‘ತನಗೇನೂ ಕಾಡು ಹೊಸದಲ್ಲ. ದೇಹವೂ ದುರ್ಬಲವಲ್ಲ. ಐದು ವರ್ಷಗಳು ಹಾಹೂ ಎನ್ನುವುದರಲ್ಲಿ ಬಂದುಬಿಡುತ್ತದೆ. ಅದೂ ದೊಡ್ಡ ವಿಷಯವಲ್ಲ. ಅಯೋಧ್ಯೆ ಒಳಗೆ ಎಷ್ಟೋ, ಹೊರಗೂ ಅಷ್ಟೇ ಸಂಮೃದ್ಧ. ಹೇಳ ಕೇಳುವವರು ಇಲ್ಲದೇ ಹಣ್ಣಿನ ಗೊಂಚಲುಗಳು ತೂಗಾಡುತ್ತಿವೆ. ಎಲ್ಲೆಲ್ಲೂ ಇದ್ದಾಗ ಅರಕೆ ಎಲ್ಲಿ ? ಮೃಗಸಂಖ್ಯೆಯೂ ಜಾಸ್ತಿಯೇ. ತನಗೆ ಊಟ, ವಸತಿಗಳಾವುದಕ್ಕೂ ಕೊರತೆಯಾಗದು. ಇನ್ನು ನನ್ನ ಮಟ್ಟಿಗೆ ಹೇಳಬೇಕಿದ್ದರೆ, ನಾನು ಸತ್ಯದಿಂದ ಜಾರಿಲ್ಲ. ನನ್ನ ಸಿದ್ಧಾಂತದಲ್ಲಿ ನಾನು ರಾಜಿ ಮಾಡಕೊಳ್ಳಲಿಲ್ಲ. ಒಟ್ಟಿಗೇ ಊರು ಬಿಟ್ಟು ಹೊರಟಾಗ ತನ್ನ ಪರವಾಗಿ ಕಂಬನಿದುಂಬಿದವರೆಷ್ಟು ? ಸಾಂತ್ವನ ಮಾಡಿದವರೆಷ್ಟು ? ತನ್ನ ನಿರೀಕ್ಷೆಯಲ್ಲಿಯೇ ಇರುತ್ತೇವೆಂದು ನೊಂದವರೆಷ್ಟು? ಜನಪ್ರೀತಿಯೂ ತನಗೆ ಕಡಿಮೆಯಾಗಿಲ್ಲ. ಇದಾವುದೂ ಸಮಸ್ಯೆಯೇ ಅಲ್ಲ. ಆದರೆ ಎರಡೇ ಎರಡು ವಿಷಯಗಳು ಮನಸ್ಸನ್ನು ಹಿಂಡುತ್ತಿವೆ. ತಂದೆ ಕೇವಲ ಧರ್ಮಶಾಸ್ತ್ರ ನೋಡಿದರಾಗಲಿ ತನ್ನ ಭಾವನೆಗಳಿಗೆ ಬೆಲೆಯೇ ಕೊಡಲಿಲ್ಲ ! ತನ್ನನ್ನು ಕ್ಷಮಿಸಿ ಊರ ಕಾರಾಗೃಹದಲ್ಲಿಯೇ ಒಂದೆರಡು ವರ್ಷ ಇಡಬಹುದಿತ್ತು. ಅದನ್ನೂ ಮಾಡಲಿಲ್ಲ. ಒಂದೇ ಒಂದು ಮಾತು ಅಪ್ಪನಾಗಿ ಏನಾದರೂ ಹೇಳಬಹುದಿತ್ತು. ಇಲ್ಲ ! ಇನ್ನು ಅವಳು..... ಗೊತ್ತು, ಅವಳು ಮಹಾ ಅಂಜುಬುರುಕಿ, ಆದರೂ ತನ್ನೊಡನಿದ್ದಾಗ ಏನೆಲ್ಲಾ ಪರವಶಳಾಗಿದ್ದಳು ? ಹೇಗೆಲ್ಲಾ ಬದುಕೋಣವೆಂದು ಬಣ್ಣಿಸುತ್ತಿದ್ದಳು ? ಹಾಳಾಗಿ ಹೋಗಲಿ; ಅಪ್ಪನ ಹತ್ತಿರವೇ ಹೋಗಲಿ, ಆದರೆ ಒಂದೇ ಒಂದು ಮಾತು ಈ ಶಿಕ್ಷೆಯನ್ನು ತಪ್ಪಿಸಬಹುದಿತ್ತು ! " ನನ್ನನ್ನು ಬಲಾತ್ಕರಿಸಲಿಲ್ಲ" ಎಂದು ಹೇಳಿ "ಈಗ ಮನಸ್ಸು ಬದಲಿಸಿದ್ದೇನೆ" ಎಂದೂ ಹೇಳಿಬಿಡಬಹುದಾಗಿತ್ತು!! ಇದೇನೂ ಹೇಳದೆ ಅಪ್ಪನೊಡನೆ ಹೋಗಿಬಿಟ್ಟಳು. ಹೆಂಗಸರೇ ಹೀಗೆ. ಏನೂ ಅಡಚಣೆಗಳಿಲ್ಲದಿದ್ದಾಗ ಧೀರರು, ಶೂರರು, ನಂಬಿಕೆಯ ಸಾಕಾರ. ಕೊಂಚ ಅಡ್ಡಿಯಾಯಿತೋ, ತದ್ವಿರುದ್ಧ. ವರ್ಷ - ವರ್ಷಗಳು ಜೊತೆಯಿದ್ದ ಇನಿಯನನ್ನು "ಇನ್ನು ಮುಂದೆ ನೀನು ನನ್ನ ಸಹೋದರನಂತೆ" ಎಂದು ಕೈ ಕುಲುಕಿ ನಡೆದೇ ಬಿಡುತ್ತಾಳೆ. ಛೆ ! ಹೆಣ್ಣನ್ನು ನಂಬುವ ಗಂಡಿಗೆ ಧಿಕ್ಕಾರ. ಹೆಣ್ಣೆಂದರೆ ಮಾಯೆ; ಚಂಚಲೆ; ಅಸ್ಥಿರೆ; ದುರ್ಬಲೆ. ಅವಳನ್ನು ಎಂದೂ ನಂಬಬಾರದು. ( ಮುಗಿದಿಲ್ಲ )