ಉಂಟೆ ಪ್ರಗತಿಗೆ ಅಡ್ಡಿ?: ಸಶರೀರ ಸ್ವರ್ಗಾರೋಹಣಕ್ಕೆ ವಿಶ್ವಾಮಿತ್ರರಿಂದ ಸತ್ಯವ್ರತ ರಾಜನಿಗೆ ಭರವಸೆ

ಮಗೆ ಸ್ವರ್ಗಾಪೇಕ್ಷೆಯಿರುವುದು ತಪ್ಪಲ್ಲ. ನೀವು ಇದೇ ದೇಹದಲ್ಲೇ ಸ್ವರ್ಗಕ್ಕೆ ಹೋಗುವುದು ನನಗೂ ಇಷ್ಟ. ಆದರೆ ಈ ದೇವತೆಗಳು ಹಳೆಯ ಶೀತಲ ತಲೆಯವರು. ಸಂಪ್ರದಾಯ ಮೀರದವರು. ಅವರು ಹೇಗೆ ನಿಮ್ಮನ್ನು....
ಸತ್ಯವ್ರತ ಮಹಾರಾಜ- ವಿಶ್ವಾಮಿತ್ರ ಮಹರ್ಷಿ (ಸಾಂಕೇತಿಕ ಚಿತ್ರ)
ಸತ್ಯವ್ರತ ಮಹಾರಾಜ- ವಿಶ್ವಾಮಿತ್ರ ಮಹರ್ಷಿ (ಸಾಂಕೇತಿಕ ಚಿತ್ರ)
ಹಾಗಾದರೆ ಪ್ರಗತಿಯ ಅರ್ಥವೇನು? ಇದ್ದ ಜಾಗದಿಂದ; ಇದ್ದ ಮಾನಸಿಕ ಸ್ಥಿತಿಯಿಂದ; ಗೊತ್ತಿದ್ದ ಙ್ಞಾನದಿಂದ ಮುಂದುವರಿಯುವುದು ತಾನೆ? ತಾನು ತಾನೇ ಮಾಡಿದ್ದೇನು? ತನಗೆ ಬೇಡಿಯಾಗಿದ್ದ ಜಾತಿಯಲ್ಲಿ ಮಿತಿ ಕಂಡಿತು. ಅದು ನನ್ನ ವಿಕಾಸಕ್ಕೆ, ನನ್ನ ಆಶೆಗೆ ಅಡ್ಡಿಯಾಯಿತು. ವಸಿಷ್ಠರಲ್ಲಿ ಇದ್ದ ಆ ಅಮೋಘ ಮಂತ್ರಶಕ್ತಿ ನನ್ನನ್ನು ಆಕರ್ಷಿಸಿತು. ನಾನು ನನ್ನನ್ನು ಬಂಧಿಸಿದ್ದ ಜಾತಿಯ ಕಬ್ಬಿಣದ ಕಟ್ಟಡವನ್ನು ಉರುಳಿಸಿದೆ. ಅದು ಸುಲಭವಾಯಿತೆ? ಎಂತಹ ಕಷ್ಟ ಪ್ರಯಾಣ; ಅಡಿಗಡಿಗೂ ವಿಘ್ನ; ದೇವತೆಗಳ ಅಸಹಕಾರ. ಆದರೂ ತಾನು ಸೋಲುತ್ತಿಲ್ಲ, ಹಠ ಬಿಡುತ್ತಿಲ್ಲ, ಬಿದ್ದಾಗಲೆಲ್ಲ ಏಳುತ್ತಿದ್ದೇನೆ. ಇನ್ನೂ ಏಳುತ್ತಲೇ ಇರುತೇನೆ. ಬ್ರಹ್ಮರ್ಷಿಯಾಗುವವರೆವಿಗೂ ನಾನು ವಿರಮಿಸೊಲ್ಲ.
