ಮೂರ್ಛಿತ ದಶರಥ

"ಆ ನಿನ್ನ ಮಗ ರಾಮ ಅವನು ರಾಕ್ಷಸರಾದ ಮಾರೀಚ ಹಾಗೂ ಸುಬಾಹುರನ್ನು ಧ್ವಂಸ ಮಾಡಬಲ್ಲ... ವಿಶ್ವಮಿತ್ರರು ಇನ್ನೂ ಏನೇನೋ ಹೇಳುತ್ತಿದ್ದಾರೆ, ದಶರಥನಿಗೆ ಕೇಳಿಸುತ್ತಿಲ್ಲ, ತಲೆ ತಿರುಗುತ್ತಿದೆ, ಕಣ್ಣು...
ದಶರಥ-ವಿಶ್ವಾಮಿತ್ರ-ವಸಿಷ್ಠರು(ಸಾಂಕೇತಿಕ ಚಿತ್ರ)
ದಶರಥ-ವಿಶ್ವಾಮಿತ್ರ-ವಸಿಷ್ಠರು(ಸಾಂಕೇತಿಕ ಚಿತ್ರ)
ವಿಶ್ವಮಿತ್ರರು ಮುಂದುವರಿಸಿದರು. "ಆ ಗುಂಪಿನ ಪ್ರಮುಖರಿಬ್ಬರು. ಮಾರೀಚ ಹಾಗೂ ಸುಬಾಹು". ಅವರ ಹೆಸರು ಕೇಳುತ್ತಿದ್ದಂತೆಯೇ ಧಸಕ್ಕೆಂದಿತು ದಶರಥನ ಎದೆ. 
ಹಿಂದೊಮ್ಮೆ ಯಾವುದೋ ಸಂದರ್ಭದಲ್ಲಿ ಅವನ ಶಕ್ತಿಯನ್ನು, ಅವನ ಮಾಯಾ ಚಮತ್ಕಾರಗಳನ್ನೂ ನೋಡಿದ್ದ. ಅವನನ್ನು ಸೋಲಿಸುವುದಾಗದಿದ್ದರೂ ನೂರು ಕುರಿಗಳನ್ನು, ಎರಡು ಕೋಣಗಳನ್ನು ಅವನ ಆಹಾರಕ್ಕಾಗಿ ಕೊಟ್ಟು ಅವನನ್ನೆಂತೋ ಸಮಾಧಾನ ಪಡಿಸಿ ಕಳಿಸಿದ್ದ. "ಆ ಮಾರೀಚ ಸುಬಾಹುಗಳು ನಾನು ಯಙ್ಞಕ್ಕೆ ಕುಳಿತಾಗ ಇನ್ನೇನು ಪೂರ್ಣಾಹುತಿಯ ಹೊತ್ತಿಗೆ ಯಙ್ಞಕುಂಡಕ್ಕೆ ರಕ್ತಮಾಂಸಗಳನ್ನು ಸುರಿದುಬಿಟ್ಟರು. ಎಲ್ಲಾ ಕೆಟ್ಟುಹೋಯಿತು. 
(ಸ ಮಾಂಸ ರುಧಿರೌಘೇನ ವೇದಿಂ ತಾಂ ಅಭ್ಯವರ್ಷತಾಂ)
ಬ್ರಹ್ಮರ್ಷಿಯಾದಾಗ ಯಙ್ಞಮುಖದಲ್ಲಿ ನಾನು ಸಿಟ್ಟುಗೊಳ್ಳುವುದಿಲ್ಲವೆಂದು ನಿರ್ಣಯಿಸಿ ಕೊಂಡದ್ದರಿಂದ ಶಾಪವನ್ನು ಕೊಡಲಾಗಲಿಲ್ಲ.
(ನ ಚ ಮೇ ಕ್ರೋಧಮುತ್ಸ್ರಷ್ಟುಂ ಬುದ್ಧಿರ್ಭವತಿ ಪಾರ್ಥಿವ)
ಹೇಗೂ ನಾನವರನ್ನು ಶಪಿಸೊಲ್ಲವೆಂದು ಅವರಿಗೆ ಗೊತ್ತಿದೆ. ಹಾಗಾಗಿ ಮತ್ತೆ ಮತ್ತೆ ವಿಘ್ನ ಮಾಡುತ್ತಲೇ ಇದ್ದಾರೆ. ಹೀಗೇ ಮುಂದುವರಿದರೆ ಯಾಗ ಸಮಾಪ್ತಿ ಆಗುವುದೇ ಇಲ್ಲ. ಕೊನೆಗೆ ನಿಶ್ಚಯ ಮಾಡಿದೆ, ನನ್ನಕ್ಕನ ಮೊಮ್ಮೊಗನ ಸಿದ್ಧಾಂತ " ಶಾಪಾದಪಿ ಶರಾದಪಿ" -ಶಾಪ ಕೊಟ್ಟಾದರೂ ಸುಟ್ಟುಬಿಡಬೇಕು, ಅಥವ ಶಸ್ತ್ರ ಹಿಡಿದಾದರೂ ನಾಶ ಮಾಡಬೇಕು. ಅದಕ್ಕಾಗಿ ನಿನ್ನ ಬಳಿಗೆ ಬಂದೆ".
