ಋಷಿಗಳಾದರು ವಿಶ್ವಮಿತ್ರರು!

ನಚಿಕೇತರ ಸುದೀರ್ಘ ಮಾರ್ಗದರ್ಶನ ವಿಶ್ವಮಿತ್ರರ ಮೈ-ಮನ ತುಂಬಿತು.
ಋಷಿಗಳಾದರು ವಿಶ್ವಮಿತ್ರರು!
ಗಮನವಿಟ್ಟು ಕೇಳುತ್ತಿದ್ದ ವಿಶ್ವಮಿತ್ರರಿಗೆ ಎಚ್ಚರಿಸಿದರು ನಚಿಕೇತರು. " ಯಾವುದೇ ಕಾರಣಕ್ಕೂ ನಿಮ್ಮ ತಪಃ ಶಕ್ತಿಯನ್ನು ಬಳಸಬೇಡಿ. ಅದು ಒಳ್ಳೆಯದಿರಲಿ, ಕೆಟ್ಟದ್ದಿರಲಿ. ವರವಿರಲಿ, ಶಾಪವಿರಲಿ, ಉಪಯೋಗಿಸಬೇಡಿ. ಇಲ್ಲಿಯವರೆಗಿನ ನಿಮ್ಮಲ್ಲಿನ ದೋಷವೆಂದರೆ ಅದೇ. ಸಂತುಷ್ಟರಾಗಿ ವರ ಕೊಟ್ಟು ತಪಸ್ಸನ್ನು ಖರ್ಚು ಮಾಡುತ್ತೀರಿ. ಇಲ್ಲವೇ ಸಿಟ್ಟುಗೊಂಡು ತಪಸ್ಸನ್ನು ಉಪಯೋಗಿಸುತ್ತೀರಿ. ತಪ್ಪು ತಿಳಿಯಬೇಡಿ, ಎಷ್ಟೋ ವರ್ಷಗಳಿಂದ ತಪಸ್ವಿಯಾಗಿದ್ದೀರಿ, ಅನ್ಯರಿಗೆ ಸುಲಭವಲ್ಲದ ಸೃಷ್ಟಿಕ್ರಿಯೆ, ಗಗನಗಮನ, ವರದಾನ, ಸ್ವರ್ಗಪ್ರವೇಶ.... ಇತ್ಯಾದಿಗಳೆಲ್ಲ ನಿಮಗೆ ಲಭ್ಯವಾಗಿವೆ. ಆದರೆ ಇನ್ನೂ ಎಷ್ಟೋ ಬೆಳೆಯಬಲ್ಲವರು, ಇನ್ನೂ ಇಲ್ಲೇ ಇದ್ದೀರಿ. ಪರೋಕ್ಷ ಗುರುಗಳು ವಸಿಷ್ಠರನ್ನು ನೋಡಿ! ಎಷ್ಟೇ ಅಲುಗಾಡಿಸಿದರೂ ಅವರು ಸಿಟ್ಟುಗೊಳ್ಳುವುದೇ ಇಲ್ಲ. ತಪಃಶಕ್ತಿಯನ್ನು ಖರ್ಚು ಮಾಡುವುದೇ ಇಲ್ಲ. ಅದಕ್ಕೇ ಅವರು ವೃದ್ಧ ಅಶ್ವತ್ಥವಾಗಿದ್ದಾರೆ. ನೀವಿನ್ನೂ ಸಸಿಯಾಗಿಯೇ ಇದ್ದೀರಿ. ಸಸಿಯ ಎಲೆಗಳನ್ನು ತರಿಯಬಾರದು. ನಿತ್ಯ ಎಲೆ ಹರಿಯುತ್ತಿದ್ದರೆ, ಆ ಗಿಡ ಬೆಳೆಯುವುದು ಕಷ್ಟವಾಗುತ್ತದೆ, ನಿಧಾನವಾಗುತ್ತದೆ. ಅದನ್ನು ಬೆಳೆಯಲು ಬಿಡಿ, ಗಿಡವಾಗಲಿ, ಮತ್ತೂ ಬೆಳೆಯಲಿ, ಮರವಾಗಲಿ, ಆಗ ಎಷ್ಟೇ ಎಲೆ ಉದುರಿದರೂ ಮರ ದೃಢವಾಗಿರುತ್ತದೆ.
