ವಿಷ್ಣುವಿನ ವರ; ಭಯ ದೂರ!

ಉಸಿರು ಕಟ್ಟಿ ಹೇಳುತ್ತಿದ್ದ ಸುರರನ್ನು ಕಂಡು ಬ್ರಹ್ಮ ಮರುಗಿದ." ಒಟ್ಟಿನಲ್ಲಿ ಹೇಳಬೇಕೆಂದರೆ" , ತಮ್ಮ ನೋವಿನ ಕೊನೆಗೆ ಹೇಳಿದರು; " ಅಜೇಯನಾದ ಅವನ ತಲೆ ಭುಜಗಳ ಮೇಲಿಲ್ಲ. ಇದಕ್ಕೆ ಕಾರಣ ಮತ್ತೆ ಮತ್ತೆ ಹೇಳಬೇಕೆಂದರೆ ನಿನ್ನ ಅಮೋಘ ವರವೇ!!
ವಿಷ್ಣು
ವಿಷ್ಣು
ಉಸಿರು ಕಟ್ಟಿ ಹೇಳುತ್ತಿದ್ದ ಸುರರನ್ನು ಕಂಡು ಬ್ರಹ್ಮ ಮರುಗಿದ." ಒಟ್ಟಿನಲ್ಲಿ ಹೇಳಬೇಕೆಂದರೆ" , ತಮ್ಮ ನೋವಿನ ಕೊನೆಗೆ ಹೇಳಿದರು; " ಅಜೇಯನಾದ ಅವನ ತಲೆ ಭುಜಗಳ ಮೇಲಿಲ್ಲ. ಇದಕ್ಕೆ ಕಾರಣ ಮತ್ತೆ ಮತ್ತೆ ಹೇಳಬೇಕೆಂದರೆ ನಿನ್ನ ಅಮೋಘ ವರವೇ!! 
ಬೇಸಗೆಯ ನಡುಮಧ್ಯಾಹ್ನ ಅರಮನೆಯಿಂದ ಅವನು ಹೊರಬಂದರೆ ಸೂರ್ಯ ಕೂಡ ತಂಪಾಗಿಬಿಡುತ್ತಾನೆ.  ಬೀಸುತ್ತಿದ್ದ ಬಿರುಗಾಳಿ ಮಂದಾನಿಲವಾಗಿಬಿಡುತ್ತದೆ. ಸದಾ ಭೀಕರ ಅಲೆಗಳಿಂದ ದಡಕ್ಕೆ ಅಪ್ಪಳಿಸುವ ಸಮುದ್ರ, ಪ್ರಶಾಂತವಾಗಿ ಲಘು ತೆರೆಗಳ ಸರೋವರವಾಗಿಬಿಡುತ್ತದೆ. ಅವನ ಆ ವಿಕಾರ ಮುಖಗಳು, ಭಯಂಕರ ಆಯುಧಗಳನ್ನು ಕಂಡರೆ, ನಮಗೆ ಹೆದರಿಕೆಯಿಂದ ಮೊದಲೇ ಆಧಾರವಿರದ ಕಾಲುಗಳು ನಡುಗತೊಡುಗುತ್ತವೆ. ಏನು ಮಾಡಬೇಕು ಸೃಷ್ಟಿಕರ್ತ? ಏನಾದರೂ ಮಾಡಿ ಅವನನ್ನು ಸಂಹರಿಸಬೇಕಲ್ಲ? ಏನಾದರೂ ಯೋಚನೆ, ಏನಾದರೂ ಹಂಚಿಕೆ, ಏನಾದರೂ ಉಪಾಯ ಹೇಳಬೇಕಲ್ಲ?! "
(ಅತಿಕ್ರಾಮತಿ ದುರ್ಧರ್ಷೋ ವರದಾನೇನ ಮೋಹಿತಃ
ನೈನಂ ಸೂರ್ಯಂ ಪ್ರತಪತಿ ಪಾರ್ಶೇ ವಾತಿ ನ ಮಾರುತಃ
ಚಲೋರ್ಮಿಮಾಲೀ ತಂ ದೃಷ್ಟ್ವ ಸಮುದ್ರೋಪಿ ನ ಕಂಪತೇ
ಸುಮಹನ್ನೋ ಭಯಂ ತಸ್ಮಾತ್ ರಾಕ್ಷಸಾತ್ ಘೋರ ದರ್ಶನಾತ್
ವಧಾರ್ಥಂ ತಸ್ಯ ಭಗವನ್ ಉಪಾಯಂ ಕರ್ತುಂ ಅರ್ಹಸಿ)
ಎಂದೋ ಬರದಿದ್ದ ವಿಧಿಬರಹವನ್ನೇ ವಿಧಿ ಹೇಳಿದ; " ಇದು ಹಾಗೇ ಆಗಬೇಕಿತ್ತು. ಕೆಲ ಋಷಿಗಳು ಮುಕ್ತರಾಗಬೇಕಿತ್ತು. ಹಲ ದೇವತೆಗಳ ಗರ್ವ ಹರಣವಾಗಬೇಕಿತ್ತು. ಅಷ್ಟ ದಿಕ್ಪಾಲಕರು ತಮ್ಮ ಶಕ್ತಿ, ಪರಾಕ್ರಮ, ದೈವತ್ವಗಳು ಅವಿರತ, ಅಂಕೆರಹಿತ ಎಂಬ ಹಮ್ಮು ಬಿಮ್ಮುಗಳನ್ನು ಬಿಟ್ಟು ವಿನೀತರಾಗಲು ಪಾಠ ಬೇಕಿತ್ತು. ದೇವೇಂದ್ರ ಕೇವಲ ಊರ್ವಶಿಯ ಅಪ್ಪುಗೆಯಲ್ಲೋ, ಅಮೃತ ಹೀರುತ್ತಲೋ, ಋಷಿಗಳ ತಪಸ್ಸಿಗೆ ವಿಘ್ನ ಮಾಡುತ್ತಲೋ ಗರ್ವಿಯಾಗಿರುವುದರ ಬದಲು, ತಪಸ್ಸು ಮಾಡಿ ತನಗೆ ಸಿಕ್ಕಿರುವ ದೇವೇಂದ್ರನ ಪದವಿಗೆ ಕಳೆ ಹೆಚ್ಚಿಸಬೇಕಿತ್ತು. ಇವೆಲ್ಲ ಆಗಲು ದಶಕಂಠನ ಉಪಟಳ ಅವಶ್ಯವಿತ್ತು. ಅಲ್ಲದೇ, ಅವನು ಕಠಿಣ ತಪಸ್ಸನ್ನು ಬೇರೇ ಮಾಡಿದ್ದ. ಅದಕ್ಕೆ ನಾನು ಮರ್ಯಾದೆ ಮಾಡಲೇ ಬೇಕಿತ್ತು. ಪ್ರಾರ್ಥನೆಗೆ, ಧ್ಯಾನಕ್ಕೆ, ಯೋಗಕ್ಕೆ, ತಪಸ್ಸಿಗೆ ಫಲ ದೊರಕದೇ ಇದ್ದರೆ, ಅದು ಪ್ರಕೃತಿಯ ನಿಯಮ ಮೀರಿದಂತೆ. ಹಾಗಾಗಲು ಸೃಷ್ಟಿಕರ್ತನಾಗಿ ನಾನು ಬಿಡಲು ಸಾಧ್ಯವಿಲ್ಲವಲ್ಲ?"
 
