ವಿಧಿಯೋ - ಪೌರುಷವೋ

ವಿಭೀಷಣ, ನಿನ್ನ ಮನಸ್ಸು ಧರ್ಮದಿಂದ ವಿಮುಖವಾಗಲಿಲ್ಲ . ನಾನು ಸಂತುಷ್ಠನಾಗಿರುವೆ . ಇಲ್ಲಿಯ ವರೆವಿಗೆ ಯಾರಿಗೂ ಕೊಡದ ವರ ಒಂದನ್ನು ನಿನಗೆ ಕೊಡುತ್ತಿರುವೆ . ಅಮರನಾಗು ನೀನು , ಸ್ಥಿರಂಜೀವಿಯಾಗು....
ವಿಧಿಯೋ - ಪೌರುಷವೋ
ವಿರಿಂಚಿಯ ಮನದಲ್ಲಿ ಮತ್ತೆ ಹಾದುಹೋಯಿತು ದೃಶ್ಯಗಳು . ಇಲ್ಲಿಯ ವರೆಗಿನ ದಾನವರ ಲೆಕ್ಕಾಚಾರದ ಅನೇಕ ಮುಖ ಯೋಚನೆಯ, ಬಹು ಬುದ್ಧಿವಂತಿಕೆಯ ವರಗಳ ಪಟ್ಟಿ . ಅಂತೆಯೇ ಅವರು ಯಾವ ದುರ್ಬಲ ಎಳೆ ಎಂದು ಯಾವುದನ್ನು ಬಿಡುವರೋ ಅದೇ ವಜ್ರಪಾಶವಾಗಿ ಕೊರಳು ಸುತ್ತಿ ಪ್ರಾಣ ಹರಣ ಮಾಡುತ್ತದಲ್ಲವೇ ? ಅದೇ ನಿಯತಿ; ಅದೇ ಮಾನುಷ ಮೀರಿದ ದೈವೀ ಶಕ್ತಿ ; ಅದೇ ಪೌರುಷವನ್ನು ನುಂಗುವ ವಿಧಿ. ಈಗ ಮತ್ತದೇ ಪುನರಾವರ್ತನೆ. ಶತ್ರುವಿನ ವಿಷಯದಲ್ಲಿ ಎಷ್ಟು ಅಪ್ರಮತ್ತನಾಗಿದ್ದರೂ ಸಾಲದು. ಅದರಲ್ಲಿಯೂ ಮೃತ್ಯುವನ್ನೇ ಎದುರು ಹಾಕಿಕೊಂಡಾಗ, ಅದು ಯಾವ ರೂಪದಲ್ಲಿಯೂ ಬರಬಹುದೆಂಬ ಎಚ್ಚರಿಕೆ ಬೇಡವೇ ? ತೃಣವೆಂದುಬಿಟ್ಟನಲ್ಲ ಮನುಷ್ಯನನ್ನು ? ಮುನಿಯ ಬೆನ್ನುಮೂಳೆ ವಜ್ರಾಯುಧವಾಗಲಿಲ್ಲವೇ ? ನೊರೆ ವೃತ್ರಾಸುರನನ್ನು ಸಾಯಿಸಲಿಲ್ಲವೇ ? ಹುಲು ಮನುಷ್ಯ ಮಾನವೋತ್ತಮನಾಗಲಾರನೇ? ಅಥವಾ ಪುರುಷೋತ್ತಮನೇ ಪುರುಷನಾಗಿ ಅವತರಿಸಿ ಇವನ ಸಂಹಾರ ಮಾಡಲಾರನೇ ? 
