ಪುತ್ರರಿಗಾಗಿ ಪಾಯಸ!!

ಋಷಿಗಳು, ಅತಿಥಿಗಳು, ಮಿಕ್ಕೆಲ್ಲ ರಾಜರುಗಳು, ರಾಜದಂಪತಿಗಳು, ಎಲ್ಲರೂ ವಿಸ್ಮಿತರಾಗಿ ಬಿಟ್ಟ ಕಂಗಳಿಂದ ಅಗ್ನಿರೂಪಿಯನ್ನು ನೋಡುತ್ತಿದ್ದಾರೆ. ತುಸು ಶ್ಯಾಮಲ ವರ್ಣದ ಶರೀರ, ನೆಟ್ಟ ನಿಲುವು, ಪ್ರಜ್ವಲಿಸುವ ಕಣ್ಣುಗಳು...
ಪುತ್ರರಿಗಾಗಿ ಪಾಯಸ!!
(ಭಯಂ ತ್ಯಜತ ಭದ್ರಂ ವೋ ಹಿತಾರ್ಥಂ ಯುಧಿ ರಾವಣಂ
ಸಪುತ್ರ ಪೌತ್ರಂ ಸಾಮಾತ್ಯಂ ಸಮಿತ್ರ ಙ್ಞಾತಿ ಬಾಂಧವಂ
ಹತ್ವಾ ಕ್ರೂರಂ ದುರಾತ್ಮಾನಂ ದೇವರ್ಷೀಣಾಂ ಭಯಾವಹಂ)
(ಮೇಲಿನ ವಿಷ್ಣುವಿನ ವರದಲ್ಲಿ ಗಮನಾರ್ಹವಾದದ್ದು ಎರಡು ಅಂಶಗಳು. ಒಂದು, ಭಕ್ತರು ಬೇಡಿದರೆ; ನಂಬಿ ಬೇಡಿದರೆ; ಶ್ರದ್ಧೆಯಿಟ್ಟು ಬೇಡಿದರೆ ಅದಕ್ಕೆ ಪ್ರತಿಕ್ರಿಯೆಗಳು ಎರಡು. ಒಂದು, ಭಯದೂರ, ಇನ್ನೊಂದು ಅಪೇಕ್ಷೆ ಪೂರ. ಶತ್ರುಗಳಿಂದುಂಟಾಗಿರುವ ತೊಡಕೋ, ವಿರೋಧವೋ, ಬೆದರಿಕೆಯೋ..... ಇವೆಲ್ಲದರ ನಾಶ ಹಾಗು ಬಯಸಿದ್ದು ಏನಿದ್ದರೂ ಅದರ ಈಡೇರುವಿಕೆ. ಅದೇ ವಿಷ್ಣು ಸಂದರ್ಶನದ ಫಲ ಶ್ರುತಿ. ಅದೇ ಅವನ ಮಾತು; " ಭಯಂ ತ್ಯಜತ, ಭದ್ರಂ ವೋ."
ಎರಡನೆಯ ಅಂಶ. ಒಂದು ಪ್ರಧಾನ ಸಂಶಯ:- ಅದೆಂದರೆ ವಿಷ್ಣು ಪ್ರತಿಙ್ಞೆಯ ಪ್ರಧಾನ ಭಾಗ; ದಶಕಂಠನೊಡನೆ ಅವನೆಲ್ಲ ಬಂಧು ಬಾಂಧವರನ್ನೂ ಹತ ಮಾಡುವೆನೆಂಬುದು. ಆದರೆ ಅವನ ತಮ್ಮ ವಿಭೀಷಣನನ್ನೇ ಸಾಯಿಸದೇ ಬಿಟ್ಟನಲ್ಲ? ವಿಭೀಷಣ ಶರಣಾದನೆಂದೋ, ಅವನು ಧರ್ಮಪಕ್ಷಪಾತಿಯೆಂದೋ, ಅವನಿಂದ ವೈರಿಯ ಹಲವಾರು ರಹಸ್ಯಗಳನ್ನು ತಿಳಿದ ಕೃತಙ್ಞತೆಯಿಂದ ರಕ್ಷಿಸಿದನೆಂದೋ.... ಇಂತಹ ಯಾವುದೇ ವಿವರಣೆ ವಿಷ್ಣುಪ್ರತಿಙ್ಞೆ ಭಂಗವಾದದ್ದನ್ನು ಸಮರ್ಥಿಸಲಾರವು.
