ವಿಶ್ವಮಿತ್ರರ ಅಯೋಧ್ಯಾಗಮನ

ವಿಶ್ವಮಿತ್ರರು ಬ್ರಹ್ಮರ್ಷಿಗಳಾದ ಚಿತ್ರಗಳೆಲ್ಲ ಹಾದು ಹೋಗುತ್ತಿವೆ ದಶರಥನ ಕಣ್ಣ ಮುಂದೆ. ತಲೆಕೊಡಹಿ ಎದ್ದ. " ಬೇಗ ಮಧುಪರ್ಕಕ್ಕೆ ಅಣಿಮಾಡಿ! ರಾಜಪುರೋಹಿತರಿಗೆ ಕರೆ ಕಳುಹಿಸಿ! ವಿಶ್ವಮಿತ್ರರು ನೇರ ಯಾಗಶಾಲೆಗೆ... ಹೋಗಲಿ.
ವಿಶ್ವಾಮಿತ್ರ-ವಸಿಷ್ಠರು (ಸಾಂಕೇತಿಕ ಚಿತ್ರ)
ವಿಶ್ವಾಮಿತ್ರ-ವಸಿಷ್ಠರು (ಸಾಂಕೇತಿಕ ಚಿತ್ರ)
ದೇವತೆಗಳೆಲ್ಲ ಸಡಗರದಿಂದ ವಸಿಷ್ಠರನ್ನು ಭೇಟಿ ಮಾಡಿ ವಿಶ್ವಮಿತ್ರರ ಅಭಿಲಾಷೆಯನ್ನರುಹಿ ಕರೆತಂದೇ ಬಿಟ್ಟರು. ಬರುತ್ತಿದ್ದಂತೆಯೇ ವಿಶ್ವಮಿತ್ರರು ಅವರ ಮುಂದೆ ಬಾಗಿದರು. ವಸಿಷ್ಠರು ಅವರನ್ನೆತ್ತಿ ತಲೆಸವರಿ, "ಬಹಳ ಕಷ್ಟ ಪಟ್ಟಿರಿ. ಕ್ಷಾತ್ರ ಕಳೆದು ಶುದ್ಧರಾಗಿ ಶ್ವೇತ ಪದವಿಯಲ್ಲಿ ಪ್ರತಿಷ್ಠಿತರಾಗಿಬಿಟ್ಟಿರಿ. ನಿಮ್ಮನ್ನು ಕಂಡರೆ ನಮಗೆ ಅಭಿಮಾನ ಉಕ್ಕುತ್ತಿದೆ." 
ವಸಿಷ್ಠರ ಮಾತನ್ನು ಅಲಿಸುತ್ತಿದ್ದ ವಿಶ್ವಮಿತ್ರರ ಕಿವಿಗೆ ಹಾಡಿನಂತೆ ಕೇಳಿಸಿತು ಮುಂದಿನ ವಾಕ್ಯಗಳು. "ನೀವು ಬ್ರಹ್ಮರ್ಷಿಗಳಾಗಿದ್ದೀರಿ. ಇದರಲ್ಲಿ ಸಂದೇಹವಿಲ್ಲ. ನಾವು ಮಾನ್ಯ ಮಾಡಿದ್ದೇವೆ. ನೀವು ವೇದಾಧಿಕಾರ, ಓಂಕಾರದ ವರ, ವಷಟ್ಕಾರದ ಉಪಯೋಗ.... ಇವೆಲ್ಲವನ್ನೂ ಕೇಳಿರುವಿರಿ. ಅವೆಲ್ಲವೂ ನಿಮಗೆ ಲಭ್ಯವಾಗುತ್ತದೆ" 
(ಬ್ರಹ್ಮರ್ಷಿತ್ವಂ ನ ಸಂದೇಹಃ ಸರ್ವಂ ಸಂಪತ್ಸ್ಯತೇ ತವ)
ಬ್ರಹ್ಮರ್ಷಿಗಳಿಬ್ಬರ ಮೇಲೂ ಹೂ ಮಳೆಗರೆಯಿತು. ದೇವತೆಗಳು ಸ್ವಸ್ತಿ ಹೇಳಿದರು. ಉಳಿದ ಋಷಿಗಳೆಲ್ಲ ಅವರ ಕಾಲಿಗೆ ಬಿದ್ದರು. ವಿಶ್ವಮಿತ್ರರೀಗ ಬ್ರಹ್ಮತೇಜಸ್ಸಿನಿಂದ ಬೆಳಗುತ್ತ ದರ್ಭಾಸನದ ಮೇಲೆ ವಸಿಷ್ಠರನ್ನು ಕೂಡಿಸಿ ಅವರ ಪಾದಗಳನ್ನು ಹರಿವಾಣದಲ್ಲಿಟ್ಟು, ತೊಳೆದು, ಬಯಸುತ್ತಿದ್ದಂತೆಯೇ ಪ್ರತ್ಯಕ್ಷವಾದ ಎಲ್ಲ ಪೂಜಾ ಸಾಮಗ್ರಿಗಳಿಂದಲೂ ಅವರನ್ನು ಪೂಜಿಸಿದರು. 