ಪಾಪ! ಸತ್ಯವ್ರತನದು ಇಂತಹುದೇ ಮತ್ತೊಂದು ತೆರ. ತಾನು ಸುಖಗಳಿಂದ, ವೈಭವದಿಂದ ದೂರ ಹೋಗಿ, ಊರಿಗೆ ಬೆನ್ನು ಹಾಕಿ ಕಾಡಿಗೆ ಬಂದಿದ್ದರೆ, ಇವನು ಊರಿನ ಸವಲತ್ತು ಸಾಲದೆ, ಸ್ವರ್ಗಕ್ಕೆ ಹೋಗಬೇಕೆಂದಿದ್ದಾನೆ. ಗುರಿ ವಿರುದ್ಧ ಇರಬಹುದು, ಆದರೆ ಮೂಲಭೂತ ಬಯಕೆ ಒಂದೇ ತಾನೆ? ಅದೇ ಪ್ರಗತಿ, ಅದೇ ಊರ್ಧ್ವಗಾಮಿತ್ವ, ಅದೇ ಜಂಗಮ ಸ್ಥಿತಿ, ಅದೇ ಕೊಳೆತ ಕುಂಟೆಯ ನೀರಾಗದೇ, ಪವಿತ್ರ ಗಂಗಾಜಲವಾಗಿ ಸದಾ ಹರಿಯುತ್ತಿರುವುದು. ಅದನ್ನೇ ಸತ್ಯವ್ರತ ಕನಸು ಕಂಡ. ತಪ್ಪೇನಿದೆ ಇದರಲ್ಲಿ? ಯೋಚಿಸಿದಂತೆಲ್ಲ ವಿಶ್ವಮಿತ್ರರಿಗೆ ಸತ್ಯವ್ರತನ ಪರ, ವಾದ ಮಂಡನೆಯಾಗುತ್ತಿದೆ ಮನದಲ್ಲಿ.
(ಹಾಗೆ ನೋಡಿದರೆ ವ್ಯಕ್ತಿಯ ಪ್ರಗತಿಗೆ, ಆತನ ಜಾತಿ, ವಂಶ, ಪರಿಸರ ಮಾಂದ್ಯ, ದಾರಿದ್ರ್ಯ.... ಇವಾವುವೂ ಕಾರಣವೆಂದು ನನಗನಿಸುತ್ತಿಲ್ಲ. ಇತಿಹಾಸವನ್ನು ನೋಡಿದರೆ ಯೋಗೇಶ್ವರ ಕೃಷ್ಣನಿಂದ ಯೋಗಿ ಮೋದಿಯ ವರೆವಿಗೆ, ಎಲ್ಲರೂ ಈ ಅಗ್ನಿಪರೀಕ್ಷೆಯಲ್ಲಿ ಹಾದು ಬಂದವರೇ. ಹುಟ್ಟಿನಿಂದಲೇ ಸಾಯಿಸುವ ಸಂಚುಗಾರ ಕಂಸನಿಂದ ಹಿಡಿದು ಶಿಶುಪಾಲನ ತನಕ, ಎಷ್ಟು ಜನರನ್ನು ಅಪೋಶನ ತೆಗೆದುಕೊಂಡು ಆತ ಯೋಗೇಶ್ವರನಾಗಲಿಲ್ಲವೇ? ಗೊಲ್ಲರ ಹಟ್ಟಿಯಲ್ಲಿ ಬೆಳೆದು ವಿಶ್ವಕ್ಕೇ ಗುರುವಾಗಲಿಲ್ಲವೇ? ದಾರಿದ್ರ್ಯದ ಪಾತಾಳದಲ್ಲಿದ್ದ ವಿಶ್ವೇಶ್ವರಯ್ಯನವರು, ದ . ರಾ . ಬೇಂದ್ರೆ, ಲಾಲ್ ಬಹದ್ದೂರ್ ಶಾಸ್ತ್ರಿ, ದೇವರಾಜ್ ಅರಸು, ಮುದ್ದಣ , ಇವರೆಲ್ಲ ಗಗನ ಚುಂಬಿಗಳಾಗಲಿಲ್ಲವೇ? ಸಾವಿರಗಳ ನಾರಾಯಣ ಮೂರ್ತಿ ಇಂದು ವಿಶ್ವದ ಧನಿಕರಲ್ಲಿ ಒಬ್ಬರಾಗಲಿಲ್ಲವೇ ? ಓಹ್ ! ದಾರಿದ್ರ್ಯದಲ್ಲೇ ಹುಟ್ಟಿ, ಮೂವತ್ತಕ್ಕೂ ಹೆಚ್ಚು ಖಾಯಿಲೆಗಳನ್ನು ಮೈ ತುಂಬಿಸಿಕೊಂಡು, ಜೇಬಿನಲ್ಲಿ ರೂಪಾಯಿಯೂ ಇಲ್ಲದೇ, ಉಡಲು ಸರಿಯಾದ ಉಡುಗೆಯೂ ಇಲ್ಲದೇ , ಸನ್ಯಾಸಿಯಾಗಿ ಪುಟಾಣಿ ಸಭೆಯೊಂದರಲ್ಲಿ ಮಾತನಾಡಲು ಕರೆದಾಗಲೆಲ್ಲ ಹಿಂದೆ ಸರಿದಿದ್ದ ವಿವೇಕಾನಂದರು, ಬಾಯಿ ಬಿಟ್ಟೊಡನೆ ವಾಕ್ ಪ್ರಕಾಶ ಪ್ರಪಂಚವನ್ನೇ ವ್ಯಾಪಿಸಿ, ಕೇವಲ 39 ವರ್ಷಗಳು ಮಾತ್ರ ಬದುಕಿದ್ದು, ಇಂದಿನ ನೂರಾರು ರಾಮಕೃಷ್ಣಾಶ್ರಮಗಳಿಗೆ ಜನ್ಮದಾತರಾಗಿ ಅದಕ್ಕೊಂದು ಧ್ಯೇಯ, ಸನ್ಯಾಸಿಗಳಿಗೊಂದು ನೀತಿ ಸಂಹಿತೆ, ವೇದಾಂತಕ್ಕೊಂದು ಭದ್ರ ವ್ಯಾಖ್ಯಾನ... ಇವುಗಳನ್ನೆಲ್ಲ ಕರುಣಿಸಿ, ಯಾವತ್ತೂ ಭಾರತದ ಸಾಷ್ಟಾಂಗ ನಮಸ್ಕಾರ ಸ್ವೀಕರಿಸುತ್ತಿಲ್ಲವೇ ? ವೃದ್ಧಾಪ್ಯದ ಸಡಿಲು ಸುಕ್ಕು ಚರ್ಮ ದುಕೂಲ ಧರಿಸಿ, ಹೃದಯಾಘಾತಗಳಿಗೆ ದೇಹವನ್ನೊಡ್ಡುತ್ತ, ಅಙ್ಞಾತ ಅಮೆರಿಕೆಯಲ್ಲಿ ಅರೆಕಾಸಿಲ್ಲದೇ ಇಳಿದು, ಬೈರಾಗಿಯಾಗಿ ನಿಂತ ಭಕ್ತಿ ವೇದಾಂತ ಸ್ವಾಮಿಗಳು, ಇಂದಿನ ಪ್ರಪಂಚ ವ್ಯಾಪಿ ನೂರು ನೂರು ಇಸ್ಕಾನ್ ಸಂಸ್ಥೆಗಳಿಗೆ ಜೀವದಾನ ಮಾಡಿಲ್ಲವೇ? ವಿರೋಧಿಗಳ ಬೊಬ್ಬೆಯನ್ನು ಲಕ್ಷಿಸದೇ, ನವ ನವ ಪಥಗಳನ್ನು ಸೃಷ್ಟಿ ಮಾಡಿಕೊಳ್ಳುತ, ಅಂತರ್ದುರ್ಬಲರನ್ನು ಸಹಿಸುತ್ತ, ನಗಣ್ಯವಾಗಿದ್ದ ಭಾರತವನ್ನು ವಿಶ್ವದ ಉತ್ತಮ ಸ್ಥಾನದಲ್ಲಿ ಕಾಣಿಸುತ್ತ, ಹೋದಲ್ಲೆಲ್ಲ ಮಾತಿನ ಮಂಟಪದ ಇತಿಹಾಸ ನಿರ್ಮಿಸುತ್ತ, ಹಿಂದೂ  ಯೋಗವನ್ನು; ನಮ್ಮ ಯೋಗವನ್ನು; ಭಾರತ ಸಂತಾನ ಯೋಗವನ್ನು, ವಿಶ್ವದೆಲ್ಲೆಡೆ ಅನುಷ್ಠಾನಕ್ಕೆ ತಂದ ಆಧುನಿಕ ರಾಮಕೃಷ್ಣ ಪರಮಹಂಸರಾದ ಮೋದಿಯವರು ಭಾರತದ ಙ್ಞಾನ, ಗಾಂಭೀರ್ಯ, ವ್ರತ, ಭಾಷೆ, ಚಿಂತನೆಗಳ ಮೂಲಕ ಇಂದು ಪ್ರಪಂಚದ ಹತ್ತು ಗಣ್ಯರಲ್ಲಿ ಒಬ್ಬರಾಗಿ ಮೆರೆಯುತ್ತಿಲ್ಲವೇ? ಪ್ರಕಾಶಿಸುತ್ತಿಲ್ಲವೇ? ಪ್ರಜ್ವಲಿಸುತ್ತಿಲ್ಲವೇ ?!
ಅದು ಕಾರಣ ತಮ್ಮ ಜಾತಿಯ, ನಿರ್ಗತಿಕತೆಯ, ಹಿಂದಿನವರ ಅಙ್ಞಾನದ, ಬದುಕಿನ ದಾರಿಯ ಕಲ್ಲು, ಮುಳ್ಳು, ಬಿಸಿಲು, ಮಳೆಗಳ ಕಾರಣದಿಂದ ತಾನು ಬೆಳೆಯಲಾಗಲಿಲ್ಲ ಎಂಬುದು, "ಅಯ್ಯೋ ಪಾಪ"ದ ಕೆಲಸಕ್ಕೆ ಬಾರದ ಉದ್ಗಾರಕ್ಕೆ ಕಾರಣವಾಗಬಹುದೇ ವಿನಃ, ವ್ಯಕ್ತಿಯ ಅಧೋಗಾಮಿತ್ವಕ್ಕೆ ಕಾರಣವಾಗಲಾರದು)
ಬೆಳಗಿನ ಜಾವದ ಹೊತ್ತಿಗೆ ಮಹರ್ಷಿಗಳು ಒಂದು ನಿರ್ಣಯಕ್ಕೆ ಬಂದರು. ವಿರಾಮವಾಯಿತು. ನಿದ್ದೆ ಬಂದಿತು. ಆದರೆ ಅವರ ನಿರ್ಣಯದಲ್ಲಿದ್ದ ಒಂದು ದುರ್ಬಲ ಎಳೆ ಅವರಿಗೆ ಕಾಣಿಸಲೇ ಇಲ್ಲ ! 
