ಸಂತ ಮಹಾಂತ ಮಾರುತಿ !!

ಮನೆ ದೇವರು ಮರುತ್. ಅಂದರೆ ಸಪ್ತ ವಾಯುಸ್ಕಂಧಗಳ ಒಟ್ಟು ಹೆಸರು. ಮರುತ್ತುಗಳನ್ನು ಪೂಜಿಸುವ ಮನೆತನ ಅದು. ವಾಯುವಿನಲ್ಲಿ, ಎಂದರೆ ಮರುತ್ತಿನಲ್ಲಿ ಸಂಕಲ್ಪ ಮಾಡಿ ಅಂಜನೆ-ಕೇಸರಿಯರು ತಪೋ ನಿರತರಾಗಿದ್ದಾರೆ. ವ್ರತ ಮುಗಿದಿದೆ, ಸಂಕಲ್ಪ ಸಿದ್ಧಿಸಿದೆ.
ಕೇಸರಿ-ಅಂಜನೆ
ಕೇಸರಿ-ಅಂಜನೆ
(ಸುಪುತ್ರ, ವಿದ್ಯಾವಂತ, ವಿನೀತ, ಯೋಗ್ಯ ಮಗ ಬೇಕಿದ್ದರೆ ತಾಯಿ-ತಂದೆಗಳು ತಪಮಾಡಿ ಸಂಯೋಗಗೊಂಡರೆ ಫಲಿತವಾಗಿ ಅಪೇಕ್ಷಿತ ಅತ್ಯುತ್ತಮ ಮಗ ಜನಿಸುತ್ತಾನೆ. ಇದು ವಿವಾಹ ಸಂಸ್ಕಾರ ಆರಂಭಗೊಂಡಂದಿನಿಂದ ಅಸ್ತಿತ್ವಕ್ಕೆ ಬಂದ ನಿಯಮ. ಇಂದಿಗೂ ಅದು ಮಾನ್ಯ. ಅರ್ಥ ಮಾಡಿಕೊಳ್ಳುವವರಿಗೆ ನಿಷೇಕ ಪ್ರಸ್ಥವೆಂಬುದು ಗಂಡ ಹೆಂಡಿರ ಮಿಲನಕ್ಕೆ ಸಿದ್ಧತೆಯಲ್ಲ! ಅದು ತಪೋದೀಕ್ಷಾ ಸಮಯ!! ಆ ಮೂರು ದಿನಗಳೂ ಅವರು ಪಕ್ಕ ಪಕ್ಕದಲ್ಲೇ, ಏಕಾಂತದಲ್ಲಿದ್ದರೂ, ಸುಗಂಧ-ಸುಪುಷ್ಪ-ಸುಫಲಗಳಲ್ಲದೇ ಹಿರಿಯರ ಒಪ್ಪಿಗೆಯಿದ್ದರೂ, ಸಮ ವಯಸ್ಕರ ಕೆಣಕುವಿಕೆಯ ಪ್ರೋತ್ಸಾಹವಿದ್ದರೂ, ಯುವ ದೇಹಗಳ ತಾಪವಿದ್ದರೂ, ಮನಸ್ಸು ಕುದುರೆಯಂತೆ ಕುಣಿದರೂ, ಲೈಂಗಿಕ ಆಲೋಚನೆ ಅಪ್ಪಿದರೂ, ಪತಿ ಪತ್ನಿಯರು ಕನಿಷ್ಟ ಅಪ್ಪಿ ಮುದ್ದಾಡದೆಯೂ ಇರಬೇಕಾದ ಕತ್ತಿ ಮೇಲಿನ ಸಾಮು ಅದು! ಇಬ್ಬರ ಮಧ್ಯದಲ್ಲಿ ವಿಶೇಷ ಸಸ್ಯ ದಂಡವಿಟ್ಟು ಅದನ್ನು ಅತಿಕ್ರಮಿಸಕೂಡದೆಂದು ಶಾಸ್ತ್ರ. ಅರಿತವರು ಮಾನ್ಯ ಮಾಡಿದರೆ ತಕ್ಕ ಫಲ - ಲೇ )
ಮನೆ ದೇವರು ಮರುತ್. ಅಂದರೆ ಸಪ್ತ ವಾಯುಸ್ಕಂಧಗಳ ಒಟ್ಟು ಹೆಸರು. ಮರುತ್ತುಗಳನ್ನು ಪೂಜಿಸುವ ಮನೆತನ ಅದು. ವಾಯುವಿನಲ್ಲಿ, ಎಂದರೆ ಮರುತ್ತಿನಲ್ಲಿ ಸಂಕಲ್ಪ ಮಾಡಿ ಅಂಜನೆ-ಕೇಸರಿಯರು ತಪೋ ನಿರತರಾಗಿದ್ದಾರೆ. ವ್ರತ ಮುಗಿದಿದೆ, ಸಂಕಲ್ಪ ಸಿದ್ಧಿಸಿದೆ. 
