ಸುಮಾಲಿಯ ಕಣ್ಣ ಮುಂದೆಯೇ ಸೌಂದರ್ಯ , ವೀರ್ಯ , ಸೌಮ್ಯತೆಗಳ ಮೂರ್ತಿವೆತ್ತ ಧೀರನೊಬ್ಬ ಅರಮನೆಯಿಂದ ಹೊರಬಂದ. ಆತನ ಮುಂದೆ ಬಂದು ನಿಂತಿತು ವಿಮಾನ . ಅದನ್ನೇರುತ್ತಿದ್ದಂತೆಯೇ ಅದು ಗಗನಕ್ಕೇರಿ ಹಾರಿತು. ಎಲ್ಲಿ ಹೋಗುವನೋ ನೋಡೋಣವೆಂದು ಅಪ್ಪ ಮಗಳಿಬ್ದರೂ ಅವನನ್ನೇ ಹಿಂಬಾಲಿಸಿದರು. ಬೆಟ್ಟ ಬಿಟ್ಟು, ಸಮುದ್ರ ಹಾರಿ, ಕಾನನಗಳನ್ನು, ಊರುಗಳನ್ನು, ನದಿಗಳನ್ನು, ಬಯಲುಗಳನ್ನೂ ದಾಟಿ ಕೊನೆಗೊಂದು ಋಷ್ಯಾಶ್ರಮದಲ್ಲಿಳಿಯಿತು. ಹೊರಬಂದ ಕುಬೇರ ಪರ್ಣಶಾಲೆ ಹೊಕ್ಕ. ಅಪ್ಪನೊಡನೆ ಕೊಂಚ ಕಾಲ ಕಳೆದು ಹೊರಬಂದ. ತೀವ್ರ ಆಲೋಚನೆಯಲ್ಲಿ ಬಹಳಹೊತ್ತು ಮುಳುಗಿದ್ದ ಸುಮಾಲಿ ಕೊನೆಗೆ ಮಗಳೆಡೆಗೆ ತಿರುಗಿ ಹೇಳಿದ; "ನಾವು ಕಳೆದುಕೊಂಡಿರುವ ಈ ಲಂಕೆ ಈಗ ಯಕ್ಷರ ಪಾಲಾಗಿದೆ. ಹಾಳು ಬಿದ್ದಿದ್ದನ್ನು ಸರಿಪಡಿಸಿ ಕುಬೇರ ಅದನ್ನು ಅನುಭವಿಸುತ್ತಿದ್ದಾನೆ. ಅವನಿಗೆ ದೇವತೆಗಳ ರಕ್ಷೆ, ಅಪ್ಪ ವಿಶ್ರವಸ್‌ನ ತಪಃಶಕ್ತಿ, ಎಲ್ಲದಕ್ಕಿನ್ನ ಹೆಚ್ಚಾಗಿ ಬ್ರಹ್ಮ ಬೆಂಬಲ ಇದೆ. ನಮ್ಮ ಪಟ್ಟಣವನ್ನು ಮತ್ತೆ ಇವನ ಹಿಡಿತದಿಂದ ಬಿಡಿಸಿಕೊಳ್ಳಬೇಕಿದ್ದರೆ, ಶಕ್ತಿಯಿಲ್ಲದ, ಸ್ಥಾನ ಭ್ರಷ್ಟರಾದ, ಅಲ್ಪಸಂಖ್ಯಾತರಾದ ನಮಗೆ ಯುದ್ಧದಿಂದ ಸಾಧ್ಯವಿಲ್ಲ. ಉಪಾಯದಿಂದ ಅದನ್ನು ಗೆಲ್ಲಬೇಕು. ಅದಕ್ಕೆ ಒಂದೇ ಯುಕ್ತಿ. ಯಾವುದೇ ಆಸ್ತಿಯ ಮೇಲೆ ಅಧಿಕಾರ ಬರಬೇಕಿದ್ದರೆ ಮನೆಯ ಯಜಮಾನನ ತಮ್ಮನಿಗೆ ಮಾತ್ರ . ಹೀಗಾಗಿ ನೀನೀಗ ಕುಬೇರನ ತಮ್ಮನ ತಾಯಿಯಾಗಬೇಕು". ಪ್ರವಾಸಕ್ಕೆ ಬಂದಿದ್ದರೆ ಪರಿಣಯದ ಪ್ರಸ್ತಾವ. ಕೈಕಸಿಗೆ ದಿಗ್ಭ್ರಮೆ; ನಾಚಿಕೆ; ಸಂಕೋಚ; ತಬ್ಬಿಬ್ಬು. ತಲೆತಗ್ಗಿಸಿ ಕೇಳಿದಳು, " ಅಪ್ಪ ನನಗೇನೂ ಅರ್ಥವಾಗುತ್ತಿಲ್ಲ. (......ಮುಗಿದಿಲ್ಲ )