ವಾಮನನ ವಚನಾಮೃತ

ನಾರಾಯಣ ಯೋಚಿಸುತ್ತಿದ್ದಾನೆ; " ಈಗ ಸೋತವರು ಯಾರು? ನಾನೋ, ಬಲಿಯೋ? ನನ್ನ ಗುರಿ ಈಡೇರಿದೆ. ನಿನಗೆ ಇಂದ್ರ ಪದವಿಯನ್ನೇ ಕೊಡುತ್ತೇನೆ. ನಿನಗೆ ಹೊಸಲೋಕ ಒಂದರಲ್ಲಿ ವೈಭವೋಪೇತವಾದ...
ವಾಮನಾವತಾರ
ವಾಮನಾವತಾರ
ನಾರಾಯಣ ಯೋಚಿಸುತ್ತಿದ್ದಾನೆ; " ಈಗ ಸೋತವರು ಯಾರು? ನಾನೋ, ಬಲಿಯೋ? ನನ್ನ ಗುರಿ ಈಡೇರಿದೆ. ಇಂದ್ರನಿಗೆ ತನ್ನ ರಾಜ್ಯ ಸಿಕ್ಕಿದೆ. ಮತ್ತೀಗ ಮೂರನೆಯ ದಾನ ಪಡೆಯುವ ಅವಶ್ಯಕತೆ ಇದೆಯೇ? " 
" ಅಯ್ಯೋ! ಬಲಿ ನಾನು ಹೇಳಿದ್ದನ್ನ ಕೇಳಲಿಲ್ಲ. ಒಂದು ಪಾದದಿಂದ ಇಡೀ ಭೂಮಿಯನ್ನ ಆವರಿಸಿದ ವಾಮನ ಕೇಳಿಬಿಟ್ಟನಲ್ಲ; ಎರಡನೆಯ ಪಾದಕ್ಕೆ ಬಲಿ ಯಾವುದು, ಅಂತ?! ಹಿಂದು-ಮುಂದು ನೋಡದೆ ತಾನು ಸಂಪಾದಿಸಿದ್ದ, ಗೆದ್ದಿದ್ದ, ಸತ್ತು ಎದ್ದು ಗಳಿಸಿದ್ದ ಇಂದ್ರ ಪದವಿಯನ್ನೇ; ಅಮರರ ತಾಣವನ್ನೇ; ಅಮರಾವತಿಯನ್ನೇ; ಸ್ವರ್ಗವನ್ನೇ ಧಾರೆ ಎರೆದುಬಿಟ್ಟನಲ್ಲ! ಈಗ ಮೂರನೆಯ ಪಾದಕ್ಕೆ ಏನು ಕೊಡುತ್ತಾನೆ? ಛೆ ಛೆ ! ನನ್ನನ್ನು ಕೇಳಿದ್ದರೆ, ನಾರಾಯಣನ ಯೋಜನೆಯನ್ನೆಲ್ಲ ತಲೆಕೆಳಗಾಗುವಂತೆ ಮಾಡಿಬಿಡುತ್ತಿದ್ದೆ. ಆದರೆ ಈ ಮೂರ್ಖ ಶಿಷ್ಯ ಕೇಳಬೇಕಲ್ಲ?! " ಶುಕ್ರಾಚಾರ್ಯರು ಪೇಚಾಡುತ್ತಿದ್ದಾರೆ. 