ವಿಶ್ರವಸ್‌ನ ಒಂದು ಮಾತು ಸಹಾಯವಾಗಬಹುದು ಈ ಗಂಟು ಬಿಚ್ಚಲು. ಆಕಾರ, ಆಲೋಚನೆ, ಗುಣಗಳಲ್ಲಿ ದಶಕಂಠ, ಕುಂಭಕರ್ಣ, ಶೂರ್ಪಣಖೆ, ಈ ಮೂವರೂ ಒಂದು ಗುಂಪು. ವಿಭೀಷಣನೇ ಪ್ರತ್ಯೇಕ. ಏಕೆ ಹೀಗೆ? ಆ ಮೂವರೂ ಹಾಗಾಗಲು ಕಾರಣ ಕೈಕಸಿಯ ದುರ್ಮುಹೂರ್ತ ಸಂಯೋಗ. ಒಡನೇ, ಫಲಿತವಾಗಿ ಅವರು ಹಾಗೇ ಹುಟ್ಟುವರೆಂದೂ, ಅವರು ಕ್ರೂರ ಕರ್ಮಿಗಳೆಂದೂ ಅಂದೇ ಅವರಪ್ಪ ಭವಿಷ್ಯ ನುಡಿದಿದ್ದ. ಸುಪುತ್ರನೊಬ್ಬ ಬೇಕೆಂದು ಕೈಕಸಿ ಬೇಡಿದಾಗ ಕರುಣಿಸಿದ್ದು ವಿಭೀಷಣನನ್ನು. ಎಚ್ಚರಿಕೆಯಿಂದ, ಹುಟ್ಟುವ ಮುನ್ನವೇ ಅವನು ರಾಕ್ಷಸ ವಂಶೀಯನಲ್ಲವೆಂಬುದನ್ನು ಪರೋಕ್ಷವಾಗಿಯೂ, ಅವನು ಮಾತ್ರ ತನ್ನ ವಂಶಜನೆಂದು ನೇರವಾಗಿಯೂ ಘೋಷಿಸಿದ್ದ. " ಮಮ ವಂಶಾನು ರೂಪೋ " . ಇದರಿಂದ ಹೊರಡುವ ವ್ಯಾಖ್ಯೆಗಳು ಎರಡು. ಒಂದು , ವಿಭೀಷಣನ ವಂಶವೇ ಬೇರೆಯಾದ್ದರಿಂದ ಅವನು ದಶಕಂಠನ ತಮ್ಮನೇ ಅಲ್ಲ. ಕ್ಷೇತ್ರ ಪ್ರಾಧಾನ್ಯರು ದಶಗ್ರೀವ, ಕುಂಭಕರ್ಣ ಶೂರ್ಪಣಖೆಯಾದರೆ, ಕ್ಷೇತ್ರಙ್ಞ ಫಲಿತ ವಿಭೀಷಣನೊಬ್ಬನೇ. ಅದು ಕಾರಣ ವಿಷ್ಣು ಪ್ರತಿಙ್ಞೆಯಲ್ಲಿ ವಿಭೀಷಣನ ಹೆಸರು ಸೇರಿರಲಿಲ್ಲವೇನೋ ಎಂಬ ಸಂದೇಹ.  ಎರಡು, ವಿಶ್ರವಸ್‌ನ ಮಾತಿನ ಆಶಯವನ್ನು ಹಿಡಿದರೆ ಲಂಕಾಧಿಪತಿ, ಅಸುರಾಧಿಪತಿಯೇ ವಿನಃ, ಅವನು ಬ್ರಾಹ್ಮಣ ರಾಜನಲ್ಲವೆಂದೇ ಅನ್ನಿಸುತ್ತದೆ. 
ಬ್ರಾಹ್ಮಣನಲ್ಲಿರಬೇಕಾದ ಶಾಂತಿ, ಅಹಿಂಸೆ, ಸುಭಾಷೆ, ನಾಗರಿಕತೆ, ಯಙ್ಞ-ಯಾಗ ಮರ್ಯಾದೆ, ದೇಹ ಮೂಲವಲ್ಲದ ದೈತ್ಯ ದೂರ ಶಕ್ತಿ, ಮನೋನಿಗ್ರಹ, ಸಂಸ್ಕೃತಿ.... ಇವಾವುವನ್ನೂ ಅವನಲ್ಲಿ ಕಾಣಲಾರೆವು. ಈ ಕಾರಣದಿಂದ ಲಂಕೇಶನನ್ನು ಬ್ರಾಹ್ಮಣನೆಂದು ಕರೆಯುವುದೂ ಅತಿರಂಜಿತವೆನಿಸುತ್ತದೆ. ಹಾಗೊಮ್ಮೆ ಬ್ರಾಹ್ಮಣನೆಂದೇ ಗುರ್ತಿಸಬಹುದಾದರೆ ಅವನ ನಂತರದ ಲಂಕೇಶ್ವರನಲ್ಲಿ; ವಿಭೀಷಣನಲ್ಲಿ !!! - ಲೇ )
                                         ***********
ಇತ್ತ ಎಲ್ಲ ದೇವತೆಗಳಿಗೂ ಹವಿಸ್ಸನ್ನು ಅರ್ಪಿಸಿದ್ದಾರೆ. ಎಲ್ಲರೂ ಸಂತುಷ್ಟರಾಗಿದ್ದಾರೆ. ಪೂರ್ಣಾಹುತಿಯ ಸುಮುಹೂರ್ತ ಸನ್ನಿಹಿತವಾಗಿದೆ. ಋತ್ವಿಜರ ಕಂಠವೀಗ ಕಂಚಿನ ಘಂಟೆಯಾಗಿದೆ. ಮಂತ್ರಘೋಷ ವಾಟಿಕೆಯನ್ನು ತುಂಬಿದೆ. ದಶರಥನ ಕೈಗೆ ಸೃಕ್ ಬಂದಿದೆ. ದ್ರೋಣದಿಂದ ತುಪ್ಪ ಸುರಿಯುತ್ತಿದೆ. ರೇಷ್ಮೇ ವಸ್ತ್ರೇತ್ಯಾದಿ ಹೋಮ ಕಾಣಿಕೆಗಳಿಂದ ತುಂಬಿದ ದೊಡ್ಡ ಬಿದಿರು ಬುಟ್ಟಿ ಬಾಗಿ, ಅಗ್ನಿಗೆ ಅರ್ಪಿಸಿದೆ. ಕ್ಷಣ ಮಾತ್ರದಲ್ಲಿ ಸಪ್ತ ಜಿಹ್ವೆಗಳನ್ನು ಕಂಡಲ್ಲೆಲ್ಲ ಪಸರಿಸುತ್ತ, ಕೆನ್ನಾಲಿಗೆಗಳನ್ನು ದಿಗಂತಕ್ಕೆ ಚಾಚುತ್ತ, ಧಿಗ್ಗನೆದ್ದಿದೆ ಯಙ್ಞಕುಂಡದಿಂದ ಭಾರಿ ಅಗ್ನಿ ಜ್ವಾಲೆ. ಕೆಂಪು ಬೆಂಕಿಯೆಲ್ಲ ಮೊತ್ತವಾದಂತೆ, ಪುರುಷಾಕೃತಿ ತಾಳಿದಂತೆ ಕಿರೀಟ ಧಾರಿಯಾದ ಪ್ರಾಜಾಪತ್ಯ ಪುರುಷ ಎರಡಾಳೆತ್ತರಕ್ಕೆ ಅಗ್ನಿ ಮಧ್ಯದಲ್ಲಿ ನಿಂತಿದ್ದಾನೆ ಚಿನ್ನದ ತಂಬಿಗೆ ಹಿಡಿದು.
