ದೇವತೆಗಳ ನಾಶಕ್ಕಾಗಿ ಭೂರಿ ಯೋಜನೆ

ಅಂತೂ ರಾಕ್ಷಸರ ಬೃಹತ್ ಯೋಜನೆ ಮುರಿದು ಬಿತ್ತು . ದೇವತೆಗಳು , ಮುನಿಗಳು ಅಗಸ್ತ್ಯರ ಸಾಹಸವನ್ನು ಕಂಡು ಅವರನ್ನು ಬಾಯಿ ತುಂಬ ಹೊಗಳಿದರು , ಪ್ರಶಂಸಿಸಿದರು . ಸಮುದ್ರದಂತಿದ್ದ ಸರೋವರವನ್ನೇ ಮಾಯ
ಅಗಸ್ತ್ಯರು
ಅಗಸ್ತ್ಯರು
ಅದೊಂದು ಎರಡು ಘಟನೆಗಳ, ಆ ಘಟನಾ ಪರಂಪರೆಗಳ ಸಂಯೋಗ. ಒಂದು, ದೇವತೆಗಳ ನಾಶಕ್ಕಾಗಿ ದಾನವರ ಭೂರಿ ಯೋಜನೆ. ಎರಡು, ಭೂಮಿಯಿಂದ ಮಾಯವಾದ ನೀರನ್ನು ಮತ್ತೆ ಸಂಗ್ರಹಿಸುವ ಪ್ರಯತ್ನ. 
ದೇವತೆಗಳು ಅಮರರು. ಅಂದರೆ ಅರ್ಥ ಅವರು ಸಾಯುವುದಿಲ್ಲ. ಎಂದಮಾತ್ರಕ್ಕೇ ಅವರು ಸರ್ವಶಕ್ತರೆಂದೇನೂ ಅರ್ಥವಲ್ಲ. ಅವರಿಗೆ ಶಕ್ತಿ ಬರಬೇಕಿದ್ದರೆ, ಇಲ್ಲಿ ಜನರು ಮಾಡುವ ಪೂಜೆ, ವ್ರತ, ಯಙ್ಞಗಳಿಂದ! ಹೇಗೆ? ಈ ಕಾರ್ಯಗಳಲ್ಲಿ ಅವರು ನೀಡುವ ನೈವೇದ್ಯ ದೇವತೆಗಳಿಗೆ ಆಹಾರ. ಹಾಗಾದರೆ ಈ ಆಹಾರವನ್ನೇ ಅವರಿಗೆ ಸಿಗದಂತೆ ಮಾಡಿದರೆ? ಆಗ ದೇವತೆಗಳು ದುರ್ಬಲರು. ಅವರನ್ನು ನಿರ್ವೀರ್ಯರನ್ನಾಗಿ ಮಾಡಿ, ಸೋಲಿಸಿ, ಬಂದಿಗಳನ್ನಾಗಿ ಮಾಡಿ, ಸ್ವರ್ಗವನ್ನು ನಮ್ಮ ಅಧೀನಕ್ಕೆ ತೆಗೆದುಕೊಳ್ಳಬಾರದೇಕೆ?.... ಇದು ದಾನವರ, ರಾಕ್ಷಸರ, ಅಸುರರ, ದೈತ್ಯರ, ಸಂಯುಕ್ತ ಸಂಘದಲ್ಲಿ ತೇಲಿ ಬಂದ ಯೋಜನೆ. ಕಾರ್ಯರೂಪಕ್ಕೆ ತರಲು ಅಂದಿನ ಅಸುರಾಧಿಪತಿಗಳಾದ ಭಯೇಂದ್ರ ಮತ್ತು ಭೀಕರೇಂದ್ರರಿಗೆ ಅಧಿಕಾರ ಕೊಟ್ಟರು. 
