ಜಲಕ್ಷಾಮ: ಸಗರ , ಅಂಶುಮಂತ , ದಿಲೀಪರ ಸೋಲು

ಗಂಗೆಯನ್ನು ಧ್ಯಾನಿಸಿ ಭಗೀರಥನ ನಿರಂತರ ತಪ. ಕೆಲ ವರ್ಷಗಳ ಕೊನೆಗೆ ಅವಳೂ ಪ್ರತ್ಯಕ್ಷಳಾಗಿ ಹೇಳಿದಳು, " ಆಯಿತು, ನಾನೇನೋ ನನ್ನ ನೂರನೆಯ ಒಂದು ಅಂಶದಿಂದ ಧುಮುಕುತ್ತೇನೆ. ಆದರೆ...
ಭಗೀರಥ
ಭಗೀರಥ
" ಅಂದಿನಿಂದ ರಾಕ್ಷಸರ ಉಪಟಳ ತಪ್ಪಿತು. ಅಳಿದುಳಿದ ರಾಕ್ಷಸರೆಲ್ಲ ಪಾತಾಳಕ್ಕೆ ಓಡಿ ಹೋದರು, ತಲೆ ತಪ್ಪಿಸಿಕೊಂಡರು. ಮತ್ತವರು ವಿಜೃಂಭಿಸಿದ್ದು ರಾವಣ ಬಂದಮೇಲೆ; ಲಂಕೆಯನ್ನು ಗೆದ್ದ ಮೇಲೆ. ಅದಿರಲಿ, ಇದರಿಂದ ತೊಂದರೆಯಾದದ್ದು ಅಯೋಧ್ಯೆಗೆ. ಆಗ್ಗೆ ಅದರ ಸುತ್ತ ಮುತ್ತಲ ನೂರಾರು ಮೈಲುಗಳ ಪರಿಧಿಯಲ್ಲಿ ಯಾವ ನದಿಯೂ ಇಲ್ಲ, ಅಂಬುಧಿಯೂ ಇಲ್ಲ, ಹೀಗಾಗಿ ನೀರಿಗೆ ಮಹಾ ಸಮಸ್ಯೆಯಾಯಿತು. ಅರಮನೆಯೇ ಮುಂದೆ ಬಂದು ಬಾವಿಗಳನ್ನು ತೋಡಿಸಿತು. ಆದರೆ ಕೃಷಿಗೆ? ಮತ್ತು ಹಳ್ಳಿಗೊಂದು ಬಾವಿಯಾದರೂ ಸರಬರಾಜಿಗೆ ದೊಡ್ಡ ತಲೆನೋವಾಯಿತು.... ", ಮಧ್ಯೇ ಶ್ರೀರಾಮರು ಬಾಯಿ ಹಾಕಿ ಹೇಳಿದರು, " ಹಿಂದಿದ್ದ ಜಲಾಶಯಕ್ಕೆ ಏಳೆಂಟು ನದಿಗಳಿಂದ ನೀರು ಹರಿಯುತ್ತಿತ್ತು ಎಂದು ಹೇಳಿದಿರಲ್ಲ.... " 
" ಓಹ್! ಆಗ ಹೇಳಲಿಲ್ಲವೇ, ಅಗಸ್ತ್ಯರು ಸಮುದ್ರ ಸುಡುವ ಮುಂಚೆ ಒಂದು ಆದೇಶ ಹೊರಡಿಸಿದ್ದರು. ಅದರ ಪ್ರಕಾರ ಅದಕ್ಕೆ ಬರುತ್ತಿದ್ದ ಜಲ ಮೂಲಗಳನ್ನು ಪ್ರತಿಬಂಧಿಸಬೇಕೆಂದು. ಹೀಗಾಗಿ ಪ್ರಯತ್ನಪೂರ್ವಕವಾಗಿ ಹರಿದು ಬರುತ್ತಿದ್ದ ನದಿಗಳ ದಾರಿಯಲ್ಲಿ ಅನ್ಯ ಕಡೆಗೆ ತಗ್ಗುಗಳನ್ನು ಮಾಡಿ ನೀರಿನ ಪ್ರವಾಹಕ್ಕೆ ಅಡ್ಡಿ ಉಂಟು ಮಾಡಿದರು. ಪ್ರಾರಂಭದಲ್ಲಿ ಕಷ್ಟವಾದರೂ ಕೊಂಚ ಕಾಲದಲ್ಲೇ ನದಿಗಳ ಪಥ ಬದಲಾಗಿ ಬೇರೆ ಬೇರೆ ದಿಕ್ಕಿಗೆ ಹರಿದವು. ಅವು ಬರುವುದು ನಿಂತಮೇಲೇ ಅಗಸ್ತ್ಯರು ಬಡಬಾಗ್ನಿಯನ್ನು ಆಹ್ವಾನಿಸಿದರು. ಹೀಗಾಗಿ ಈಗ ಅಯೋಧ್ಯೆಗೆ ಸಿದ್ಧವಿದ್ದ ಸರೋವರವೂ ಇಲ್ಲ, ನೀರು ತರುತ್ತಿದ್ದ ನದಿಗಳೂ ಇಲ್ಲ, ಮರಳುಗಾಡಲ್ಲದಿದ್ದರೂ ನೀರಿಗೆ ಅಭಾವ. ಮೈಲುಗಳು ದೂರದಿಂದ ಕೊಡಗಳಲ್ಲಿ, ಕಡಾಯಿಗಳು ತುಂಬಿದ ಗಾಡಿಗಳಲ್ಲಿ ಸರಬರಾಜಾಗುತ್ತಿತ್ತು. 
