ನಾನೂ ಇದೇ ಸ್ಥಿತಿಯಲ್ಲಿ ಇದ್ದೆನಲ್ಲ ಒಮ್ಮೆ? ತಾನು ಮಹೋದಯದ ಮಹಾರಾಜನಾಗಿದ್ದೆ. ಹೆಂಡತಿ, ಮಕ್ಕಳು, ರಾಜ್ಯ, ಮೆಚ್ಚುವ ಜನರು, ಭೀತ ವೈರಿಗಳು, ಅವರನ್ನೆಲ್ಲ ತುಳಿದು ಹದ್ದು ಬಸ್ತಿನಲ್ಲಿಟ್ಟಿದ್ದೆ. ಹಾಗೇ ಒಮ್ಮೆ ದಿಗ್ವಿಜಯದಿಂದ ಹಿಂದಿರುಗುವಾಗ ಇದೇ ವಸಿಷ್ಠರ ಆಶ್ರಮ ಎದುರಾಯಿತು. ಗುರುಗಳನ್ನು ನೋಡೋಣವೆಂದು ಆಶ್ರಮದೊಳಹೊಕ್ಕೆ, ಕುಲಪತಿಗಳವರು ತನ್ನಂತಹ ಹಲವು ರಾಜರಿಗೆ ರಾಜಗುರುಗಳಾಗಿದ್ದವರು. ಹತ್ತು ಸಾವಿರಕ್ಕೂ ಅಧಿಕ ಶಿಷ್ಯರಿಗೆ ಅನ್ನ, ವಸತಿ, ವಿದ್ಯೆಗಳನ್ನಿತ್ತು ಸಾಕುತ್ತಿದ್ದ ವೈದಿಕ ಗುರುಗಳು. ನನಗೊಂದು ಪ್ರಶ್ನೆ ಮೊದಲಿನಿಂದಲೂ ಕಾಡುತ್ತಿತ್ತು. ಈ ಬಡ ಬ್ರಾಹ್ಮಣ, ವನದಲ್ಲಿರುವ ವಿಪ್ರ, ಧನರಹಿತ ದ್ವಿಜ, ಅದು ಹೇಗೆ ಕುಲಪತಿಯಾಗಿದ್ದಾನೆ ? ತಾನಾಗಲೀ, ತನ್ನ ಸಹ ಅರಸರುಗಳಾಗಲಿ ಎಷ್ಟು ಕೊಡುತ್ತಿದ್ದೇವೆಂದು ಗೊತ್ತು. ಅದರಿಂದ ಈ ಬೃಹತ್ ಸಂಖ್ಯೆಯನ್ನು ಸಾಕಲು ಸಾಧ್ಯವೇ ? ಹತ್ತು ಸಾವಿರ ವಿದ್ಯಾರ್ಥಿಗಳಿದ್ದರೆ ತಾನೆ ಕುಲಪತಿ ಪದವಿ ? ಅಂದು ಆ ಪ್ರಶ್ನೆಗೆ ಉತ್ತರ ಸಿಕ್ಕಿತು. ತನ್ನೊಡನಿದ್ದ ಸಾವಿರ ಸಾವಿರ ಸೈನಿಕರಿಗೂ ಊಟಕ್ಕೆ ಆಮಂತ್ರಣವಿತ್ತರು. ತನಗೆ ಅಚ್ಚರಿ. ಅದೆಂತು ಇದ್ದಕ್ಕಿದ್ದಂತೆಯೇ ಎಂಟು ಹತ್ತು ಸಾವಿರ ಸೈನಿಕರಿಗೆ ಊಟಕ್ಕೆ ಕೊಡಬಲ್ಲ ಈ ಹಾರುವ ? ಕೊಟ್ಟೇ ಬಿಟ್ಟನಲ್ಲ ! ಯಾರು ಯಾರಿಗೆ ಏನೇನು ಬೇಕೋ ಅವೆಲ್ಲ ಸಿದ್ಧವಾಗುತ್ತಿತ್ತು. ಒಂದೇ ಅಡುಗೆಯಲ್ಲ, ಬಯಸಿದವರ ಬಯಕೆಯ ಭಕ್ಷ್ಯಗಳು ಬರುತ್ತಿದ್ದವು. ಬೇಕಾದ ಭೋಜನ ಸಿದ್ಧವಾಗಿತ್ತು. ಕೊನೆಗೆ ಗೊತ್ತಾಯಿತು; ಅದರ ರಹಸ್ಯ. ಶಬಲೆ, ಕಾಮಧೇನುವಿನ ಮಗಳು ಅವರಲ್ಲಿದ್ದಳು. ಯಾರು ಏನೇ ಕೇಳಿದರೂ ಅದನ್ನು ಅನುಗ್ರಹಿಸುತ್ತಿದ್ದಳು. ತನಗಾ ಹಸುವನ್ನು ಪಡೆಯುವ ತೀವ್ರ ಬಯಕೆ. ವಸಿಷ್ಠರಲ್ಲಿ ಬಿನ್ನವಿಸಿದೆ. ಸಾಧ್ಯವಿಲ್ಲ ಎಂದರು. " ಆಕೆ ನನ್ನದಲ್ಲ , ನಾನು ದೇವೇಂದ್ರನಿಗೆ ಮಾಡಿದ್ದ ಉಪಕಾರಕ್ಕೆ ಪ್ರತಿಯಾಗಿ ಆತ ಶಬಲೆಯನ್ನು ಬಹುಮಾನಿಸಿದ. ನನ್ನ ಆಶ್ರಮವಾಸಿಗಳಿಗೆ ಆಹಾರ ಕೊಡುವ, ನನ್ನ ಯಙ್ಞ ಯಾಗಾದಿಗಳಿಗೆ ಹಾಲು, ಮೊಸರು, ತುಪ್ಪ ನೀಡುವ ಕರ್ತವ್ಯ ಅದರದು. ಅದು ಕಾರಣ ಅದನ್ನು ನಿನಗೆ ಕೊಡಲಾರೆ. "ಮುಖದ ಮೇಲೆ ಹೊಡೆದಂತೆ ಹೇಳಿದರು. ಅದು ಸಜ್ಜನರ ಲಕ್ಷಣ. ಒಳಗೊಂದು, ಹೊರಗೊಂದು ಇಲ್ಲ. ಎಲ್ಲ ನೇರ ನೇರ !! ಆದರೆ ಅಂದು ಅದನ್ನು ತಾನು ಅರ್ಥ ಮಾಡಿಕೊಳ್ಳಲಿಲ್ಲ.