ನಸುನಗುತ್ತಲೇ ನುಡಿದ ಬ್ರಹ್ಮ, " ಆಯಿತು , ನೀನು ಕೇಳಿದ ವರ ಕೊಡುವೆ. ನಿನ್ನ ತಪಸ್ಸಿಗೆ ಮೆಚ್ಚಿರುವೆ. ನನ್ನ ಬಾಯಿಂದ ದಶಕಂಠ ಎಂದೇ ಬಂದಿತು. ಅದು ಸಳ್ಳಾಗಕೂಡದು. ಆದ್ದರಿಂದ ಇದರೊಡನೆ ನಿನಗೆ ಮತ್ತೊಂದು ದುರ್ಲಭವಾದ ವರ ಕೊಡುವೆ. ಅಗ್ನಿಯಲ್ಲಿ ಹೋಮ ಮಾಡಿದ ತಲೆಗಳೆಲ್ಲ ಮತ್ತೆ ನಿನಗೆ ಪ್ರಾಪ್ತಿಯಾಗಲಿ. ಅಷ್ಟೇ ಅಲ್ಲ, ಯಾರು ಎಷ್ಟೇ ಬಾರಿ ಅವುಗಳನ್ನು ಕತ್ತರಿಸಿದರೂ ಮತ್ತೆ ಮತ್ತೆ ಅವು ಚಿಗಿಯುತ್ತಿರಲಿ. ಬೇಕೆಂದಾಗ ಹತ್ತು, ಬಯಸಿದಾಗ ಒಂದು ತಲೆಯಿರಲಿ ನಿನ್ನ ಭುಜಗಳ ಮೇಲೆ. ಮತ್ತೂ ಒಂದು ವರ ಕೊಡುವೆ. ಇನ್ನು ಮುಂದೆ ನೀನು ಕಾಮ ರೂಪಿಯಾಗು. ಬಯಸಿದ ರೂಪ ಬರಲಿ ನಿನಗೆ. ಬಯಸಿದ ಪ್ರಾಣಿ, ಪಕ್ಷಿ, ಹಾಗೂ ಮತ್ತೊಂದು ರೂಪದ ಮಾನವ... ಯಾವುದನ್ನು ಬಯಸುತ್ತೀಯೋ ಆ ರೂಪ ದಕ್ಕಲಿ ನಿನಗೆ 
(ಹುತಾನಿ ಯಾನಿ ಶೀರ್ಷಾನಿ ಪೂರ್ವಂ ಅಗ್ನೌ ತ್ವಯಾನಘಾ
   ಪುನಸ್ತಾನಿ ಭವಿಷ್ಯಂತಿ ತಥೈವ ತವ ರಾಕ್ಷಸ
 ಛಂದಸ್ತವ ರೂಪಂಚ ಮನಸಾ ಯದ್ ಯಥಾ ಇಪ್ಸಿತಂ
                  ಭವಿಷ್ಯತಿ ನ ಸಂದೇಹೋ ಮದ್ವರಾತ್ ತವರಾಕ್ಷಸ )
***********
ಬ್ರಹ್ಮ ಕುಂಭಕರ್ಣನ ಎಡೆ ತಿರುಗುತ್ತಿದ್ದಂತೆಯೇ ದೇವತೆಗಳೆಲ್ಲ ಶಾರದೆಯಲ್ಲಿ ಮೊರೆಯಿಟ್ಟರು. " ತಾಯಿ, ಯಾರ ವರವಿಲ್ಲದೆಯೇ ಅವನು ದೇವತೆಗಳನ್ನು , ನಾಗರನ್ನು , ಯಕ್ಷರನ್ನು ನುಂಗಿಬಿಟ್ಟಿದ್ದಾನೆ. ಹುಟ್ಟಿನಿಂದಲೇ ಅತಿಮಾನುಷ ಶಕ್ತನಾಗಿದ್ದಾನೆ. ಇನ್ನು ಬ್ರಹ್ಮದೇವನೇನಾದರೂ ವರವಿತ್ತರೆ ಆತನನ್ನು