕೊಟ್ಟ ಹೆಸರೇ ಅಳಿಸಿ ಹೋಗುವಂತೆ; ಅದರ ಜಾಗದಲ್ಲಿ ತನ್ನ ಸಂಶೋಧನೆಯಿಂದಲೇ ತನ್ನ ಹೆಸರನ್ನು ಗುರುತಿಸಿಕೊಂಡಾತ. ಈತನೇ ಕಬ್ಬಿನಿಂದ ಸಕ್ಕರೆಯನ್ನು ಉತ್ಪಾದಿಸಿದ ಪ್ರಥಮ. ಸಂಸ್ಕೃತದಲ್ಲಿ ಕಬ್ಬಿನ ಜಲ್ಲೆಯನ್ನು ಇಕ್ಷುದಂಡವೆನ್ನುತ್ತಾರೆ. ಈ ಇಕ್ಷುವಿನಿಂದ ಶರ್ಕರವನ್ನು (ಸಕ್ಕರೆಯನ್ನು)  ಹೊರೆತಗೆದವನು ಈತನೆಂದು ಐತಿಹ್ಯ. ಹೀಗಾಗಿ ಈತನಿಗೆ "ಇಕ್ಷ್ವಾಕು" ಎಂಬ ಹೆಸರೇ ಶಾಶ್ವತವಾಗಿ, ಈತನ ಮುಂದಿನ ಸಂತತಿಯೆಲ್ಲ ಇಕ್ಷ್ವಾಕು ವಂಶ ಎಂದಾಯಿತು. 
ಈತನ ಮಗ ಕುಕ್ಷಿಯಾಗಲೀ, ಆತನ ಮಗ ವಿಕುಕ್ಷಿಯಾಗಲೀ ಅಷ್ಟು ಪ್ರಸಿದ್ಧರಾಗಲಿಲ್ಲ. ಆದರೆ ಇಕ್ಷ್ವಾಕುವಿನ ಮರಿ ಮಗನೇ ಅನರಣ್ಯ. ವಿರೋಧಿಗಳ ಎದೆ ನಡುಗಿ, ಅನರಣ್ಯ ಬರುತ್ತಿದ್ದಾನೆಂದರೆ ಉಳಿದ ರಾಜರು ಅರಣ್ಯಪಾಲಾಗುತ್ತಿದ್ದರಂತೆ. ವಾಸ್ತವವಾಗಿ ರಣವೆಂದರೆ ಯುದ್ಧಕ್ಷೇತ್ರ. ಗಲಾಟೆ, ಬೈಗಳು, ಅಂಗಭೇದನ, ಶಿರಛೇದನ, ರಕ್ತದೋಕುಳಿ, ಹೆಣಗಳ ರಾಶಿ, ನೋವಿನ ನಾದ, ಸತ್ತವರ ಹೆಂಡಿರ ರೋದನ, ಮನೆಯವರ ಗೋಳು, ಎಲ್ಲೆಂದರಲ್ಲಿ ಸತ್ತು ಬಿದ್ದ ಸೊಂಡಿಲು ಮುರಿದ ಮತ್ತ ಗಜಗಳು, ತಲೆಗತ್ತರಿಸಿಯೋ, ಕಾಲುಮುರಿದೋ ಕಿರುಚಿ ಅರಚುತ್ತಿರುವ ಕುದುರೆಗಳ ಕರುಳಿರಿವ ಆ ಆರ್ತ ಅರಚಾಟ, ಗೆದ್ದವರ ಜಯಕಾರ, ಅವರಿಂದ ನಡೆದ ಸುಲಿಗೆ... ಯಾರಿಗೆ ಪ್ರಿಯವಿದು ? ಇದನ್ನು ಕಂಡು ಕಂಡೂ ಯಾವ ರಾಜನಿಗೆ ಊರಿನಲ್ಲಿ ಆಸಕ್ತಿ ? ಅದಕ್ಕೇ ಆತ ವಾನಪ್ರಸ್ಥನಾಗುತ್ತಿದ್ದಂತೆ ಕಾಣುತ್ತದೆ. ಈ ರಣಕ್ಕೆ ವಿರುದ್ಧವಾದದ್ದು ಅರಣ್ಯ . ಅಲ್ಲಿ ಈ ಗೋಳು , ಗರ್ಜನೆ, ಕೇಕೆ, ಆರ್ಭಟ, ನಿಂದೆ, ಹಿಂಸೆ, ಯಾವುವೂ ಇಲ್ಲ. ರಣಕ್ಕೆ ವಿರುದ್ಧವಾದ ಪ್ರಶಾಂತ ಸೌಮ್ಯ ಪ್ರಕೃತಿ. ಆದರೆ ನಮ್ಮ ರಾಜನ ಹೆಸರೇ ಅನರಣ್ಯ. ಅರಣ್ಯಕ್ಕೆ ವಿರೋಧಿಯಂತೆ ಅವ !! ಎಂದರೆ ಸದಾ ರಣಕುತೂಹಲಿ. ಮಾತೆತ್ತಿದರೆ ರಾಜ್ಯ ವಿಸ್ತರಣೆ. ಯಾರೂ ಅವನ ಮುಂದೆ ನಿಲ್ಲಲಾರರು . ಆದರೆ ಎಂತಹ ಅಸಾಮಾನ್ಯನಿಗೂ; ಎಂತಹ ಧೀರನಿಗೂ; ಎಂತಹ ವೀರನಿಗೂ ಒಂದು ಇಳಿಮುಖ ಇರಲೇ ಬೇಕಲ್ಲ ? ಒಂದು ದಿನ ಧಾವಿಸಿ ಬಂದ ಸಚಿವನ ಮುಖದಲ್ಲಿ ರಕ್ತವೇ ಇಲ್ಲ; ಬಿಳಿಚಿ ಹೋಗಿದ್ದಾನೆ; ಬೆವರುತ್ತಿದ್ದಾನೆ; ಬೆದರುತ್ತಿದ್ದಾನೆ; ಬಿಕ್ಕಳಿಸುತ್ತಿದ್ದಾನೆ. ಬಾಯಿಂದ ಮಾತು ಸರಿ ಬರುತ್ತಿಲ್ಲ. ಇವನ ಈ ದುರವಸ್ಥೆಗೆ ಕಾರಣ ತಿಳಿಯಬೇಕಿದ್ದರೆ, ನಾವೀಗ ಮತ್ತೊಂದು ಕಾಲಕ್ಕೆ ಹೋಗಿ ಹಿಂದಿರುಗಬೇಕು. ಬನ್ನಿ ಬ್ರಹ್ಮಾನ ಸೃಷ್ಟಿಗೆ ಹೋಗೋಣ !! (ಮುಗಿದಿಲ್ಲ !! ) 
-ಡಾ.ಪಾವಗಡ ಪ್ರಕಾಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com