ರಾಮರನ್ನು ಸೆಳೆಯಿತು ಜನಕನಲ್ಲಿರುವ ಧನುಶ್ರೇಷ್ಠ

ಶ್ರೀರಾಮರ ಕಣ್ಣು ಮುಂದೆ ಆ ಧನುಸ್ಸು ಸುಳಿಯಲಾರಂಭಿಸಿತು. ಅದರ ಮೇಲಿನ ಕೆತ್ತನೆಗಳೆಲ್ಲ ಕಾಣಿಸತೊಡಗಿತು. ಅತಿ ಹತ್ತಿರದಲ್ಲಿ ಅದನ್ನು ಹಿಂದೆಂದೋ ಕಂಡಿರುವಂತೆ ಅನ್ನಿಸತೊಡಗಿತು...
ಶ್ರೀರಾಮ-ಶಿವಧನಸ್ಸು
ಶ್ರೀರಾಮ-ಶಿವಧನಸ್ಸು
ಋಷಿಗಳೊಡನೆ ಪ್ರಯಾಣ ಹೊರಟ ಎರಡನೆಯ ದಿವಸ. ಮಧ್ಯಾಹ್ನದ ಹೊತ್ತಿಗೆ ಬೃಹತ್ ನದೀ ತೀರಕ್ಕೆ ಬಂದಿದ್ದಾರೆ. ವಿಶಾಲವಾದ ಗಂಗೆ. ಆಳವಾಗಿ ಸುಳಿಗಳಿಂದ ಕೂಡಿ ಕೈ ಕೊರೆಯುವಂತೆ ಹರಿಯುತ್ತಿದ್ದಾಳೆ. ನದಿಯ ಮೇಲಿನ ತಂಗಾಳಿ, ನೆಡೆದು ಬಂದ ಪ್ರಯಾಸವನ್ನು ಪರಿಹರಿಸಿತು. ಪಿತೃಗಳಿಗೆ ತರ್ಪಣವಿತ್ತಿದ್ದಾರೆ, ಹವಿಸ್ಸನ್ನು ಸವಿದಿದ್ದಾರೆ, ವಿಶ್ವಮಿತ್ರರನ್ನು ಸುತ್ತುಗಟ್ಟಿ ಕುಳಿತಿದ್ದಾರೆ ಎಲ್ಲ. 
*************
ನೆನ್ನೆ ಅಲ್ಲ ಮೊನ್ನೆ ಮಧ್ಯಾಹ್ನದ ಹೊತ್ತಿಗೆ ಯಙ್ಞವಾಟಿಕೆಯೊಳಗಿನಿಂದ ಘಂಟೆ, ಜಾಗಟೆ, ಮದ್ದಲೆ, ಕೊಂಬು, ಕಹಳೆ.... ಜೋರು ಸದ್ದು. ಅಂತೇವಾಸಿ ಬಂದು ಕಾವಲು ಕಾಯುತ್ತಿದ್ದ ಶ್ರೀರಾಮರನ್ನು ಒಳಗೊಯ್ದ. ಎದ್ದು ನಿಂತಿರುವ ವಿಶ್ವಮಿತ್ರರ ಕೈಯಲ್ಲಿ ಮೇಲೆ ಉದ್ದಕ್ಕೆ ಹಳ್ಳ ಬಿದ್ದಿರುವ ಮರದ ಕೊಳವೆ. ಮುಂಭಾಗ ಅಗ್ನಿಯ ಮೇಲೆ. ಹಿಂದಿನ ತುದಿಯಲ್ಲಿ ತುಪ್ಪವನ್ನು ತುಂಬುತ್ತಿದ್ದಾರೆ ಶಿಷ್ಯರು. ಹದಿನಾರು ಕಂಚು ಕಂಠಗಳು ಪೂರ್ಣಾಹುತಿ ಮಂತ್ರವನ್ನು ಘೋಷಿಸುತ್ತಿವೆ. ಒಂದೇ ಧ್ವನಿಯಾಗಿ ಕಾಡೆಲ್ಲ ತುಂಬುವಂತೆ ರೋಮಾಂಚನ ಶಬ್ದ ಶ್ರೀಯಾಗಿ ವಿರಾಜಿಸಿದೆ. ಧಾರೆ - ಧಾರೆಯಾಗಿ ಹರಿದು ಬಂದ ತುಪ್ಪ ಕುಡಿದು ಉಬ್ಬಿದ್ದಾನೆ ಅಗ್ನಿದೇವ. ಕೆಂಪನೆಯ ಆಳೆತ್ತರದ ಉರಿಗಳು ಮೂಡಿ ಮೂಡಿ ಮಾಯವಾಗುತ್ತಿವೆ. ಏನೋ ಒಂದು ಅಪೂರ್ವ ದೃಶ್ಯ ; ಏನೋ ಒಂದು ಕರ್ಣಾನಂದ; ಮತ್ತೇನೋ ಒಂದು ಸುಗಂಧದ ನಾಸಿಕಾನಂದ. ತಂಪು ಬಿಸುಪಿನ ಸ್ಪರ್ಶ. ಸುತ್ತಲ ತಂಪು ಗಾಳಿಗೆ ಒಡ್ಡಿರುವ ದೇಹಗಳಿಗೆ ಮುಂದಿನ ಯಙ್ಞಾಗ್ನಿಯ ಬಿಸುಪು. 
