ದ್ವಿತೀಯ ದಾಶರಥಿಯ ದಿವ್ಯಾಗಮನ

ವಸಿಷ್ಠರಿಗೆ ಆಸೆ ಮಗುವನ್ನು ಮುಟ್ಟಲು. ಅವರಿಗೆ ಕೊಟ್ಟ ದಶರಥ. ಮುಟ್ಟುತ್ತಿದ್ದಂತೆಯೇ ಆನಂದದ ರೋಮಾಂಚನ ಹರಿಯಿತು ಮೈ ತುಂಬ. ಕಣ್ಣ ಮುಂದೆ ಕ್ಷೀರ ಸಾಗರ. ಅಲ್ಲಿ ಮಲಗಿರುವ ನಾರಾಯಣ.
ದ್ವಿತೀಯ ದಾಶರಥಿಯ  ದಿವ್ಯಾಗಮನ
ದ್ವಿತೀಯ ದಾಶರಥಿಯ ದಿವ್ಯಾಗಮನ
ಕೈ ಚಾಚಿದ ದಶರಥನ ಬೊಗಸೆ ತುಂಬಿಸಿದಳು ಪಟ್ಟದ ರಾಣಿ. ಬಟ್ಟಲು ಕಂಗಳು, ನೀಳ ನಾಸಿಕ, ತುಂಬುಗೆನ್ನೆ, ಮಧ್ಯದಲ್ಲಿ ಗುಳಿ, ತುಟಿಗಳೋ ಆರಕ್ತ, ಪುಟ್ಟ ಚೂಪು ಗಲ್ಲ, ಕೈಕಾಲು ಆಡಿಸುತ್ತ ನಗುತ್ತಿದೆ. ವಸಿಷ್ಠರಿಗೆ ಆಸೆ ಮಗುವನ್ನು ಮುಟ್ಟಲು. ಅವರಿಗೆ ಕೊಟ್ಟ ದಶರಥ. ಮುಟ್ಟುತ್ತಿದ್ದಂತೆಯೇ ಆನಂದದ ರೋಮಾಂಚನ ಹರಿಯಿತು ಮೈ ತುಂಬ. ಕಣ್ಣ ಮುಂದೆ ಕ್ಷೀರ ಸಾಗರ. ಅಲ್ಲಿ ಮಲಗಿರುವ ನಾರಾಯಣ. ‘ಅದೇ ಮುಖ ಈ ಶಿಶುವಿನದು. ಓಹ್ ! ಇವ ನಮ್ಮಂಥ ಸಾಮಾನ್ಯನಲ್ಲ. ಇದು ಪುರುಷೋತ್ತಮ ಶಕ್ತಿ. ಇವನೇ ಶ್ರೀಮನ್ನಾರಾಯಣ. 
(ಪ್ರೆದ್ಯಮಾನೇ ಜಗನ್ನಾಥಂ ಸರ್ವ ಲೋಕ ನಮಸ್ಕೃತಂ)
ಆದರೆ ಇದನ್ನು ಹೇಳಿದರೆ ತಾನೇ ದಶರಥನಿಗೇನು ಅರ್ಥವಾಗುತ್ತದೆ? ಅಥವ ಗೊತ್ತಾಗಿ ವಾತ್ಸಲ್ಯದ ಬದಲು ಭಕ್ತಿ ಜಾಗೃತವಾಗಿ ತಂದೆಯ ಸಲುಗೆ, ಪ್ರೀತಿಗೆ ಅಡ್ಡಿಯಾಗುತ್ತದೆಯೇ? ಹೇಳುವುದೇ ಬೇಡ. ’ ಮಗು ಅವರ ಗಡ್ಡ ಹಿಡಿದೆಳೆದಿದೆ. ವಾಸ್ತವಕ್ಕೆ ಬಂದ ಅವರು ಮಗುವಿನ ಪುಟ್ಟ ಪಾದಗಳನ್ನು ಅವರ ಹಣೆಗೆ ಒತ್ತಿ ಹೇಳಿದರು; " ನೀನು ಧರ್ಮ ರಾಮ, ತಾತ್ವಿಕ ರಾಮ, ಅಯೋಧ್ಯಾ ರಾಮ, ಪುರುಷೋತ್ತಮ ರಾಮ. " 
                                         *************
ಮನೆ ಮನೆಗೂ ಸಿಹಿ, ವಸ್ತ್ರ, ಹಣ್ಣು, ಧಾನ್ಯ... ಇನ್ನೂ ಏನೇನೋ ಉಡುಗೊರೆಗಳು. " ರಾಜರಿಗೆ ಮಗನಂತೆ! ತುಂಬ ಸುಂದರವಂತೆ! ಹೆಸರು ರಾಮರಂತೆ! ". ಹುಚ್ಚೆದ್ದ ಜನ ಅರಮನೆಯ ಮುಂದೆ ಜಮಾಯಿಸಿದರು. ಪ್ರಜೆಗಳಿಗೆ ರಾಜನೆಂದರೆ ಪ್ರಾಣ. ಅವರ ಅನುಭವದಲ್ಲಿ ಎಂದೂ ರಾಜರಿಂದ ಒತ್ತಾಯದ ತೆರಿಗೆ ಇಲ್ಲ, ಕ್ಷಾಮದ ಹೆಸರೇ ಕೇಳಿಲ್ಲ. ಬಲಿಷ್ಠರಿಂದ ಎಂದೂ ದುರ್ಬಲರು ಹಿಂಸೆಗೆ ಗುರಿಯಾಗುತ್ತಿರಲಿಲ್ಲ. ಎಂದೂ ನ್ಯಾಯದಾನ ನಿಧಾನವಾಗುತ್ತಿರಲಿಲ್ಲ. ಅಪರಾಧಿಗೆ ಮಾತ್ರ ಉಗ್ರ ದಂಡನೆ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾರಾಗೃಹಗಳೆಲ್ಲ ಖಾಲಿ. ತಪ್ಪು ಮಾಡುವವರೇ ವಿರಳ. ತಮ್ಮನ್ನು ಮಕ್ಕಳಂತೆ ಕಾಣುತ್ತಿದ್ದ ಮಹಾರಾಜನಿಗೆ ಈಗ ಪುತ್ರೋತ್ಸವ. ಜನರ ಜೈಕಾರ ಕೇಳಿ ಬಿಸಿಲುಮಚ್ಚಿಗೆ ಬಂದ ರಾಜ. ಅವನನ್ನು ಕಂಡು ಉಬ್ಬಿದರು ಪ್ರಜೆಗಳು. ಕುಣಿಯುವವರೆಷ್ಟೋ, ಕೂಗುವವರೆಷ್ಟೋ, ಹಾಡು ಹೇಳುವವರೆಷ್ಟೋ. ಸುಮಂತ್ರ ಬಂದು ರಾಜನ ಕಿವಿಯಲ್ಲಿ ಉಸುರಿದ; " ಪ್ರಜೆಗಳಿಗೆ ತಾವು ರಾಜ ಕುಮಾರನನ್ನು ತೋರಿಸಿದರೆ... " . ಗ್ರಹಿಸಿದ ದಶರಥ ಮಗನನ್ನು ಕರೆತರಲು ಆದೇಶಿಸಿದ. ಬೆಚ್ಚನೆಯ ವಸ್ತ್ರದಲ್ಲಿ ಸುತ್ತಿ ಕೊಟ್ಟರು ಶಿಶು ರಾಮರನ್ನು. ಚೈತನ್ಯದ ಬುಗ್ಗೆಯನ್ನೆತ್ತಿ ರಾಜ ಜನರ ಮುಂದೆ ಹಿಡಿದ; ನುಡಿದ. " ನೋಡಿರಿ ನಿಮ್ಮ ಮುಂದಿನ ಮಹಾರಾಜರನ್ನು! " ಜನರು ಹುಚ್ಚೆದ್ದರು, ಧ್ವಜ ಹಾರಿಸಿದರು, ಎಗರೆಗರಿ ಹಾರಿದರು, ರಘು ವಂಶವನ್ನು ಹಾಡತೊಡಗಿದರು, ಹಿಂದಿನ ರಾಜರುಗಳ ವಿಶೇಷವನ್ನು ಪರಸ್ಪರ ಹಂಚಿಕೊಂಡರು. " ಎಲ್ಲರಿಗೂ ಇಂದು ರಾಜಭವನದಲ್ಲಿ ಸಂತರ್ಪಣೆ! ಎಲ್ಲರೂ ಊಟ ಮಾಡಿಯೇ ಹೋಗಿ! " ಸುಮಂತ್ರ ಹೇಳಿದ್ದನ್ನು ನೂರಾರು ಮಂದಿ ಎಲ್ಲರಿಗೂ ತಿಳಿಯುವಂತೆ ಮತ್ತೆ ಮತ್ತೆ ಹೇಳಿದರು.
