ಪೃಥುವಿನ ಆದೇಶವೇ ಇಂದಿಗೂ ಸರ್ವೋಚ್ಛ ನ್ಯಾಯ

ಇನ್ನೇನು ಬೀಳಲಿದ್ದ ಅನರಣ್ಯ ರಾವಣನಿಗೆ ಶಾಪವನ್ನೂ ಇತ್ತ; " ನಾನೀಗ ಸಾಯುತ್ತಿರುವೆ. ಆದರೆ ನನ್ನದೇ ಕುಲದಲ್ಲಿ ಮುಂದೆ ದಶರಥ ಪುತ್ರ ರಾಮ ಹುಟ್ಟುವನು. ಮಹಾತ್ಮನಾದ ಆತ ನಿನ್ನ ಪ್ರಾಣವನ್ನು ತೆಗೆಯಲಿ. "
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ಅನರಣ್ಯನ ಮುಂದೆ ತೊದಲುತ್ತಿದ್ದ ಸಚಿವನನ್ನು ದುರುಗುಟ್ಟಿ ನೋಡಿದ ರಾಜ. " ಏಕೆ ಹೀಗೆ ಭೂತ ಕಂಡಂತೆ ನಡಗುತ್ತಿದ್ದೀರಿ? ಏಕೆ ?". ನಡುಗುತ್ತಲೇ ನುಡಿದ ಸಚಿವ, " ಕ್ಷಮಿಸಿ ಮಹಾಸ್ವಾಮಿ, ಭೂತವಲ್ಲ ಭೇತಾಳ ಕಂಡಿದ್ದರೂ ಹೆದರುತ್ತಿರಲಿಲ್ಲ, ಆದರೆ ಭೂತ, ಪಿಶಾಚ, ನರ, ಮುನಿ, ದೈವ, ನಾಗ, ಗರುಡ, ಎಲ್ಲ ದೇವ ದಾನವರ ಮೃತ್ಯುವಾದ ರಾವಣ ಬರುತ್ತಿದ್ದಾನೆ. 
ಮಂತ್ರಿ ರಾಜಿ ಮಾಡಿಕೊಳ್ಳಲು ಕೊಟ್ಟ ಸಲಹೆಯನ್ನು ತಿರಸ್ಕರಿಸಿ ರಾವಣನನ್ನು ಎದುರಿಸಿಯೇ ಬಿಟ್ಟ ರಾಜ ಯುದ್ಧಭೂಮಿಯಲ್ಲಿ . ಕೊಂಚ ಕಾಲ ಹಾಗೂ - ಹಾಗೂ ನಡೆಯಿತು. ಆದರೆ ಕೊನೆಗೆ ರಾವಣನ ಗದೆ ಅಪ್ಪಳಿಸಿತು ಅನರಣ್ಯನಿಗೆ. ಇನ್ನೇನು ಬೀಳಲಿದ್ದ ಅನರಣ್ಯ ಶಾಪವನ್ನೂ ಇತ್ತ; " ಆಯಿತು, ನೀನು ಬ್ರಹ್ಮ ವರದಿಂದ ಅವಧ್ಯ, ನಾನೀಗ ಸಾಯುತ್ತಿರುವೆ. ಆದರೆ ನನ್ನದೇ ಕುಲದಲ್ಲಿ ಮುಂದೆ ದಶರಥ ಪುತ್ರ ರಾಮ ಹುಟ್ಟುವನು. ಮಹಾತ್ಮನಾದ ಆತ ನಿನ್ನ ಪ್ರಾಣವನ್ನು ತೆಗೆಯಲಿ. " 
                   (ಉತ್ಪತ್ಸತೇ ಕುಲೇಹ್ಯಸ್ಮಿನ್ ಇಕ್ಷ್ವಾಕೂಣಾಂ ಮಹಾತ್ಮನಾಮ್
                    ರಾಮೋ ದಾಶರಥಿರ್ನಾಮ ಯಸ್ತೇ ಪ್ರಾಣಾನ್ ಹರಿಷ್ಯತಿ )