ಆಕಾರವಿರದ ಗಾಳಿ ಆಜಾನಬಾಹುವಾದ, ಉಜ್ವಲ ಉಡುಪು ತೊಟ್ಟ, ಕಿರೀಟ ಧಾರಿ ವಾಯು ದೇವನಾಗಿ ಪ್ರತ್ಯಕ್ಷನಾಗಿ ವರವಿತ್ತ. " ಅಂಜನೆ, ನಿನ್ನ ಭಕ್ತಿಗೆ ಮೆಚ್ಚಿದೆ, ಶ್ರದ್ಧೆಗೆ ಬೆಲೆ ಕೊಟ್ಟೆ. ರಾಜಾ ಕೇಸರಿ, ಧರ್ಮದಿಂದ ರಾಜ್ಯಭಾರ ಮಾಡುತ್ತಿರುವ ನಿನ್ನ ಬಗ್ಗೆ, ನಿನ್ನ ಧರ್ಮ ಬುದ್ಧಿಯ ಬಗ್ಗೆ ನನಗೆ ಮಾನ್ಯತೆ ಇದೆ. ಮಗನಿಗಾಗಿ ಮನಸ್ಸು ತಪಿಸುತ್ತಿದೆ ನಿಮಗೆ. ಈಗದಕ್ಕೆ ಸುಮುಹೂರ್ತ ಸಮೀಪಿಸಿದೆ. ಇಂದಿಗೆ ಐದನೇ ದಿನ ಶನಿವಾರ. ಅಂದು ನೀವು ಸೇರಿ. ಅಂದೇ ಬೀಜಾಂಕುರವಾಗಿ ಮುಂದೆ ಸುಂದರಾಂಗನೊಬ್ಬ ಜನಿಸುವ ನಿಮಗೆ. ಅವನಿಂದ ಅವನ ಆಗಮನದ ವಾರ, ಅವನ ದಿನವೆಂದೇ ಗುರ್ತಿಸಲ್ಪಡುತ್ತದೆ. ಮುಂದೆ ಕ್ಷಿಪ್ರದಲ್ಲಿಯೇ  ಅವತರಿಸಲಿರುವ ವಿಷ್ಣುವಿಗೆ ಇವನು ಮೆಚ್ಚಿನ ಸ್ನೇಹಿತನಾಗುತ್ತಾನೆ; ದಾಸನಾಗುತ್ತಾನೆ; ಸಚಿವ ಸಮನಾಗುತ್ತಾನೆ. ಎಲ್ಲಕ್ಕಿನ್ನ ಹೆಚ್ಚಾಗಿ, ಸಂತನಾಗಿ ಯಾರಿಂದ ಏನನ್ನೂ ಸ್ವೀಕರಿಸದೇ, ತನ್ನೊಡೆಯನಿಂದಲೂ ಏನನ್ನೂ ಅಪೇಕ್ಷಿಸದೇ, ತಾನು ಮಾತ್ರ ತನ್ನ ಸ್ವಾಮಿಗೆ ಸರ್ವ ವಿಧದಲ್ಲಿಯೂ ಸಯಾಯ ಮಾಡಿ ಕೊನೆಗೆ ಆತನ ಸಹೋದರನೆಂಬ ಹೆಗ್ಗಳಿಕೆಗೆ ಪಾತ್ರನಾಗುತ್ತಾನೆ. 