" ನನ್ನ ತಮ್ಮ, ನನ್ನನ್ನೇನಾದರೂ ಕೇಳಿದರೆ, ಮೂರನೆಯ ಪಾದಕ್ಕೆ ಬಲಿಯ ಪ್ರಾಣವನ್ನೇ ಕೇಳು ಎಂದು ಸಲಹೆ ಕೊಡಬೇಕು. ಈಗ ನಾನು ಅದನ್ನು ಬಾಯಿ ಬಿಟ್ಟು ಹೇಳಿದರೆ, ವಿಷ್ಣು ಏನೆನ್ನುವನೋ. ಮೊದಲೇ ಬೈದಿದ್ದ. ಈಗ ದುರಾಶೆಯೆಂದರೆ? ’ ಸಾಧ್ಯವಾದರೆ ನೀನು ಯುದ್ಧ ಮಾಡು ’ಅಂದುಬಿಟ್ಟರೆ? ’ ಅಕಸ್ಮಾತ್ ಇನ್ನೊಂದು ಬಾರಿ ಸೋತರೆ, ಸ್ವರ್ಗವನ್ನು ಅವನಿಗೆ ಮತ್ತೆ ಕೊಟ್ಟು ಸನ್ಯಾಸಿ ಆಗು ’ಅಂತ ಹೇಳಿಬಿಟ್ಟರೆ?......... ನಮಗೇಕೆ? ನಮಗೆ ಕಳೆದದ್ದು ಸಿಕ್ಕಿದೆ. ನಮ್ಮ ಪಾಡಿಗೆ ನಾವು ಇರೋಣ. " ಇಂದ್ರನ ಸತತ ಯೋಚನೆ ಒಂದು ನೆಲೆಗೆ ಬಂದಿತ್ತು. ಆದರೆ ಇತ್ತ ನಾರಾಯಣನ ಯೋಚನೆ ಮುಂದುವರಿದಿತ್ತು. ’ ಬಲಿಯನ್ನು ಕೇಳಿದರೆ ಏನು ಕೊಡಬಹುದು? ಅವನಲ್ಲಿ ಈಗ ಏನೂ ಉಳಿದಿಲ್ಲವಲ್ಲ? ಕೇಳಿ, ಪಾಪ ಕೊಡಲಾಗದಿದ್ದರೆ? ಆ ಪರಿಸ್ಥಿತಿ ಬಂದರೆ, ನನಗೇ ನೋವಾಗುತ್ತದೆ. ಆದರೂ ತಾನು ಕೇಳಬೇಕು. ಬಲಿ ಕೊಡಬೇಕು. ಅವನು ಜಗತ್ಪ್ರಸಿದ್ಧನಾಗಬೇಕು. "
ಅಳೆದೆ ನಾ ಎರಡನೆಯ ಅಡಿಯಿಂದ ಇಡಿ ಸ್ವರ್ಗ 
ನಿನ್ನದಿನ್ನೇನಿಲ್ಲ ನಾನೆ ಈ ಭೂಸ್ವಾಮಿ!! 
ಮೂರನೆಯ ಹೆಜ್ಜೆಯನ್ನಿಡಲಿ ನಾನಿನ್ನೆಲ್ಲಿ? 
ಬಲಿಚಕ್ರವರ್ತಿಗಾಯಿತೊ ಸೋಲು ಇಲ್ಲಿ? 
"ಸ್ವಾಮಿ, ನಿಮ್ಮ ಈ ಮಾತಿಗೇ ನಾನು ಕಾಯುತ್ತಿದ್ದೆ. ಇದಕ್ಕೆ ಉತ್ತರ ಬೇಕಿದ್ದರೆ ನಿಮ್ಮ ಮೂಲ ಸ್ವರೂಪದಲ್ಲಿ ನನಗೆ ಕಾಣಿ. ಎಂದರೆ, ನನ್ನಲ್ಲಿ ಯಾಚನೆಗೆ ಬಂದಾಗ ನೀವು ಹೇಗಿದ್ದಿರೋ ಹಾಗೆ ಬನ್ನಿ, .ಅಲ್ಲೆಲ್ಲೋ ಗಗನದಲ್ಲಿ ಕೇಳಿದರೆ ಹೇಗೆ ಉತ್ತರಿಸಲಿ? ಮೂರನೆಯ ದಾನಕ್ಕೆ ನಾನು ಸಿದ್ಧವಿದ್ದೇನೆ.  "ಇವನಲ್ಲಿ ಇನ್ನೇನಿದೆ ? "ಶುಕ್ರಾಚಾರ್ಯರ ಶಂಕೆ. ವಿಂಧ್ಯಾವಳಿ ನಡುಗಿಬಿಟ್ಟಿದ್ದಾಳೆ. ತಾನು ಧಾರೆ ಎರೆದಾಗ ಇಂತಹ ಅಭೂತ ದಾನ ಕೊಡುತ್ತಿರುವೆನೆಂಬ ಕಲ್ಪನೆಯೇ ಬಂದಿರಲಿಲ್ಲ. ಈಗ ತನ್ನ ವಲ್ಲಭನ ಮನದಲ್ಲಿ ಏನಿದೆಯೋ. 