ಇದ್ದಕ್ಕಿದ್ದಂತೆಯೇ ಬಾಣ ತನ್ನ ಕಡೆಗೇ ತಿರುಗುತ್ತದೆಂದುಕೊಂಡಿರಲೇ ಇಲ್ಲ. ಅಬ್ಬಬ್ಬ! ಆ ಮಾರೀಚ ಸುಬಾಹುಗಳನ್ನೆದರಿಸುವ ಶಕ್ತಿ ನನಗಿದೆಯೇ? ಅದರಲ್ಲಿಯೂ ಈಗ ಮುದುಕನಾಗಿಬಿಟ್ಟಿದ್ದೇನೆ. ಏನು ಮಾಡುವುದು? ಯೋಚನೆಯಲ್ಲಿದ್ದ ದಶರಥನಿಗೆ ಛಡಿ ಏಟು; ಗುಡುಗಿದ ಸದ್ದು. ನೆಲ ಬಿರಿದಂತೆ, ಎದೆ ಇರಿದಂತೆ ವಿಶ್ವಮಿತ್ರರು ಮುಂದುವರಿಸಿದ್ದಾರೆ; ರಾಜನ ಸ್ಥಿತಿ ಅರಿವಾಗದೆ." ಅವರ ಮರ್ದನಕ್ಕೆ... ಆ ನಿನ್ನ ಮಗ ರಾಮ, ಗುಂಗರು ಕೂದಲ ಕಿಶೋರನೆನ್ನಬೇಡ, ಅವನು ಮಹಾ ಶೂರ. ಅವನನ್ನು ನಾನು ರಕ್ಷಿಸುವೆ. ನನ್ನ ರಕ್ಷಣೆ ಏನು ಬಂತು, ಅವನಲ್ಲೇ ದಿವ್ಯ ತೇಜಸ್ಸಿದೆ. ಅದರಿಂದಲೇ ಅವನು ಯಾಗ ಧ್ವಂಸಕರನ್ನು ಧ್ವಂಸ ಮಾಡಬಲ್ಲ. 
(ಕಾಕ ಪಕ್ಷ ಧರಂ ಶೂರಂ ಜೇಷ್ಠಂ ಮೇ ದಾತುಂ ಅರ್ಹಸಿ
ಶಕ್ತೋಹ್ಯೇಶ ಮಯಾ ಗುಪ್ತೋ ದಿವ್ಯೇನ ಸ್ವೇನ ತೇಜಸಾ
ರಾಕ್ಷಸಾ ಏ ವಿಕರ್ತಾರಸ್ತೇಷಾಮಪಿ ವಿನಾಶನೇ)
.... ವಿಶ್ವಮಿತ್ರರು ಇನ್ನೂ ಏನೇನೋ ಹೇಳುತ್ತಿದ್ದಾರೆ, ದಶರಥನಿಗೆ ಕೇಳಿಸುತ್ತಿಲ್ಲ, ತಲೆ ತಿರುಗುತ್ತಿದೆ, ಕಣ್ಣು ಕತ್ತಲಿಡುತ್ತಿದೆ, ಕಾಲು ನಡುಗುತ್ತಿದೆ, ನಿಲ್ಲಲೇ ಆಗುತ್ತಿಲ್ಲ, ತಲೆ ಸುತ್ತಿ ಬಿದ್ದೇ ಬಿಟ್ಟ.