                                          ************
ಅಂದು ದಶರಥನಿಗೆ ಉಸಿರಾಡಲೂ ಬಿಡುವಿಲ್ಲ. ನೂರಾರು ಮಂದಿ ಪುರ ಪ್ರಮುಖರು ಬರುತ್ತಿದ್ದಾರೆ. ಶುಭಾಶಯ ಹೇಳುತ್ತಿದ್ದಾರೆ. ಘಂಟೆಗೊಮ್ಮೆ ಕೌಸಲ್ಯೆ ಮನೆಗೆ ಬರುತ್ತಿದ್ದಾನೆ. ಮಗುವನ್ನು ನೋಡುತ್ತಾನೆ. ಮುದ್ದಾಡುತ್ತಾನೆ. ಮತ್ತೆ ಹೋಗುತ್ತಾನೆ. ಮತ್ತೆ ಬರುತ್ತಾನೆ. ಅಂದು ಇಡೀ ರಾತ್ರಿ ಮಗುವಿನ ಪಕ್ಕದಲ್ಲೇ, ರಾಮರನ್ನು ತೊಡೆಯ ಮೇಲೆ ಮಲಗಿಸಿಕೊಂಡೇ ಕಳೆದುಬಿಟ್ಟ. 
ಬೆಳಗಿನ ಝಾವದಲ್ಲಿ ಫಕ್ಕನೆ ಹೊಳೆಯಿತು. " ಹೌದಲ್ಲ, ಪ್ರಿಯ ಮಡದಿ, ಮುದ್ದಿನ ಮಡದಿ, ಕಾಮುಕ ಮಡದಿ, ಸುಂದರ ಮಡದಿ ಕೈಕೆ! ಅವಳಿಗೆ ತೋರಿಸಬೇಕಲ್ಲವೆ? ನೆನ್ನೆ ಇಡೀ ದಿವಸ ಅವಳನ್ನು ಮರೆತುಬಿಟ್ಟೆನಲ್ಲ! ರಾಮರನ್ನೆತ್ತಿಕೊಂಡು ಕೈಕೆಯ ಕೋಣೆಯ ಒಳಹೊಕ್ಕ. ಬಳಲಿಕೆಯೇ ಕಾಣದ ಚಂದ್ರಮುಖ, ಕೆಂಪು ಸೀರೆಯಲ್ಲಿ ಸಾಕರ್ಷಕೆ, ಏನೋ ಹೇಳಲು ಇಬ್ಬರೂ ಬಾಯಿ ತೆರೆದರು, ಇಬ್ಬರೂ ಸುಮ್ಮನಾದರು. ಕಾರಣ ಇಬ್ಬರೂ ಪರಸ್ಪರರ ಕೈಗಳನ್ನು ನೋಡಿದರು. ಇಬ್ಬರ ಬೊಗಸೆಗಳಲ್ಲೂ ನವಜಾತ ಶಿಶುಗಳು. " ಯಾವಾಗ? " ರಾಮರ ಆಗಮನದಿಂದ ಉಳಿದೆಲ್ಲವನ್ನೂ ಮರೆತಿದ್ದ ದಶರಥ, ಕೈಕೆಯ ಬಸುರನ್ನೂ ಮರೆತಿದ್ದ! " ಈಗ ಕೆಲವೇ ಕ್ಷಣಗಳ ಹಿಂದೆ." ಹೇಳಿದಳು ದಾಸಿ. ಇಬ್ಬರೂ ಮಕ್ಕಳನ್ನು ಬದಲಿಸಿಕೊಂಡರು.
