ಹನುಮ ನಾಮ ಪ್ರಾಪ್ತಿ !!

ಕಡಿದಾದ ಪರ್ವತ ಹತ್ತುತ್ತಿದ್ದಾನೆ ಅಂಜನಾ ಪುತ್ರ. ದಾರಿಯಲ್ಲಿ ಸಿಕ್ಕ ಯಾವ ಯಾವುದೋ ಹಣ್ಣುಗಳನ್ನು ತಿಂದ. ಝರಿಯಲ್ಲಿ ನೀರೂ ಕುಡಿದ.
ಹನುಮ ನಾಮ ಪ್ರಾಪ್ತಿ !!
ಕಡಿದಾದ ಪರ್ವತ ಹತ್ತುತ್ತಿದ್ದಾನೆ ಅಂಜನಾ ಪುತ್ರ. ದಾರಿಯಲ್ಲಿ ಸಿಕ್ಕ ಯಾವ ಯಾವುದೋ ಹಣ್ಣುಗಳನ್ನು ತಿಂದ. ಝರಿಯಲ್ಲಿ ನೀರೂ ಕುಡಿದ. ಹೊಟ್ಟೆಯೂ ತುಂಬಿತು. ಹಾಗೇ ಹಿಂದೆ ಬರಲೂ ಬಹುದಿತ್ತು. ಇಲ್ಲ ಇಲ್ಲ, ಗುರಿ ಸೂರ್ಯ ಗುಡಿಯ ಹಣ್ಣು.‘ ತಿಂದರೆ ಅದನ್ನು ತಿನ್ನ ಬೇಕು. ಅದು ಸಿಗುವ ತನಕ ಹಿಂದಿರುಗುವ ಮಾತೇ ಇಲ್ಲ! ಅದೆಷ್ಟೇ ಕಷ್ಟವಿರಲಿ. ಅದನ್ನೇ ತಿನ್ನಬೇಕು. ’ಅದೆಷ್ಟು ಎತ್ತರವೋ. ಹತ್ತಿ ಹತ್ತಿ ಕೆಳಗೆ ನೋಡಿದರೆ ತಮ್ಮ ಆಶ್ರಮ ಎಲ್ಲೋ ಪುಟ್ಟ ವೃತ್ತದಂತೆ ಕಾಣುತ್ತದೆ. 
ತಮ್ಮ ರಾಜ್ಯ ತಾನು ಓಡಾಡಿದಾಗ ದೊಡ್ಡದಾಗಿ ಕಂಡಿದ್ದು, ಈಗ ಪುಟಾಣಿ ಮನೆಯಂತೆ ಕಾಣುತ್ತಿದೆ ಹತ್ತಿದ. ಹತ್ತಿದ. ಮತ್ತೂ ಹತ್ತಿದ. ಅಷ್ಟೇನೂ ಕಷ್ಟವೆನಿಸಲಿಲ್ಲ. ಇನ್ನೇನು ತುದಿ ಕಾಣುತ್ತಿದ್ದಂತೆಯೇ ಸಾಲು ಸಾಲು ಹೂ ಗಿಡಗಳು, ಏನೋ ದಿವ್ಯ ಪರಿಮಳ, ಮಂದಾನಿಲ, ಮೃದುಸ್ಪರ್ಶ. ಮುಂದೆ ಏನಿದು! ಎಂಟಾಳೆತ್ತರದ ಚಿನ್ನದ ಕೋಟೆ. ಓಹ್! ಅದರಲ್ಲೊಂದು ಬಾಗಿಲು. ಅದರ ಅಕ್ಕಪಕ್ಕದಲ್ಲಿ ಸಿಪಾಯಿಗಳು. ಅವರೂ ಬೆಳಗುತ್ತಿದ್ದಾರೆ. ಆದರೆ ತಮ್ಮ ಅರಮನೆಯಂತಹವರಲ್ಲ. ಒಬ್ಬ ಈಟಿಯನ್ನಡ್ಡ ಹಿಡಿದು, " ಯಾರು ನೀನು? ಇದು ದೇವ ಭೂಮಿ, ಇದರೊಳಗೆ ಮನುಷ್ಯರು ಬರುವಂತಿಲ್ಲ. " ವಾಯುಪುತ್ರ ನೇರವಾಗಿ ಹೇಳಿದ, " ತೋಟದಲ್ಲಿ ಹಣ್ಣುಗಳಿದೆಯಂತಪ್ಪ, ಅದಕ್ಕಾಗಿ ಹೋಗ್ತಾ ಇದೀನಿ. " .ಮಂದಹಾಸ ಮರೆಯಾಗಿ ಗಡುಸು ಧ್ವನಿಯಲ್ಲಿ ಹೇಳಿದ ಆ ಭಟ; " ಬಾಯಿ ಮುಚ್ಚು! ವಾಪಸ್ ಹೋಗು. ಇಲ್ದೇ ಇದ್ದರೇ.... " ಕೈ ಎತ್ತಿದ. ಆ ಸೇವಕನ ಕೈ ಹಿಡಿದು ತಿರುಗಿಸುತ್ತ, " ಇಲ್ಲದಿದ್ದರೆ? " ಎಂದು ಹೇಳಿ ನೂಕಿದ ಮಾರುತಿ. ಅವ ಮಾರು ದೂರ ಹೋಗಿ ಬಿದ್ದ. 