ಕ್ಷಿಪ್ರದಲ್ಲೇ ಸಾಲು ಸಾಲು ಸಾಲುಗಳು. ಬಿಸುಪು ವರ್ಣಮಯ ಅಡುಗೆಯ ವಿತರಣೆ. ಎಲ್ಲರಿಗೂ ತೃಪ್ತಿಯಿದೆ. ಕೆಲ ವರ್ಷಗಳ ಪ್ರಯತ್ನ ಇಂದು ಸಫಲವಾಗಿದೆ. ಇದಕ್ಕೆ ಕಾರಣ ಶ್ರೀರಾಮರು. ಹರ್ಷಚಿತ್ತರಾದ ಮಹರ್ಷಿಗಳು ರಾಮರೆಡೆ ತಿರುಗಿ ಹೇಳಿದರು, "ರಾಮ, ಸಿದ್ಧಾಶ್ರಮ ನಿನಗೆ ಕೃತಙ್ಞವಾಗಿದೆ. ಹಲಬಾರಿ ನಿಂತು ಇಂದು ನಿನ್ನಿಂದಾಗಿ ಯಙ್ಞ ಮುಕ್ತಾಯವಾಯಿತು. ನಿನ್ನಿಂದ ಜಗತ್ಕಲ್ಯಾಣವಾಯಿತು. ಮುಂದೂ ಆಗಬೇಕಿದೆ. ಆದರೆ ನಿನಗೂ ಕಲ್ಯಾಣವಾಗಬೇಕಲ್ಲವೇ? ".ಏನೂ ಮಾತಾಡದೇ ರಾಮರು ಕೈ ಜೋಡಿಸಿದ್ದಾರೆ, "ಇಲ್ಲಿಗೆ ನಿನ್ನನ್ನು ಕರೆತಂದದ್ದು ಕಾವ್ಯದ ಮೇಲ್ನೋಟದ ಅರ್ಥ. ಅದರ ಧ್ವನಿ ಬೇರೆ ಇದೆ. ಇಲ್ಲಿಗೆ ಬಂದದ್ದು ಒಂದು ಕಾರಣ. ಮುಂದಿನದೇ ಕಾರ್ಯ. ಇದೀಗ ಯಙ್ಞಾರಂಭವಾಗಬೇಕಿದೆ. "ಶ್ರೀರಾಮರಿಗೆ ಗುರುಗಳ ಮಾತು ಅರ್ಥವಾಗುತ್ತಿಲ್ಲ. ತನ್ನನ್ನಿಲ್ಲಿಗೆ ಕರತಂದದ್ದು ನಿಜವಾದ ಕಾರಣ ಅಲ್ಲವಂತೆ! ಈಗ ಮುಗಿದದ್ದು ಯಙ್ಞವಲ್ಲವಂತೆ!! ಮುಂದೆ ಯಾಗ ಇದೆಯಂತೆ!!! ತಾನಾಗಮಿಸಿದ್ದೇ ಕಾರ್ಯವೆಂದು ಯಙ್ಞವೇ ಕಾರಣವೆಂದುಕೊಂಡಿದ್ದರೆ, ತಾನೀಗ ಬಂದದ್ದು ಕಾರಣವಾಗಿ ಮುಂದೇನೋ ಕಾರ್ಯವಾಗಬೇಕಿದೆಯಂತೆ!!!! ಋಷಿಗಳೆಲ್ಲ ವಿಶ್ವಮಿತ್ರರೊಡಗೂಡಿ ಹೇಳಿದರು 
( ಏವಮುಕ್ತಾಸ್ತತಸ್ತಾಭ್ಯಾಂ ಸರ್ವ ಏವ ಮಹರ್ಷಯಃ
ವಿಶ್ವಾಮಿತ್ರಂ ಪುರಸ್ಕೃತ್ಯ ರಾಮಂ ವಚನಮಬ್ರುವನ್ )
