ಹಿಮಾಲಯ ಗಮನ

ಅದು ಹಿಮಾಲಯ; ಹಿಮಕ್ಕೆ ಆಲಯ; ಮಂಜಿನ ಮನೆ; ಗುಡ್ಡಗಳ ಮೇಲೆ ಗುಡ್ಡಗಳು. ಎಲ್ಲೆಲ್ಲೂ ಖರ್ಜೂರದ ಮರಗಳು. ಕಂಡಷ್ಟೂ ಕಡಿದಾದ ಬೆಟ್ಟಗಳು. ಜನರೇ ಇಲ್ಲ. ಹಿಮಾಲಯ ಎಂದರೆ ಸದಾ ಸರ್ವದಾ ಹಿಮ...
ಹಿಮಾಲಯದಲ್ಲಿ ವಿಶ್ವಾಮಿತ್ರರು (ಸಾಂಕೇತಿಕ ಚಿತ್ರ)
ಹಿಮಾಲಯದಲ್ಲಿ ವಿಶ್ವಾಮಿತ್ರರು (ಸಾಂಕೇತಿಕ ಚಿತ್ರ)
ವಿಶ್ವಮಿತ್ರರ ಯೋಚನೆ ಮುಂದುವರಿಯಿತು. ನಾನಿನ್ನೂ ಋಷಿ ಮಾತ್ರನಾಗಿದ್ದೇನೆ. ನನ್ನ ಗುರಿ ಬ್ರಹ್ಮರ್ಷಿ. ಮಧ್ಯದಲ್ಲೇಕೆ ಪತಿತನಾದೆ? ಅಂತೂ ಈ ಇಂದ್ರ ತನ್ನನ್ನು ಸೋಲಿಸಿದ. ಏಕೆ ಈ ಇಂದ್ರನಿಗೆ ಈ ಕೆಟ್ಟ ಬುದ್ಧಿ? ತನ್ನೊಬ್ಬನನ್ನೇ ಅಲ್ಲ, ಅದೆಷ್ಟು ಋಷಿಗಳನ್ನು ದಾರಿ ತಪ್ಪಿಸಿದ್ದಾನೋ? ಅವೆಷ್ಟು ಯಙ್ಞಗಳನ್ನು ಹಾಳುಗೆಡವಿದ್ದಾನೋ. ಇಂದ್ರನ ವಿಷಯ ಬಿಡೋಣ, ನನಗೇನಾಗಿದೆ? ಎಂದರೆ ಮನುಷ್ಯನಿಗೆ ಕಾಮವೆಂಬುದು, ಸ್ತ್ರೀ ಸಂಗವೆಂಬುದು ಅಷ್ಟೊಂದು ಪ್ರಬಲವೇ? ಅದನ್ನು ಮೀರಲು ಸಾಧ್ಯವೇ ಇಲ್ಲವೇ? ಹೆಣ್ಣೆಂದರೆ ಏಕೆ ಈ ಗಂಡು ಹೀಗೆ ಬಾಯಿ ಬಿಡುತ್ತಾನೆ? ಈ ಪ್ರವೃತ್ತಿ ಅತ್ಯಂತ ನೈಸರ್ಗಿಕವಿರಬಹುದು, ಸಹಜವೂ ಇರಬಹುದು. 