ಯೋಜನೆ ಬಹಳ ಸರಳ. ಸಾಮಾನ್ಯರನ್ನು ಬಿಡಿ, ಅವರ ಪೂಜೆ, ಅದರಲ್ಲವರಿಗಿರುವ ಭಕ್ತಿ, ತನ್ಮೂನಕ ನೈವೇದ್ಯ ಎಂದೂ ಗರಿಷ್ಠವಲ್ಲ. ಆದರೆ ನಿಜವಾಗಿಯೂ ದೇವತೆಗಳು ಕೊಬ್ಬಿರುವುದು ಆಗಾಗ ನಡೆಯುವ ಯಙ್ಞಗಳಿಂದ. ಈ ಯಾಗಗಳನ್ನೇ ನಡೆಯದಂತೆ ಮಾಡಿದರೆ ಹೇಗೆ? ಹೇಗೂ ಈಗ ಯಾಗಗಳು ಹೆಚ್ಚು ನಡೆಯುವುದು ಋಷ್ಯಾಶ್ರಮಗಳಲ್ಲಿ. ಋಷಿಗಳನ್ನೇ ಸಾಯಿಸಿಬಿಟ್ಟರೆ ಯಾಗಗಳು ಹೇಗೆ ನಡೆಯುತ್ತವೆ? ಆದರೆ.... ಅಷ್ಟು ಸುಲಭವಲ್ಲ ಅದು. ವಸಿಷ್ಠರೋ, ವಿಶ್ವಮಿತ್ರರೋ, ಸೂತ್ರಕರೋ, ಸೋಮಕರೋ, ವಾಮದೇವರೋ, ಸುಮದನರೋ, ಅತ್ರಿ ಮಹರ್ಷಿಗಳೋ, ಇಂತಹ ದೊಡ್ಡವರ ಹತ್ತಿರ ಹೋಗಲು ಸಾಧ್ಯವೇ? ಅವರು ಹೂಂಕರಿಸಿದರೆ ಸಾಕು, ನಾವು ಸುಟ್ಟು ಹೋಗುತ್ತೇವೆ.
ಎಂದಮೇಲೆ ಅವರನ್ನು ಸಾಯಿಸುವ ಮಾತೆಲ್ಲಿ ಬಂತು? ಹಾಗಲ್ಲ, ಇಂತಹ ಮಹಾಮಾನ್ಯರು ಎಷ್ಟು ಮಂದಿ ಇದ್ದಾರೆ? ಹತ್ತು? ಇಪ್ಪತ್ತು? ಐದು ನೂರು? ಅಷ್ಟೇ. ಅವರನ್ನು ಬಿಡೋಣ. ಉಳಿದ ಸಾಮಾನ್ಯ ಸಾಧಾರಣ ಸಾವಿರಾರು ಋಷಿಗಳು ನಿತ್ಯ ಯಾಗ ಮಾಡುತ್ತಾರಲ್ಲ; ಅವರ ಸಂಖ್ಯೆಯೇ ದೊಡ್ಡದು. ಮೊದಲು ಅವರನ್ನು ಮುಗಿಸೋಣ. ಅದರಿಂದ ಸಾಕಷ್ಟು ಆಹಾರ ದೇವತೆಗಳಿಗೆ ಕಡಿಮೆಯಾಗುತ್ತದೆ. ಮುಂದೆ ನೋಡೋಣ. ಅಲ್ಲಿಗೆ ಒಂದು ಯೋಜನೆ ಸಿದ್ಧವಾಯಿತು.
**********
ವಸಿಷ್ಠರ ಮುಂದೆ ಋಷಿಗಳ ದಂಡು. ಮೊರೆ. " ನಮ್ಮ ಆಶ್ರಮಗಳಿಗೆ ರಾತ್ರಿ ಹೊತ್ತು ಯಾರೋ ನುಗ್ಗುತ್ತಿದ್ದಾರೆ . ಯಙ್ಞಕುಂಡಕ್ಕೆ ರಕ್ತ ಸುರಿಯುತ್ತಾರೆ. ಮುನಿಗಳ ಮೈ ಮುರಿಯುತ್ತಾರೆ. ನಿದ್ದೆಯಲ್ಲೇ ಇದೆಲ್ಲ ನಡೆದುಹೋಗುತ್ತದೆ. ಬೆಳಗೆದ್ದು ನೋಡಿದಾಗ ಯಾರು ಮಾಡಿದ್ದು, ಎಲ್ಲಿಂದ ಬಂದದ್ದು, ಒಂದೂ ಗೊತ್ತಾಗುತ್ತಿಲ್ಲ. ಬೆಳಿಗ್ಗಿನ ಹೊತ್ತು ಅವರು ಕಾಣುವುದೇ ಇಲ್ಲ. " ಗೋಳನ್ನು ಕೇಳಿ ವಸಿಷ್ಠರು ಕ್ಷಣಕಾಲ ಕಣ್ಣು ಮುಚ್ಚಿ ಹೇಳಿದರು; " ಇದು ರಾಕ್ಷಸ ಕೃತ್ಯ. ಅಯೋಧ್ಯೆಯ ಬಳಿಯ ಸರೋವರ ಒಂದರಲ್ಲಿ ಅಡಗಿದ್ದಾರೆ. ಅದು ದೊಡ್ಡ ಸಮುದ್ರವಲ್ಲದಿದ್ದರೂ, ಅಸಲು ಸಮುದ್ರವೇ ಅಲ್ಲದಿದ್ದರೂ, ಅದೊಂದು ಬಹಳ ದೊಡ್ಡ ಕೊಳವಾಗಿದ್ದರೂ, ಅದರ ವೈಶಾಲ್ಯದಿಂದ ಅದನ್ನು ಸಮುದ್ರ ಎಂದು ಕರೆದರು. ಎಂಟು - ಹತ್ತು ಮಳೆಗಾಲದ ನದಿಗಳಿಂದ ಮಾತ್ರ ನೀರು ಹರಿದರೂ, ವರ್ಷವೆಲ್ಲ ತುಂಬಿರುವ ಸಿಹಿನೀರಿನ ಕೊಳ ಅದು. ಅದರ ತಳದಲ್ಲಿದ್ದಾರವರು. "