ದ್ವಿವಿಕ್ರಮ ಈಗ ಮೊದಲಿನಂತೆ ವಾಮನನಾಗಿದ್ದಾನೆ. ಬಲಿ ಬಾಗಿದ. ಬಾಗಿ ಆ ಪುಟ್ಟ ಪಾದಗಳಿಗೆ ತನ್ನ ಹಣೆ ಹೆಚ್ಚಿದ. ಎದ್ದು ಹೆಂಡತಿಗೆ ಹೇಳಿದ; ಪೂಜಾದ್ರವ್ಯ ತರಲು. ಷೋಡಶೋಪಚಾರ ಪೂಜೆ ಮಾಡಿದ ಆ ಶ್ರೀಚರಣಗಳಿಗೆ. ಕುಳಿತು ವಾಮನನ ದಕ್ಷಿಣ ಪಾದವನ್ನೆತ್ತಿ ತನ್ನ ತಲೆಯಮೇಲಿಟ್ಟುಕೊಂಡ. " ಪ್ರಭು ನಾರಾಯಣ, ನಿನ್ನೀ ಪುಟ್ಟ ಪಾದಕ್ಕೆ ನನ್ನ ತಲೆ ಸಾಕಲ್ಲವೇ? " ದಿಗ್ಭ್ರಾಂತನಾದ ವಾಮನನ ನಿರೀಕ್ಷೆ ಮೀರಿ ಬೆಳೆದಿದ್ದ ಬಲಿ. ಇಂದ್ರನ ಮುಖ ನೋಡಿದ ವಿಷ್ಣು. ಅವನ ಮುಖದಲ್ಲಿ ಕಳೆಯೇ ಇರಲಿಲ್ಲ. ಶುಕ್ರಾಚಾರ್ಯರು ಕೈ-ಕೈ ಹಿಸುಕಿಕೊಳ್ಳುತ್ತಿದ್ದರು. ವಿಂಧ್ಯಾವಳಿಗೆ ಏನೂ ತೋಚದೇ ತಲೆ ಖಾಲಿಯಾಗಿತ್ತು. ಈಗ ಮಾತನಾಡಿದ ತ್ರಿವಿಕ್ರಮ; " ದಾನ ಚಕ್ರೇಶ್ವರ ಬಲಿ ಚಕ್ರವರ್ತಿ ನೀನು! ನಿನ್ನನ್ನು ಮೀರಿಸುವ ದಾನಿ ಇನ್ನಾರೂ ಹುಟ್ಟಲಾರರು. ಹಾಗೆಂದು ಈಗ ನಿನ್ನ ತಲೆಯ ಮೇಲಿನ ಚರಣವನ್ನೂರಿಬಿಟ್ಟರೆ ನೀನು ಅಣುವಾಗಿ ಅಳಿಸಿ ಹೋಗುವೆ. ಹಾಗೆ ಮಾಡುವುದು ಸುಲಭ; ಆದರೆ ಹಾಗೆ ಮಾಡಿ ಭಕ್ತರಾರೂ ನನ್ನನ್ನು ನಂಬದಂತಹ ಹೈನ್ಯಕ್ಕೆ ಹೋಗಲು ನಾನು ಸಿದ್ಧನಿಲ್ಲ. ಅಷ್ಟೇ ಅಲ್ಲ, ನಿನ್ನಂತಹ ಉತ್ತಮನನ್ನು ಹಾಗೆ ಹೊಸಕಿ ಹಾಕಲು ನಾನೇ ಸಿದ್ಧವಿಲ್ಲ. ನೀನಿತ್ತ ನಿನ್ನ ಸರ್ವಸ್ವ ದಾನದ ಮುಂದೆ ನಾನು ಸೋತುಹೋಗಿದ್ದೇನೆ. ನಿನ್ನ ಮೂರು ದಾನಗಳಲ್ಲಿ ನಿನ್ನ ಕೊನೆಯ ದಾನವೇ ಅತ್ಯಂತ ಪ್ರಿಯ. ಹಾಗೂ ಅದೇ ಅತಿ ದೊಡ್ಡ ದಾನ. ಮನುಷ್ಯನೊಬ್ಬ ಕೊಡಬಹುದಾದ ಅನನ್ಯ ಪ್ರಧಾನ ದಾನವೆಂದರೆ ಇದೇ; ಎಂದರೆ ತನ್ನನ್ನೇ ದೈವಕ್ಕೆ ಅರ್ಪಣೆ ಮಾಡಿಕೊಳ್ಳುವುದು. ಅದರ ಸಂಕೇತವಾಗಿಯೇ ನನಗೆ ಈ ಮೂರನೆಯ ಪಾದದಿಂದ ಬಂದ ನೂತನ ಹೆಸರು " ತ್ರಿವಿಕ್ರಮ" ; ಅದೇ ಪ್ರಸಿದ್ಧವಾಗಲಿ.