ನೆನಪಿಟ್ಟುಕೊಳ್ಳಿ, ನೀವು ನಿಮ್ಮ ತಪಸ್ಸಿನ ಶಕ್ತಿಯನ್ನು ಆಗಾಗ ಹೀಗೆ ಖರ್ಚು ಮಾಡುತ್ತಿದ್ದರೆ , ನೀವು ಬೆಳೆಯುವುದು ಯಾವಾಗ? ನಿಮ್ಮ ಧ್ಯೇಯವೋ, ನಿಮ್ಮ ಗುರಿಯೋ, ನಿಮಗೆ ಸಿಗುವುದು ಯಾವಾಗ? ನಿಮ್ಮ ಉದ್ದಿಶ್ಯ ಬ್ರಹ್ಮಾಗಮನವಾಗಬೇಕು. ಕೇವಲ ಉಪಚಾರಕ್ಕೆ ಬರುವುದಲ್ಲ, ತನ್ನ ಕೆಲಸಕ್ಕೆ ಬರುವುದಲ್ಲ, ನಿಮ್ಮಿಂದ ಏನನ್ನೋ ಮಾಡಿಸಲು ಬರುವುದಲ್ಲ, ನೀವು ಬೇಡದಿದ್ದರೂ ವರ ನೀಡಲು ಬರಬೇಕು. ಹಾಗೆ ಆತ ಸುಮ್ಮನೇ ಬರುವನೇ? ಅವನನ್ನು ನಿಮ್ಮ ತಪಃಶಕ್ತಿಯಿಂದ ಸೆಳೆಯಬೇಕು. ಇಲ್ಲಿವರೆವಿಗೂ ನಿಮ್ಮ ಯತ್ನವೆಲ್ಲ ಯೋಗ; ಹಠಯೋಗವಾಗಿತ್ತು. ಇನ್ನು ಮುಂದೆ ಅದು ಆತ್ಮ ಸಂಯಮಯೋಗವಾಗಲಿ. ನಿಮ್ಮ ತಪಸ್ಸು ಸಫಲವಾಗಲಿ. ಹೋಗಿಬನ್ನಿ. " 
ನಚಿಕೇತರ ಸುದೀರ್ಘ ಮಾರ್ಗದರ್ಶನ ವಿಶ್ವಮಿತ್ರರ ಮೈ-ಮನ ತುಂಬಿತು. 
                                         ************
ಕಟ್ಟು ನಿಟ್ಟಿನ ತಪಸ್ಸು, ಬ್ರಾಹ್ಮೀ ಮುಹೂರ್ತಕ್ಕೆ ಏಳುವುದು, ಸೂರ್ಯೋದಯಕ್ಕೆ ಮುನ್ನವೇ ಶುದ್ಧರಾಗಿ ವಜ್ರಾಸನದಲ್ಲಿ ಕುಳಿತು ಪ್ರಾಣಾಯಾಮ ಮೂಲಕ ಕುಂಭಕದಲ್ಲಿದ್ದಾಗ ಧ್ಯಾನ. ಅಭಿಜಿನ್ಮುಹೂರ್ತಕ್ಕೆ ಆಸನ ಬಿಚ್ಚಿ ಅಡವಿಯಲ್ಲಿ ಅಡ್ಡಾಡಿ, ಹಣ್ಣುಗಳನ್ನೆರಡು ಹೆಕ್ಕಿ ತಿಂದು, ಪುಷ್ಕರದ ನೀರು ಕುಡಿದು ವಿಶ್ರಾಂತಿ. ಮತ್ತೆ ಅಪರಾಹ್ನಕ್ಕೆ ಮತ್ತೆ ಸ್ನಾನ, ಆಸನ, ಪ್ರಾಣಾಯಾಮ, ಕುಂಭಕ, ಧ್ಯಾನ. ಮಹಾರಾತ್ರಿಯವರೆಗೆ ಸಮಾಧಿ. ಆನಂತರ ಬಹಿರ್ಮುಖ. ಅನತಿ ದೂರದಲ್ಲಿ ಸಪತ್ನೀಕ ಋಷಿ ಕುಟಿ. ಅವರಲ್ಲಿನ ಹಸುವಿನ ಹಾಲನ್ನು ಅವರ ಅಂತೇ ವಾಸಿಯೊಬ್ಬ ತಂದಿಟ್ಟು ಹೋಗಿರುತ್ತಾನೆ, ಅದನ್ನು ಕುಡಿದು ಮಲಗಿದರೆ ಮತ್ತೆ ಹಕ್ಕಿ ಹಾರುವ ಹೊತ್ತಿಗೆ ಎಚ್ಚರ. ಇದು ಎಂದು ತಾನು ತಪವನ್ನು ಆರಂಭಿಸಿದೆನೋ, ಅಂದು ಗುರುಗಳು