ಖಾಲಿ ಕೈನ ವಿಶ್ವಮಿತ್ರರ ಪಶ್ಚಿಮ ಪ್ರಯಾಣ

ವಸಿಷ್ಠ ಅವರು ಎಂದೂ ತನ್ನನ್ನು ಬ್ರಹ್ಮರ್ಷಿ ಇರಲಿ, ಋಷಿ ಎಂದೂ ಸಂಬೋಧಿಸಿಲ್ಲ. ಅವರನ್ನು ಮೆಚ್ಚಿಸಬೇಕು. ಅವರಿಂದ ತಾನು ಬ್ರಹ್ಮರ್ಷಿ ಎನ್ನಿಸಿಕೊಳ್ಳಬೇಕು.
ವಿಶ್ವಾಮಿತ್ರ
ವಿಶ್ವಾಮಿತ್ರ
ಆಸಕ್ತ ಓದುಗರೇ ಕ್ಷಮಿಸಿ. ಅದೇನು ಅವಸರವಿತ್ತೋ ಆದಿಕವಿಗಳಿಗೆ, ಮಕ್ಕಳ ಮುದ್ದು ಮುಖಗಳನ್ನೂ, ಮುಗ್ಧತೆಯನ್ನೂ, ತೊದಲುಲಿಗಳನ್ನೂ, ಆಟವನ್ನೂ, ತಂದೆ ತಾಯಿಗಳ ಒಡನಾಟವನ್ನೂ, ಒಟ್ಟಿನಲ್ಲಿ ಬಾಲಲೀಲೆಗಳಾವುವನ್ನೂ ಹೇಳದೇ ನಾಗಾಲೋಟದಲ್ಲಿ ಓಡಿಬಿಡುತ್ತಾರವರು! ಜಾತಕರ್ಮದಿಂದ ಉಪನಯನದ ವರೆವಿಗೆ ಅರ್ಧ ಶ್ಲೋಕ ಸಾಕು ಅವರಿಗೆ. 
( ತೇಷಾಂ ಜನ್ಮಕ್ರಿಯಾದೀನಿ ಸರ್ವ ಕರ್ಮಾಣ್ಯಕಾರಯತ್ )
ನಾಲ್ವರೂ ವಿದ್ಯಾಸಂಪನ್ನರಂತೆ. ಅಸ್ತ್ರ ವಿದ್ಯೆಯಲ್ಲಿ ನಿಪುಣರಂತೆ. ಧನುರ್ವಿದ್ಯೆಯಲ್ಲಿ ನಿಷ್ಣಾತರಂತೆ. ಮೊದಲ ಮಗ ಶ್ರೀರಾಮರಿಗೆ ಆನೆ, ಕುದುರೆ ಸವಾರಿಗಳಲ್ಲಿ ಲಾಲಿತ್ಯ, ರಥಿಕನಾಗಿಯೂ ಶ್ರೇಷ್ಠ. ಆತ ನಿರ್ಮಲ ಚಂದ್ರನಂತೆ ಪ್ರಿಯವಾಗಿದ್ದನಂತೆ.