ಬ್ರಹ್ಮನ ಮಾತನ್ನು ಕೇಳುತ್ತ ದೇವತೆಗಳು ಮತ್ತಷ್ಟು ಭೀತರಾದರು. ತಮಗೆ ಆಧಾರವೆಂದು ಈತನಲ್ಲಿ ಮೊರೆಹೊಕ್ಕರೆ ಈತ ಹೇಳುತ್ತಿರುವುದೇನು? ಎಲ್ಲೋ ದಶಕಂಠನನ್ನೇ ಬೆಂಬಲಿಸಿ ಮಾತನಾಡುತ್ತಿರುವಂತಿದೆಯಲ್ಲ? ದೇವತೆಗಳ ಮನಸ್ಸನ್ನೋದಿದ ವಿರಿಂಚಿ ಹೇಳಿದ; " ನಿಲ್ಲಿ ನಿಲ್ಲಿ, ಅಷ್ಟೊಂದು ಕಂಗೆಡ ಬೇಕಿಲ್ಲ. ಯಾವುದಕ್ಕಾದರೂ ಒಂದು ಅಂತ್ಯ ಇರಲೇ ಬೇಕು ತಾನೆ? ಸುರರನ್ನು ಸರಿಮಾಡಲು ನಾನು ದಶಕಂಠನ ವರ್ತನೆಗಳನ್ನು ಸಮರ್ಥಿಸುತ್ತಿಲ್ಲ. ಈಗ ಅವನ ಸರದಿ. ಅವನು ಮಾಡಿರುವ, ಮಾಡುತ್ತಿರುವ ಅಧರ್ಮಕ್ಕೆ, ಅನ್ಯಾಯಕ್ಕೆ ಫಲ ಸಿಗಲೇ ಬೇಕಲ್ಲ? ಅದಕ್ಕೂ ಅವನೇ ವರ ಕೇಳಿಬಿಟ್ಟಿದ್ದಾನೆ. " ಅಚ್ಚರಿಯಿಂದ ಎಲ್ಲರೂ ಬ್ರಹ್ಮನೆಡೆ ನೋಡಿದರು. 
 