ವಾಮದೇವರು ಕಲಿಸಿದ ಪಾಠ. ಇದು ದೈನಂದಿನ ಕರ್ತವ್ಯ. ಅದೀಗ ತೀವ್ರ. ಇಲ್ಲಿವರೆಗೆ ತಾವು ಮಾಡುತ್ತಿದ್ದ ತಪಸ್ಸಿನ ರೀತಿಯೇ ಬೇರೆ. ಈಗಿನ ನೀತಿಯೇ ಬೇರೆ. ಈಗ ಕಣ್ಮುಚ್ಚಿ ಏನನ್ನೂ ಕಾಣದೆ, ಏನನ್ನೂ ಯೋಚಿಸದೇ ಬ್ರಹ್ಮಾನನ್ನು ಕುರಿತ ಚಿಂತನೆ. ಆದರೆ ಬ್ರಹ್ಮನ ಚಿತ್ರ ಮನಸ್ಸಿನಲ್ಲಿ ಮೂಡುವುದಕ್ಕೇ ಅದೆಷ್ಟು ಕಾಲ ತಗೆದುಕೊಂಡಿತೋ ? ಕುಂಭಕದಲ್ಲಿ ಪ್ರಾಣವಾಯು ನಿಂತಾಗ ಅದೇನೋ ಚಲನೆ, ಅದೇನೋ ಸದ್ದು, ಅದೇನೋ ಕಲರವ, ಅದೇನೋ ಅಸ್ಪಷ್ಠ ಚಿತ್ರ. ಆ ಚಿತ್ರಕ್ಕೆ ಸ್ಪಷ್ಟ ಆಕಾರ ಮೂಡಲು ಸರಿಸುಮಾರು ವರ್ಷವೇ ಆಗಿರಬೇಕು. ಇದೀಗ ಉಸಿರನ್ನು 10 ನಿಮಿಷಗಳ ಕಾಲ; ಮತ್ತೂ ಪ್ರಯತ್ನ ಪಟ್ಟರೆ 12-12 ನಿಮಿಷಗಳ ಕಾಲ; ಶ್ವಾಸಕೋಶದಲ್ಲಿ ನಿಲ್ಲಿಸಬಹುದು; ಸುಲಭವಾಗಿ. ಕುಂಭಕದಲ್ಲಿ ಜೀವಾನಿಲ ನಿಂತುಬಿಟ್ಟಾಗ ಕಾಲವೇ ಸ್ಥಗಿತ. ಆಗಲೇ ನಿಜವಾದ ತಪಸ್ಸು. ಇಲ್ಲಿವರೆಗೆ ತಾನು ಮಾಡುತ್ತಿದ್ದುದು ನಚಿಕೇತರು ಹೇಳಿದಂತೆ ಹಠಯೋಗ. ಶರೀರವನ್ನು ವಜ್ರ ಮಾಡುವ ವಿಧಾನ. ಇದೀಗ ತನ್ನ ಗಮನ ಲಯಯೋಗದಲ್ಲಿ. ಒಟ್ಟಿಗೇ, ಬ್ರಹ್ಮಾನುಸಂಧಾನದಲ್ಲಿ. ಈ ತಪಸ್ಸು, ಗಭೀರ ತಪಸ್ಸು, ಅಲ್ಪಾಕರ್ಶಣೆಗಳಿಗೆ ಒಲಿಯದ ತಪಸ್ಸು, ನಿಷ್ಠ ತಪಸ್ಸು ಮಾಡಿದಷ್ಟು ಕಾಲ ವಯಸ್ಸೂ ತಟಸ್ಥ. ಬೇರೆಯವರಿಗೆ ವರ್ಷವಾದರೆ ತನಗೊಂದು ತಿಂಗಳು ! ವಾಮದೇವರು ಹೇಳಿದ್ದು ನೆನಪಾಗುತ್ತಿದೆ. ಉತ್ತರದ ಹಿಮಾಲಯದ ಋಷಿಗಳು ಎರಡು ಘಂಟೆಗೊಮ್ಮೆ ಉಸಿರಾಡುತ್ತಾರಂತೆ !! ಎಂದರೆ, ದಿನಕ್ಕಾರು ಬಾರಿ ಮಾತ್ರ ಉಸಿರೆಳೆದು ಬಿಡುವರು !!! ವರ್ಷಗಳ ಹಿಂದೆ ತನಗೆ ಹತ್ತು ನಿಮಿಷಗಳಷ್ಟು ಕಾಲ ಗಾಳಿಯನ್ನು ಎದೆಯಲ್ಲಿ ಬಂಧಿಸುವುದು ಸಾಧ್ಯವೆಂದರೆ ನಂಬಲಾಗುತ್ತಿರಲಿಲ್ಲ. ಏನೇನು ವಿಚಿತ್ರವಿದೆಯೋ ಈ ಗಾಳಿಯಲ್ಲಿ, ಅದರ ಪೂರಕ, ರೇಚಕ, ಕುಂಭಕಗಳಲ್ಲಿ. 