ಆದರೂ ಯಾರಾದರೂ ಒಬ್ಬರು ನಿಗ್ರಹಿಸಲು ಹೊರಟರೋ? ಅದಕ್ಕಾಗಿ ತಪಿಸಿದರೋ? ಈ ಇಂದ್ರನೇಕೆ ನಮ್ಮ ಇಂದ್ರಿಯಗಳನ್ನು ಸೋಲಿಸುತ್ತಾನೆ? ಮತ್ತೆ ಅದೇ ಇಂದ್ರ. ಓಹ್! ಇಂದ್ರಿಯದ ರೂಪವೇ ಅಲ್ಲವೇ ಇಂದ್ರ? ಅವನೇ ಅಲ್ಲವೆ ಸಕಲ ಭೋಗ ಪುರುಷ? ಭೋಗ ವಿಮುಖರೆಂದರೆ ಅವನಿಗೆ ಅವಮಾನ; ಅನುಮಾನ. ಒಂದು ತರಹದ ಗುಪ್ತ ವಿರೋಧ. ಅದಕ್ಕೇ ಜಿತೇಂದ್ರಿಯರೆಂದರೆ ಅವರೆದುರು ಅವನು ಎಂದೂ ನಮ್ರ, ವಿನೀತ. ತಾನೂ ಇಂದ್ರಿಯಗಳ ಮೇಲೆ ಜಯ ಸಾಧಿಸಬೇಕೆಂದರೆ ಅದಕ್ಕೆ ಅವನ ಅಡ್ಡಿ. ಇರಲಿ; ಮತ್ತೂ ತಪಸ್ಸನ್ನು ಮುಂದುವರಿಸುವೆ. ತುಂಬ ಆಳದಲ್ಲಿ ಯೋಚಿಸುತ್ತಿದ್ದ ವಿಶ್ವಮಿತ್ರರು ಸ್ವಲ್ಪ ಜೋರಾಗಿಯೇ ಹೇಳಿದರು, " ಈ ಬಾರಿ ರಂಭೆಯೇ ಬಂದರೂ ಒಲಿಯುವುದಿಲ್ಲ. ಶೃಂಗಾರಕ್ಕೆಂದೂ ಜಾರುವುದಿಲ್ಲ. ಕಾಮಿ ಆಗುವುದಿಲ್ಲ. ಇಂದಿನಿಂದ ಅನಂಗ, ನಿನಗೆ ನಾನು ಸೋಲೆ. ಇನ್ನಾವ ಹೆಣ್ಣೂ ನನ್ನನ್ನು ಮರುಳು ಮಾಡಲಾರಳು. " . ವಿಶ್ವಮಿತ್ರರ ದೀರ್ಘ ಚಿಂತನೆ ಕೊನೆಗೆ ಬಂತು. " ಈ ಪಶ್ಚಿಮ ದಿಕ್ಕಿನಲ್ಲಿ ನನಗೆ ಜಯ ಸಿಗಲಿಲ್ಲ. ಉತ್ತರಕ್ಕೆ ಹೋಗೋಣ. ಹಿಮಾಲಯದಲ್ಲಿ ನಿಲ್ಲೋಣ. "
                                           **********
ಅದು ಹಿಮಾಲಯ; ಹಿಮಕ್ಕೆ ಆಲಯ; ಮಂಜಿನ ಮನೆ; ಗುಡ್ಡಗಳ ಮೇಲೆ ಗುಡ್ಡಗಳು. ಎಲ್ಲೆಲ್ಲೂ ಖರ್ಜೂರದ ಮರಗಳು. ಕಂಡಷ್ಟೂ ಕಡಿದಾದ ಬೆಟ್ಟಗಳು. ಜನರೇ ಇಲ್ಲ. ಹಿಮಾಲಯ ಎಂದರೆ ಸದಾ ಸರ್ವದಾ ಹಿಮ ತುಂಬಿರುವ ಮೈಕೊರೆವ ಛಳಿಯ ಜಾಗ. ನಿಜವಲ್ಲ ಅದು, ಅಲ್ಲೂ ಸೆಖೆ ಉಂಟು. ಪರ್ವತದ ತುದಿಗಳಲ್ಲಿ, ಅದರ ಅಂಚುಗಳಲ್ಲಿ ಹಿಮ ಮುಚ್ಚಿರುವುದು ಬಿಟ್ಟರೆ ಮಲೆಯ ತುಂಬ ಮಂಜು ಮುಚ್ಚಿರುವುದಿಲ್ಲ ಯಾವಾಗಲೂ. ವರ್ಷದಲ್ಲಿ ಆರು ತಿಂಗಳು ಸರ್ವದಾ ಮಳೆ; ಮಂಜು. ಆಗ, ಇರಬಹುದಾದ ಬಿಡಿ ಮಂದಿಯೂ ಮನೆ ಬಿಟ್ಟು ಹೊರ ಬರರು. ಭಾರತದ ಉತ್ತರದ ಅಭೇದ್ಯ ಗೋಡೆಗಳಲ್ಲಿ ಒಂದೆಡೆ ವಿಶ್ವಮಿತ್ರರು ಕಟ್ಟಿದರು ಬಲವಾದ ಗುಡಿಸಲು. 