ಎಂದರೆ? ತನ್ನ ಮರ್ದನಕ್ಕೂ ಅವನೇ ವರ ಕೇಳಿದನೇನು? " ದೇವತೆಗಳ ಮಾತನ್ನು ತಿದ್ದುತ್ತ ಹೇಳಿದ ಬ್ರಹ್ಮ, " ಹಾಗೆಂದು ಅವನು ಕೇಳಲಿಲ್ಲ, ಆದರೆ ಅವನು ಬಿಟ್ಟಿದ್ದೇ ಈಗ ಅವನಿಗೆ ಮೃತ್ಯುವಾಗಲಿದೆ. " ಅರ್ಥವಾಗದೇ ದೇವತೆಗಳು ಅಯೋಮಯರಾಗಿ ಬ್ರಹ್ಮನ ಮುಖ ನೋಡಿದರು. ವಿವರಿಸಿದ ವಿರಿಂಚಿ; " ದೇವ, ಗಂಧರ್ವ, ಯಕ್ಷ, ರಾಕ್ಷಸೇತ್ಯಾದಿಗಳಿಂದ ತನಗೆ ಮೃತ್ಯು ಬರಬಾರದು ಎಂದ. ನಾನು ಆಗಲೆಂದು ವರವಿತ್ತೆ. ಆದರೆ ಅವನು ಮನುಷ್ಯನ ಹೆಸರೇ ಎತ್ತಲಿಲ್ಲ! ’ಯಾವ ಮಹಾ ಮನುಷ್ಯ’? ಎಂದು ಆತ ನರನನ್ನು ಅಲಕ್ಷ್ಯ ಮಾಡಿದ. ಹೀಗಾಗಿ ಈಗ ಅವನ ವಧೆ ಮನುಷ್ಯನಿಂದ ಮಾತ್ರ ಸಾಧ್ಯ."
 
(ತೇನ ಗಂಧರ್ವ ಯಕ್ಷಾಣಾಂ ದೇವ ದಾನವ ರಕ್ಷಸಾಂ
ಅವಧ್ಯೋ ಅಸ್ಮಿ ಇತಿ ವಾಕ್ ಉಕ್ತಾ ತಥಾ ಇತಿ ಉಕ್ತಂಚ ತನ್ಮಯಾ
ನಾ ಕೀರ್ತಯತ್ ಅವಙ್ಞಾತ್ ರಕ್ಷೋ ಮಾನುಷಾಂಸ್ತದ
ತಸ್ಮಾತ್ ಸ ಮಾನುಷಾತ್ ವಧ್ಯೇ.... )
ಅಜನ ಮಾತು ಮುಗಿಯುವ ಹೊತ್ತಿಗೆ ಗಾಳಿಯಲ್ಲಿ ಶ್ರೀಗಂಧ ತೇಲಿ ಬಂತು. ಮಂದಾನಿಲ ಸುಳಿಯಿತು. ಬಿಸಿ ಇರದ ಪ್ರಕಾಶ ಏರಿತು. ಪರಿಸರದಲ್ಲೆಲ್ಲ ಏನೋ ಒಂದು ಆತ್ಮೀಯ ವಾತಾವರಣ. ಕಾಂತಿ ಪುಂಜ ಆಕಾರ ಪಡೆದಾಗ ವಿಷ್ಣು ಪ್ರತ್ಯಕ್ಷನಾಗಿದ್ದ. ಪೀತಾಂಬರದ ಉಜ್ವಲ ಹಳದಿಯ ಬೆಳಕು, ತನಗೆ ಮಾತ್ರವೇ ವಿಶಿಷ್ಟವಾದ ತುಸು ತೆಳು ನೀಲ ದೇಹ, ಬಾಡದ ವಿಕಸಿತ ಸುಗಂಧ ಸಂತಾನವೃಕ್ಷದ ಹೂ ಹಾರ, ಮೈ ತುಂಬ ಗಂಧಲೇಪನ, ವಿಕಸಿತ ವದನ, ಭರವಸೆಯ ಕಿರುನಗೆ, ತುಂಬಿದ ಕದಪು, ಕಮಲ ಕಂಗಳು, ಗೆರೆ ಕೊರೆದ ಹುಬ್ಬು. ಹಣೆಯಲ್ಲಿ ತಿಲಕ, ಸೌಂದರ್ಯದ ಖನಿ. ನೋಡುತ್ತಲೇ ಇರಬೇಕೆಂಬ ಆಕರ್ಷಣೆ. 
 