ಹಿಡಿಯುವವರಾರು ? ಹುಲಿಯ ಬಾಯಲ್ಲಿ ತಲೆಯಿಟ್ಟಂತೆ ; ಸರ್ಪದ ಹೆಡೆಯಲ್ಲಿ ಬೆರಳು ತುರುಕಿದಂತೆ ; ಆನೆಯ ಅಡಿ ಮಲಗಿದಂತೆ . ಏನಾದರೂ ಮಾಡಿ ಯಜಮಾನರನ್ನು ತಡೆಯಬೇಕಲ್ಲ" . ಸರಸ್ವತಿ ನಸುನಕ್ಕು ಹೇಳಿದಳು, " ಯಾರು ತಪಸ್ಸು ಮಾಡಿದರೂ ಅವರಿಗೆ ಫಲ ದಕ್ಕಲೇ ಬೇಕು. ಬ್ರಹ್ಮನೂ ತಪಃಶಕ್ತಿಯಿಂದ ಬದ್ಧ. ಅವನನ್ನು ನಿಯಂತ್ರಿಸಲಾಗದು. ಏನಾದರೂ ಪ್ರಭಾವ ಬೀರಬಹುದಾದರೆ, ಅದು ಆ ತಮಸ್ಸಿನ ಮೇಲೆ; ಆ ನಿದ್ರಾಪೋತನ ಮೇಲೆ; ಆ ಮಂದಮತಿಯ ಮೇಲೆ. ಜೃಂಭಿಕೆ ನಿದ್ರಾದೇವಿ. ಸರಸ್ವತಿ ಅವಳನ್ನು ಙ್ಞಾಪಿಸಿಕೊಳ್ಳುತ್ತಿದ್ದಂತೆಯೇ ; ಅವಳು ಕಾಣಿಸಿಕೊಳ್ಳುತ್ತಿದ್ದಂತೆಯೇ ದೇವತೆಗಳೆಲ್ಲ ಆಕಳಿಸತೊಡಗಿದರು.
ಬ್ರಹ್ಮ ಹತ್ತಿರಕ್ಕೆ ಬರುವ ಹೊತ್ತಿಗೆ ಕುಂಭಕರ್ಣನ ಮುಖದಲ್ಲಿ ಆಕಳಿಕೆ. ಕಣ್ಣು ಬಿಡಲೇ ಆಗುತ್ತಿಲ್ಲ. ಮೊಂಕು, ಮಂಪರು, ತಾನು ಏನೇನೋ ಲೆಕ್ಕಾಚಾರ ಹಾಕಿದ್ದ. ಬ್ರಹ್ಮ ಕಾಣುತ್ತಿದ್ದಂತೆಯೇ ತಾನೇನು ಕೇಳಬೇಕು, ಅಣ್ಣನಂತೆ ತಾನೆಂತು ಜಾಣನಾಗಬೇಕು, ಹೇಗೆ ಬ್ರಹ್ಮನ ಬಣ್ಣನೆಯ ಮಾತುಗಳನ್ನು ನುಂಗಬೇಕು... ಎಂದೆಲ್ಲ ಯೋಚಿಸಿದ್ದ. ಆದರೆ ಏಕೆ, ಏಕೆ ತನಗೆ ನಿದ್ದೆಯ ತೀವ್ರ ಅನಿಸಿಕೆ ? " ಕುಂಭಕರ್ಣ ತೀವ್ರ ಬಳಲಿದ್ದಿಯೇ, ತಪದಿಂದ ಬಸವಳಿದಿದ್ದೀಯೆ. ಕೇಳು. ಏನು ವರ ಕೊಡಲಿ ನಿನಗೆ? " ಎಲ್ಲೋ ಬಾವಿಯ ಆಳದಿಂದ ದನಿಬಂದಂತೆ, ನಿದ್ದೆಗೆ ಜಾರುತ್ತಿದ್ದಾನೆ, " ಬ್ರಹ್ಮದೇವ, ನನಗೆ ತುಂಬ ನಿದ್ದೆ, ತುಂಬ ಕಾಲ ನಿದ್ದ ಮಾಡಬೇಕೆನಿಸುತ್ತಿದೆ "