ರಾಜ ಸಗರನಿಗೆ ದಿನಬೆಳಗಾದರೆ ನೀರಿನ ಸಮಸ್ಯೆ. ಆಹಾರವನ್ನೂ, ಇತರ ಗೃಹೋಪಯೋಗಿಯನ್ನೋ ಬೇರೆಡೆಗಳಿಂದ ಕೊಂಡು ತರಬಹುದು. ಆದರೆ ಪ್ರತಿ ದಿನದ ಅನಿವಾರ್ಯವಾದ ನೀರನ್ನು ಹೇಗೆ ಸರಬರಾಜು ಮಾಡುವುದು? ರಾಜನಿಗೋ, ಶ್ರೀಮಂತರಿಗೋ ಇದು ಸಮಸ್ಯೆ ಆಗಿರಲಾರದು. ಆದರೆ ಜನಸಾಮಾನ್ಯರ ಗತಿಯೇನು? ಇದೇ ಕೊರಗಿನಲ್ಲಿ ಅವ ಸತ್ತೂ ಹೋದ. ಅವನ ಮೊಮ್ಮಗ ಅಂಶುಮಂತನೂ ಏನೇನೋ ಪ್ರಯತ್ನ ಪಟ್ಟ. ಹೆಚ್ಚು ಹೆಚ್ಚು ಬಾವಿಗಳನ್ನೂ ತೋಡಿಸಿದ, ನೀರು ಸಿಗುವುದು ಎಲ್ಲೋ ಆಳದಲ್ಲಿ. ಅದು ತಾನೇ ಸಿಗಲು ಮೇಲೆ ನೀರನ್ನು ಕುಡಿಯಬೇಕಲ್ಲ ಭೂಮಿ ಎಲ್ಲಿದೆ? ನೂರಾರೂ ಮೈಲುಗಳ ಅಂತರದಲ್ಲೆಲ್ಲೂ ನೀರಿನ ಮೂಲಗಳೇ ಇಲ್ಲವಲ್ಲ? ಮಳೆಗಾಲದ ನೀರು ಎಷ್ಟು ಕುಡಿದಿದ್ದರೂ ಕೆರೆಗಳೇ ತುಂಬುತ್ತಿಲ್ಲ. ವರ್ಷ ಪೂರ ಬಳಸುವುದೆಂತು? ಒಂದೇ ಒಂದು ಬೆಳೆ ಬಂದರೆ, ಅದೇ ಬ್ರಹ್ಮಾಂಡ. ಎಷ್ಟೋ ಬಾರಿ ಬೆಳೆ ಹಣ್ಣಾಗುತ್ತಿರುವಾಗ ನೀರು ನಿಂತು ಹೋಗಿ, ಒಣಗಿಹೋಗುತ್ತಿತ್ತು. 