ಅನರಣ್ಯನ ನಂತರ ಸಿಂಹಾಸನ ಏರಿದ್ದು ಪೃಥು. ಈತನೆಷ್ಟು ಸಂಯಮಿ, ಸಹನಶೀಲ, ತಾಳ್ಮೆಯ ಪ್ರತಿರೂಪ ಎಂದರೆ ಈತನಿಂದಲೇ ಈ ಭೂಮಿಗೆ, ಈ ಧಾರಿಣಿಗೆ ಪೃಥ್ವಿ ಎಂಬ ಹೆಸರು ಬಂದಿತಂತೆ. ಇವನು ಪ್ರಸಿದ್ಧನಾಗದಿದ್ದರೂ ಇವನ ಮಗ ಅಂದಿನಿಂದ ಇಂದಿನ ವರೆಗೆ ಜನ ಮಾನಸದಲ್ಲಿ ಗಾದೆಯಾಗಿ ಉಳಿದುಬಿಟ್ಟ. ಅವನೇ ಸತ್ಯವ್ರತ. ಅವನ ಹೆಸರು ಪ್ರಕಾಶವಾಗದಿದ್ದರೂ ಪಾಪಕಾರಣದಿಂದ ಅವನಿಗೆ ಬಂದ ಅಡ್ಡಹೆಸರೇ ಪ್ರಸಿದ್ಧಿ. 
ಸತ್ಯವ್ರತನದೊಂದು ವ್ರತ. ಅದೇ ಸತ್ಯವಾಕ್ಕು. ಯಾವುದೇ ಕಾರಣದಿಂದಲೂ ತಾನು ಅಸತ್ಯ ನುಡಿಯೆ ಎಂಬುದು. ಈತನಿಗೊಬ್ಬ ಪ್ರೆಯಸಿ. ಹಲವು ದುರಂತ ಪ್ರಣಯಿಗಳಂತೆಯೇ ಇವರ ಕಥೆಯೂ. ಭೀತರು ಪ್ರೇಮಿಗಳಾಗಬಾರದು. ಆಕೆ ಗುಟ್ಟಾಗಿ ಸತ್ಯವ್ರತನನ್ನು ಪ್ರೀತಿಸಿದ್ದೇನೋ ನಿಜ; ಆದರೆ ಅದನ್ನು ಹೆತ್ತವರಿಗೆ ಹೇಳುವುದಕ್ಕೆ ಹೆದರಿಕೆ. ಎಲ್ಲಿಯವರೆಗೆ ? ತಂದೆ ಗಂಡನ್ನು ಹುಡುಕಿದಾಗಲೂ ಹೇಳಲಿಲ್ಲ, ನಿಶ್ಚಿತಾರ್ಥವಾದಾಗಲೂ ಇಲ್ಲ, ಕೊನೆಗೆ ಲಗ್ನಮಂಟಪದಲ್ಲಿ ಕುಳಿತಾಗಲೂ ಇಲ್ಲ! ತಡವಾಗಿ ಸುದ್ದಿ ತಿಳಿದ ಸತ್ಯವ್ರತ ಮದುವೆ ಮಂಟಪಕ್ಕೆ ಬಂದ. ತನ್ನ ಅಹವಾಲು ಮಂಡಿಸಿದ. ಎಷ್ಟೇ ಆಗಲಿ ರಾಜಪುತ್ರ. ಯಾರೂ ವಿರೋಧಿಸುವ ಸಾಹಸ ಮಾಡಲಿಲ್ಲ. ಕೊನೆಗೆ ವಧುವಿನ ಕೈ ಹಿಡಿದು ರಥ ಹತ್ತಿ ಹೊರಟೇ ಬಿಟ್ಟ ! ಎಲ್ಲರಿಗೂ ಅಯೋಮಯ. ಹುಡುಗಿಯ ತಂದೆಗೆ ದಿಕ್ಕು ತೋಚದಾಯಿತು. ಬೀಗರು ಗರಬಡಿದಂತೆ ಸ್ತಬ್ಧ. ಯಾರೋ ಹೇಳಿದರು, "ರಾಜಕುಮಾರನಾದರೇನಂತೆ ? ಇವನ ಅಪ್ಪ ಮಹಾ ಧಾರ್ಮಿಕ, ಮಹಾ ಙ್ಞಾನಿ, ಮಹಾ ನಿಧಾನಿ, ಪೃಥ್ವಿಯಂತಹ ತಾಳ್ಮೆ. ಆತನಲ್ಲಿ ಹೋಗಿ ದೂರು ಕೊಡೋಣ. ಮಗನನ್ನಾದರೂ ನಿರ್ವಿಕಾರದಿಂದ ವಿವೇಚಿಸಬಲ್ಲ; ವಿಚಾರಿಸಬಲ್ಲ. 
    ************
ರಾಜಸಭೆ. ಈಗದು ನ್ಯಾಯಾಲಯವಾಗಿದೆ. ಪಂಚಾಗ್ನಿಗಳ ಮುಂದೆ ದರ್ಭಾಸನದಲ್ಲಿ ನ್ಯಾಯ ದಂಡ ಹಿಡಿದು ಪೃಥು ಗಂಭೀರದನಿಯಿಂದ ಮುಂದೆ ನಿಂತಿದ್ದ ಆರೋಪಿ ಸತ್ಯವ್ರತನೆಡೆ ತಿರುಗಿ ಕೇಳಿದ. 
ಪೃಥು : ನೀನು ಈಕೆಯ ಮದುವೆಗೆ ಹೋಗಿದ್ದೆಯಾ ?
ಸತ್ಯವ್ರತ : ಹೌದು ಹೋಗಿದ್ದೆ . 
ಪೃಥು:ಈತ ಅಲ್ಲಿದ್ದನೇ ? ಇವಳು ಒಪ್ಪಿ ಅವನ ಪಕ್ಕದಲ್ಲಿ ಕುಳಿತಿದ್ದಳೇ ?
ಸತ್ಯವ್ರತ : ಹೌದು .
ಪೃಥು : ನೀನು ಅವಳನ್ನು ಪ್ರೇಮಿಸಿದುದನ್ನು ಹೇಳಿ ಅವಳನ್ನೆಳೆದುಕೊಂಡು ಹೋದೆಯಾ ?
ಸತ್ಯವ್ರತ : ಹೌದು, ಎಳೆದೊಯ್ದೆ. 
ಪೃಥು : ಅನ್ಯರ ಹೆಣ್ಣನ್ನು ಒಯ್ದಿದ್ದು ಒಪ್ಪಿಕೊಂಡ ಮೇಲೆ ನೀನು ತಪ್ಪಿತಸ್ಥ ತಾನೆ ? 
ಸತ್ಯವ್ರತ : ಇಲ್ಲ ಮಹಾರಾಜ. ನಾವಿಬ್ಬರೂ ಪ್ರೇಮಿಸಿದ್ದೆವು . ಮದುವೆಯಾಗಬೇಕೆಂದೂ ನಿರ್ಣಯಿಸಿದ್ದೆವು . ಏತನ್ಮಧ್ಯೆ ಇವಳ ಅಪ್ಪ ಮದುವೆ ಮಾಡಿದ. 
ಪೃಥು: ಹಳೆಯದೇನೇ ಇರಲಿ, ಅವಳು ಮತ್ತೊಬ್ಬರ ಹೆಂಡತಿಯಾದ ಮೇಲೆ ಆಕೆಯನ್ನು ಎಳೆದೊಯ್ದದ್ದು ನಿನ್ನದು ಅಪರಾಧವೇ ಹೌದು ತಾನೆ ? 
