ಯಾರು ಈ ಬಲಿಚಕ್ರವರ್ತಿ?

ವಿಶ್ವಮಿತ್ರರು ಕಥೆ ಹೇಳುವುದರಲ್ಲಿ ಸಿದ್ಧಹಸ್ತರು. ತುಸು ಎತ್ತರದ ವೇದಿಕೆಯಲ್ಲಿ ಕುಳಿತಿದ್ದಾರೆ. ವೇದಿಕೆ ಸುತ್ತಲೂ ಉಳಿದ ಋಷಿಗಳು, ಮಹರ್ಷಿಗಳು, ವೃದ್ಧರ್ಷಿಗಳು, ಶಿಷ್ಯರು, ಅಂತೇವಾಸಿಗಳು ಎಲ್ಲ ಕುಳಿತಿದ್ದಾರೆ.
ಬಲಿಚಕ್ರವರ್ತಿ (ಸಂಗ್ರಹ ಚಿತ್ರ)
ಬಲಿಚಕ್ರವರ್ತಿ (ಸಂಗ್ರಹ ಚಿತ್ರ)
ಮನೆ ಬಿಟ್ಟು ಇಂದಿಗೆ ನಾಲ್ಕನೆಯ ದಿನ. ಇಂದೇನೋ ಅನಿರ್ವಚನೀಯ ಆನಂದ. ಅಯೋಧ್ಯೆಗೆ ವಾಪಸಾಗಿಯೇ ಇಲ್ಲ, ಆದರೂ ಏನೋ ಸ್ವಂತ ಮನೆಗೇ ಬಂದಂತೆ. ಏನೋ ಏನೋ ಮುದ, ಏನೋ ಸಂತಸ, ಏನೋ ಹಗುರ, ಏನೋ ಲವಲವಿಕೆ, ಏನೋ, ಕಾರಣವೇ ಅರಿಯದ ಉತ್ಸಾಹ. ಆ ಕುಟೀರಗಳ ಹಳ್ಳಿ; ಹಲವಾರು ಎಲೆಮನೆಗಳು. ಯಾರೋ ಕೂಗಿದರು, "ಗುರುಗಳು ಬಂದರು". ಸುಮಾರು ಒಂದು ನೂರು ಮಂದಿ ಇದ್ದಾತು. ಹರ್ಷದಿಂದ ಓಡೋಡಿ ಬಂದರು, ಬ್ರಹ್ಮರ್ಷಿಗಳ ಕಾಲಿಗೆ ಬಿದ್ದರು, ರಾಮ-ಲಕ್ಷ್ಮಣರನ್ನು ನೋಡಿ ಅವಾಕ್ಕಾದರು.
ಶ್ರೀರಾಮರಿಗೆ ಇದಾವುದರ ಪರಿವೆಯೇ ಇಲ್ಲ. ತನಗೆ ಬಹುಕಾಲ ಪರಿಚಿತ ಜಾಗ ಎನ್ನಿಸುತ್ತಿದೆ. ಯಾವುದೋ ವಟ ವೃಕ್ಷದ ಕೆಳಗೆ ತಾನು ಅದೆಷ್ಟೋ ಕಾಲ ಇದ್ದಂತೆ; ತಾನು ಅಲ್ಲೆಲ್ಲ ಓಡಾಡಿದಂತೆ; ಪಕ್ಕದಲ್ಲಿ ಹರಿಯುತ್ತಿರುವ ನೀರಲ್ಲಿ ಮಿಂದಂತೆ. ಋಷಿಗಳು ತಮ್ಮ ಪರ್ಣಕುಟಿ ಒಳಗೆ ಹೋಗಿ ಎಷ್ಟೋ ಹೊತ್ತಾದ ಮೇಲೆ ಶ್ರೀರಾಮರು ವಾಸ್ತವಕ್ಕೆ ಬಂದರು. ದಾರಿ ತೋರಿದ ವಟುವಿನ ಹಿಂದೆ ಬಂದ ರಾಮರು ಗುರುಗಳ ಕಾಲಿಗೆ ಎರಗಿ, ತನಗಾಗುತ್ತಿರುವ ಹರ್ಷದ ಕಾರಣ ಕೇಳಿದರು. ನಸುನಕ್ಕ ವಿಶ್ವಮಿತ್ರರು ಆ ಆಶ್ರಮದ ಹೆಸರು ಹೇಳಿದರು; " ಇದು ಸಿದ್ಧಾಶ್ರಮ" . "ಸಿದ್ಧಾಶ್ರಮ? " "ಹೌದು-ಹೌದು, ಸಿದ್ದಾಶ್ರಮ. ಸಿದ್ಧಾಶ್ರಮ. "ಮನಸ್ಸಿನಲ್ಲಿ ಮಾರ್ದನಿಯಾಯಿತು. "ಏನಾದರೂ ನೆನಪಾಯಿತೇ ?" ಗುರುಗಳ ಪ್ರಶ್ನೆಗೆ ಉತ್ತರ ರಾಮರಿಂದ, " ಖಚಿತವಾಗಿ ಏನೂ ಇಲ್ಲ. " "ಹಾಗಾದರೆ ಒಂದು ಕಥೆ ಹೇಳುವೆ. ಸಾಯಂ ಸಂಧ್ಯೆ ಮುಗಿಸಿ ಬಾ"
ಅಷ್ಟು ಹೊತ್ತಿಗಾಗಲೇ ಸಂಜೆಯ ಲಘು ಉಪಾಹಾರ ಮುಗಿದಿದೆ. ಆಶ್ರಮದಲ್ಲಿನ ಋಷಿಪತ್ನಿ ಯರ ತಯ್ಯಾರಿ. ತಾನೆಂದೂ ಅನುಭವಿಸಿರದ ಸಸ್ಯಗಳ ಮಿಶ್ರಣ. ವಿಶ್ವಮಿತ್ರರು ಕಥೆ ಹೇಳುವುದರಲ್ಲಿ ಸಿದ್ಧಹಸ್ತರು. ತುಸು ಎತ್ತರದ ವೇದಿಕೆಯಲ್ಲಿ ಕುಳಿತಿದ್ದಾರೆ. ವೇದಿಕೆ ಸುತ್ತಲೂ ಉಳಿದ ಋಷಿಗಳು, ಮಹರ್ಷಿಗಳು, ವೃದ್ಧರ್ಷಿಗಳು, ಶಿಷ್ಯರು, ಅಂತೇವಾಸಿಗಳು, ಋಷಿಕೆಯರು, ಋಷಿಪತ್ನಿಯರು, ಎಲ್ಲ ಕುಳಿತಿದ್ದಾರೆ.
" ಹಿಂದೆ, ಬಹು ಹಿಂದೆ ಭೂಮಿಯನ್ನಾಳುತ್ತಿದ್ದ ಭಯಂಕರ ರಾಜನಿದ್ದ". ಆರಂಭಿಸಿಯೇ ಬಿಟ್ಟರು ಗುರುಗಳು ಕಥೆಯನ್ನು. "ಅವನ ಹೆಸರು ಹಿರಣ್ಯಕಶಿಪು. ಅವನ ಕಥೆಯನ್ನು ಹೇಳಲಲ್ಲ ಈಗ ಹೊರಟಿದ್ದು. ಅವನ ಮಗ ವಿಷ್ಣು ಭಕ್ತ. ಪ್ರಹ್ಲಾದ. ಅವನ ಬಗ್ಗೆಯೂ ಹೇಳುತ್ತಿಲ್ಲ. ಅವನ ಮಗ ವಿರೋಚನ. ಅವನ ಬಗ್ಗೆಯೂ ಹೇಳಲ್ಲ. " "ಮತ್ತಾರ ಬಗ್ಗೆ?" ಎಂದುಕೊಳ್ಳುತ್ತಿದ್ದಂತೆಯೇ ವಿಶ್ವಮಿತ್ರರಿಂದ ಹೊರಬಂತು, "ಅವನ ಮಗ ವೈರೋಚನಿಯ ಬಗ್ಗೆ