ಓಹ್! ಅಂಶುಮಂತನ ಮಗ ದಿಲೀಪನೂ ಈ ಸಮಸ್ಯೆಯನ್ನು ಬಗೆಹರಿಸದಾದ. ಇದೀಗವನ ಮಗ ಭಗೀರಥ ಸಿಂಹಾಸನ ಏರಿದ್ದಾನೆ. ಜನರ ಕಷ್ಟ ಪರಿಹಾರವಾಗುವ ತನಕ ತಾನು ಯಾವ ಸುಖವನ್ನೂ ಸ್ವೀಕರಿಸೆನೆಂದು ಮದುವೆಯೂ ಬೇಡವೆಂದ. ಬುದ್ಧಿವಂತರ, ತಂತ್ರಙ್ಞರ ಸಭೆಗಳನ್ನೇರ್ಪಡಿಸಿದ, ಯಾರೂ ಏನನ್ನೂ ಹೇಳಲಾಗುತ್ತಿಲ್ಲ. ವಸ್ತುವಿದ್ದರೆ ತಾನೇ ಅದನ್ನು ಉಪಯೋಗಿಸುವುದು ಹೇಗೆ ಎಂದು ಯೋಚಿಸುವುದು? ಆದರೆ ಈಗ ವಸ್ತುವೇ ಇರದಾಗ ಹೇಗೆ? ಎಷ್ಟೋ ಕಾಲವಾದಮೇಲೆ ಒಬ್ಬ ಋಷಿ ಆ ರಾಜ್ಯದ ಮೂಲಕ ಹಾದು ಹೋಗುತ್ತಿದ್ದಾನೆ, ಮರಳು ಭೂಮಿಯನ್ನು ಕಂಡ, ಜನರ ದೈನ್ಯವನ್ನು ಕಂಡ, ರಾಜನ ಒದ್ದಾಟವನ್ನು ತಿಳಿದ, ನೇರವಾಗಿ ಅರಮನೆಗೆ ಹೋದ. ಪಾದಪ್ರಕ್ಷಾಳನವನ್ನು ಕೇವಲ ಉದ್ಧರಣೆಯ ಜಲದಲ್ಲಿ ಮುಗಿಸಿದ ರಾಜನ ಬಡತನವನ್ನು ಗಮನಿಸಿ ಋಷಿಯೆಂದ, "ರಾಜನ್, ನಿಮ್ಮ ರಾಜ್ಯದ ದುಸ್ಥಿತಿ ನನಗೆ ಅರಿವಿದೆ. ನಿಮ್ಮ ಜನರ ಗೋಳಾಟ ಹೇಳತೀರದು. ಅಶುದ್ಧ ರಾಜ್ಯವೆಂದರೆ ಇದೇ ಎಂದು ಕಾಣುತ್ತದೆ. ಯಾವುದೋ ಸಮಸ್ಯೆ ಪರಿಹಾರದಿಂದ ಈಗ ತೊಂದರೆ ಅನುಭವಿಸುತ್ತಿರುವರು ನೀವು. ಕೊನೆಗೆ ಅಸ್ಥಿ ವಿಸರ್ಜನೆಗೂ ನೂರು ನೂರು ಮೈಲಿ ಹೋಗಲಾರದೆ ಹಲ ತಲೆಮಾರುಗಳ ಪೂರ್ವಜರ ಸುಟ್ಟ ಮೂಳೆಗಳನ್ನು ಮನೆಯ ಗೂಡೊಂದರಲ್ಲಿ ಶೇಖರಿಸುತ್ತಿದ್ದಾರೆ. ಮುಂದೆ ಯಾರಾದರೂ ದೂರದ ನದಿಗಳಿಗೆ ಹೋಗಿ ಬಿಡುತ್ತಾರೇನೋ ಎಂದು. ಪ್ರತಿ ಮನೆಯ ಹೊರಗೂ ಅಸ್ಥಿ ಸಂಪುಟವೆಂಬ ದೊಡ್ಡ ಕಡಾಯಿಯನ್ನಿಟ್ಟಿದ್ದಾರೆ. ನೀನು, ನಿನ್ನ ತಂದೆ, ಅವರಪ್ಪ... ಎಲ್ಲರೂ ಏನೂ ಮಾಡಲಾಗದೆ ಕುಳಿತಿದ್ದೀರಿ. ನಿಮ್ಮ ಪ್ರಯತ್ನಗಳೆಲ್ಲ ಮೀರಿದೆ. ಪುರುಷ ಪ್ರಯತ್ನದಿಂದ ಇದನ್ನು ಸಾಧಿಸಲು ಸಾಧ್ಯವೇ ಇಲ್ಲ. ಇದಕ್ಕಿರುವ ಒಂದೇ ಸಲಹೆಯೆಂದರೆ ಸ್ವರ್ಗದಲ್ಲಿರುವ ಗಂಗೆಯನ್ನು ಭೂಮಿಗಿಳಿಸುವುದು. ಆಕೆ ನದಿಯಾಗಿ ನಿಮ್ಮಲ್ಲಿಗೆ ಹರಿದು ಬರುವುದು ಮುಖ್ಯ. ಅದು ನಿತ್ಯ ನದಿಯಾಗಿ, ಜೀವ ನದಿಯಾಗಿ ಅಯೋಧ್ಯೆಯನ್ನು ಹಸಿರುಮಾಡಬಹುದು. 