ಇನ್ನೊಬ್ಬನಿಗೂ ಅದೇ ಗತಿ. ಬಾಲಾಂಜನೇಯನಿಗೂ ಆಶ್ಚರ್ಯ! ’ ತನಗೆ ಈ ಶಕ್ತಿ ಎಲ್ಲಿಂದ ಬಂತು? ’ ಹುಟ್ಟಿನಿಂದಲೇ ಇತ್ತದು! ಅದು ವಾಯುವಿನ ಅನುಗ್ರಹ!! ಇಲ್ಲಿವರೆಗೆ ಅದರ ಪ್ರಯೋಗವಾಗಿರಲಿಲ್ಲ. ಅಷ್ಟೇ ! ಓಡಿ ಹೋಗಿದ್ದ ಕಾವಲುಗಾರರು ಒಂದು ಪಡೆಯನ್ನೇ ತಂದರು. ನಿಮಿಷದಲ್ಲಿ ಸೋತು ಓಡಿದರವರೆಲ್ಲ! ಒಳಗೆ ಬಂದ ಮಾರುತಿ. ಸಿಕ್ಕ ಸಿಕ್ಕ ಹಣ್ಣುಗಳನ್ನು ತಿಂದ. ಎಂತಹ ರುಚಿ! ಎಂತಹ ಗಂಧ !! ಎಂತಹ ಬಣ್ಣ !! ಅಮ್ಮ ಎಂದೂ ಇಂತಹ ಹಣ್ಣುಗಳನ್ನು ಕೊಟ್ಟೇ ಇರಲಿಲ್ಲ. ಏನೋ ಗದ್ದಲ! ತಿರುಗಿದ. ದೊಡ್ದ ಸೈನ್ಯ!! ಇಂದ್ರನಿಗೆ ಹೋದ ದೂರಿನ ಹಿಂದೆ ಅವನೇ ಬಂದ; ಬಾಲಕನನ್ನೂ ಕಂಡ. ಮಾತನಾಡಬಾರದೆ? ಹಣ್ಣು ತಾನೇ ಕೊಡಬಾರದೆ? ಎಂದು ತಾನೆ ದೇವೇಂದ್ರ ರಾಜನಿಗೆ ಯೋಗ್ಯವಾಗಿ ನಡೆದಿದ್ದಾನೆ? ಇರುವೆಯ ಮೇಲೆ ಒನಕೆ ಬೀಸಿದಂತೆ ಹೊಡೆದೇ ಬಿಟ್ಟ! ಬೀಸಿದ ಕೈನ ವಜ್ರಾಯುಧ ಮಾರುತಿಯ ಮುಖಕ್ಕೆ, ವಿಶೇಷವಾಗಿ ದವಡೆಗೆ ಬಡಿಯಿತು. ಮೂರ್ಛಿತನಾದ ಮಾರುತಿ ಕೆಳಗೆ ಉರುಳಲಾರಂಭಿಸಿದ. 