(ಪೂಜಯಾಮಾಸ ಬ್ರಹ್ಮರ್ಷಿಂ ವಸಿಷ್ಠಂ ಜಪತಾಂ ವರಂ)
ಈ ದೃಶ್ಯವನ್ನು ಕಂಡು ದೇವತೆಗಳು, ದೇವರ್ಷಿಗಳು, ಉಳಿದ ಬ್ರಹ್ಮರ್ಷಿಗಳು, ಋಷಿಗಳು ಆ ಸುಂದರ ಮಿಲನವನ್ನು; ಗುರು ಪೂಜೆಯನ್ನು ಕಣ್ಣಲ್ಲಿ ತುಂಬಿಕೊಂಡರು.
*****************
ವಿಶ್ವಮಿತ್ರರು ಬ್ರಹ್ಮರ್ಷಿಗಳಾದ ಪ್ರಮುಖ ಚಿತ್ರಗಳೆಲ್ಲ ಹಾದು ಹೋಗುತ್ತಿವೆ ದಶರಥನ ಕಣ್ಣ ಮುಂದೆ. ತಲೆಕೊಡಹಿ ಎದ್ದ. " ಬೇಗ ಮಧುಪರ್ಕಕ್ಕೆ ಅಣಿಮಾಡಿ! ರಾಜಪುರೋಹಿತರಿಗೆ ಕರೆ ಕಳುಹಿಸಿ! ವಿಶ್ವಮಿತ್ರರು ನೇರ ಯಾಗಶಾಲೆಗೆ ಹೋಗಲಿ. ಅಲ್ಲಿ ಅಗ್ನಿ ಸಂಧಾನ ಮಾಡಿ ಆಸ್ಥಾನಕ್ಕೆ ಬರಲಿ. ಅಲ್ಲಿ ಅವರನ್ನು ಸಕಲ ಗೌರವಗಳಿಂದ ಸ್ವಾಗತಿಸಲು ಏರ್ಪಾಟು ಮಾಡಿ. ತ್ರಯಂಬಕ ದೀಕ್ಷಿತರಿಗೆ ಸ್ವಸ್ತಿ ವಾಚನಕ್ಕೆ ಹೇಳಿ. ಅರಮನೆಯ ಬಾಗಿಲಲ್ಲಿ ಯಜುರ್ವೇದಿಗಳ ಗಡಣ ನಿಂತಿರಲಿ. ಪೂರ್ಣಕುಂಭವನ್ನು ..."ಒಂದೇ ಸಮನೆ ಉದ್ವಿಗ್ನನಾಗಿ ದಶರಥ ಆಙ್ಞೆಗಳ ಮೇಲೆ ಆಙ್ಞೆ ಮಾಡುತ್ತ, " ವಸಿಷ್ಠ ವಾಮದೇವರುಗಳನ್ನು ತನ್ನಿ! " ಶ್ರೀಯಙ್ಞ, ಜಾಬಾಲಿ, ಕಾಶ್ಯಪ, ಗೌತಮ... ಇತ್ಯಾದಿ ಋತ್ವಿಜರೊಡನೆ ಸ್ವಾಗತಿಸಲು ಅರಮನೆಯ ಹೆಬ್ಬಾಗಿಲಿಗೆ ಬರುವ ಹೊತ್ತಿಗೆ, " ಶನ್ನೋ ಮಿತ್ರಶ್ಶಂ ವರುಣಃ ಶನ್ನ ಇಂದ್ರೋ ಬೃಹಸ್ಪತಿಃ ... " ತೈತ್ತಿರೀಯ ಘೋಷದ ಹಿಂದೆ ವೇದಾಧ್ಯಯನಿಗಳ ಮಧ್ಯದಲ್ಲಿ ಬಿಲ್ವ ಪತ್ರ ಮಾಲೆ ಧರಿಸಿ ಬರುತ್ತಿದ್ದಾರೆ ವಿಶ್ವಮಿತ್ರರು. 