ನಿಜವಾಗಿಯೂ ನಿರ್ಜನ. ಪ್ರಾಣಿಗಳು ವಿರಳ. ಸಹಜವೇ. ಏನನ್ನು ನಂಬಿ, ಏನನ್ನು ಉಂಡು ಇರಬೇಕಿಲ್ಲಿ? ತನ್ನಂತಹ ಋಷಿಗಳು ಮಾತ್ರ ಇರುವ ದೇವಕ್ಷೇತ್ರ. ಎಂತೆಂತಹ ಮುನಿಗಳಿದ್ದಾರೆ. ಕಠಿಣ ವ್ರತಧಾರಿಗಳನ್ನು ಕಾಣಬೇಕಿದ್ದರೆ ಇಲ್ಲಿಗೇ ಬರಬೇಕು. ಆದರೆ ಇವರೆಲ್ಲರೂ ಅಥವ ಬಹುಮಂದಿ, ಹಿಂದೆ ತಾನು ಇದ್ದಂತೆ ಹಠಯೋಗಿಗಳು. ಅದನ್ನು ಮೀರುವ ಇರಾದೆ ಅಥವ ಆ ಙ್ಞಾನ/ಗುರಿ ಇರದವರು. ದೇಹವನ್ನು ಶೋಷಿಸಿ ಇಂದ್ರಿಯ ಜಯ ಪಡೆವ ಮನಸ್ಸಿನವರು. ಎಂತೆಂತಹ ಅಸಾಧಾರಣರು! ಕೇವಲ ಸೂರ್ಯ ಕಿರಣಗಳನ್ನುಂಡು ಬದುಕುವ ಮರೀಚಿಪರು. ಕೇವಲ ಮರದೆಲೆಗಳನ್ನು ಮಾತ್ರ ಭಕ್ಷಿಸುವ ಪತ್ರಾಹಾರರು. ಇಪ್ಪತ್ತು ನಾಲಕ್ಕು ಘಂಟೆಗಳೂ ಕೇವಲ ತೊಟ್ಟಿಡುವ ಬಟ್ಟೆ ತೊಡುವ ಆರ್ದ್ರ ಪಟರು. ಕೇವಲ ಮರಳ ಮೇಲೆ ಮಲಗುವ ಸ್ಥಂಡಿಲ ಶಾಯಿಗಳು. ನಿಂತೇ ತಪ ಮಾಡುವವರು. ಕಣ್ಣ ರೆಪ್ಪೆ ಹೊಡೆಯದವರು. ತಿಂಗಳಿಗೊಮ್ಮೆ ಆಹಾರ ತೆಗೆಯಕೊಳ್ಳುವವರು. ಕೇವಲ ನೀರು ಕುಡಿಯುವವರು. ದಿನಗಟ್ಟಳೇ ಒಂದೇ ಮುಗುಲಲ್ಲಿ ಮಲಗಿರುವ ಕಠಿಣ ವ್ರತಿಗಳು.... ಇಂತಹ ಇನ್ನೂ ಅನೇಕ ಕಷ್ಟ ಸಾಧ್ಯ ಕ್ರಿಯಾಯೋಗ ಮಾಡುವ ತೀಕ್ಷ್ಣ ತಪಸ್ವಿಗಳು.