*************
ಬ್ರಹ್ಮ ಪ್ರತ್ಯಕ್ಷನಾಗಿ ಹೇಳಿದ, " ಭಗೀರಥ, ನಿನ್ನ ತಪಸ್ಸಿಗೆ ಮೆಚ್ಚಿರುವೆ. ನಿನ್ನ ಜನೋಪಕಾರ ಬುದ್ಧಿ ಮೆಚ್ಚತಕ್ಕದ್ದೆ, ನಿಸ್ಸ್ವಾರ್ಥಿಯಾಗಿ ತಪ ಮಾಡುತ್ತಿರುವೆ, ನನ್ನ ಅನುಮತಿಯೂ ಇದೆ ಗಂಗೆ ನಿನ್ನಲ್ಲಿಗೆ ಬರಲು. ಆಕೆಯನ್ನು ಕುರಿತು ತಪಸ್ಸು ಮಾಡು, ಆಕೆ ಮೆಚ್ಚಿ ಬರಲಿ. ನಿನಗೊಬ್ಬ ಸುಪುತ್ರ ಹುಟ್ಟಲೆಂದು ನಾನೇ ವರ ಕೊಡುತ್ತಿರುವೆ. ಶುಭಮಸ್ತು! " 
ಅಯ್ಯೋ! ಗಂಗೆ ಬರಬೇಕು, ಆನಂತರ ತನಗೆ ಮದುವೆಯಾಗಬೇಕು, ಆಮೇಲೆ ತನಗೊಬ್ಬ ಮಗ ಹುಟ್ಟಬೇಕು, ಅಯ್ಯೋ ಅದು ದೂರದ ಫಲ! ಅದಿರಲಿ, ಈಗ ಗಂಗೆಯನ್ನಿಳಿಸುವುದೆಂತು? ಏನು ಮಾಡುವುದು, ಈಗ ಮತ್ತೆ ತಪಸ್ಸು. ಗಂಗೆಯನ್ನು ಧ್ಯಾನಿಸಿ ಭಗೀರಥನ ನಿರಂತರ ತಪ. ಕೆಲ ವರ್ಷಗಳ ಕೊನೆಗೆ ಅವಳೂ ಪ್ರತ್ಯಕ್ಷಳಾಗಿ ಹೇಳಿದಳು, " ಆಯಿತು, ನಾನೇನೋ ನನ್ನ ನೂರನೆಯ ಒಂದು ಅಂಶದಿಂದ ಧುಮುಕುತ್ತೇನೆ. ಆದರೆ ಹಾಗೆ ಧುಮುಕಿದರೆ ನಿನ್ನ ರಾಜ್ಯ ಕೊಚ್ಚಿಕೊಂಡು ಹೋಗುತ್ತದೆ. ಅದಕ್ಕೆ ನನ್ನ ರಭಸವನ್ನು ಧರಿಸಬಲ್ಲ ಪರ್ವತ ಬೇಕು. ಆದ್ದರಿಂದ ರಾಜ, ಶಿಲಾರಾಜ ಹಿಮಾಲಯದ ಮೇಲೆ ಧುಮುಕುತ್ತೇನೆ. ಆದರೆ ನನ್ನ ಸಂದೇಹವೆಂದರೆ ನನ್ನ ವೇಗವನ್ನು ತಡೆಯಲು ಅದಕ್ಕೂ ಸಾಧ್ಯವಿಲ್ಲ. ಆದ್ದರಿಂದ ನನ್ನ ಶತಾಂಶವನ್ನು ಧರಿಸಿ ನಿರಂತರವಾಗಿ ನೀರೂಡಿಸುವ ಮಧ್ಯಂತರ ಒಂದು ಬೇಕು. ಅದನ್ನು ಸಿದ್ಧಮಾಡಿಕೊ. ಹಾಗಾದಮೇಲೆ ಕರೆ. " 
ಆಯ್ಯೋ ಮಾಯವೇ ಆಗಿ ಹೋದಳಲ್ಲ! ಇಷ್ಟು ವರ್ಷಗಳ ಪ್ರಯತ್ನವೆಲ್ಲ ಶೂನ್ಯ! ಶೂನ್ಯವಲ್ಲ, ಆಕೆ ಬರೆನೆಂದು ಹೇಳಿಲ್ಲ, ಬರುವ ಮಾರ್ಗ ಸಿದ್ಧಪಡಿಸಿಕೊಳ್ಳಲು ಹೇಳಿದ್ದಳೆ ಅಷ್ಟೇ. ತನ್ನ ಮನಸ್ಸನ್ನು ತಾನೇ ಸಂತೈಸಿಕೊಂಡ ರಾಜ ಈಗ ಯಾರನ್ನು ಮೊರೆಹೊಗಲಿ ಎಂದು ಚಿಂತಾಕ್ರಾಂತನಾದ. (ಮುಂದುವರೆಯುವುದು...)
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com