ಸತ್ಯವ್ರತ: ಇಲ್ಲ ಮಹಾಸ್ವಾಮಿ, ಅವಳು ಸಂಪೂರ್ಣವಾಗಿ ಇನ್ನೊಬ್ಬನ ಹೆಂಡತಿಯಾಗಿರಲಿಲ್ಲ. ವಿವಾಹದ ಮುಕ್ಕಾಲು ವಿಧಿಗಳು ಮುಗಿದಿದ್ದವು ಅಷ್ಟೇ. ಆದರೆ... ಸಪ್ತಪದಿ ಇನ್ನೂ ಆಗಿರಲಿಲ್ಲ . ಎಂದ ಮೇಲೆ ಮದುವೆ ಇನ್ನೂ ಸಿಂಧುವಾಗಲಿಲ್ಲವಲ್ಲವೇ ? ಆದ್ದರಿಂದ ನಾನು ನನ್ನ ಪ್ರೇಯಸಿಯನ್ನು ಕರೆದುಕೊಂಡು ಹೋದೆ. ನನ್ನದೇನೂ ತಪ್ಪಿಲ್ಲ. 
ಎಲ್ಲರಿಗೂ ಈ ಸಮಸ್ಯೆ ಜಟಿಲವೆನಿಸಿತು. ಬಾಸಿಂಗದ ಹೆಣ್ಣು ನಡುಗುತ್ತಿದ್ದಳು. ತಂದೆ ತಾಯಿಗಳು ದೀನರಾಗಿ ನಿಂತಿದ್ದಾರೆ. ಬಂಧುಗಳೆಲ್ಲ ತನ್ನೆಡೆ ನೋಡುತ್ತಿದ್ದಾರೆ. ಆ ನೋಟದಲ್ಲಿ ಅವಳನ್ನು ತಿರಸ್ಕರಿಸುವ, ಛೀಗಳೆವ ಭಾವವನ್ನು ನೋಡುತ್ತಿದ್ದಾಳೆ. ಮುಂದೇನಾಗುತ್ತದೋ ಎಂದು ಎದೆ ಹಾರುತ್ತಿದೆ. ಕೊಂಚ ಹೊತ್ತು ಚಿಂತಿಸುತ್ತಿದ್ದ ಮಹಾರಾಜ ನುಡಿದ; "ಆರೋಪಿ ಹೇಳಿದ್ದು ಶಾಸ್ತ್ರೀಯವಾಗಿದೆ. ನ್ಯಾಯವಾಗಿದೆ. ಸಪ್ತಪದಿಯಾಗುವ ತನಕ ವಿವಾಹ ಪೂರ್ಣವಾಗುವುದಿಲ್ಲ. ಅದು ಕಾರಣ ಈಕೆ ಸ್ವತಂತ್ರೆ. ಅನ್ಯರ ಹೆಂಡತಿಯನ್ನು ಸತ್ಯವ್ರತ ಒಯ್ದಿಲ್ಲ. 
(ಅಂದು ಪೃಥು ಮಹಾರಾಜ ವಿವಾಹ ಪೂರ್ಣತೆಯ ಬಗ್ಗೆ ಕೊಟ್ಟ ತೀರ್ಪು ಇಂದಿಗೂ ಮಾನ್ಯ ; ಅಂಗೀಕಾರ . ಯಾವುದೇ ವಿವಾಹ ಸಿಂಧುವಾಗಬೇಕಿದ್ದರೆ ಸಪ್ತಪದಿಯೇ ಗರಿಷ್ಠ ಪ್ರಮಾಣವೆಂದು ಭಾರತದ ಸರ್ವೋಚ್ಛ ನ್ಯಾಯಾಲಯ ತೀರ್ಪಿತ್ತಿದೆ.)
-ಡಾ.ಪಾವಗಡ ಪ್ರಕಾಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com