ರಾಮರನ್ನು ಕಾಣುತ್ತಿದ್ದಂತೆಯೇ ಎದೆ ಸ್ರವಿಸಿತು ಕೈಕೆಗೆ. ಏನೋ ಮಾತೃತ್ವ ತುಂಬಿದಂತೆ. ಯಾವುದೇ ಸಂದೇಹವಿಲ್ಲದೇ ಆ ಕ್ಷಣದಲ್ಲೇ ಅವಳ ಮಾತೃ ಹೃದಯ ಹೇಳಿಬಿಟ್ಟಿತು; ‘ ಇವನನ್ನು ತಬ್ಬಿದಾಗಲೂ ನನ್ನ ಮಗನನ್ನು ತಬ್ಬಿದಂತೇ ಇದೆ. ವ್ಯತ್ಯಾಸವೇ ಇಲ್ಲ. ತಾಯಿತನ ಪೂರ್ಣವಾದಂತೆ ಎನಿಸುತ್ತಿದೆ. ’ ಇತ್ತ ರಾಜನ ಕೈನ ಮಗು ಹಸನ್ಮುಖಿ, ಗಂಭೀರ, ಗೋಧಿ ಮೈಬಣ್ಣ , ಆಳ ದೃಷ್ಟಿ. ರಾಮರಷ್ಟು ಚಕಮಕಿ ಇಲ್ಲ, ಆದರೆ ತನ್ನ ಪ್ರಶಾಂತ ವದನದಿಂದ ಆಕರ್ಷಕ. ಏಕೋ ಆ ಮಗುವನ್ನು ಎತ್ತಿರುವಷ್ಟು ಹೊತ್ತೂ ದಶರಥನಿಗೆ ಸರಾಗವಾಗಿ ಉಸಿರಾಡಲಾಗಲಿಲ್ಲ. ಪಕ್ಕದ ಗುರುಗಳಿಗೆ ಕೊಟ್ಟುಬಿಟ್ಟ. ಆ ಮಗುವನ್ನು ಕಂಡ ವಸಿಷ್ಠರ ಕಣ್ಮುಂದೆ ಮುನಿಯೋರ್ವ ಕಂಡಂತೆ, ವಾಮನನ ಪಡಿಯಚ್ಚಿನಂತೆ! ಬಲಿ ಚಕ್ರವರ್ತಿಯಂತೆ! ಛೆ !ಇದೇಕೆ ಹೀಗೆ ? ಎರಡು ತದ್ವಿರುದ್ಧ ಚಿತ್ರಗಳು ಒಟ್ಟಾಗಿ? ಅವರಿಗೆ ಉತ್ತರ ಗೊತ್ತಾಗಬೇಕಾದರೆ ದಶಕಗಳು ಕಾಯಬೇಕು. " ಭರತನೆಂಬ ಹೆಸರು ಈ ಮಗುವಿಗೆ ಸರಿ ಹೋದಾತು. ನಮ್ಮ ಆರ್ಯಾವರ್ತಕ್ಕೆ ಮುಂದೆ ಇವನಿಂದಲೇ ಹೆಸರು ಬದಲಾದಾತು. ಏಕೋ ಕಾರಣ ಗೊತ್ತಾಗುತ್ತಿಲ್ಲ, ನನಗೆ ಹಾಗೆನಿಸುತ್ತಿದೆ. " ( ಶಕುಂತಲಾ ಪುತ್ರನಿಂದ " ಭಾರತ " ಬಂತೆನ್ನುವವರ ಕ್ಷಮೆ ಕೇಳುತ್ತ - ಲೇ) ಕ್ಷಣ ಬಿಟ್ಟು ಹೇಳಿದರು, " ರಾಜ , ನಿಮ್ಮ ಕೊನೆಯ ಮಡದಿಗೆ ಹುಟ್ಟಿದ ಈ ಮಗು, ಮುಂದೆ ಕ್ಷತ್ರ ಧರ್ಮವನ್ನು ಕೃಷ್ಣಾಜಿನ ಉಟ್ಟು ಕಾಪಾಡುತ್ತಾನೆ. ತ್ಯಾಗಕ್ಕೆ, ಸತ್ಯಕ್ಕೆ ಹೆಸರಾಗುತ್ತಾನೆ. ಯುದ್ಧದಲ್ಲಲ್ಲ ; ತನ್ನ ನಡತೆಯಿಂದ ಜನರನ್ನೆಲ್ಲ ಗೆಲ್ಲುತ್ತಾನೆ ಧರ್ಮ ಪರಾಕ್ರಮಿಯಾಗುತ್ತಾನೆ."
(ಭರತೋ ನಾಮ ಕೈಕೇಯ್ಯಾಂ ಜಙ್ಞೇ ಸತ್ಯ ಪರಾಕ್ರಮಃ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com