ಬ್ರಹ್ಮರ್ಷಿ ವಿಶ್ವಾಮಿತ್ರ

"ಬ್ರಹ್ಮರ್ಷಿ ವಿಶ್ವಮಿತ್ರ! ನಿನಗೆ ಸ್ವಾಗತ. ನಿನ್ನ ಕಠಿಣ, ದೀರ್ಘ, ಅಸ್ಖಲಿತ ತಪಶ್ಚರ್ಯೆಗೆ ನಾನು ಮೆಚ್ಚಿದ್ದೇನೆ. ದೇವತೆಗಳು ಒಡಂಬಟ್ಟಿದ್ದಾರೆ. ಎಷ್ಟೆಂದು ಕೇಳಬೇಡ, ಅತ್ಯಂತ ದೀರ್ಘ ಆಯುಷ್ಶವನ್ನು ನಿನಗೆ ಕೊಟ್ಟಿರುವೆ.
ಬ್ರಹ್ಮರ್ಷಿ ವಿಶ್ವಾಮಿತ್ರ
ಏನೋ ಸುಗಂಧ. ಮೈ ಉರಿಯೆಲ್ಲ ತಂಪಾದಂತೆ. ಅನಿರ್ವಚನಿಯಾನಂದ. "ನನ್ನ ತಪೋ ಭಂಗಕ್ಕೆ ಮತ್ತಾವ ಸಂಚೋ?". ಕಣ್ಣು ತೆರೆಯಲೇ ಸಿದ್ಧವಿಲ್ಲ. ಆದರೆ ಕಂಡದ್ದೇನು? ಊರಗಲದ ಕಮಲ. ಅದರಲ್ಲಿ ಪೂರ್ವ ಪರಿಚಿತ ಚತುರ್ಮುಖ ಬ್ರಹ್ಮ. ಶ್ವೇತ ಗಡ್ಡ ನೊರೆನೊರೆಯಾಗಿ ಅಲುಗಾಡುತ್ತಿದ್ದರೆ, ಜಪಮಣಿಯ ಬಲ ಕರವೆತ್ತಿ ಅಭಯ ಪ್ರದಾನ. ಲಗುಬಗೆಯಿಂದ ಕಣ್ಬಿಟ್ಟು ದಿಗ್ಗನೆದ್ದು ಸಾಷ್ಟಾಂಗ ಮಾಡಿದರು ವಿಶ್ವಮಿತ್ರರು. ಇಂದ್ರೇತ್ಯಾದಿಗಳೆಲ್ಲಾ ಬ್ರಹ್ಮನ ಅಕ್ಕಪಕ್ಕದಲ್ಲಿ ನಿಂತಿದ್ದಾರೆ. 
"ಮಗು ವಿಶ್ವಮಿತ್ರ, ಬಹಳ ಕಷ್ಟ ಪಟ್ಟೆ. ಕಷ್ಟ ಪಟ್ಟರೆ ತಾನೇ ಫಲ? ಛಲಕ್ಕೆ, ಸಾಹಸಕ್ಕೆ, ಸಂಕಲ್ಪ ಸಾಧನೆಗೆ ಜನ ನಿನ್ನನ್ನು ಅನುಸರಿಸಬೇಕು. ನಿನ್ನ ಒಳ್ಳೆಯತನದಿಂದ ನಿನ್ನ ಪುಣ್ಯಸಂಪತ್ತನ್ನೆಲ್ಲ ಪರೋಪಕಾರಕ್ಕಾಗಿ ವ್ಯಯಿಸಿಬಿಟ್ಟೆ. ಮತ್ತೆ ಮತ್ತೆ ಬಿದ್ದರೂ ಎದ್ದೆ. ಎದೆಗುಂದದೆ ಮುನ್ನುಗ್ಗಿದೆ, ಗೆದ್ದೆ. ಮೊನ್ನೆಯಷ್ಟೇ ಸೂರ್ಯ ಹೇಳಲು ಬಂದಿದ್ದ, ನೀನು ಅವನನ್ನು ಸಾಕ್ಷಾತ್ಕರಿಸಿಕೊಂಡೆ ಎಂದು. ಅವನ ಆ ಸವಿತೃ ಮಂತ್ರ ಜಗದ್ವಿಖ್ಯಾತವಾಗಲಿ. ಅದೇ ಜನರು ಮಾಡುವ ಸಂಧ್ಯಾವಂದನೆಯಲ್ಲಿ ಪ್ರಧಾನಾಂಗವಾಗಲಿ. ಅದೇ ಬ್ರಹ್ಮೋಪದೇಶಕ್ಕೆ ನಾಂದಿಯಾಗಲಿ. ಈ ಜಗತ್ತು ಪ್ರಳಯ ಆಗುವ ತನಕ ಕೋಟಿ ಕೋಟಿ ಜನರು ಪ್ರತಿ ನಿತ್ಯ ಅರ್ಘ್ಯ ಅರ್ಪಿಸುವಾಗಲೆಲ್ಲ ನಿನ್ನ ಹೆಸರನ್ನು ಸ್ಮರಿಸಿಕೊಳ್ಳಲಿ. ಬೇರಾವ ದಾರ್ಶನಿಕ ಋಷಿಗೂ ಇರದಷ್ಟು ಮಾನ್ಯತೆ ನಿನಗೆ, ನೀನೇ ದರ್ಶಿಸಿದ "ತತ್ ಸವಿತುರ್ ವರೇಣ್ಯಂ/ ಭರ್ಗೋ ದೇವಸ್ಯ ಧೀಮಹಿ / ಧಿಯೋ ಯೋನಃ ಪ್ರಚೋದಯಾತ್"  ಎಂಬೀ ಮಂತ್ರದಿಂದ ದೊರಕಲಿ. ಇದರಿಂದಲೇ ಮಂತ್ರದ್ರಷ್ಟಾರನೆಂಬ ಜಗದ್ವಿಖ್ಯಾತಿಯನ್ನು ಪಡೆ. ನಿನ್ನನ್ನು ಗಗನದೆತ್ತರಕ್ಕೊಯ್ದ ಆ ಛಂದಸ್ಸು "ಗಾಯತ್ರೀ" ಎಂಬುದು ವೇದಮಾತೆಯೆಂದೇ ಪ್ರಖ್ಯಾತವಾಗಲಿ. ವೇದಾದಿಯಲ್ಲೆಲ್ಲ ಅದೇ ಛಂದಸ್ಸು ವಿಜೃಂಭಿಸಲಿ. "
ತಾನೇನು ಮಾಡಬೇಕು, ಏನು ಮಾತನಾಡಬೇಕು ಎಂದು ತೋಚದೇ ಕೈ ಮುಗಿದು ನಿಂತಿದ್ದ ವಿಶ್ವಮಿತ್ರರಿಗೆ, ಬ್ರಹ್ಮ ತನ್ನ ವರದ ಕೊನೆಯೆಂಬಂತೆ ವಿಶ್ವಮಿತ್ರರ ಬಯಕೆಗೆ ಒಲಿದ ಮುಕ್ತಾಫಲವನ್ನಿತ್ತ; " ಬ್ರಹ್ಮರ್ಷಿ ವಿಶ್ವಮಿತ್ರ! ನಿನಗೆ ಸ್ವಾಗತ. ನಿನ್ನ ಕಠಿಣ, ದೀರ್ಘ, ಅಸ್ಖಲಿತ ತಪಶ್ಚರ್ಯೆಗೆ ನಾನು ಮೆಚ್ಚಿದ್ದೇನೆ. ದೇವತೆಗಳು ಒಡಂಬಟ್ಟಿದ್ದಾರೆ. ಎಷ್ಟೆಂದು ಕೇಳಬೇಡ, ಅತ್ಯಂತ ದೀರ್ಘ ಆಯುಷ್ಶವನ್ನು ನಿನಗೆ ಕೊಟ್ಟಿರುವೆ. ನಿನಗೆ ಶುಭವಾಗಲಿ, ನಿನಗೆ ಮಂಗಳವಾಗಲಿ. ನೀನೆಲ್ಲಿ ಹೋಗಬೇಕೆನ್ನುವೆಯೋ, ಎಲ್ಲಿ ನೆಲೆಸಬೇಕೆನ್ನುವೆಯೋ, ಅದು ನಿನಗೆ ಈಡೇರಲಿ. ಶುಭಂ ಅಸ್ತು"
(ಬ್ರಹ್ಮರ್ಷೇ ಸ್ವಾಗತಂ ತೇ ಅಸ್ತು ತಪಸಾಸ್ಮ ಸುತೋಷಿತಾಃ|