(ಇಷ್ಟಃ ಸರ್ವಸ್ಯ ಲೋಕಸ್ಯ ಶಶಾಂಕ ಇವ ನಿರ್ಮಲಃ
(ಬಹುಶಃ ಇದರಿಂದಲೇ ರಾಮರಿಗೆ , ರಾಮಚಂದ್ರ ಎಂದು ಪ್ರಸಿದ್ಧಿ ಬಂದಿರಬೇಕು -ಲೇ )
ಎಲ್ಲರಿಗೂ ಜನಪ್ರೀತಿ ಇದ್ದರೂ ರಾಮರಿಗೇ ಆದ್ಯತೆ. ತಂದೆ-ತಾಯಿಗಳಿಗೆ ಅಚ್ಚು ಮೆಚ್ಚು, ಅಂತೆಯೇ ಲಕ್ಷ್ಮಣನಿಗೂ! ರಾಮ-ಲಕ್ಷ್ಮಣರದು ಜೋಡಿಯಾದಂತೆ ಭರತ-ಶತ್ರುಘ್ನರದೂ. ನಾಲ್ವರು ಮಕ್ಕಳ ಆಟ ಪಾಠಗಳಲ್ಲಿ ಮೈಮರೆತ ದಶರಥನಿಗೆ ವರ್ಷಗಳು ಹಾರಿ ಹೋದವು. ಹದಿನೈದು ವರ್ಷಗಳೇ ಮುಗಿದು ಹೋಯಿತು. ಆಗಲೇ ಅಪ್ಪನಿಗೆ ಮಕ್ಕಳ ಮದುವೆ ಮಾಡಬೇಕೆಂಬ ಆತುರ. ಅದನ್ನೇ ಚಿಂತಿಸುತ್ತ ಆಸ್ಥಾನದಲ್ಲಿದ್ದ ದಶರಥ. ಇದ್ದಕ್ಕಿದ್ದಂತೆಯೇ ಆಸ್ಥಾನದಲ್ಲಿ ವಿದ್ಯುತ್ ಸಂಚಾರ. ಸಡಗರ, ಸಂಭ್ರಮ, ಭಯ, ಆತಂಕಗಳೆಲ್ಲ ಒಟ್ಟಾಗಿ; ತೀವ್ರವಾಗಿ; ವಿದ್ಯುತ್ತಿನಂತೆ ತೀಕ್ಷ್ಣವಾಗಿ ಹರಿದು ಬಂತು ದಶರಥನ ಕಿವಿಗೆ. "ಮಹಾಸ್ವಾಮಿ, ಋಷಿಗಳು, ಅಲ್ಲಲ್ಲ, ಬ್ರಹ್ಮರ್ಷಿಗಳು, ವಿಶ್ವಮಿತ್ರ ಬ್ರಹ್ಮರ್ಷಿಗಳು ಬರುತ್ತಿದ್ದಾರಂತೆ. ಪುರ ಪ್ರವೇಶವನ್ನು ಮಾಡಿದ್ದಾರಂತೆ. ಮುಂದಾಗಿ ಅವರ ಶಿಷ್ಯರು ಅನಲತೀರ್ಥರು ಸುದ್ದಿ ತಂದಿದ್ದಾರೆ. " ತಡೆದು ತಡೆದು ಹೇಳಿದ ದ್ವಾರಪಾಲಕ. ವಿಶ್ವಮಿತ್ರರ ಹೆಸರು ಕೇಳುತ್ತಿದ್ದಂತೆಯೇ ಎಲ್ಲರಿಗೂ ಒಂದು ವಿಚಿತ್ರವಾದ ಆತಂಕ. 
ಅಂತಹ ಹೆಸರೇ ಅದು. ಪಟ್ಟು ಹಿಡಿದು ಹಠ ಸಾಧಿಸುವ ಕ್ಷಾತ್ರ ತಪಸ್ವಿ. ಹಾಗೆ ಹೇಳಿದರೆ ಅವರಿಗೆ ಮಹಾ ಸಿಟ್ಟು. ಅವರನ್ನು ಬ್ರಮ್ಹರ್ಷಿಯೆಂದೇ ಕರೆಯಬೇಕೆಂದು ಅವರ ಪಟ್ಟು. ಅದನ್ನು ಸಾಧಿಸಲು ಅವರೇನು ಕಡಿಮೆ ಕಷ್ಟ ಪಟ್ಟರೇ? 
                                              ***********
ತ್ರಿಶಂಕುವನ್ನು ಸ್ವರ್ಗಕ್ಕೆ ಕಳಿಸಿದ್ದಲ್ಲದೇ ಹರಿಶ್ಚಂದ್ರನಿಗೆ ತಮ್ಮೆಲ್ಲ ಪುಣ್ಯವನ್ನೂ ಧಾರೆ ಎರೆದು ನಿಂತರಲ್ಲ; ಮುಂದೇನು ಎಂಬುದೇ ಅವರ ಪ್ರಶ್ನೆ. ಉತ್ತರ ಹಿಂದೆಂದೋ ನಿರ್ಣಯವಾದದ್ದೇ. ತಾನು ವಸಿಷ್ಠರಂತಾಗಬೇಕು. ಅಪರ ವಸಿಷ್ಠರೆನಿಸಬೇಕು. ವಸಿಷ್ಠರಿಂದಲೇ ತಾನು ಬ್ರಹ್ಮರ್ಷಿ ಎನಿಸಿಕೊಳ್ಳಬೇಕು. ಇದು ವಿಶ್ವಮಿತ್ರರ ಆದಿಮಧ್ಯಾಂತ ಅಪೇಕ್ಷೆ; ಬಯಕೆ; ಪ್ರತಿಙ್ಞೆ. ಅದಕ್ಕಾಗಿಯೇ ಈ ಸತತ ಪ್ರಯತ್ನ, ತಪಸ್ಸು. ಅದಕ್ಕೇನು ಮಾಡುವುದು? ಏನೇನೋ ಅಡ್ಡಿ. ಅನ್ಯರಿಗೆ ಉಪಕರಿಸಹೋದರೂ ತನ್ನ ತಪಸ್ಸಿನಿಂದ ಅರ್ಜಿಸಿದ ಪುಣ್ಯಕ್ಕೆ ಕತ್ತರಿ. ಮತ್ತೆ ಹರಿಶ್ಚಂದ್ರನಿಗೆ ಸತ್ಯ ಗುಣವಾಚಕ ಕೊಡಲು ಉಳಿದೆಲ್ಲ ಪುಣ್ಯದಾನ. ಈಗ ಬರಿಗೈ. ಮತ್ತೆ? ಮತ್ತೇನಿಲ್ಲ, ಖಾಲಿಯಾದ ಕೈ ತುಂಬಬೇಕು. ಹಾಗೆ ಭರ್ತಿಯಾಗಬೇಕಾದರೆ ಗೊತ್ತಿರುವ ಏಕೈಕ ಮಾರ್ಗ ತಪಸ್ಸು. ಆದರೆ ಈ ದಿಕ್ಕೇ ಬೇಡ. ಏಕೋ ಈ ದಕ್ಷಿಣ ದಿಕ್ಕಿನಲ್ಲಿ ವ್ಯಯವೇ ಹೆಚ್ಚು. ಆಯಾಸವೂ ಅಧಿಕ; ತಪೋ ಭಂಗ; ದೇಹಕ್ಕೆ ಶ್ರಮ, ಮನಸ್ಸಿಗೂ ವ್ಯಾಕುಲ. ಯಾವ ಸುಖವೂ ಇಲ್ಲ. ಈ ಯೋಚನೆ ಬರುತ್ತಿದ್ದಂತೆಯೇ ಪಶ್ಚಿಮಕ್ಕೆ ಪ್ರಯಾಣ ಮಾಡಿದರು ವಿಶ್ವಮಿತ್ರರು. 