ತಾಯಿಯ ಕಡೆಯಿಂದ ಆಂಜನೇಯನೆಂಬ ಹೆಸರು ಪ್ರಸಿದ್ಧವಾಗಲಿ. ತಂದೆಯಿಂದ ಕೇಸರಿಕುಮಾರನೆಂಬ ವ್ಯಾವಹಾರಿಕ ನಾಮವೂ ಜನಜನಿತವಾಗಲಿ. " ಸ್ತಂಭೀಭೂತರಾಗಿ ವಾಯುವಿನ ನುಡಿಗಳನ್ನು ಆಲಿಸಿದ ದಂಪತಿಗಳು ಸಾಷ್ಟಾಂಗವೆರಗಿ ತಮ್ಮ ಕೃತಙ್ಞತಾ ಸಮರ್ಪಣೆಯ ಕೊನೆಗೆ ಪ್ರಾರ್ಥಿಸಿದರು, " ಸ್ವಾಮಿ, ನಿನ್ನ ಅನುಗ್ರಹದಿಂದ ನಮ್ಮ ವಂಶೋದ್ಧಾರಕನ ಜನನವಾಗುವುದರಿಂದ ದಯೆಯಿಟ್ಟು ನಿನ್ನ ಹೆಸರಿನಿಂದಲೂ ಅವನು ಪ್ರಸಿದ್ಧನಾಗಲಿ. " . ಮುಗುಳ್ನಕ್ಕು ವಾಯು ಹೇಳಿದ, " ಆಯಿತು. ಸಾಮಾನ್ಯಾರ್ಥದಲ್ಲಿ ನಾನು ವಾಯುವಾದ್ದರಿಂದ ಇವನು ವಾಯುಪುತ್ರನೆಂದೂ, ವಿಶೇಷವಾಗಿ ಮರುತ್ ಆದ್ದರಿಂದ ಮರುತ್ ಮಗನೆಂದು, ಎಂದರೆ ಮಾರುತಿಯೆಂದೂ ವಿಖ್ಯಾತನಾಗಲಿ. "
(ಒಟ್ಟಿನಲ್ಲಿ ಆಂಜನೇಯ , ಕೇಸರೀ ನಂದನ , ವಾಯು ಪುತ್ರ , ಹಾಗೂ ಮಾರುತಿ ಎಂಬ ಹೆಸರುಗಳೊಟ್ಟಿಗೆ ದೇವೇಂದ್ರನೇ ಇತ್ತ ಐದನೆಯ ಹೆಸರನ್ನು ಹೇಳುವ ಮುನ್ನ, ಎರಡು ಸ್ಪಷ್ಟೀಕರಣ ನೀಡಿಬಿಡೋಣ.
ಮಾರುತಿಯ ಮಾತೃಭೂಮಿಯನ್ನು ಕುರಿತು ವಿದ್ವದ್ವಲಯದಲ್ಲಿ ತುಸು ಬಿಸಿ ಚರ್ಚೆ ನೆಡೆದಿದೆ. ಆಂಧ್ರ ಪಂಡಿತರು" ಈಗಿನ ತಿರುಮಲೆಗೆ ತ್ರೇತಾಯುಗದಲ್ಲಿ ಅಂಜನಾದ್ರಿಯೆಂದು ಕರೆಯುತ್ತಿದ್ದರು. ಕಾರಣ ಅಂಜನೆ ತಪಸ್ಸಿಗೆ ಕುಳಿತಿದ್ದು ಅಲ್ಲಿ. ಅಲ್ಲೇ ಆಕೆಗೆ ವರ ಪ್ರಾಪ್ತಿ. ಅದು ಕಾರಣ ಆಂಜನೇಯನ ಅವತಾರವಾದದ್ದು ಅಲ್ಲಿ" ಎಂದು ಗುಡುಗಿದರೆ, ಕನ್ನಡ ವಿದ್ವಾಂಸರು" ಕಿಷ್ಕಿಂಧೆ ಎಂಬುದು ರಾಮನಗರದ ಸುತ್ತ ಇತ್ತು, ಎಂದು ಇತಿಹಾಸ ತಙ್ಞರು ಹೇಳುತ್ತಾರಾಗಿ, ನಮ್ಮ ಕರ್ನಾಟಕದಲ್ಲೇ ವಾಯುಪುತ್ರ ಉಸಿರಾಡಿದ್ದು" , ಎಂದು ಎದೆಯುಬ್ಬಿಸಿ ಹೇಳುತ್ತಾರೆ. ಉತ್ತರ ಭಾರತದವರೂ ಇಂತಹದ್ದೇ ಸಾಕ್ಷ್ಯವಿಟ್ಟುಕೊಂಡು ಮೇಜು ಕುಟ್ಟುತ್ತಾರೆ. ಇರಲಿ. ಭಾರತೀಯರೆಲ್ಲರೂ ಆ ಕೇಸರಿ ಕುಮಾರನ ಭಕ್ತರೇ. ಎಲ್ಲರಿಗೂ ಅವನೆಂದರೆ ವಕ್ಷ ವಿಕಾಸ ಸಹಜ. ಶ್ರೀರಾಮರ ದೇವಸ್ಥಾನಗಳು ಇರದ ಊರೇ ಇಲ್ಲ. ಅಕಸ್ಮಾತ್ ದಾಶರಥಿಯ ದೇಗುಲವಿರದಿದ್ದರೂ ಇರಬಹುದೇನೋ, ಮಾರುತಿಯ ಮಂದಿರವಿರದ ಹಳ್ಳಿಯೂ ಇಲ್ಲ. ಹೀಗಾಗಿ ಭಾರತೀಯರೆಲ್ಲರಿಗೂ ವಾಯು ಕುಮಾರನನ್ನು ತಮ್ಮವನೆಂದೇ , ತಮ್ಮಲ್ಲಿ ಹುಟ್ಟಿದನೆಂದೇ ಹೇಳಿ ಹಿಗ್ಗುವ ಮನಸ್ಥಿತಿ. ಏನಿದ್ದರೂ ಶ್ರೀರಾಮಾಯಣದ ಪ್ರಕಾರ ಆತನ ಊರು; ಪರ್ವತ ( ! ) ಮೇರುಗಿರಿ. ಮುಂದೊಮ್ಮೆ ಅಗಸ್ತ್ಯರು ಕೇಸರೀಪುತ್ರನ ಹಿನ್ನೆಲೆ ಹೇಳುವಾಗ ಇದನ್ನೇ ಹೇಳುತ್ತಾರೆ, " ಸೂರ್ಯನಿಂದ ವರ ಪಡೆದ ಪರ್ವತವೆಂದರೆ ಮೇರು ಪರ್ವತ. ಈ ಮಾರುತಿಯ ತಂದೆ ಅಲ್ಲಿನ ರಾಜ್ಯಕ್ಕೆ ರಾಜ. ಆತನೇ ಕೇಸರಿ. "
(ಸೂರ್ಯ ದತ್ತ ವರಃ ಸ್ವರ್ಣಃ ಸುಮೇರುರ್ನಾಮ ಪರ್ವತಃ
ಯತ್ರ ರಾಜ್ಯಂ ಪ್ರಶಾಸ್ತಸ್ಯ ಕೇಸರಿ ನಾಮ ವೈ ಪಿತಾ)
ಈ ಹೇಮಾದ್ರಿಯನ್ನು ಕಂಡವರಾರು? ಈ ಚಿನ್ನದ ಬೆಟ್ಟ ಇರುವ ಜಾಗಕ್ಕೆ ಅಥವ ರಾಜ್ಯಕ್ಕೆ ಭೇಟಿಯಿತ್ತವರಾರು? ಅಂಜನೆಯ ತಪೋ ಕ್ಷೇತ್ರ ಶ್ರೀನಿವಾಸನ ಬೆಟ್ಟವೇ ಇರಬಹುದು, ಆಂಜನೇಯನ ಕರ್ಮಕ್ಷೇತ್ರ ಕರ್ನಾಟಕವೂ ಇರಬಹುದು, ಆದರೆ ಆತನ ಜನ್ಮ ಜಾಗ ಮಾತ್ರ ಹೇಮಾದ್ರಿ!!!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com