ದೀರ್ಘಂ ಆಯುಶ್ಚ ತೇ ಬ್ರಮ್ಹನ್ ದದಾಮಿ ಸ ಮರುತ್ ಗಣಃ || )
ಸ್ವಸ್ತಿ ಪ್ರಾಪ್ನೋಹಿ ಭದ್ರಂ ತೇ ಗಚ್ಛ ಸೌಮ್ಯ ಯಥಾ ಸುಖಂ| )
ಮತ್ತೊಮ್ಮ ಸಾಷ್ಟಾಂಗ ಮಾಡಿದ್ದ ವಿಶ್ವಮಿತ್ರರ ತಲೆ ದಡವಿ ಹೇಳಿದ ಚತುರ್ಮುಖ, " ಇಂದಿನಿಂದ ನೀನು ಬ್ರಹ್ಮರ್ಷಿ. ಬ್ರಹ್ಮರ್ಷಿ ಪಟ್ಟವೆಂದರೆ, ಪರಬ್ರಹ್ಮ ದರ್ಶನಕ್ಕೆ ಅರ್ಹತೆ. ನಿನ್ನಂತೆ ಹಲವು ಬ್ರಹ್ಮರ್ಷಿಗಳಿದ್ದಾರೆ. ಒಂದರ್ಥದಲ್ಲಿ ಆ ಪರಬ್ರಹ್ಮ ಸಾಮ್ರಾಜ್ಯ ದ್ವಾರಪಾಲಕನಂತೆ ನಾನು. ನೀನೀಗ ಆ ದಾರಿಯಲ್ಲಿ ನಡೆಯುವ ಅರ್ಹತೆ ಬಂದಿದೆ ಎಂಬುದನ್ನೊಪ್ಪಿ ಘೋಷಿಸುವುದಷ್ಟೇ ನನ್ನ ಕೆಲಸ. ಇನ್ನು ಮುಂದೆ ನಿನ್ನ ಫಲಾಪೇಕ್ಷ ರಹಿತ ತಪಸ್ಸು, ನಿನ್ನ ಪರೋಪಕಾರ, ನಿನ್ನ ಬದುಕು.... ಇವುಗಳೆಲ್ಲ ನಿನ್ನನ್ನು ಪರಬ್ರಹ್ಮದೆಡೆಗೆ ಒಯ್ಯುವ ಸಾಧನಗಳು. ಒಳ್ಳೆಯದಾಗಲಿ". ಕೊಂಚ ತಡೆದು ಮುಂದುವರಿಸಿದ. " ಒಂದು ಮಾತು ಹೇಳುತ್ತೇನೆ, ಇಂದ್ರನ ಬಗ್ಗೆ ನಿನ್ನ ಮನಸ್ಸಿನಲ್ಲಿ ಕಷಾಯ ಬೇಡ. ಆತ ನಿನ್ನ ತಪೋಭಂಗ ಮಾಡಿದನೆಂಬ ಕೋಪ, ಬೇಸರ ನಿನಗಿದೆ. ಸಹಜವೇ. ಹೌದು, ಇಂದ್ರ ಋಷಿಯಲ್ಲ; ಅವನಲ್ಲಿ ರಾಜಸಾಂಶವೇ ಹೆಚ್ಚು. ಅಲ್ಲದೇ ಆ ಪದವಿಯೇ ಅಂತಹುದು. ಆದರೆ ಹೀಗವನು ಪರೀಕ್ಷಿಸಿಯೇ ಕೊನೆಗೆ ನೀನು ಅವನಿಗೆ ಸೊಪ್ಪು ಹಾಕದಾಗ, ಅವನೇ ಬಂದು ನಿನ್ನ ಬಗ್ಗೆ ಸಿಫಾರುಸು ಮಾಡಿದ. ಆತನಿಗೆ ನಿನ್ನ ಬಗ್ಗೆ ಈಗ ಅಗಾಧವಾದ ಗೌರವ ಇದೆ. ಎಷ್ಟೇ ಆಗಲಿ ಆತ ದೇವರಾಜ. ನೀವು ಮಿತ್ರರಾಗಿರಿ. " ಹೇಳ ಹೇಳುತ್ತಿದ್ದಂತೆಯೇ ಬ್ರಹ್ಮ ಕರಗಿ ಹೋದ.