ಮಿಥಿಲೆಯೊಂದು ರಾಜ್ಯ, ಅದಕ್ಕೆ ಅಧಿಪತಿ ಜನಕ. ಜನಕನಿಗೆ ಯಙ್ಞಾಕಾಂಕ್ಷೆ. ಅಲ್ಲಿಗೀಗ ಹೋಗಬೇಕಿದೆ. ನೀನೂ ನಮ್ಮೊಡನೆ ಬಾ. ಆ ರಾಜನ ಬಳಿ ಒಂದು ದಿವ್ಯವಾದ ಬಿಲ್ಲಿದೆ, ನೋಡಲು ಆಕರ್ಷಕವಾಗಿದೆ. ಹಿಂದಿನ ಯಙ್ಞದಲ್ಲಿ ದೇವತೆಗಳು ಹಿಂದಿನ ಜನಕನಿಗೆ ಧನುಸ್ಸನ್ನು ಕೊಟ್ಟಿದ್ದಾರೆ. ಮಹಾ ಶಕ್ತಿಶಾಲಿ ಧನುಸ್ಸದು; ನೋಡಲು ಕಣ್ಣು ಕೋರೈಸುತ್ತದೆ. ದೇವತೆಗಳು, ಗಂಧರ್ವರು, ಅಸುರರು, ರಾಕ್ಷಸರು, ಎಲ್ಲ ಪ್ರಯತ್ನಿಸಿದ್ದಾರೆ. ನರಾಧೀಶರು, ಎಷ್ಟೆಷ್ಟೋ ವೀರ್ಯವಂತರು ಅದನ್ನು ಬಗ್ಗಿಸಿ ಹೆದೆ ಏರಿಸಲು ಆಗಿಲ್ಲ!!! 
( ಮೈಥಿಲಸ್ಯ ನರಶ್ರೇಷ್ಠ ಜನಕಸ್ಯ ಭವಿಷ್ಯತಿ 
ಯಙ್ಞಃ ಪರಮಧರ್ಮಿಷ್ಟಃ ತತ್ರಯಾಸ್ಯಾ ಮಹೇವಯಂ
ಅಥ ಚೈವ ನರಶಾರ್ದೂಲ ಸಹಸ್ಮಾಭಿರ್ಗಮಿಷ್ಯಸಿ 
ಅದ್ಭುತಂಚ ಧನೂರತ್ನಂ ತತ್ರೈಕಂ ದ್ರಷ್ಟು ಮರ್ಹಸಿ
ತದ್ಧಿಪೂರ್ವಂ ನರಶ್ರೇಷ್ಠ ದತ್ತಂ ಸದಸಿ ದೈವತೈಃ
ಅಪ್ರಮೇಯ ಬಲಂ ಘೋರಂ ಮಖೇ ಪರಮ ಭಾಸ್ವರಂ
ನಾಸ್ಯದೇವ ನಗಂಧರ್ವ ನಾಸುರ ನಚರಾಕ್ಷಸಾಃ
ಕರ್ತವ್ಯಮಾರೋಪಣಂ ಶಕ್ತ ನ ಕಥಂಚನ ಮಾನುಷಾಃ )
ಶ್ರೀರಾಮರ ಕಣ್ಣು ಮುಂದೆ ಆ ಧನುಸ್ಸು ಸುಳಿಯಲಾರಂಭಿಸಿತು. ಅದರ ಮೇಲಿನ ಕೆತ್ತನೆಗಳೆಲ್ಲ ಕಾಣಿಸತೊಡಗಿತು. ಅತಿ ಹತ್ತಿರದಲ್ಲಿ ಅದನ್ನು ಹಿಂದೆಂದೋ ಕಂಡಿರುವಂತೆ ಅನ್ನಿಸತೊಡಗಿತು. ಅದನ್ನೀಗ ನೋಡಬೇಕೆಂಬ ತೀವ್ರ ಅಭಿಲಾಷೆ. ಆ ಬಿಲ್ಲಿನ ಹಿಂದೊಂದು ಹಾರ; ಹಾರ ಹಿಡಿದ ಯುವತಿ. ಅತಿ ಸುಂದರಿ; ಜವ್ವನೆ. ತಾನೆಂದೂ ಕಂಡಿರದ ಅಂದ; ಮುಗುಳ್ನಗೆ. ಏನಿದು ಹಗಲುಗನಸೇ? ಕಣ್ಣುಜ್ಜಿದರು. ಋಷಿಗಳೆಲ್ಲ ಹೇಳುತ್ತಿದ್ದಾರೆ, ಒತ್ತಾಯಿಸುತ್ತಿದ್ದಾರೆ; ಶ್ರೀರಾಮರು ತಮ್ಮ ಜೊತೆಗೆ ಬರಬೇಕೆಂದು. ಅವರೂ ಹೊರಟರು ಆ ಧನುಸ್ಸನ್ನು ನೋಡಲೋ; ಕಣ್ಣನ್ನು ಸೆಳೆಯುತ್ತಿರುವ ಆ ಕಾಮಿನಿಯನ್ನು ಕಾಣಲೋ? ಬಿಲ್ಲಿಗೂ-ಭಾಮೆಗೂ ಏನು ಸಂಬಂಧ? ಏಕೆ ಹೀಗೆ ಏನೇನೋ ಯೋಚನೆಗಳು ಬರುತ್ತಿವೆ? ಒಂದಕ್ಕೊಂದು ಹೊಂದುತ್ತಿಲ್ಲ.
ಹಾಗೆಂದುಕೊಳ್ಳುತ್ತಾ ಹಿಂಬಾಲಿಸುತ್ತಿದ್ದಾರೆ ರಾಮರು ಋಷಿ ಸಂಘವನ್ನು. ಇದೀಗ ಹಿಂದಿನ ಹಿಂದಿನ ರಾತ್ರಿ ಶೋಣಾ ನದಿ ತೀರದಲ್ಲಿ ಕಳೆದು ಇಂದು ಈಗ ಗಂಗಾತಟಕ್ಕೆ ಬಂದು ವಿಶ್ವಮಿತ್ರರನ್ನು ಸುತ್ತುಗಟ್ಟಿದ್ದಾರೆ. ರಾಮರು ಪ್ರಶ್ನಿಸಿದರು, "ಗುರುಗಳೆ , ಈ ಗಂಗೆಯ ಬಗ್ಗೆ ಹೆಚ್ಚು ತಿಳಿಯುವ ಆಸೆಯಿದೆ. ದೇವ ಲೋಕದಲ್ಲಿರುವಾಕೆ ಈಕೆ. ಆಕೆ ಹೇಗೆ ಮೂರು ಲೋಕಕ್ಕೂ ಸಂದಿದ್ದು? ಮೂರು ದಾರಿಯ ದೇವಿಯೆನ್ನುತ್ತಾರಲ್ಲ ಈಕೆಯನ್ನು! ಅದೆಂತು?" 
(ಭಗವನ್ ಶ್ರೋತುಂ ಇಚ್ಛಾಮಿ ಗಂಗಾಂ ತ್ರಿಪಥಗಾಂ ನದೀಂ
ತ್ರೈಲೋಕ್ಯಂ ಕಥಮಾಕ್ರಮ್ಯ ಗತಾ ನದ ನದೀಪತೀಂ)
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com