                                    ************
ವೈರೋಚನಿ ಮಹಾ ಶಕ್ತ, ಮಹಾ ಬಲಶಾಲಿ, ಮಹಾ ತೇಜಸ್ಸಂಪನ್ನ. ಮಹಾ ವೈದಿಕ, ಮಹಾ ಯಾಙ್ಞಿಕ, ಯಙ್ಞ ಕುಂಡದ ಮುಂದೆ ಯಾವ ದೃಢತೆಯಲ್ಲಿ ಕೂಡುವನೋ, ಅದೇ ನಿಷ್ಠೆಯಿಂದ ಯುದ್ಧ ಭೂಮಿಗೂ ಹೋಗುತ್ತಿದ್ದ. ಯಾವಾಗಲೂ ವಿಜಯವೇ. ಆದರೆ ಒಮ್ಮೆ.... ಒಮ್ಮೆ ಅಮರಾವತಿಯ ಮೇಲೆ ಯುದ್ಧ ಘೋಷಿಸಿ, ಅನುಮತಿ ಪಡೆದು ಹೋಗಲು ಗುರುಗಳ ಹತ್ತಿರ ಬಂದ. ಆದರೆ ಗುರುಗಳು ಇರಲಿಲ್ಲ, ಅಗ್ನಿಲೋಕಕ್ಕೆ ಹೋಗಿದ್ದರು. ಅವರು ಬರುವ ತನಕ ಇರಬಹುದಿತ್ತು. ಇರಲಿಲ್ಲ, ಹೊರಟೇ ಬಿಟ್ಟ. ಇಂದ್ರನೊಡನೆ ಆದ ಯುದ್ಧದ ವರ್ಣನೆ ಮಾಡುವಲ್ಲಿ ನನಗೆ ಉತ್ಸಾಹ ಇಲ್ಲ. ಕೊನೆಗೆ ಬಂದುಬಿಡುವ. ವಜ್ರಾಯುಧದಿಂದ ವೈರೋಚನಿಯ ಕೊರಳು ಮುರಿಯಿತು. ಹಾರಿ ಬಂದ ತಲೆ ಶುಕ್ರಾಚಾರ್ಯರ ಮುಂದೆ ಬಿತ್ತು. ತಮ್ಮ ಪ್ರಿಯ ಶಿಷ್ಯನ ಕತ್ತರಿಸಿದ ತಲೆ; ಕುತ್ತಿಗೆಯಿಂದ ಇನ್ನೂ ರಕ್ತ ಸುರಿಯುತ್ತಿದೆ. ಪ್ರೀತಿಯಿಂದ ಕೈಗೆತ್ತಿಕೊಂಡರು. " ಛೆ ಛೆ! ಹೀಗಾಗಬಾರದಿತ್ತು. " "ಭ್ರಮಣ! "ಕೂಗಿದರು. ಓಡಿಬಂದೊಬ್ಬ ರಾಕ್ಷಸ ಕೈಮುಗಿದು ನಿಂತ. " ರಾಜರ ಶರೀರ ಎಲ್ಲಿದೆ" ?  "ಗುರುಗಳೇ, ಅದನ್ನು ಚಿತೆಯ ಮೇಲೆ ಇಟ್ಟಿದ್ದಾರೆ. " "ನಿಲ್ಲು ನಿಲ್ಲು! "ಎನ್ನುತ್ತ ತೇಲಿ ಹೋದರು ಗಾಳಿಯಲ್ಲಿ ಸ್ಮಶಾನಕ್ಕೆ. 