                                              *************
ದಿನಗಳೋ, ತಿಂಗಳುಗಳೋ, ವರ್ಷಗಳೋ, ಎಷ್ಟು ಕಳೆದುವೋ ಲೆಕ್ಕ ಇಟ್ಟವರಾರು; ಲೆಕ್ಕ ಒಪ್ಪಿಸಬೇಕಾರಿಗೆ? ಅಂದು ಬೆಳಗಿನಿಂದಲೇ ಉಲ್ಲಾಸ. ಸ್ನಾನವೋ ಮುದ. ಕಾರಣವೇ ಗೊತ್ತಿಲ್ಲದೇ ಏನೋ ಸಂತಸ. ಇನ್ನೇನು ಸ್ವರ್ಣ ಸೂರ್ಯ, ಬೆಳ್ಳಿ ಬಣ್ಣಕ್ಕೆ ತಿರುಗಬೇಕು. ಅರ್ಘ್ಯ ಕೊಡುತ್ತಿದ್ದರೆ ಎದುರೊಂದು ಶ್ವೇತ ಕಮಲದಲ್ಲಿ ಅರ್ಧ ಬಿಳಿ-ಗಡ್ಡದ ಪಿತಾಮಹ! ಓಹೋ !ನಚಿಕೇತರು ಹೇಳಿದಂತೆ ತಾನು ಕರೆಯದೆಯೇ ಬಂದಿದ್ದಾನೆ ಬ್ರಹ್ಮ ! ದೊಡ್ಡವರು ಬಂದರೆ ನಮಗೇನೋ ಲಾಭ. ಹಿಂದಾತ ಬಂದಿದ್ದದ್ದು ತ್ರಿಶಂಕುವಿನ ಸ್ವರ್ಗ ನಿಲ್ಲಿಸಲು.... ಹೀಗೆ ಏನೇನೋ ಯೋಚನೆಗಳು. " ನಿನ್ನ ತಪಸ್ಸು ನನ್ನನ್ನು ಆಕರ್ಷಿಸಿದೆ. ವಿಶ್ವಮಿತ್ರ, ನಿನ್ನಲ್ಲಿ ರಾಜಸವಿನ್ನೂ ಸಾಕಷ್ಟಿದೆ. ರಾಗದ್ವೇಶಗಳನ್ನು ಮೀರಿಲ್ಲ ನೀನು. ಆದರೂ.... " ಕೈಮುಗಿದು ನಿಂತಿದ್ದ ವಿಶ್ವಮಿತ್ರರ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ, " ನೀನು ಇಲ್ಲಿವರೆಗೆ ಮಾಡಿರುವ ಶುಭ ಕರ್ಮಗಳಿಂದ ನೀನು ಋಷಿ ಪದಕ್ಕೆ ಅರ್ಹನಾಗಿದ್ದಿಯೆ. ಶುಭಮಸ್ತು. "
( ಋಷಿಸ್ತ್ವಂ ಅಸಿ ಭದ್ರಂ ತೇ ಸ್ವ ಅರ್ಜಿತೈಃ ಕರ್ಮಭಿಹಿ ಶುಭೈಹಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com