ಸಾಷ್ಟಾಂಗ ಮಾಡಿ ಎದ್ದಾಗ ದೇಹದಲ್ಲಿ ನವೋತ್ಸಾಹ; ಮುಖದಲ್ಲಿ ತೇಜಸ್ಸು ವೃದ್ಧಿಸಿತ್ತು. ತಮ್ಮಂದಿರು ಕೈಜೋಡಿಸಿ ಸ್ತಂಭಿತರಾಗಿ ನಿಂತಿದ್ದರು. " ಹೇ ಸೃಷ್ಟಿಕರ್ತ, ನನ್ನದೊಂದೇ ಬೇಡಿಕೆ. ಎಲ್ಲರೂ ಮೃತ್ಯುವನ್ನು ನೋಡಿ ನಡುಗುತ್ತಾರೆ. ಎಲ್ಲರಿಗೂ ಸಾಯುವ ಭೀತಿ. ನಾನು ಕೇಳಿದ್ದನ್ನು ಕೊಡುವೆಯಾದರೆ ಕೊಡು ನನಗೆ ಸಾವಿರದ ವರ ! ನಾನು ಸಾಯಲೇ ಬಾರದು !! ಯಾರಿಗೂ ನನ್ನನ್ನು ಸಾಯಿಸುವ ಶಕ್ತಿ ಇರಬಾರದು !!! ನಾನು ಅಜೇಯನಾಗಬೇಕು !!!! ದೇವತೆಗಳಂತೆ ಅಮರನಾಗಬೇಕು !!! ಎಲ್ಲ ದಾನವರೂ ಈ ಅಮರತ್ವವನ್ನೇ ಏಕೆ ಕೇಳುತ್ತಾರೋ? ಈ ದೇಹದ ಭೋಗಗಳನ್ನು ನಿರಂತರವಾಗಿ ಅನುಭವಿಸುವ ಅಸೀಮ ಬಯಕೆ. ಎಷ್ಟೇ ಕುಡಿದರೂ ಭೋಗ ತೃಷ್ಣೆ ತೃಪ್ತಿಯಾಗದೆಂಬ ಸತ್ಯ ಏಕೆ ಯಾರಿಗೂ ಅರ್ಥವಾಗುತ್ತಿಲ್ಲ? ಮನಸ್ಸಿನಲ್ಲೇ ಯೋಚಿಸುತ್ತಿದ್ದ ಬ್ರಹ್ಮ ನಸುನಕ್ಕು ನುಡಿದ, " ದಶಗ್ರೀವ, ನನ್ನ ಅಧಿಕಾರ ಸೃಷ್ಟಿ ಮಾಡುವುದಷ್ಟೇ. ಅದೂ ಸಂಪೂರ್ಣವಾಗಿ ನನ್ನ ಅಧೀನವೂ ಇಲ್ಲ. ನಾನು ಕೇವಲ ನ್ಯಾಯಾಧೀಶ. ಜೀವದ ಪಾಪ ಪುಣ್ಯಗಳನ್ನು ನೋಡಿ ಮುಂದಿನ ಜನ್ಮ ನಿರ್ಧರಿಸುವಾತ ಅಷ್ಟೇ. ಅವರು ಅನುಭವಿಸುವ ಕಷ್ಟ, ಸುಖ, ಹಣ, ನಿರ್ಧನ, ಜಾಣ್ಮೆ, ಪೆದ್ದುತನ, ಪ್ರತಿಭೆ, ಸಾಮಾನ್ಯ ತಿಳುವಳಿಕೆ.... ಈ ಎಲ್ಲವೂ ಆ ಜೀವದ ಹಿಂದಿನ ಜನ್ಮಗಳ ಗಳಿಕೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಹೀಗಾಗಿ ನಿನ್ನ ಆಯುಷ್ಯ, ಬದುಕು, ಸ್ಥಿತಿ, ಸುಖ, ಸಂಕಟ, ವೃದ್ಧಿ, ವ್ಯಾಧಿ, ಆರೋಗ್ಯ, ನೆಮ್ಮದಿ, ನೋವು.... ಎಲ್ಲವೂ ಪೂರ್ವ ನಿರ್ಧಾರಿಕ. ನಿನ್ನ ಜೀವಕ್ಕೆ ಮತ್ತೊಂದು ಅರ್ಥದಲ್ಲಿ ಸಾವೇ ಇಲ್ಲ. ಆದರೆ ಆಗಾಗ್ಗೆ ಅದಕ್ಕೆ ಬೇರೆ ಬೇರೆ ಶರೀರಗಳು ಬೇಕಾಗುತ್ತವೆ. ಹಾಗೆ ಹಳೆಯ ದೇಹ ಬಿಟ್ಟು ಹೊಸ ಶರೀರವನ್ನು ತೆಗೆದುಕೊಳ್ಳುವ ಕ್ರಿಯೆಯನ್ನೇ "ಸಾವು" ಎಂದು ನೀವು ಕರೆಯುತ್ತೀರಿ. ಹೀಗಾಗಿ ಈ ಅರ್ಥದಲ್ಲಿ ಮರಣ ಅನಿವಾರ್ಯ; ಅನುಲ್ಲಂಘನೀಯ; ಅಪವಾದ ರಹಿತ; ಆತ್ಯಂತಿಕ ಶಾಶ್ವತ ಸತ್ಯ. ಆದ್ದರಿಂದ ಅಮರತ್ವ ಬಿಟ್ಟು ಮತ್ತೇನನ್ನಾದರೂ ಕೇಳು, ಕೊಡುವೆ."