ಇನ್ನೇನು ಚಿತಾಸ್ಪರ್ಶವಾಗಬೇಕು. ದೊಂದಿಯನ್ನು ಹಿಡಿದು ನಿಂತಿದ್ದಾಳೆ ಪತ್ನಿ. ಮಕ್ಕಳಾಗಿಲ್ಲ ಇನ್ನು; ಹರೆಯದ ರಾಜ. ಪುರೋಹಿತ ಅಪರಮಂತ್ರವನ್ನು ಜೋರಾಗಿ ಹೇಳುತ್ತಿದ್ದಾನೆ. ಮಗನಿಲ್ಲದಾಗ ಪತ್ನಿಯೇ ಅಪರಕರ್ಮಾಧ್ಯಕ್ಷೆ. " ವಿಂಧ್ಯಾವಳಿ! ಏನು ಮಾಡುತ್ತಿರುವೆ ನಿಲ್ಲು! " ಅನಿರೀಕ್ಷಿತ ಆಗಮನ ಗುರುಗಳಿಂದ. ಕುಸಿದು ಕುಳಿತ ವಿಂಧ್ಯಾವಳಿ ಶುಕ್ರಾಚಾರ್ಯರ ಕಾಲು ಹಿಡಿದು ಜೋರಾಗಿ ಅಳತೊಡಗಿದಳು. ಅಷ್ಟು ಹೊತ್ತೂ ಬಿಗಿಹಿಡಿದಿದ್ದ ಕಣ್ಣೀರು ಕಂಬನಿಯ ಮಾಲೆ - ಮಾಲೆಯಾಗಿ ಉರುಳುತ್ತಿತ್ತು. " ತಾವಿರಲಿಲ್ಲ, ಅಗ್ನಿಲೋಕದಿಂದ ಬಂದಿರಲಿಲ್ಲವೆಂದು ತಿಳಿಯಿತು. ವಿಧಿ ಇಲ್ಲದೇ ದೇಹ ಹಳಸುವ ಮುನ್ನ ದಹಿಸಬೇಕಲ್ಲವೆ ? .... " ಮತ್ತೆ ಮತ್ತೆ ಅಳು. ಚಿತೆಯ ಮೇಲಿಂದ ವೈರೋಚನಿಯ ದೇಹವನ್ನು ತರಿಸಿದರು, ತಲೆಯನ್ನು ಕೊರಳಿಗೆ ಸೇರಿಸಿದರು, ಮೃತ ಸಂಜೀವಿನಿ ಮಂತ್ರೋಚ್ಛಾರಣೆ. ಮೂಳೆಗೆ ಮೂಳೆ ಸೇರಿ, ಮಾಂಸ ಖಂಡಗಳ ಜೋಡಣೆಯಾಗಿ, ರಕ್ತ ನಾಳಗಳು ಒಂದಕ್ಕೊಂದು ತೇಪೆ ಹಾಕಿ, ರಕ್ತ ಹರಿದು, ಚರ್ಮ ಕೂಡಿತು. ಶ್ವಾಸ ಕೋಶಗಳು ಆಡತೊಡಗಿದವು. ಪ್ರಾಣವಾಯು ಪ್ರವೇಶಿಸಿತು. ವೈರೋಚನಿ ಎದ್ದು ಕುಳೀತ. " ಎಲ್ಲಿ ಇಂದ್ರ?! " ಗುಡುಗಿದ. ಕ್ಷಣದಲ್ಲಿ ಗೊತ್ತಾಯಿತು ತಾನು ಯುದ್ಧ ಭೂಮಿಯಲ್ಲಿ ಇಲ್ಲವೆಂದು.