( ಸ್ವಪ್ತುಂ ವರ್ಷಾಣ್ಯನೇಕಾನಿ ದೇವ ದೇವ ಮಮ ಇಪ್ಸಿತಂ )
"ಮಾಡು ಮಾಡು, ಮಾಡುತ್ತಲೇ ಇರು ನಿದ್ದೆ, ತೃಪನಾಗಿ ಎದ್ದಾಗಲೇ ನಿನಗೂ ಅನ್ಯರಿಗೂ ಕ್ಷೇಮ. ನಿದ್ರಾಭಂಗವಾದರೆ ನಿನಗೂ, ನಿನ್ನನ್ನು ನಿದ್ದೆಯಿಂದ ಎಬ್ಬಿಸಿದವರಿಗೂ ಕೇಡು. " ಬ್ರಹ್ಮ ವರವಿತ್ತು ಹೊರಡುತ್ತಿದ್ದಂತೆಯೇ ಜೃಂಭಿಕೆಯೂ ಕುಂಭಕರ್ಣನ ಮುಖದಿಂದ ಹೊರಬಂದಳು. " ಇದೀಗ ವಿಭೀಷಣನ ಸರದಿ . ವಿಭೀಷಣನಿಗೆ ಮಹತ್ವವಾದದ್ದೇನನ್ನೋ ಕೇಳಬೇಕೆಂಬುದು ಅನ್ನಿಸುತ್ತಲೇ ಇಲ್ಲ. ಎಂತಹ ಸಂದರ್ಭ ಬಂದರೂ ತಾನು ಧರ್ಮಕ್ಕೆ ವಿರೋಧಿಯಾಗಬಾರದು, ಯಾವ ಅವಸ್ಥೆಯಲ್ಲಿದ್ದರೂ ತಾನು ಧರ್ಮ ಪಾಲಕನಾಗಬೇಕು , ಯಾವ ಆಶ್ರಮದಲ್ಲಿದ್ದರೂ ಆಯಾ ಆಶ್ರಮ ಧರ್ಮಗಳು ತನ್ನಿಂದ ಪಾಲಿಸಲ್ಪಡಬೇಕು. ಎಷ್ಟೆಷ್ಟೇ ಯೋಚಿಸಿದರೂ ತಾನು ಧರ್ಮಿಯಾಗಿರಬೇಕು ಎಂಬ ಅಪೇಕ್ಷೆ ಬಿಟ್ಟು ಮತ್ತೇನೂ ಹೊಳೆಯುತ್ತಲೇ ಇಲ್ಲ. " ತಥಾಸ್ತು ! " ವರವಿತ್ತು ನುಡಿದ ಸೃಷ್ಟಿಕರ್ತ  
"ಎಲ್ಲಾದರು ಇರು ಎಂತಾದರು ಇರು 
ಎಂದೆಂದಿಗು ನೀ " ಧಾರ್ಮಿಕನಾಗಿರು
ವಿಭೀಷಣ, ನಿನ್ನ ಮನಸ್ಸು ಧರ್ಮದಿಂದ ವಿಮುಖವಾಗಲಿಲ್ಲ . ನಾನು ಸಂತುಷ್ಠನಾಗಿರುವೆ . ಇಲ್ಲಿಯ ವರೆವಿಗೆ ಯಾರಿಗೂ ಕೊಡದ ವರ ಒಂದನ್ನು ನಿನಗೆ ಕೊಡುತ್ತಿರುವೆ . ಅಮರನಾಗು ನೀನು , ಸ್ಥಿರಂಜೀವಿಯಾಗು. (ನ ಅಧರ್ಮೇ ಜಾಯತೇ ಬುದ್ಧಿಃ ಅಮರತ್ವಂ ದದಾಮಿತೇ ) (..... ಮುಗಿದಿಲ್ಲ ) 
-ಡಾ.ಪಾವಗಡ ಪ್ರಕಾಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com