                                          ***********
ಅತ್ಯುತ್ಸಾಹಿಯಾಗಿ ಬಂದು ಕುಳಿತ ಸತ್ಯವ್ರತನಿಗೆ ಅಭಯವಿತ್ತರು ಮಹರ್ಷಿಗಳು. " ಆಗಲಿ. ಏನೋ ಆಗಬಾರದ್ದು ಆಗಿ ಹೋಯಿತು, ಗುರುಗಳು ನಿಷ್ಕಾಮರು. ನನ್ನಿಂದ ನೂರು ಕೆಡಕುಗಳಾದರೂ ತುಟಿ ಕಚ್ಚಿ ಸಹಿಸಿದರೇ ವಿನಹ, ನನಗವರು ಕೆಡು ನುಡಿಯೊಂದನ್ನೂ ನುಡಿಯಲಿಲ್ಲ. ಪುಟ್ಟ ಶಾಪವನ್ನೂ ಕೊಡಲಿಲ್ಲ. ನಿಮಗೆ ಶಾಪವಿತ್ತವರು ಅವರ ಮಕ್ಕಳು. ಅವರಲ್ಲಿ ಹೇಗೆ ಅಪ್ಪನ ಸಾತ್ವಿಕ ಸಿರಿ ಕಾಣಲು ಸಾಧ್ಯ ? ಆ ವಿಷಯ ಬಿಡಿ. ನಿಮಗೆ ಸ್ವರ್ಗಾಪೇಕ್ಷೆಯಿರುವುದು ತಪ್ಪಲ್ಲ. ನೀವು ಇದೇ ದೇಹದಲ್ಲೇ ಸ್ವರ್ಗಕ್ಕೆ ಹೋಗುವುದು ನನಗೂ ಇಷ್ಟ. ಆದರೆ ಈ ದೇವತೆಗಳು ಹಳೆಯ ಶೀತಲ ತಲೆಯವರು. ಸಂಪ್ರದಾಯ ಮೀರದವರು. ಅವರು ಹೇಗೆ ನಿಮ್ಮನ್ನು ಸ್ವೀಕರಿಸುತ್ತಾರೋ ಗೊತ್ತಿಲ್ಲ. ಏನೇ ಇರಲಿ , ನನ್ನ ತಪಃಶಕ್ತಿಯನ್ನೆಲ್ಲ ಪಣ ಇಟ್ಟು ನಿಮ್ಮನ್ನು ಸ್ವರ್ಗಕ್ಕೆ ಕಳಿಸಲು ನಾನು ಶುದ್ಧ ಮನಸ್ಕನಾಗಿ ಪ್ರಯತ್ನಿಸುವೆ. ಫಲ ಅವನಿಗೆ ಬಿಟ್ಟದ್ದು. " ಸತ್ಯವ್ರತನಿಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗದೇ ಕುಣಿಯಬೇಕೆನಿಸಿದೆ. ಸಂತೋಷವನ್ನು ತಡೆಯಲು ಹರ ಸಾಹಸ ಪಡಬೇಕಾಗಿದೆ. ಮಿತಿ ಮೀರಬಾರದೆಂದು ಮತ್ತೆ ಮತ್ತೆ ವಿಶ್ವಮಿತ್ರರಿಗೆ ನಮಸ್ಕರಿಸಿ ಮುಂದೇನು ಮಾಡಬೇಕೆಂದು ಕೇಳಿದ. " ಉಳಿದ ಋಷಿಗಳೊಡನೆ ಚರ್ಚಿಸಿ ಕೆಲ ದಿನಗಳಲ್ಲೇ ಸ್ವರ್ಗಾರೋಹಣ ಯಙ್ಞವನ್ನು ಆರಂಭಿಸುವೆ. ಅಲ್ಲಿಯವರೆಗೆ ಅರಣ್ಯದಲ್ಲಿ ಹಾಯಾಗಿ ವಿಹರಿಸಿ".   
               (ಅಹಂ ಆಮಂತ್ರಯೇ ಸರ್ವಾನ್ ಮಹರ್ಷೀನ್ ಪುಣ್ಯ ಕರ್ಮಣಃ
              ಯಙ್ಞ ಸಾಹ್ಯಕರಾನ್ ರಾಜಂ ತತೋ ಯಕ್ಷಸಿ ನಿರ್ವೃತಃ )  (ಮುಗಿದಿಲ್ಲ... )
-ಡಾ|| ಪಾವಗಡ ಪ್ರಕಾಶ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com