ಇದನ್ನೆಲ್ಲ ನೋಡುತ್ತಿದ್ದ ವಾಯು ಮಗ ಬೀಳದಂತೆ ಎತ್ತಿಕೊಂಡು, ಗವಿಯೊಂದರೊಳಹೊಕ್ಕ. ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ದುಃಖಿತನಾದ. ವಾಯುವಿನ ಚಿತ್ತ ಕ್ಷೋಭೆಗೊಂಡದ್ದರಿಂದ ಅವನ ಸಹಜ ಸ್ಥಿತಿ ಕ್ಷೀಣಿಸಿ, ವಾಯು ಸಂಚಾರ ಕಡಿಮೆಯಾಗಿ, ಪ್ರಾಣಿಗಳಿಗೆ, ದೇವತೆಗಳಿಗೆ ಅವಶ್ಯ ಗಾಳಿಯ ಪೂರೈಕೆಯಾಗದೆ ಕಷ್ಟಕ್ಕಿಟ್ಟುಕೊಂಡಿತು. ಹೀಗೇ ಮುಂದುವರಿದರೆ ಆಮ್ಲಜನಕ ಸಿಗದೇ ಉಸಿರಾಟ ನಿಂತು ಬದುಕುಳಿಯುವುದೆಂತು? ದೇವತೆಗಳೆಲ್ಲ ಕಂಗಾಲಾಗಿ ಬ್ರಹ್ಮನ ಮುಂದೆ ಕೈಜೋಡಿಸಿದರು. ನಡೆದ ಸಂಗತಿ ಹೇಳಿ ಎಲ್ಲರನ್ನೂ ವಾಯುವಿನ ಮುಂದೆ ಹಾಜರು ಪಡಿಸಿದ ನಾಲ್ಮೊಗ. 
ವಿರಿಂಚಿಯನ್ನು ಕಾಣುತ್ತಿದ್ದಂತೆಯೇ ಎದ್ದು ನಮಸ್ಕರಿಸಿದ ವಾಯುವನ್ನು ಆಶೀರ್ವದಿಸಿ ವಾಯುಪುತ್ರನನ್ನು ನೇವರಿಸಿದ ಬ್ರಹ್ಮ. ಎದ್ದು ಕುಳಿತ ಆಂಜನೇಯನಿಗೆ ಸೃಷ್ಟಿಕರ್ತನ ಹಸ್ತ ಸ್ಪರ್ಶದಿಂದ ಹಸಿವೂ ಇಲ್ಲ; ನೋವೂ ಇಲ್ಲ. "ವಾಯುವಿಗೆ ಸಂತೋಷವನ್ನುಂಟುಮಾಡಲು ನೀವೆಲ್ಲರೂ ವರವನ್ನು ಕೊಡಿರಿ" ಎಂಬ ಬ್ರಹ್ಮಾಙ್ಞೆಗೆ ಮಣಿದು ಮುಂದೆ ಬಂದಿದ್ದು ಮಹೇಂದ್ರನೇ. "ನನ್ನ ವಜ್ರಾಯುಧದ ಪೆಟ್ಟಿಗೆ ನಿನ್ನ ದವಡೆ (ಹನು) ಒಡೆಯಿತಾಗಿ ಇನ್ನು ಮುಂದೆ ನಿನ್ನ ಹೆಸರು ಹನುಮಂತನೆಂದಾಗಲಿ. ನನ್ನ ವಜ್ರಾಯುಧ ನಿನಗೇನೂ ಹಾನಿ ಮಾಡದಿರಲಿ.  