ಸುಕ್ಕಿರದ ಚರ್ಮ, ತೇಜಸ್ವೀ ಮುಖ, ಹಣೆಯ ತ್ರಿಪುಣ್ಡ್ರ, ನೀಳ ನಾಸಿಕ, ಗೋಪುರ ಜಟೆ, ನಿಡಿದಾದ ನಡೆ, ಬಲಗೈಲಿ ಬ್ರಹ್ಮದಂಡ. (ಅದನ್ನು ಕಾಣುತ್ತಿದ್ದಂತೆಯೇ ವಸಿಷ್ಠರ ಮೊಗದಲ್ಲಿ ಪುಟ್ಟ ನಗು!!). ಎಡಗೈಲಿ ಕಮಂಡುಲ. ಮಣಿ ಕಟ್ಟು, ಮೊಣಕೈ, ಭುಜದಲ್ಲಿ ರಾರಾಜಿಸುವ ವಿಭೂತಿ. ನೂರು ವೇದ ಪಠಣದ ವಿದ್ಯಾರ್ಥಿಗಳದೇ ಒಂದು ಧ್ವನಿಯಾದರೆ, ಅವರೆಲ್ಲರನ್ನೂ ಮೀರಿಸುವ ವಿಶ್ವಮಿತ್ರರದೇ ಒಂದು ಘಂಟಾರವ. 
ಕಾಲಿಗೆ ಬಿದ್ದ ದಶರಥನನ್ನು ಆದರದಿಂದೆತ್ತಿ ಕುಶಲ ವಿಚಾರಿಸುತ್ತಿದ್ದಂತೆಯೇ, ಪಕ್ಕದಲ್ಲಿದ್ದ ತನ್ನನ್ನು ಉದ್ಧರಿಸಿದ ವಸಿಷ್ಠರಿಗೆ ಬಾಗಿ ಅವರ ಕಾಲು ಹಿಡಿಯ ಹೊರಟ ವಿಶ್ವಮಿತ್ರರನ್ನು ತಬ್ಬಿ ಸಂತೈಸಿದರು ವಸಿಷ್ಠರು. ಯಾಗ, ಧ್ಯಾನಗಳ ಬಗ್ಗೆ ಕುಶಲೋಪರಿ. " ಕಲ್ಯಾಣ ಕಾರ್ಯ ಒಂದನ್ನು ಮಾಡಿ ಹಿಮಾಲಯಕ್ಕೆ ಹೋಗಬೇಕೆಂದಿರುವೆ. ಬಹುಪಾಲು ಈ ಯುಗದಲ್ಲಿ ನಾನು ನಿಮ್ಮನ್ನು ಮತ್ತೆ ನೋಡಲಾರೆನೇನೋ ಎನಿಸುತ್ತದೆ. ದ್ವಾಪರದಲ್ಲಿ ಭೇಟಿಯಾಗಬಹುದು. ಅಲ್ಲಿವರೆಗೆ ನಾನು ಮಂಜು ಮನೆಯಲ್ಲಿ ಸಾವಿರಾರು ವರ್ಷ ತಪ ಮಾಡುವ ನಿಶ್ಚಯ ಮಾಡಿರುವೆ. ತಮ್ಮ ಆಶೀರ್ವಾದ ಬೇಕು". ಅಂತಹ ದೀರ್ಘ ಸಂಕಲ್ಪವೇ ಅವರದು. ಸಾವಿರಾರು ವರ್ಷಗಳಂತೆ! ಈ ಯುಗದಲ್ಲೇ ಮತ್ತೆ ಭೇಟಿ ಅಸಾಧ್ಯವಂತೆ! ಈ ಮಹಾಶಕ್ತನ ಮನಸ್ಸಿನಲ್ಲಿ ಏನಿದೆಯೋ, ಇರಲಿ.... ಯೋಚಿಸುತ್ತ ವಸಿಷ್ಠರೆಂದರು, "ಕಲ್ಯಾಣ ಕಾರ್ಯ?." ನಸುನಕ್ಕ ವಿಶ್ವಮಿತ್ರರು, " ನೀವಿಲ್ಲದೇ ನೆಡೆದಾತೇ ಅದು?"... ಎಂದು ಯಾವುದನ್ನೂ ಖಚಿತ ಪಡಿಸದೇ ಮುಂದಡಿಯಿಟ್ಟರು. 
ತನ್ನ ಸಿಂಹಾಸನದಲ್ಲಿಯೇ ಕೂಡಿಸಿದ್ದಾಯಿತು. ಪಾದ ತೊಳೆದಿದ್ದಾಯಿತು. ಸಾವಿರ ಹಸುಗಳನ್ನು ದಾನ ಮಾಡಿದ್ದಾಯಿತು. ಕೊನೆಗೆ ಕೈಕಟ್ಟಿ ಕೇಳಿದ ದಶರಥ"ದಾನ ಮಾಡಲು ಉತ್ತಮ ಪಾತ್ರ ಸಿಗುವುದು ಬಹು ಕಷ್ಟವಂತೆ. ತಮ್ಮನ್ನು ಮೀರಿದ ಉತ್ತಮ ಪಾತ್ರರಾರುಂಟು? ನನ್ನ ಭಾಗ್ಯ ಪಲ್ಲವಿಸಿ ತಾವು ದಯಮಾಡಿಸಿದ್ದೀರಿ. ಹುಟ್ಟು ಸಾರ್ಥಕವಾಯಿತು. ರಾಜರ್ಷಿಯಾಗಿ ಕ್ಷತ್ರಿಯರಿಗೇ ತಾವು ಶ್ರೇಷ್ಠರು. ಬ್ರಹ್ಮರ್ಷಿಗಳಾದಮೇಲೆ ತಾವು ವಸಿಷ್ಠರಿಗೆ ಸಮರಾಗಿ ಮತ್ತೂ ನಿಯಾಮ್ಯರು. ಹೇಳಿ ಮಹಾಸ್ವಾಮಿ, ತಮ್ಮ ಇಷ್ಟ ಏನು? ನಾನೇನನ್ನು ಮಾಡಬೇಕು? ಏನನ್ನು ನೆರವೇರಿಸಲಿ? 
