ಮೊದಲು ಕ್ಷಮೆ, ಬಗ್ಗದಿದ್ದರೆ ಮಾತ್ರ ಶಿಕ್ಷೆ- ಇದು ರಾಮ ಮಂತ್ರ

ಲಕ್ಷ್ಮಣನನ್ನುದ್ದೇಶಿಸಿ ರಾಮರೆಂದರು, "ಲಕ್ಷ್ಮಣ, ನಮ್ಮ ಕಾರ್ಯ ಆಗುತ್ತಿದೆ, ಈ ರಾಕ್ಷಸರಿಂದ ಇನ್ನು ಭಯವಿಲ್ಲ, ಮೊದಲು ಕ್ಷಮಿಸೋಣ" ಹೀಗೆಂದು ರಾಮರು ಬಿಲ್ಲನ್ನು ಕೆಳಗಿಳಿಸುತ್ತಿದ್ದಂತೆಯೇ ದೊಡ್ಡ ಬಂಡೆಯೊಂದು...
ರಾಕ್ಷಸರನ್ನು ತಡೆಯುತ್ತಿರುವ ರಾಮ ಲಕ್ಷ್ಮಣರು(ಸಾಂಕೇತಿಕ ಚಿತ್ರ)
ರಾಕ್ಷಸರನ್ನು ತಡೆಯುತ್ತಿರುವ ರಾಮ ಲಕ್ಷ್ಮಣರು(ಸಾಂಕೇತಿಕ ಚಿತ್ರ)
ಇದ್ದಕ್ಕಿದ್ದಂತೆಯೇ ಯಙ್ಞಕುಂಡದಲ್ಲಿ ಉರಿ ಹುಚ್ಚೆದ್ದು ಕುಣಿಯಿತು. ವೇದಿಕೆ ಮೇಲಿದ್ದ ಯಙ್ಞ ದ್ರವ್ಯಗಳೆಲ್ಲ ನಡುಗಲಾರಂಭಿಸಿತು. ಹೂ ರಾಶಿ ಚೆಲ್ಲಿ ಹೋಯಿತು. 
(ಸದರ್ಭ ಚಮಸ ಸೃಕ್ಕಾ ಸ ಸಮಿತ್ ಕುಸುಮ ಉಚ್ಚಯಾ
ವಿಶ್ವಾಮಿತ್ರೇಣ ಸಹಿತಾ ವೇದಿರ್ಜಜ್ವಾಲ ಸರ್ತ್ವಿಜಾ)
ವಟುಗಳೆಲ್ಲ ಕಿರುಚಿದರು. (ಮುಂದಿನ ಉತ್ಪಾತ ಸೂಚನೆಯದು!) ರಾಮರು ಏನಾಯಿತೋ ಎಂದು ಅರೆಕ್ಷಣ ಇತ್ತ ತಿರುಗಿದರು. ಉತ್ತರ ಕ್ಷಣದಲ್ಲಿ ಮಡಕೆಯೊಂದು ತೂರಿಬಂದು ಯಙ್ಞಕುಂಡಕ್ಕೆ ಮಾರುದ್ದ ದೂರದಲ್ಲಿ ಬಿದ್ದಿತು. ಮರುಕ್ಷಣವೇ ಅಲ್ಲೆಲ್ಲ ರಕ್ತ ಚೆಲ್ಲಾಡಿತು. ವಟುಗಳು ಕೂಗಲಾರಂಭಿಸಿದರು. ವಿಶ್ವಮಿತ್ರರ ಮಂತ್ರ ನಿಲ್ಲಲಿಲ್ಲ. ಅಲ್ಲಿಗೆ ಯಙ್ಞಭಂಗ ಇನ್ನೂ ಆಗಿಲ್ಲ. (ಹಾಗೇನಾದರೂ ಮಡಕೆಯ ರಕ್ತ ಯಙ್ಞಾಗ್ನಿಯಲ್ಲಿ ಬಿದ್ದಿದ್ದಿದ್ದರೆ ಮತ್ತೊಮ್ಮೆ ನಿಂತೇ ಬಿಡುತ್ತಿತ್ತೇನೋ). ಇಷ್ಟೆಲ್ಲಾ ಶ್ರೀರಾಮರು ಕ್ಷಣಮಾತ್ರದಲ್ಲಿ ಗ್ರಹಿಸಿ ತಿರುಗುವ ಹೊತ್ತಿಗೆ ಮತ್ತೊಂದು ಮಡಕೆಯೊಂದು ತೂರಿ ಬಂತು. ಬಿಲ್ಲಿನ ತುದಿಯಿಂದ ಅದಕ್ಕೆ ಹೊಡೆದರು, ಮಡಕೆ ಚಲ್ಲಾಪಿಲ್ಲಿಯಾಗಿ ಮಾಂಸದ ತುಂಡುಗಳು ಉದುರಿತು ಯಙ್ಞವಾಟಿಕೆಯ ಹೊರಗೆ. ರಾಮರು ತಲೆ ಎತ್ತಿ ನೋಡುತ್ತಿದ್ದಾರೆ, ನೂರಾರು ರಕ್ಕಸರು ಕೈಯಲ್ಲಿ ಮಡಕೆಗಳನ್ನು ಹಿಡಿದಿದ್ದಾರೆ. ಅವರ ಹಿಂದೆ ಕುರಿ-ಕೋಳಿಗಳನ್ನು ಹಿಡಿದ ಮತ್ತಷ್ಟು ಮಂದಿ. ಅವರ ಹಿಂದೆ ಜಿಂಕೆ, ನರಿ, ತೋಳಗಳನ್ನು ಹಿಡಿದಿದ್ದ ಮಗದಷ್ಟು ಮಂದಿ. ಅವನ್ನೆಲ್ಲ ಒಂದೊಂದಾಗಿ ತೂರುತ್ತಿದ್ದಾರೆ. ರಾಮ ಲಕ್ಷ್ಮಣರು ತಾವು ಓಡಾಡಲು ಉಳಿಸಿಕೊಂಡಿದ್ದ ಕಲ್ಲಿನ ಕೋಟೆಯ ಸಂದಿಯನ್ನು ಇದೀಗ ಬಾಣ ಬಾಗಿಲಿನಿಂದ ಮುಚ್ಚಿಬಿಟ್ಟರು. ರಾಕ್ಷಸರು ಎಸೆಯುತ್ತಿದ್ದುದೆಲ್ಲ ಇದೀಗ ಬಾಗಿಲಿಗೆ, ಗೋಡೆಗೆ ಬಡಿದು ಹೊರಗೇ ಸುರಿಯುತ್ತಿತ್ತು; ಚೆಲ್ಲುತ್ತಿತ್ತು. ಒಳಗೆ ನಿರಾತಂಕವಾಗಿ ಯಙ್ಞ ಸಾಗುತ್ತಿದೆ. 
ಲಕ್ಷ್ಮಣನನ್ನುದ್ದೇಶಿಸಿ ರಾಮರೆಂದರು, "ಲಕ್ಷ್ಮಣ, ನಮ್ಮ ಕಾರ್ಯ ಆಗುತ್ತಿದೆ, ಈ ರಾಕ್ಷಸರಿಂದ ಇನ್ನು ಭಯವಿಲ್ಲ, ಮೊದಲು ಕ್ಷಮಿಸೋಣ" ಹೀಗೆಂದು ರಾಮರು ಬಿಲ್ಲನ್ನು ಕೆಳಗಿಳಿಸುತ್ತಿದ್ದಂತೆಯೇ ದೊಡ್ಡ ಬಂಡೆಯೊಂದು ಬಂದು ತಾವು ನಿರ್ಮಿಸಿದ್ದ ಕಲ್ಲಿನ ಕೋಟೆಗೆ ಬಡಿಯಿತು. ಗೋಡೆ ಬಿರುಕು ಬಿಡಲಿಲ್ಲ. ನಿಜ; ಆದರೆ ಹೀಗೇ ಬಂಡೆಗಳು ಒಂದರ ಹಿಂದೊಂದು ಹೊಡೆದರೆ ಸೀಳಿಯೂ ಹೋದಾತು, ಗೋಡೆಯೂ ಬಿದ್ದಾತು. 
ತಾವು ಕ್ಷಮಿಸುತ್ತಿರುವುದು ಸರಿಯೇ ಎಂದು ಯೋಚಿಸುತ್ತ ಮತ್ತೆ ಹೇಳಿದರು, "ಬೇಡ, ಇವರನ್ನು ಕೊಲ್ಲುವುದು ಬೇಡ. ಏಕೋ ನನಗೆ ಕೊಲ್ಲುವುದರಲ್ಲಿ ಉತ್ಸಾಹವೇ ಇಲ್ಲ. ಆದ್ದರಿಂದ ಮಾನವಾಸ್ತ್ರ ಪ್ರಯೋಗಿಸುತ್ತೇನೆ. ಗಾಳಿ ಮೋಡವನ್ನು ಚೆದುರಿಸುವಂತೆ ಅದು ಇವರನ್ನು ದಿಕ್ಕಾಪಾಲು ಮಾಡುತ್ತದೆ. ನೋಡುತ್ತಿರು; ಇದರಲ್ಲಿ ಸಂದೇಹವೇ ಇಲ್ಲ. "
( ಮಾನವಾಸ್ತ್ರ ಸಮಾಧೂತಾನ್ ಅನಿಲೇನ ಯಥಾ ಘನಾನ್
ಕರಿಷ್ಯಾಮಿ ನಸಂದೇಹಃ ನ ಉತ್ಸಹೇ ಹಂತುಂ ಈದಿಶಾನ್ )
ಶೀತೇಶುವೆಂಬ ಆ ಮಾನವಾಸ್ತ್ರ ಎಲ್ಲರನ್ನೂ ನಾಲ್ಕು ದಿಕ್ಕುಗಳಿಗೆ ನೂಕಿತು. ಎಷ್ಟು ದೂರ? ನೂರಾರು ಮೈಲುಗಳು. ಅದರ ತುದಿ ತಗುಲಿದ್ದು ಮಾರೀಚನಿಗೆ. ನೇರವಾಗಿ ಲಂಕೆಯ ಎಲ್ಲೆಯ ಸಮುದ್ರಕ್ಕೆ ಹೋಗಿ ಬಿದ್ದ. ಅವನ ಜೀವನದ ಪರಮ ಸೋಲದು. ಬಿದ್ದ ರಭಸಕ್ಕೆ ಎಡಗೈ, ಕಾಲ್ಗಳೆರಡೂ ಮುರಿದು ಅರಚುತ್ತಿದ್ದ. ಅವನ ಅರಚಾಟ ಕೇಳಿ ಬಂದ ಹಲ ರಾಕ್ಷಸರು ಅವನನ್ನೆತ್ತಿ ಒಯ್ದರು ರಾಕ್ಷಸ ವೈದ್ಯ ದುರ್ಮಾರ್ಗನ ಹತ್ತಿರಕ್ಕೆ. 
ರಾಮರಿಗನ್ನಿಸಿತು ಇನ್ನು ಸುಧಾರಿಸಿತೆಂದು. ಅಲ್ಲ, ಅದು ಕ್ಷಣದ ನಿರಾಳ. ದೂರದಲ್ಲಿನ ಕಪ್ಪು ರೂಪ ಹತ್ತಿರವಾಗುತ್ತಿದ್ದಂತೆಯೇ ಭೀಕರಾಕಾರದ ರಾಕ್ಷಸನಾಗಿ ಆಕಾರಗೊಳ್ಳುತ್ತಿದೆ. ದೂರದಿಂದಲೇ ಅವನ ಬಾಹುಬಲದ ಶಕ್ತಿ ಕಾಣುವಂತೆ ಅವನ ಮಾಂಸಖಂಡಗಳು ಉಬ್ಬಿವೆ. ಹೊರಗಿದ್ದ ಋಷಿಯೊಬ್ಬರು ಹೇಳಿದರು ಹಿಂದಿನ ಅನುಭವದಿಂದ, " ಓಹ್ ! ಅವನೇ ಸುಬಾಹು! ಅವನು ಬಂದನೆಂದರೆ ಮುಗಿಯಿತು. ಇನ್ನೆಷ್ಟು ಮುನಿಗಳು ಸಾಯುತ್ತಾರೋ. ಅವನ ಕೈಗಳು ಕಬ್ಬಿಣದ ತೊಲೆ ಇದ್ದಹಾಗಿದೆ. ಬಂದು ಅವನೇನಾದರೂ ಒಂದು ಗುದ್ದು ಗುದ್ದಿದರೆ, ನೀವು ಕಟ್ಟಿದ ಕೋಟೆ ಬಿದ್ದೇ ಹೋಗತ್ತೆ. " ಅವರು ಹೇಳಿ ಮುಗಿಸುವ ಮುನ್ನವೇ ಸುಬಾಹು ಎಸೆದಿದ್ದ ಗುಡ್ಡ ಒಂದು ರಾಮ ನಿರ್ಮಿತ ಕಲ್ಲಿನ ಕೋಟೆಗೆ ಬಡಿದು ಅದನ್ನು ಕೆಡವಿತ್ತು. ಒಳಗಿದ್ದ ಮುನಿಗಳೆಲ್ಲ ಇದ್ದಕ್ಕಿದ್ದಂತೇ ಗೋಡೆ ಬಿದ್ದದ್ದು, ಬೆಳಕು ನುಗ್ಗಿದ್ದು, ಹೊರಗಿನ ಸದ್ದು ಕೇಳಿದ್ದು, ಎಲ್ಲ ಕೇಳಿ ಭಯಬಿದ್ದರು; ಅಲ್ಲಿಗೆ ಈ ಬಾರಿಯೂ ಯಙ್ಞಭಂಗವೇ ಎಂದು. ಇತ್ತ ರಾಮರು ಸುಬಾಹುವನ್ನು ಕಂಡರು. ಅವನು ಮತ್ತೊಂದು ಗುಡ್ಡವನ್ನು ಎತ್ತುತ್ತಿದ್ದಾನೆ, ಅದನ್ನು ಎಸೆದನೆಂದರೆ ಅದು ನೇರ ಈಗ ಯಙ್ಞಕುಂಡಕ್ಕೆ ಚಚ್ಚಿ ಎಷ್ಟು ಋಷಿಗಳು ಸಾಯುವರೋ. ಅಕಸ್ಮಾತ್ ವಿಶ್ವಮಿತ್ರರಿಗೇ ತಗುಲಿದರೂ ತಗುಲುತ್ತದೇನೋ. ಅವರೀಗ ಯಙ್ಞ ಮುಗಿಯುವುದೋ, ಮುರಿಯುವದೋ ಅಲ್ಲಿವರೆಗೆ ಮಾತಾಡುವಂತೇ ಇಲ್ಲ. ಇನ್ನೂ ನಿಧಾನ ಮಾಡುವಂತಿಲ್ಲ. ಶ್ರೀರಾಮರು ತಕ್ಷಣವೇ ಬಿಲ್ಲಲ್ಲಿ ಬಾಣ ಏರಿಸುತ್ತ ಹೇಳಿದರು; " ಲಕ್ಷ್ಮಣ, ನಿರ್ದಯರಿವರು. ಕ್ಷಮೆಗೆ ಇವರು ಅರ್ಹರಲ್ಲ. ಕೆಟ್ಟ ಕಾರ್ಯವನ್ನು ಮಾಡುವವರು. ಪಾಪಿಗಳು. ಯಙ್ಞ ಹಾಳು ಮಾಡುವವರು, ನೆತ್ತರು ಕುಡಿಯುವವರು. ಇವರನ್ನೆಲ್ಲ ವಧಿಸುತ್ತೇನೆ. "
( ಇಮಾನ್ ಅಪಿ ವಧಿಷ್ಯಾಮಿ ನಿರ್ಘೃಣಾನ್ ದುಷ್ಟಚಾರಿಣಃ
ರಾಕ್ಷಸಾನ್ ಪಾಪಕರ್ಮಸ್ಥಾನ್ ಯಙ್ಞಾಘ್ನಾನ್ ಪಿಶಿತಾಶನಾನ್ )
 ಮಾರಣದ ಮಂತ್ರಾಸ್ತ್ರ ಅಗ್ನಿ ಮಾರ್ಗಣವಾಗಿ 
ಬೆಂಕಿ ಕಕ್ಕುವ ಮೂತಿ ಮುಳ್ಳು ಬಾಣ
ಬಂದು ಬಿಲ್ಲಲಿ ನಿಲಲು ಧನುನಾರಿಯನ್ನೆಳೆದು
ಅಭಿಮಂತ್ರಿಸಲು ರಾಮ ಗುರಿಯನಿಟ್ಟು
ರಕ್ಕಸನು ಎಸೆದ ಶಿಲೆ ನುಚ್ಚಾಯ್ತು ತುದಿ ತಾಗಿ 
ಹುಣಿಸೆ ಮರ ಕಿತ್ತೆಸೆದ ತುಂಡಾಯಿತು 
ಗುಡ್ಡ ಪುಡಿ ಮಾಡಿ ಅದು ಅಸುರನೆಡೆ ಹಾರುತಿದೆ 
ರೋಷ ಭೀಷಣನಾದ ಔಡುಗಚ್ಚಿ
ಮುರಿದು ಬಿಸುಡುವೆನೆಂದು ಕಬ್ಬಿಣದ ಕೈಗಳಲಿ 
ತುಡುಕಿದೊಡೆ ಬಾಹುಗಳು ಹೋಯ್ತು ಸೀದು
ಉರಿಯುಗುಳಿ ನುಗ್ಗಿತದು ಎದೆ ಬಿರಿದು ಹೊರಬಂತು
ಬೊಬ್ಬೆಯಿಟ್ಟ ಸುಬಾಹು ಸಮತೆ ತಪ್ಪಿ 
ಅರಚುತ್ತ , ಬೈಯುತ್ತ , ನೆತ್ತರನು ಕಾರುತ್ತ
ನೆಲದ ಬಂಡೆಗೆ ಬಡಿದು ಅಪ್ಪಳಿಸಿದ ) (ಮುಂದುವರೆಯುವುದು...)  
 
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com