(ಮತ್ ಕರೋತ್ ಸೃಷ್ಟ ವಜ್ರೇಣ ಹನುರಸ್ಯ ಯಥಾ ಹತಃ
ನಾಮ್ನಾ ವೈ ಕಪಿ ಶಾರ್ದೂಲೋ ಭವಿತಾ ಹನುಮಾನ್ ಇತಿ
ಇತಃ ಪ್ರಭೃತಿ ವಜ್ರಸ್ಯ ಮಮ ಅವಧ್ಯೋ ಭವಿಷ್ಯತಿ)
(ಇದಕ್ಕೂ ಕೆಲ ಮಡಿ ಮಂದಿಯಿಂದ ಕೆಂಪ ಬಾವುಟ. ತಮ್ಮ ನೆಚ್ಚಿನ ಹನುಮಂತನಿಗೆ ಇಂದ್ರ ಹೊಡೆಯುವುದೇನು? ಅವರಿದನ್ನು ಅರಗಿಸಿಕೊಳ್ಳಲೇ ಆರರು. ಏನು ಮಾಡೋಣ, ಮುಂದೆ ರಾವಣನೇ ಚಚ್ಚುತ್ತಾನೆ ಹನುಮನನ್ನು ಯುದ್ಧಕಾಂಡದಲ್ಲಿ. ಇಂದ್ರಜಿತನಿಗೆ ರಾಮಲಕ್ಷ್ಮಣರೇ ಮೂರ್ಛಿತರಾಗುವಾಗ, ರಾಮದಾಸ ಹೀಗೊಮ್ಮೆ ಪರಾಜಿತನಾದರೆ ಆತನ ಗೌರವಕ್ಕೆ ಯಾವ ಭಂಗವೂ ಇಲ್ಲ. ಅಷ್ಟೇ ಅಲ್ಲ, ಹನುಮನ ಎತ್ತರ ಇದರ ಮೇಲಲ್ಲ ನಿರ್ಣಯವಾಗುವುದು. ಇಷ್ಟಕ್ಕೂ ವಾಲ್ಮೀಕಿಗಳು ಹೇಳಿದ್ದನ್ನು ತಾನೆ ನಾವು ಕೇಳಬೇಕು? ಅವರ ಸಾಲುಗಳನ್ನು ಹಿಗ್ಗಿಸಿ, ಮಾತುಗಳನ್ನು ಬಗ್ಗಿಸಿ ಪದಗಳನ್ನು ಒಡೆದು, ಬೆವರು ಸುರಿಸಿ ಇಷ್ಟಾರ್ಥ ಹೊರಡಿಸಬೇಕಿಲ್ಲವಷ್ಟೇ - ಲೇ )
ಇಂದ್ರನನ್ನನುಸರಿಸಿ ಸೂರ್ಯ ಶಕ್ತಿ ಮೂರ್ತೀಭವಿಸಿ ಬಂದು ನುಡಿಯಿತು, " ಇವನಿಗೆ ನನ್ನ ತೇಜಸ್ಸಿನ ನೂರನೆಯ ಒಂದು ಭಾಗವನ್ನು ಕೊಡುವೆ. ಯುವಕನಾದಾಗ ವ್ಯಾಕರಣ ಶಾಸ್ತ್ರವನ್ನು ಹೇಳಿಕೊಡುವೆ. ಅದರಿಂದ ಇವನು ವಾಕ್ ವಿಶಾರದನಾಗುತ್ತಾನೆ. 
(ತೇಜಸಃ ಅಸ್ಯ ಮದೀಯಸ್ಯ ದದಾಮಿ ಶತಿಕಾಂ ಕಲಾಂ
ಯದಾತು ಶಾಸ್ತ್ರಾಣಿ ಅಧ್ಯೇತುಂ ಶಕ್ತಿರಸ್ಯ ಭವಿಷ್ಯತಿ
ತದಾಸ್ಯ ಶಾಸ್ತ್ರಂ ದಾಸ್ಯಾಮಿ ಏನ ವಾಗ್ಮೀ ಭವಿಷ್ಯತಿ)
ಸೂರ್ಯ ವರದಿಂದಲೂ ನವವ್ಯಾಕರಣ ಪಂಡಿತನೆಂದು ಪ್ರಖ್ಯಾತನಾದ ಹನುಮ. ಒಟ್ಟಿನಲ್ಲಿ ದೇವತೆಗಳೆಲ್ಲ ಬಂದು ತಮ್ಮ ಆಯುಧಗಳು ಯಾವುವೂ ಆಂಜನೇಯನನ್ನು ಏನೂ ಮಾಡಲಾರವೆಂದು ಅಭಯವಿತ್ತದ್ದರಿಂದ ಇನ್ನು ಹನುಮನಿಗೆ, ಅವನ ಸಾಹಸಕ್ಕೆ ಅಡೆಯುಂಟೆ, ತಡೆಯುಂಟೇ? 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com