ವಸಿಷ್ಠರ ಮಾತಿಗೆ ದಿಗ್ಭ್ರಮಿತ ಋಷಿಗಳು ಕೇಳಿದರು, " ಕ್ಷತ್ರಿಯ ರಾಜರು ಹಲವರು ನಮಗಾಗಿ ಅವರನ್ನು ತರಿದು ಹಾಕಲು ಸಿದ್ಧರಿದ್ದಾರೆ. ಆದರೆ ಆ ಕೊಳದ ಕೆಳಕ್ಕೆ ಹೋಗುವುದು ಹೇಗೆ? " ಈ ಪ್ರಶ್ನೆಯನ್ನು ನಿರೀಕ್ಷಿಸಿದ ವಸಿಷ್ಠರು ಹೇಳಿದರು; " ಸಮುದ್ರ ಮಧ್ಯದಲ್ಲಿ ಬಡಬಾಗ್ನಿ ಇರುವುದು ಎಲ್ಲರೂ ಕೇಳಿದ್ದೀರಿ. ಆದರೆ ನೀವಾರೂ ನೋಡಿಲ್ಲ. ನಮ್ಮ ಋಷಿಗಳಲ್ಲಿ ಅಗಸ್ತ್ಯರೊಬ್ಬರಿಗೆ ಆ ಬಡಬಾಗ್ನಿಯನ್ನೊಲಿಸಿಕೊಳ್ಳುವ ಮಂತ್ರ ಗೊತ್ತಿದೆ. ಅವರದನ್ನು ಪ್ರಯೋಗಿಸಿದರೆ, ಆ ಸರೋವರದ ನೀರನ್ನೆಲ್ಲ ಆವಿ ಮಾಡಿಯಾರು. ಅವರಲ್ಲಿ ಪ್ರಾರ್ಥಿಸಿ. "
****
ಅದೊಂದು ಅಪೂರ್ವ ದೃಶ್ಯ. ಋಷಿಗಳ ಮಾತಿಗೆ ಮನ್ನಣೆಯಿತ್ತು ಬಂದ ಅಗಸ್ತ್ಯರು, ಸರೋವರದ ತಟಿಯಲ್ಲಿ ಕುಳಿತು ಆಗ್ನೇಯ ಮಂತ್ರವನ್ನಾಹ್ವಾನಿಸಿ ಬಡಬಾಗ್ನಿಯನ್ನು ಕರದಿದ್ದಾರೆ. ತೆಂಗಿನ ಮರದೆತ್ತೆರದ ಬೆಂಕಿಯ ಮಾನವಾಕೃತಿಯೊಂದು ಬಂದಿದೆ. " ಅಗಸ್ತ್ಯರೇ, ಸಮುದ್ರ ಗರ್ಭದಲ್ಲಿದ್ದ ನನ್ನನ್ನೇಕೆ ಕರೆದಿರಿ? ಇಲ್ಲಿವರೆಗೆ ನಾನು ಸಮುದ್ರ ಬಿಟ್ಟು ಹೊರ ಬಂದುದೇ ಇಲ್ಲ. ಹೇಳಿ ಏನಾಗಬೇಕು ನನ್ನಿಂದ? " ಪರಿಸ್ಥಿತಿಯನ್ನು ವಿವರಿಸಿದ ಋಷಿಗಳು ಬಡಬಾಗ್ನಿಯಲ್ಲಿ ಪ್ರಾರ್ಥಿಸಿದರು. " ಹೇ ಸಪ್ತಜ್ವಾಲಾ ಗುಪ್ತ ಹವ್ಯ ವಾಹನ! ನಿನ್ನಿಂದೊಂದು ಉಪಕಾರವಾಗಬೇಕಿದೆ. ನೀರಿನೋಳಗಿರುವ ನೀನು, ಇಂದು ಆ ನೀರನ್ನೇ ಸುಡಬೇಕಿದೆ. ನಿನ್ನ ಶಾಖದಿಂದ, ನಿನ್ನ ಬಿಸಿಯಿಂದ, ನಿನ್ನ ಸಾಮರ್ಥ್ಯದಿಂದ ನೀರೆಲ್ಲ ಆವಿಯಾಗಿ ಹೋಗಿ, ಈ ಸರೋವರದ ತಳ ಕಾಣಬೇಕಿದೆ. ಅದರಲ್ಲಿರುವ ದೈತ್ಯರನ್ನು ಸದೆಬಡಿಯಲು ಸಾವಿರಾರು ಕ್ಷತ್ರಿಯರು ಕಾದಿದ್ದಾರೆ. ಈ ಉಪಕಾರವನ್ನು ಮಾಡಲಾರೆಯಾ?"