                                            ***********
ಬ್ರಹ್ಮನ ಕೈನ ಕಮಲ ಇದ್ದಕ್ಕಿದ್ದಂತೆಯೇ ಜಾರಿ ಬಿತ್ತು. ಅದು ಬಿದ್ದ ಜಾಗದಲ್ಲಿ ಒಂದು ತೀರ್ಥೋದ್ಭವವಾಯಿತು. ಅದಕ್ಕೆ ಪುಷ್ಕರ ತೀರ್ಥವೆಂದು ಹೆಸರು. (ಈ ತೀರ್ಥವೀಗ ಅಜಮೀರ್‌ನಿಂದ ಏಳು ಮೈಲಿ ದೂರದಲ್ಲಿದೆ. ಅಲ್ಲಿ ಸೃಷ್ಟಿಕರ್ತನ ದೇವಾಲಯವೂ ಇದೆ, ಆತನಿಕ್ಕೆಲೆಗಳಲ್ಲಿ ಮಹಾ ಛಂದೋ ದೇವಿ ಗಾಯತ್ರಿ, ಹಾಗೂ ಸವಿತೃ ದೇವ ಪ್ರತೀಕ ಸಾವಿತ್ರ ದೇಗುಲಗಳೂ ಇವೆ. - ಲೇ ). ಈ ಪುಣ್ಯ ಜಲಾಶಯ ತಪಸ್ಸಿಗೆ ಶ್ರೇಷ್ಠ ಕ್ಷೇತ್ರ. ಅಲ್ಲಿಯೇ ಪರ್ಣಕುಟಿ ನಿರ್ಮಿಸಿ ನೆಲೆನಿಂತರು ವಿಶ್ವಮಿತ್ರರು. ’ಎಂದು ತಾನು ವಿಶ್ವಮಿತ್ರನೆಂದು ಹೆಸರಿಟ್ಟುಕೊಂಡೆನೋ, ಎಂದು ವಸಿಷ್ಠರಂತಾಗಬೇಕೆಂದು ಬಯಸಿದೆನೋ, ಅಂದಿನಿಂದ ಒಂದಲ್ಲ ಒಂದು ಅಡ್ಡಿ. ತನ್ನ ತಪಸ್ಸಿನಿಂದ ತನಗೆ ಏನೇನೋ ಶಕ್ತಿಗಳು ದಕ್ಕಿವೆ. ತಾನು ಸ್ವರ್ಗಕ್ಕೂ ಹೋಗಬಹುದು, ಬೇರೆಯವರೆಲ್ಲಾ ತನ್ನನ್ನು ಗೌರವಿಸುತ್ತಾರೆ, ಆದರೆ ವಸಿಷ್ಠರು ಮಾತ್ರ ತನ್ನನ್ನು ನೋಡಿ ಮುಗುಳ್ನಗುತ್ತಾರೆ. ಅವರು ಎಂದೂ ತನ್ನನ್ನು ಬ್ರಹ್ಮರ್ಷಿ ಇರಲಿ, ಋಷಿ ಎಂದೂ ಸಂಬೋಧಿಸಿಲ್ಲ. ಅವರನ್ನು ಮೆಚ್ಚಿಸಬೇಕು. ಅವರಿಂದ ತಾನು ಬ್ರಹ್ಮರ್ಷಿ ಎನ್ನಿಸಿಕೊಳ್ಳಬೇಕು.’
ಬ್ರಹ್ಮರ್ಷಿ ನಚಿಕೇತರು ಬಾಲಕರಾಗಿದ್ದಾಗಲೇ ಯಮನನ್ನು ಮೆಚ್ಚಿಸಿದವರು. ನಾಚಿಕೇತಾಗ್ನಿಯನ್ನು ಸಂಪಾದಿಸಿದವರು. ಅವರಲ್ಲಿ ಮಾರ್ಗದರ್ಶನಕ್ಕಾಗಿ ಬೇಡಿದರು ವಿಶ್ವಮಿತ್ರರು. "ವಿಶ್ವಮಿತ್ರರೇ, ಬ್ರಹ್ಮರ್ಷಿಯಾಗಲು ನೀವು ಹೆಸರನ್ನು ಬದಲಿಸಿಕೊಂಡರೆ ಮಾತ್ರ ಸಾಲದು. ಬ್ರಹ್ಮರ್ಷಿಯಾಗಬೇಕಿದ್ದರೆ ಮೊದಲ ಹೆಜ್ಜೆ ಇಂದ್ರಿಯ ಜಯ. ಅದನ್ನು ಸಾಧಿಸಲು ಧ್ಯಾನ. ಧ್ಯಾನ ಬಲಿಯುವವರೆಗೆ ತಪಸ್ಸು. ತಪಸ್ಸು ದೇಹವನ್ನು ಅಣಿ ಮಾಡಿದರೆ ಧ್ಯಾನ ಮನಸ್ಸನ್ನು ಪಕ್ವ ಮಾಡುತ್ತದೆ. ಬ್ರಹ್ಮನನ್ನು ಒಲಿಸಿಕೊಳ್ಳಿ".  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com