***********
"ವೈರೋಚನಿ, ದೊಡ್ಡ ತಪ್ಪು ಮಾಡಿದೆ. ಹೊರಡುವ ಮುನ್ನ, ಅದರಲ್ಲೂ ವಿಜಯ ಯಾತ್ರೆಗೆ ಮುನ್ನ ಗಣ ಹೋಮ ಮಾಡೆಂದು ಎಷ್ಟು ಬಾರಿ ಹೇಳಿಲ್ಲ ನಿನಗೆ? ಅದೇಕೆ ಮರತೆ? ನಾನು ಊರಿನಲ್ಲಿ ಇರಲಿಲ್ಲವೆಂದ ಮಾತ್ರಕ್ಕೇ ಅಷ್ಟು ಅವಸರ ಏನಿತ್ತು? ಬರುವ ತನಕ ಕಾಯಬಹುದಿತ್ತು. "ಏನೂ ಮಾತನಾಡದೆ ಸುಮ್ಮನಿದ್ದ ಶಿಷ್ಯನನ್ನು ಸಮಾಧಾನ ಪಡಿಸಿದರು. " ಏಳು, ಈಗಲೇ ಅಗ್ನಿಪ್ರತಿಷ್ಠಾಪನೆ ಮಾಡು. ಈಗ ತಾನೇ ಅಗ್ನಿ ಲೋಕದಿಂದ ಬಂದಿದ್ದೇನೆ. ಇಪ್ಪತ್ತೆಂಟು ದಿನಗಳ ಹೋಮ ಅವ್ಯಾಹತವಾಗಿ ನಡೆಯಲಿ. ಅಗ್ನಿ ಪ್ರತ್ಯಕ್ಷನಾಗುತ್ತಾನೆ, ಅವನನ್ನು ವಿಜಯಕ್ಕೆ ಬೇಡು. "
************
ಎರಡಾಳುದ್ದದ ಅಗ್ನಿ- ಜ್ವಾಲೆಗಳ ಮಧ್ಯದಲ್ಲಿ ಅಗ್ನಿ ಕಂಡೇ ಬಿಟ್ಟ. ಮೈತುಂಬ ಉರಿ - ಉರಿ. ಸಪ್ತ ಜ್ವಾಲೆಗಳು, ಕಾದ ಚಿನ್ನದ ಕಿರೀಟ, ಯಾಗ ಮಂಟಪದಲ್ಲಿದ್ದವರೆಲ್ಲ ಕಿರುಚುತ್ತ ಓಡಿ ಹೋದರು; ಬೆಂಕಿಯ ಬಿಸಿ ತಾಳಲಾರದೆ. ಶುಕ್ರಾಚಾರ್ಯರು, ವೈರೋಚನಿ ಮಾತ್ರ ಕುಳಿತಿದ್ದಾರೆ. ಅಗ್ನಿ ಮಧ್ಯದಿಂದ ಸ್ವಾಹಾಪತಿಯ ಗುಡುಗು ಕೇಳಿಸಿತು. " ಪ್ರಹ್ಲಾದ ನಮಗೆ ಪ್ರೀತಿಪಾತ್ರ. ನೀನೂ ಪರಮ ವೈದಿಕ. ವರ್ಷ ಪೂರ್ಣ ಯಾಗಗಳು ನಿನ್ನ ಅರಮನೆಯಲ್ಲಿ ನಡೆಯುತ್ತಲೇ ಇರುತ್ತವೆ. ನಾನೂ ಸಾಕಷ್ಟು ತುಪ್ಪ ಉಂಡಿದ್ದೇನೆ. ಹೇಳು, ಏಕಾಗಿ ಕರೆದೆ ನನ್ನನ್ನು? " ಸಾಷ್ಟಾಂಗ ಮಾಡಿ ಹೇಳಿದ; " ಹವ್ಯಾವಾಹನ, ನೀನೊಂದು ದಿವ್ಯವಾದ ವರ ಕೋಡಬೇಕು ನನಗೆ. ನಾನೂ ಎಂದೂ ಯುದ್ಧದಲ್ಲಿ ಸೋಲಬಾರದು, ಸಾಯಬಾರದು. ದೇವತೆಗಳ ಮೇಲೆ ಯುದ್ಧಕ್ಕೆ ಹೋದಾಗ ನೀನಲ್ಲಿರಬಾರದು. " ಕ್ಷಣ ಕಾಲ ತಡೆದು ಹೇಳಿದ ಅಗ್ನಿ, " ನಿನ್ನ ಮೊದಲ, ಮತ್ತು ಕೊನೆಯ ಪ್ರಾರ್ಥನೆಗೆ ನಾನು ಒಪ್ಪಿದೆ. ಮಧ್ಯದ್ದು ನನ್ನ ಮಿತಿಯಲ್ಲಿಲ್ಲ. ಆದರೆ ಅದೂ ಪೂರ್ಣವಾಗಬಹುದು ಎನಿಸುತ್ತಿದೆ. ಈಗ ಈ ಯಙ್ಹಕುಂಡದಿಂದ ರಥ ಒಂದು ಎದ್ದು ಬರುತ್ತದೆ. ಅದರಲ್ಲಿ ಕುಳಿತು ಯುದ್ಧಕ್ಕೆ ಹೋಗು. ನಿನ್ನೆದುರು ಯಾರೂ ನಿಲ್ಲುವುದಿಲ್ಲ. " 
************
ಶುಕ್ರಾಚಾರ್ಯರು ಸ್ಮಿತ ವದನರಾಗಿದ್ದಾರೆ. ವೈರೋಚನಿ ತನಗೂ, ಇಂದ್ರನಿಗೂ ನಡೆದ ಯುದ್ಧ ವರ್ಣನೆಯನ್ನು ಮುಗಿಸಿದ್ದ. ತಾನು ಯುದ್ಧನಲ್ಲಿ ಇಂದ್ರನನ್ನು ಬಂಧಿಸಿದ್ದು, ಆತ ಮಾಯವಾಗಿದ್ದು, ಅಮರಾವತಿಯ ಮೇಲೆ ತನ್ನ ವಿಜಯ ಧ್ವಜ ಹಾರಿಸಿದ್ದು, ತಾನೀಗ ಇಂದ್ರನ ಸಿಂಹಾಸನದ ಮೇಲೆ ಕುಳಿತು ಸುರೇಂದ್ರನಾಗಿದ್ದು! ಅಲ್ಲಲ್ಲ ಅಸುರೇಂದ್ರನಾಗಿದ್ದು!!! ಅಲ್ಲ. ಅದೂ ಅಲ್ಲ ತಾನೀಗ ಸುರಾಸುರೇಂದ್ರನಾಗಿದ್ದು!!!  ತನ್ನ ಪ್ರತಿನಿಧಿಯಾಗಿ ವಿಂಧ್ಯಾಸುರನನ್ನು ಅಮರಾವತಿಯಲ್ಲಿ ನೇಮಿಸಿರುವುದು.... ಈ ಎಲ್ಲವನ್ನೂ ವಿವರ-ವಿವರವಾಗಿ ಹರ್ಷದಿಂದ ಹೇಳಿ ಮುಗಿಸಿದ ವೈರೋಚನಿ. " ರಾಜ, ಮಹಾ ಬಲಶಾಲಿ ಎಂದು ಬೀಗುತ್ತಿದ್ದ ಇಂದ್ರ. ಅವನ ವಜ್ರಾಯುಧದ ಮುಂದೆ ಯಾರೂ ನಿಲ್ಲಲಾರರೆಂದು ಹಾರಾಡುತ್ತಿದ್ದ. ಅವನಿಗೆ ಸರಿಯಾಗಿ ಪಾಠ ಕಲಿಸಿದೆ. ಹೀಗಾಗಿ ಇಂದಿನಿಂದ ನಿನಗೊಂದು ಹೊಸ ಹೆಸರನ್ನು ಕೊಡೋಣ. ಆ ನೂತನ ನಾಮಧೇಯದಿಂದಲೇ ನೀನು ಪ್ರಸಿದ್ಧನಾಗು. ಅವನು ಮಹಾ ಬಲಶಾಲಿಯಲ್ಲವೇ, ಆ ಇಂದ್ರ? ಆ ಮಹಾ ಬಲಶಾಲಿ ಇಂದ್ರನನ್ನೇ ನೀನು ಬಲಿ ಹಾಕಿಬಿಟ್ಟೆ!! ಆದ್ದರಿಂದ ಇನ್ನು ಮುಂದೆ ನೀನು ಬಲಿಚಕ್ರವರ್ತಿ ಯೆಂದು ಪ್ರಸಿದ್ಧನಾಗು. " (ಮುಂದುವರೆಯುತ್ತದೆ....)

-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com