ವಾಮನಾವತಾರವಾದರೂ ಅದು ಜಗಜ್ಜನಿತವಾಗುವುದು ತ್ರಿವಿಕ್ರಮಾವತಾರವೆಂದೇ. " ಕ್ಷಣಕಾಲ ಸುಮ್ಮನಾದ. ಅವನ ಮಾತು ಮುಗಿದಿಲ್ಲವೆಂದು ಎಲ್ಲರಿಗೂ ಅನ್ನಿಸಿತ್ತು. 
" ಸೋತೂ ಗೆದ್ದನಲ್ಲ? " ಎಂದುಕೊಂಡ ಇಂದ್ರ. "ಹಾಗಾದರೆ ಮುಂದೇನು? ಪಾದವನ್ನೆಳೆದುಕೊಂಡು ಬಲಿಯನ್ನು ಬಿಟ್ಟಬಿಡುವನೋ? " ಶುಕ್ರಾಚಾರ್ಯರು ಯೋಚಿಸುತ್ತಿದ್ದರು.
" ಬಲಿ, ನೀನು ಮಾನುಷ ಸಂವತ್ಸರಗಳಲ್ಲಿ ಜೀವಿಸುತ್ತಿರುವೆ. ನನ್ನ ಅಪ್ಪ-ಅಮ್ಮನಂತೆ. ನಿನ್ನ ಆಯುಷ್ಯವನ್ನು ನಾನು ವಿಸ್ತರಿಸಿದ್ದೇನೆ. ಈ ಮನ್ವಂತರ ಕಳೆದ ನಂತರ ನಿನಗೆ ಇಂದ್ರ ಪದವಿಯನ್ನೇ ಕೊಡುತ್ತೇನೆ. ಅಲ್ಲಿಯ ವರೆವಿಗೆ ಎಲ್ಲಿರಲಿ? ಹೇಗಿರಲಿ? ಎಂದು ಯೋಚಿಸಬೇಡ. ದಾನ ಮಾಡಿದ ಮೇಲೆ ಭೂಮಿಯ ಮೇಲಾಗಲಿ, ಸ್ವರ್ಗದ ಮೇಲಾಗಲಿ, ಇರಲು ನೀನೇ ಬಯಸುವುದಿಲ್ಲ. ಅದು ಕಾರಣ ನಿನಗೆ ಹೊಸಲೋಕ ಒಂದರಲ್ಲಿ ವೈಭವೋಪೇತವಾದ ವಸತಿಯನ್ನು ಸಿದ್ಧಪಡಿಸುವೆ. ಅದೇ ಸುತಲ. ಆ ಸುತಲದಲ್ಲಿ ಈ ಅರಮನೆಯ ಶತಾಧಿಕ ಬೆಲೆಯ ಸುರಮನೆಯನ್ನು ನಿನಗೆ ಕೊಡುವೆ. ನಿನ್ನ ಸೇವೆಗಾಗಿ ಮೂರು ನೂರು ಅಪ್ಸರಸಿಯರನ್ನು ನೇಮಿಸುವೆ. ನೀನು ಹಾಯಾಗಿ ನಿನ್ನ ಪತ್ನಿ, ಹಾಗೂ ನಿನ್ನ ಆಪ್ತ ಬಾಂಧವರೊಡನೆ ಅಲ್ಲಿ ಕಾಲ ಕಳೆ. ಬಯಸುವ ಎಲ್ಲ ಸುಖಗಳೂ ನಿನಗೆ ಸಿಗಲಿ. ನಿನ್ನ ಗುರುಗಳು ನಿನ್ನರಮನೆಗೆ ಆಗಾಗ ಬಂದು ಭೇಟಿ ಮಾಡಬಹುದು. ಇಷ್ಟಲ್ಲದೇ ಇನ್ನೇನಾದರೂ ಬೇಕಿದ್ದರೆ ಬೇಡಿಕೊ. " ಸುದೀರ್ಘ ಭರವಸೆಗಳ ಪಟ್ಟಿ ಮುಗಿದಿತ್ತು. ಅಯೋಮಯನಾಗಿದ್ದ ಬಲಿ. ಇನ್ನೇನು ಎಲ್ಲವೂ ಮುಗಿದೇ ಹೋಯಿತೆಂದುಕೊಳ್ಳುತ್ತಿದ್ದಾಗ ಮತ್ತೆ ಎಲ್ಲವೂ ಸಿಕ್ಕಂತೆ, ಒಟ್ಟಿಗೇ ಹೆಚ್ಚನ್ನೂ ಎಳೆತಂದಂತೆ ! ಇದೀಗ ಲಲಿತವಾದ, ವೈಭವೋಪೇತವಾದ ಸುತಲವಾಸ. ಮುಂದೆ ಮನ್ವಂತರ ಪೂರ ಇಂದ್ರಪದವಿ. 