ಋಷಿಗಳು, ಅತಿಥಿಗಳು, ಮಿಕ್ಕೆಲ್ಲ ರಾಜರುಗಳು, ರಾಜದಂಪತಿಗಳು, ಎಲ್ಲರೂ ವಿಸ್ಮಿತರಾಗಿ ಬಿಟ್ಟ ಕಂಗಳಿಂದ ಅಗ್ನಿರೂಪಿಯನ್ನು ನೋಡುತ್ತಿದ್ದಾರೆ. ತುಸು ಶ್ಯಾಮಲ ವರ್ಣದ ಶರೀರ, ನೆಟ್ಟ ನಿಲುವು, ಪ್ರಜ್ವಲಿಸುವ ಕಣ್ಣುಗಳು, ಅದೊಂದು ವಿಚಿತ್ರ ಶೈಲಿಯ ಗಡ್ಡ-ಮೀಸೆ , ಹೊಳೆವ ಚಿನ್ನದ ತಂಬಿಗೆಯನ್ನು ಹಿಡಿದಿರುವ ಆತ ಮೊಳಗಿದ ; " ರಾಜಾ, ಪ್ರಜಾಪತಿಯು ಕಳಿಸಿದ ಪುರುಷ ನಾನು . ನಿನ್ನ ಯಙ್ಞದಿಂದ ಸುಪ್ರಿತರಾದ ದೇವತೆಗಳು ನೀನು ಬಯಸಿದ ವರ ನೀಡಲು ಈ ಅಮೂಲ್ಯ ಔಷಧವನ್ನು ಕಳಸಿದ್ದಾರೆ. ಅಶ್ವಿನಿ ದೇವತೆಗಳೇ ಇದನ್ನು ತಯಾರಿಸಿದ್ದಾರೆ. ಔಷಧವೆಂದರೆ ಕೇವಲ ವನಸ್ಪತಿಗಳಿಂದ ಮಾಡಿದ್ದಲ್ಲ ಇದು. ಇದು... " ರಾಜ ದಶರಥ ತನ್ನ ಕಣ್ಣ ಮುಂದೆ ನಡೆಯುತ್ತಿರುವ ಪವಾಡದಿಂದ ನಖ ಶಿಖಾಂತ ರೋಮಾಂಚಿತನಾಗಿ ಉದ್ವಿಗ್ನನಾಗಿ ಪ್ರಾಜಾಪತ್ಯ ಪುರುಷನ ಮಾತುಗಳನ್ನು ಹೀರುತ್ತಿದ್ದಾನೆ. " ಇದು ದಿವ್ಯ ಪಾಯಸ, ಮಾನವರಿಗೆ ದುರ್ಲಭ. ಏಕೆಂದರೆ ಇದು ದೇವನಿರ್ಮಿತ. ನಿನ್ನ ಸಂತಾನ ಪ್ರಾಪ್ತಿಗೆ ದೇವತೆಗಳು ಕರುಣಿಸಿದ ಕರುಣೆ ಇದು. ಕೇವಲ ಸಂತಾನವಲ್ಲ, ಇದರಿಂದ ನಿನಗೆ ಸಂಪತ್ತಿನ ವೃದ್ಧಿಯೂ ಆಗುತ್ತದೆ, ಆರೋಗ್ಯವೂ ಹೆಚ್ಚುತ್ತದೆ. ತೆಗೆದುಕೊ! ನಿನ್ನ ಪತ್ನಿಯರಿಗೆ ಕೊಡು ಇದನ್ನು, ಅವರು ಇದನ್ನು ಸ್ವೀಕರಿಸಲಿ. ಶುಭಂ ಅಸ್ತು ! "
 (ಇದಂತು ನೃಪ ಶಾರ್ದೂಲ ಪಾಯಸಂ ದೇವ ನಿರ್ಮಿತಂ
ಪ್ರಜಾಕರಾಂ ಗೃಹಾಣತ್ವಂ ಧನ್ಯಂ ಆರೋಗ್ಯ ವರ್ಧನಂ 
ಭಾರ್ಯಾಣಾಂ ಅನುರೂಪಾಣಾಂ ಅಶ್ನೀತಿ ಇತಿ ಪ್ರಯಚ್ಛ ವೈ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com