ಎಲ್ಲರ ವಂದನೆ ಸ್ವೀಕರಿಸಿದ ನಾರಾಯಣ ಅವರ ಬೇಡಿಕೆಯನ್ನೂ ಆಲಿಸಿದ. "ಸ್ವಾಮಿ , ನಿನಗೆ ತಿಳಿಯದ್ದೇನಿಲ್ಲ. ದಶಕಂಠನ ಸಂಹಾರಕ್ಕೆ ಕಮಲಾಸನನಲ್ಲಿ ಪ್ರಾರ್ಥಿಸುತ್ತಿದ್ದೆವು .
 
ಪುರುಷನಿಂದ ಮಾತ್ರ ಅವನ ವಧೆಯೆಂದು ಭವಿಷ್ಯವನ್ನು ಹೇಳಿದ್ದಾನಾತ. ಪುರುಷನೆಂದರೆ ಯಾರೋ ಮನುಷ್ಯನೆಂದೇ? ಪರಾಕ್ರಮಿಗಳೆಲ್ಲ ಅವನಿಗೆ ಶರಣಾಗಿದ್ದಾರೆ. ಹೋರಾಡಿದವರೆಲ್ಲ ಹೆಣವಾಗಿದ್ದಾರೆ. ಎಂದಮೇಲೆ ಇದು ಪುರುಷರಿಂದ ಆಗದ ಮಾತು. ಬ್ರಹ್ಮನ ಮಾತಿನ ಮಾನವನೆಂದರೆ ಮಾನವೋತ್ತಮನೆಂದೇ ಅರ್ಥ. ಆ ಪುರುಷೋತ್ತಮ ನೀನಲ್ಲದಿನ್ನಾರು? ಅದು ಕಾರಣ ಇದೀಗ ಏಳನೆಯ ಅವತಾರಕ್ಕೆ ಸೂಕ್ತ ಸಮಯವೆನಿಸುತ್ತಿದೆ. ದಯಮಾಡಬೇಕು. "ಬಾಗಿದ ಶಿರಗಳಿಗೆ ವಿಷ್ಣುವಿನ ಅಭಯ ಹಸ್ತ. ಗಭೀರವಾದರೂ ಮೃದು ವೀಣಾ ರವದಂತಹ ಮಾಧುರ್ಯ ಧ್ವನಿ. " ಭಯ ಬಿಡಿ, ನಿಮಗೆ ಮಂಗಳವಾಗಲಿ. ಅಸುರನ ಪಾಪದ ಕೊಡ ತುಂಬುತ್ತಿದೆ. ಋಷಿ, ಮಹರ್ಷಿ, ಬ್ರಹ್ಮರ್ಷಿಗಳಿಗೆಲ್ಲ ಪೀಡೆಯಾಗಿರುವ ದಶಕಂಠನ ದಮನಕ್ಕೆ ನಾನು ಮನುಷ್ಯರೂಪದಲ್ಲಿಯೇ ಹುಟ್ಟಿ ಬರುವೆ. ಕೇವಲ ಅವನನ್ನಷ್ಟೇ ಅಲ್ಲ, ಅವನ ಮಕ್ಕಳು-ಮೊಮ್ಮಕ್ಕಳನ್ನೂ, ಮಂತ್ರಿಗಳನ್ನೂ, ಬಂಧು ಬಾಂಧವರನ್ನೂ, ದಾಯಾದಿಗಳನ್ನೂ, ಸ್ನೇಹಿತರನ್ನೂ, ಎಲ್ಲ ದುಷ್ಟರನ್ನೂ ಯಮ ಸದನಕ್ಕೆ ಕಳಿಸುವೆ."

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com