ಓಹ್ ! ಏನಿದು ? ನಾನು ಕೊಟ್ಟದ್ದರ ಹತ್ತರಷ್ಟು ವಾಪಸಾಗುತ್ತಿದೆ? ದಾನಕ್ಕೆ ಆ ಶಕ್ತಿಯಿದೆಯೆಂದು ಗುರುಗಳು ಆಗಾಗ ಹೇಳುತ್ತಿದ್ದರು. " ನೀನು ಏನಾದರೂ ದಾನ ಕೊಟ್ಟರೆ , ಅದರ ಹತ್ತರಷ್ಟು ದಾನಿಗೆ ದೊರಕುತ್ತದೆ ಮತ್ತೆ. " .ಅವನೇ ಎಲ್ಲವನ್ನೂ ಕೊಟ್ಟಿರುವಾಗ ನಾನಿನ್ನೇನನ್ನು ಕೇಳಬೇಕಿದೆ? ಆದರೂ... ಆದರೂ ತನ್ನ ಪ್ರಜೆಗಳನ್ನು ಅಗಲಲು ನನಗೆ ಮನಸ್ಸೇ ಆಗುತ್ತಿಲ್ಲವಲ್ಲ? ಪತ್ನಿ, ಬಾಂಧವರೊಡನೆ ಎಂದ ನಾಗಲೀ, ಪ್ರಜೆಗಳನ್ನೂ ಕರೆದೊಯ್ಯಿ ಎನ್ನಲಿಲ್ಲ ತ್ರಿವಿಕ್ರಮ. ಅದೂ ಸರಿಯೇ, ಅವರೆಲ್ಲ ಹೇಗೆ ಬರಲು ಸಾಧ್ಯ? ಕೊನೆಗೆ ಯೋಚಿಸಿ ಹೇಳಿದ, " ಸ್ವಾಮಿ, ನೀವು ಒಪ್ಪುವುದಾದರೆ ನಾನು ಪ್ರತಿನಿತ್ಯ ಬೆಳಗೇಳುತ್ತಿದ್ದಂತೆಯೇ ನನ್ನ ಪ್ರಜೆಗಳನ್ನು ಒಮ್ಮೆ ನೋಡಿ ಬರಬೇಕು. " "ತಥಾಸ್ತು" ತಕ್ಷಣವೇ ತ್ರಿವಿಕ್ರಮ ಹೇಳಿದ. " ಪ್ರತಿ ವರ್ಷ ವಸಂತ ಋತುವಿನಲ್ಲಿ ಬೆಳೆಗಳು ಸಮೃದ್ಧವಾಗಿರುತ್ತವೆ. ಚಾಂದ್ರಮಾನ ವರ್ಷದ ಆದಿ ಅದು. ಆ ಮಾಸದ ಮೊದಲ ದಿನವೇ ಪಾಡ್ಯಮಿ. ಅದು ಬಲಿಪಾಡ್ಯಮಿ ಎಂದು ಪ್ರಸಿದ್ಧವಾಗಲಿ. ದೇವಮಾನದ ಒಂದು ದಿನಕ್ಕೆ ಈ ಮನುಷ್ಯರ ಒಂದು ವರ್ಷ ಸಮ. ಅವರಿಗೆ ವರ್ಷಕ್ಕೊಮ್ಮೆಯಾದರೂ ನಿನಗೆ ದಿನಕ್ಕೊಮ್ಮೆ. ಆಗಬಹುದೋ ? "ಇನ್ನೇನು ಹೇಳುವುದಿದೆ ಬಲಿಗೆ ? (ಮುಂದುವರೆಯುತ್ತದೆ...)
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com