ಎಲ್ಲ ದೇವತೆಗಳೂ ಬಂದು ವಿಜಯೀ ವಿಶ್ವಮಿತ್ರರನ್ನು ಅಭಿನಂದಿಸಿದರು. ಮಹೇಂದ್ರ ಪಾರಿಜಾತ ಮಾಲೆಯನ್ನು ತೊಡಿಸಿ ಗೌರವಿಸಿದ. ಋಷಿ ಸಂಘವೆಲ್ಲ, " ವಿಶ್ವಮಿತ್ರರಿಗೆ ಜಯವಾಗಲಿ! " ಎಂದು ಘೋಷಿಸಿದರು. ಆಲಿಂಗಿಸಿದ ಮಹೇಂದ್ರ ಹೇಳಿದ, " ಬನ್ನಿ ವಿಶ್ವಮಿತ್ರರೆ; ಎಷ್ಟು ಕಾಲವಾಯಿತು ನೀವು ಊಟ ಮಾಡಿ! ಈ ದೀರ್ಘ ತಪದಂತ್ಯಕ್ಕೆ ಮಾನವ ದುರ್ಲಭ ಭೋಜನವನ್ನು ನನ್ನ ಸಹಪಂಕ್ತಿಯಲ್ಲಿ ಮಾಡಿ. ಅಮೃತ ಸ್ವೀಕಾರಕ್ಕಾಗಿ ಈಗ ಅಮರಾವತಿಗೆ ಬನ್ನಿ. "
ಇಷ್ಟೆಲ್ಲ ನಡೆದರೂ ವಿಶ್ವಮಿತ್ರರ ಮುಖದಲ್ಲಿ ಏಕೋ ಗೆಲುವಿಲ್ಲ. ಗೆದ್ದ ಸಂತೋಷವೂ ಇಲ್ಲ. ಬ್ರಹ್ಮರ್ಷಿಯಾದ ಸಂಭ್ರಮವೂ ಇಲ್ಲ. ಏಕೆ? ಏನಾಗಿದೆ? " ತಮ್ಮ ಮನಸ್ಸೇಕೋ ಪ್ರಸನ್ನವಾಗಿಲ್ಲ?  "ಪ್ರಶ್ನಿಸಿದ ಇಂದ್ರ". ಮನದ ಭಾವವನ್ನು ಉಸುರಿದರು ಬ್ರಹ್ಮರ್ಷಿಗಳು; " ಮಹೇಂದ್ರ, ನಿಮ್ಮ ಸತ್ಕಾರಕ್ಕೆ, ನಿಮ್ಮ ಸ್ವಾಗತಕ್ಕೆ ಅಥವ ನನ್ನ ಪರವಾಗಿ ಚತುರ್ಮುಖನಲ್ಲಿ ಮಾತನಾಡಿದ್ದಕ್ಕೆ ಕೃತಙ್ಞ. ಆದರೆ ಒಂದು ವಿಷಯ ನನ್ನ ಮನಸ್ಸನ್ನು ಚುಚ್ಚುತ್ತಲೇ ಇದೆ" .ಇಂದ್ರನಿಗೆ ಸೋಜಿಗ. ಇಂತಹ ಅಸದೃಶ ಸಂದರ್ಭದಲ್ಲಿ, ಇಂತಹ ಸುಮುಹೂರ್ತದಲ್ಲಿ ಈ ರೀತಿ ಖಿನ್ನತೆಯೇ? " ಏನು ಬ್ರಹ್ಮರ್ಷಿಗಳೇ? ಏನು ನಿಮ್ಮ ಅರಕೆ? " ವಿಶ್ವಮಿತ್ರರು ಹೇಳಿಬಿಟ್ಟರು : " ನನಗೆ ಬ್ರಹ್ಮರ್ಷಿ ಪದವಿ ಸಿಕ್ಕಿರುವುದೇ ಆದರೆ, ಸೃಷ್ಟಿಕರ್ತ ಎಂದಂತೆ ದೀರ್ಘಾಯುಷ್ಯ ಲಭಿಸಿರುವುದೇ ಆದರೆ, ಪ್ರಣವದ ಓಂಕಾರ ಹಾಗೂ ವಷಟ್ಕಾರಗಳು ನನಗೆ ಲಭಿಸಬೇಕು. ಕೇವಲಾ ನಾನು ದರ್ಶಿಸಿದ ವೇದಭಾಗವಷ್ಟೇ ಅಲ್ಲ, ಸಂಪೂರ್ಣ ವೇದವೂ ನನಗೆ ಸಾಕ್ಷಾತ್ಕಾರವಾಗಬೇಕು"
( ಬ್ರಹ್ಮಣ್ಯಂ ಯದಿ ಮೇ ಪ್ರಾಪ್ತಂ ದೀರ್ಘಮಾಯುಃ ತಥೈವಚ
ಓಂಕಾರಶ್ಚ ವಷಟ್ಕಾರೋ ವೇದಾಶ್ಚ ವರಯಂತುಮಾಂ )
ಹೊಸದಾಗಿ ಹೇಳಬೇಕಾದ್ದೇನಿದೆ ಇದರಲ್ಲಿ? ವಿರಿಂಚಿ ವರವಿತ್ತಾಗಲೇ ಇವೆಲ್ಲ ಅವರಿಗೆ ಬಂದಂತಯಿತಲ್ಲ?  "ಸೃಷ್ಠಿಕರ್ತ, ಬ್ರಹ್ಮರ್ಷೇ ಎಂದು ಸಂಬೋಧಿಸಿದಾಗಲೇ ನಿಮಗೆ ಇವೆಲ್ಲ ಲಬ್ಧವಾಯಿತು" .ಇಂದ್ರ ಒಪ್ಪಿಸಲು ಯತ್ನಿಸಿದ. " ಅದಲ್ಲ ಇಂದ್ರ, ನನ್ನ ಮಾತಿನ ಅರ್ಥ ಬೇರೆ. "ವಿಶ್ವಮಿತ್ರರೀಗ ಸ್ಪಷ್ಟ ಪಡಿಸಿದರು. " ಹುಂಬನಾಗಿದ್ದ ನನ್ನನ್ನು, ರಾಜಮದವೇರಿದ್ದ ನನ್ನನ್ನು, ಅವರನ್ನೇ ಸುಡಲು ಹೋದ ನನ್ನನ್ನು ಈ ಮಾರ್ಗಕ್ಕೆ ತಿರುಗಿಸಿದ್ದೇ ಅವರು. ಅವರಿಂದಾಗಿ ನಾನಿಲ್ಲಿ ಹೀಗೆ ನಿಂತಿದ್ದೇನೆ; ಬ್ರಹ್ಮರ್ಷಿಯಾಗಿದ್ದೇನೆ. " ಇದೀಗ ಇಂದ್ರನಿಗೆ ಅರ್ಥವಾಗ ತೊಡಗಿತು ವಿಶ್ವಮಿತ್ರರು ಏನು ಹೇಳುತ್ತಿದ್ದಾರೆಂದು. ಕೊನೆಯ ಮಾತಾಗಿ ಹೇಳಿದರು ಮುನಿಗಳು ; " ಕ್ಷಾತ್ರರಲ್ಲೂ , ಬ್ರಾಹ್ಮಣರಲ್ಲೂ ಶ್ರೇಷ್ಠರೆಂದರೆ ವಸಿಷ್ಠರು ತಾನೇ ? ಬ್ರಹ್ಮನ ಮಕ್ಕಳಾದ ಆ ಬ್ರಹ್ಮರ್ಷಿಗಳು ನನ್ನನ್ನು ಬ್ರಹ್ಮರ್ಷಿಯೆಂದೇ ಕರೆಯಬೇಕು. ಆಗಲೇ ನನಗೆ ಸಮಾಧಾನ. "
                      (ಕ್ಷತ್ರವೇದವಿದಾಂ ಶ್ರೇಷ್ಠೋ ಬ್ರಮ್ಹವೇದ ವಿದಾಮಪಿ 
ಬ್ರಹ್ಮಪುತ್ರೋ ವಸಿಷ್ಠೋ ಮಾಂ ಏವಂ ವದತು ದೇವತಾಃ)  
-ಡಾ.ಪಾವಗಡ ಪ್ರಕಾಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com