(ಪಾತ್ರ ಭೂತೋಸಿ ಮೇ ಬ್ರಮ್ಹನ್ ದಿಷ್ಟ್ಯಾ ಪ್ರಾಪ್ತೋಸಿ ಧಾರ್ಮಿಕ 
ಅದ್ಯ ಮೇ ಸಫಲಂ ಜನ್ಮ ಜೀವಿತಂಚ ಸು ಜೀವಿತಂ 
ಪೂರ್ವಂ ರಾಜರ್ಷಿ ಶಬ್ದೇನ ತಪಸಾ ದ್ಯೋತಿತಪ್ರಭಃ
ಬ್ರಮ್ಹರ್ಷಿತ್ವಂ ಅನುಪ್ರಾಪ್ತಃ ಪೂಜ್ಯೋಸಿ ಬಹುಧಾಮಯಾ
ಕಂ ಚ ತೇ ಪರಮಂ ಕಾಮಂ ಕರೋಮಿ ಕಿಮು ಹರ್ಷಿತಃ )
ಸಂತುಷ್ಟರಾದ ವಿಶ್ವಮಿತ್ರರು ಸುತ್ತು ಬಳಸದೇ ನೇರ ವಿಷಯಕ್ಕೆ ಬಂದರು. "ರಾವಣನ ಹೆಸರು ನಿನಗೆ ಗೊತ್ತು. ಅವನು ಲಂಕೆಯಲ್ಲಿದ್ದರೂ ಅವನ ಬೇಹುಗಾರ ಪಡೆ ದಂಡಕಾರಣ್ಯದಲ್ಲಿದೆ. ಅದರ ಮುಖ್ಯಸ್ಠರು ಖರ, ದೂಷಣ, ತ್ರಿಶಿರರು. ಅವರ ಮುಖ್ಯೋದ್ದೇಶ ಈ ಕಡೆ, ಅಂದರೆ ಈ ಅಯೋಧ್ಯೆ ಇತ್ಯಾದಿ... 
ಉತ್ತರದ ಕಡೆಯಿಂದ ಯಾರೂ ದಕ್ಷಿಣಕ್ಕೆ ಬರಬಾರದೆಂಬುದು. ಅದಕ್ಕಾಗಿ ಅತ್ತ ಕಡೆ ಯಾರೇ ಹೆಜ್ಜೆಯಿಟ್ಟರೂ ಅವರನ್ನು ಮಾರ್ಗ ಮಧ್ಯದಲ್ಲಿಯೇ ವಧಿಸುವುದು. ಅವನ ಎರಡನೆಯ ಕಾರ್ಯ ಅರಣ್ಯದಲ್ಲಿರುವ ಮಹರ್ಷಿಗಳ ಯಾಗಗಳನ್ನು ಧ್ವಂಸ ಮಾಡುವುದು.  ಬ್ರಾಹ್ಮಣ ತಂದೆಗೆ ಹುಟ್ಟಿದರೂ, ಅವನಪ್ಪ ಅವನನ್ನು ತನ್ನ ವಂಶಸ್ಥನೆಂದು ಪರಿಗಣಿಸದ್ದರಿಂದ ರಾವಣನಿಗೆ ಬ್ರಾಹ್ಮಣರ ಮೇಲೆ, ಅವರ ದೇವರುಗಳ ಮೇಲೆ ಮಹಾ ವಿರೋಧ.  ಅದಕ್ಕಾಗಿ ಈ ಯಙ್ಞ ಧ್ವಂಸ, ಹಾಗೂ ಋಷಿ ಮರ್ದನ". ದಶರಥನಿಗೆ ಅವರೇನು ಹೇಳುತ್ತಿದ್ದಾರೆಂದೇ ಅರ್ಥವಾಗುತ್ತಿಲ್ಲ. ಅದಕ್ಕಿನ್ನ ಮುಖ್ಯವಾಗಿ ರಾವಣನ ಹೆಸರು ಕೇಳಿಯೇ ಒಂದು ತರಹದ ತಲ್ಲಣ ಶುರುವಾಗಿತ್ತು. ತನ್ನ ವಂಶದ ಅನರಣ್ಯನನ್ನು ಸಾಯಿಸಿದವ. ಆದರೆ ಈ ವಿಶ್ವಮಿತ್ರರಿಂದ ಈಗ ಏಕೆ ಈ ಅಪ್ರಿಯ ವಿಷಯ??
-ಡಾ.ಪಾವಗಡ ಪ್ರಕಾಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com