ಇವರೆಲ್ಲರ ಮಧ್ಯೆ ತಮ್ಮದೇ ವಿಭಿನ್ನ ತಪಸ್ಸನ್ನಾಚರಿಸಿದರು ವಿಶ್ವಮಿತ್ರರು. ವಜ್ರಾಸನ ಬಿಟ್ಟು ಸಿದ್ಧಾಸನದಲ್ಲಿ ತಮ್ಮ ಸಂಕಲ್ಪ ಆರಂಭ ಮಾಡಿದರು. ಬ್ರಹ್ಮ ಬರಬೇಕು. ಋಷಿ ಮಟ್ಟದಿಂದ ಮೇಲೆತ್ತಬೇಕು. ಬ್ರಹ್ಮರ್ಷಿ ಎಂದು ಕರೆಯಬೇಕು. ಪ್ರತಿನಿತ್ಯ ಕೌಶಿಕೀ ನದಿಯಲ್ಲಿ ಸ್ನಾನ; ಸಿದ್ಧಾಸನದಲ್ಲಿ ಕುಳಿತು ರೆಪ್ಪೆ ಮುಚ್ಚದೇ (ತನ್ನ ಮುಂದೆ ಪ್ರತ್ಯಕ್ಷವಾಗಿದ್ದ) ಬ್ರಹ್ಮನ ಚಿತ್ರವನ್ನು ನಿಲ್ಲಿಸುವುದು; ಹಗಲು ಪೂರಾ ಧ್ಯಾನ; ಒಂದೇ ಹೊತ್ತಿನ ಆಹಾರ; ಅದೂ ಕೇವಲ ಒಂದೆರಡು ಹಣ್ಣುಗಳು. ಮಲಗಿದಾಗಲೂ ಬ್ರಹ್ಮಾಧ್ಯಯನ. ಕನಸಿನಲ್ಲೂ ಚತುರ್ಮುಖ. ಕಾಲ ಕಳೆಯಿತು, ವರ್ಷಗಳು ಉರುಳಿತು. ಬ್ರಹ್ಮ ಬಂದ ಮತ್ತೆ. " ತಪಸ್ಸಿನಿಂದ ತುಂಬ ಬಡವಾಗಿರುವೆ, ಋಷಿ ಗಣಕ್ಕೆ ನಿನ್ನನ್ನು ಮುಖ್ಯನನ್ನಾಗಿ ಮಾಡುವೆ. ಮಹತ್ವಪೂರ್ಣ ಪದವಿ ಅದು. ಮಹರ್ಷಿ ಪದವಿಯನ್ನು ನಿನಗೆ ಪ್ರದಾನ ಮಾಡಿದ್ದೇನೆ. ನಿನಗೆ ಸ್ವಾಗತ, ಮಹರ್ಷಿ!  
(ಮಹರ್ಷೇ ಸ್ವಾಗತಂ ವತ್ಸ ತಪಸಃ ಅಗ್ರೇಣ ತೋಷಿತಃ
ಮಹತ್ವಂ ಋಷಿ ಮುಖ್ಯತ್ವಂ ದದಾಮಿ ತವ ಸುವ್ರತ)
ವಿಶ್ವಮಿತ್ರರಿಗೆ ಮತ್ತೆ ನಿರಾಶೆ. ಬ್ರಹ್ಮರ್ಷಿತ್ವ ಸಿಗುತ್ತಿಲ್ಲವಲ್ಲ!  ಋಷಿಯಿಂದ ಈ ಮಹರ್ಷಿ ಪದವಿಗೆ ಬಡ್ತಿ. ತಾನು ಬ್ರಹ್ಮರ್ಷಿಯಾಗಬೇಕು! ವಿಶ್ವಮಿತ್ರರ ಮುಖವನ್ನು ಓದಿದ ಚತುರ್ಮುಖನೆಂದ; " ಬ್ರಹ್ಮರ್ಷಿಯಾಗಬೇಕಿದ್ದರೆ ಸಂಪೂರ್ಣ ಇಂದ್ರಿಯ ಜಯವಿರಬೇಕು. "  ಛೆ ! ತಾನು ಇಷ್ಟು ಕಾಲ ತಪಿಸಿದ್ದು ವ್ಯರ್ಥ! ಅಸಹನೆಯಿಂದ ಬ್ರಹ್ಮನೆಡೆ ನೋಡಿದರು ವಿಶ್ವಮಿತ್ರರು. " ನೋಡು, ನೋಡು! ಎಷ್ಟು ಬೇಗನೆ ಖಿನ್ನನಾದೆ? ಇದು ಜಿತೇಂದ್ರಿಯತ್ವವೇ? "ಏನೂ ತೋಚದೆ ನಿಂತ ಮುನಿಗೆ ಹೇಳಿದ ಬ್ರಹ್ಮ, " ನಿನಗಿನ್ನೂ ಇಂದ್ರಿಯಗಳ ಮೇಲೆ ಜಯ ಸಿಕ್ಕಿಲ್ಲ. ಮಹರ್ಷಿ ಶಾರ್ದೂಲ, ಪ್ರಯತ್ನಿಸು." 
(ನ ತಾವತ್ವಂ ಜಿತೇಂದ್ರಿಯ ಯತಸ್ವ ಮುನಿ ಶಾರ್ದೂಲ
-ಡಾ.ಪಾವಗಡ ಪ್ರಕಾಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com