ಹಿಂದೊಮ್ಮೆ ಅಗಸ್ತ್ಯರಿಂದ ಉಪಕೃತನಾಗಿದ್ದ ಬಡಬಾಗ್ನಿ ಈಗ ವಿಸ್ತರಿಸಿದ; ಕೊಳದಷ್ಟು ಉಬ್ಬಿದ; ನೀರನ್ನೆಲ್ಲ ಆವರಿಸಿದ. ಇದೀಗ ನೀರು ಕುದಿಯ ತೊಡಗಿತು. ಆವಿಯಾಗಿ ಮೇಲೇರ ತೊಡಗಿತು. ಗಾಳಿ ಬೀಸಿ ಆವಿಯನ್ನು ಚದುರಿಸಿತು. ಸುಮಾರು ತಿಂಗಳುಗಳು ಕಾಲ ನಡೆದ ಈ ಸತತ ಅಗ್ನಿಯ ಆರ್ಭಟದಿಂದ ಅಂತೂ ಸರೋವರದ ನೀರೆಲ್ಲ ಮಾಯವಾಯಿತು. ಅತಲಕ್ಕಿಳಿದ ಋಷಿಗಳು, ರಾಜರು ರಕ್ಕಸರನ್ನು ಹೊರಗೆಳೆದು ದಂಡಿಸಿದರು; ಸೆರೆ ಹಿಡಿದರು; ದಸ್ಯುಗಳನ್ನಾಗಿ ಮಾಡಿಕೊಂಡರು. 
ಅಂತೂ ರಾಕ್ಷಸರ ಬೃಹತ್ ಯೋಜನೆ ಮುರಿದು ಬಿತ್ತು. ದೇವತೆಗಳು, ಮುನಿಗಳು ಅಗಸ್ತ್ಯರ ಸಾಹಸವನ್ನು ಕಂಡು ಅವರನ್ನು ಬಾಯಿ ತುಂಬ ಹೊಗಳಿದರು, ಪ್ರಶಂಸಿಸಿದರು. ಸಮುದ್ರದಂತಿದ್ದ ಸರೋವರವನ್ನೇ ಮಾಯ ಮಾಡಿದ ಅಗಸ್ತ್ಯರ ಸಾಹಸದ ವರ್ಣನೆ ನಡೆಯಿತು. " ಸಮುದ್ರವನ್ನೇ ಆಪೋಶನವನ್ನಾಗಿ ತೆಗೆದುಕೊಂಡರು! " ಎಂದು ಆಲಂಕಾರಿಕವಾಗಿ ಹೇಳ ತೊಡಗಿದರು. ಅದು ಬರ-ಬರುತ್ತ" ಸಮುದ್ರವನ್ನೇ ಅಗಸ್ತ್ಯರು ನಿಜವಾಗಿ ಕುಡಿದರಂತೆ! " ಎಂಬ ಕಥೆಯಾಗಿಬಿಟ್ಟಿದೆ. " ಕುತೂಹಲದಿಂದ ಕೇಳುತ್ತಿದ್ದ ಮಂದಿಯ ಮಧ್ಯದ ಶ್ರೀರಾಮರಿಗೆ ತಾವು ಕೇಳಿದ ಪ್ರಶ್ನೆಗೂ, ಇದಕ್ಕೂ ಎಲ್ಲಿಯ ಸಂಬಂಧ , ಎಂದು ಯೋಚಿಸುತ್ತಿದ್ದಂತೆಯೇ ವಿಶ್ವಮಿತ್ರರು ಹೇಳ ತೊಡಗಿದರು...(ಮುಂದುವರೆಯುವುದು...)
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com