***************
ಉಷಃ ಕಿರಣಗಳು. ಸುತ್ತಲ ಕಾಡಿನ ಹಸುರುಕೋಟೆ, ನಳನಳಿಸುತ್ತಿರುವ ಚಿಗುರು, ಇಬ್ಬನಿಗಳ ಮಣಿಗಳು, ಕೇಸರಿ ಗುಂಡು ಸೂರ್ಯನ ಉದಯ. ತಾನು ರಾಜ್ಯ ಬಿಟ್ಟು ಹಿಮಗಿರಿಗೆ ಮೊದಲ ಬಾರಿಗೆ ಹೋದಾಗ ಅರಮನೆ, ಸುಪ್ಪತ್ತಿಗೆ ಇಲ್ಲದೇ; ಬಿಸುಪು ಹೊದಿಕೆ ಇಲ್ಲದೇ; ಬೇಕೆಂದರೆ ಬರುವ ದಾಸ ದಾಸಿಯರಿಲ್ಲದೇ; ಬೆಳಗೆದ್ದರೆ ಬಿಸಿನೀರಿನ ಸ್ವಾಗತವಿಲ್ಲದೇ; ಮಜ್ಜನ, ವಸ್ತ್ರಾಛ್ಛಾದನ, ಉಪಾಹಾರಗಳಿಲ್ಲದೇ.... ಒಟ್ಟಿನಲ್ಲಿ ಯಾವ ಸಹಾಯ ಸಿದ್ಧತೆಗಳೂ ಇಲ್ಲದೇ, ತಾನು ಏಕಾಂಗಿಯಾಗಿ ಮರದ ಬೊಡ್ಡೆಗೆ ತಲೆಯಿಟ್ಟು, ಕೊರೆವ ಛಳಿಯಲ್ಲಿ ನೆಲದ ಮೇಲೋ, ತರೆಗೆಲೆಗಳ ಮೇಲೋ, ಹುಲ್ಲಿನ ಮೇಲೋ, ಮಲಗಿ, ನಿದ್ದೆಯಿರದೆ ಮೊಂಪರು ಮೊಂಪರು ಗತ ಘಟನೆಗಳನ್ನೇ ಮೆಲುಕು ಹಾಕುತ್ತ, ನಿದ್ದೆಯೂ ಬಾರದೆ ಆ ಛಳಿ-ಛಳಿಯಲ್ಲಿ ಥರ ಥರ ನಡುಗುತ್ತ, ಇಡೀ ರಾತ್ರಿ ಕಳೆದು, ಬಿಸಿಲಿಗೇ ಕಾಯುತ್ತಿದ್ದೆ; ಬೇಡುತ್ತಿದ್ದೆ. ಆದರೆ ಆ ಸೂರ್ಯನೋ ಕೇಳಿ ಕೇಳಿ ಘಂಟೆಗಳಾದಮೇಲೆ ದಯಮಾಡಿಸುತ್ತಿದ್ದ!! ಓಹ್ ! ಪ್ರಾರಂಭದ ದಿನಗಳು ತನಗೆ ತುಂಬ ತುಂಬಾ ಕಷ್ಟವಾಗಿತ್ತು. 
ಆದರೆ ಈ ಬಾಲಕ, ಒಂದರ್ಥದಲ್ಲಿ ಮಗುಮೋರೆಯ ಅರ್ಭಕ, ಅದೆಷ್ಟು ನಿಶ್ಚಿಂತನಾಗಿ ಮಲೆಗಿಬಿಟ್ಟಿದ್ದಾನೆ? ಸುಂದರಾಂಗ,  ಶಾಮಲಾಂಗ, ಸುಕುಮಾರಾಂಗ, ಸುಮಧುರಾಧರಾಂಗ...ಇವನನ್ನು ನೋಡುತ್ತಿದ್ದರೆ ಹಾಗೇ ನೋಡುತ್ತಲೇ ಇರಬೇಕೆಂಬಷ್ಟು ಅಂದ-ಚಂದದ ಆಕರ್ಷಕ ಮುಖ. ದೇಹವನಕ ಸತತಾಭ್ಯಾಸದಿಂದ ಗಟ್ಟಿಮುಟ್ಟಾಗಿದೆ. ಮುಖದಂತೆ ಮೃದುವಾಗಿರುವ ಭಾವ ಹುಟ್ಟಿಸಿದರೂ ಅದು ಗಡುಸು ಜಟ್ಟಿ ದೇಹ. ತಾನು ಕಂಡು ಕೇಳಿರದ ಪಿತೃ ಭಕ್ತಿ. ಅಪ್ಪ ಕರೆಕಳಿಸುತ್ತಿದ್ದಂತೆಯೇ ಅವನಾಣತಿಯಂತೆ ನನ್ನ ಕಾಲಿಗೆ ಬಾಗಿದ. ಯಾರನ್ನೂ ಬಾಗಿಸಬಲ್ಲ ಬಲಶಾಲಿ, ಎಲ್ಲರನ್ನೂ ತನ್ನೆಡೆಗೆ ಸೆಳೆದು ಮಣಿಸಬಲ್ಲ ಪುರುಷೋತ್ತಮ ನನ್ನ ಕಾಲಿಗೇ ಬಿದ್ದುಬಿಟ್ಟ. ತನ್ನ ಪೂರ್ವವನ್ನೆಲ್ಲ ಮರೆಗಿಟ್ಟು ಮರೆತಿದ್ದ. ಬ್ರಹ್ಮನಿಗೆ ಮಾತು ಕೊಟ್ಟಂತೆಯೇ ಮನುಷ್ಯನಾಗಿಬಿಟ್ಟಿದ್ದ; ಅಪ್ಪಟ !! 
ತನ್ನ ಅದೃಷ್ಟ ಎಂತುಹುದು ಇದು?! ಬ್ರಹ್ಮಾನುಭವಕ್ಕೆ, ಬ್ರಹ್ಮ ಸಾಕ್ಷಾತ್ಕಾರಕ್ಕೆ ತಪಿಸಿದವರು, ತಪಿಸುತ್ತಿರುವವರು, ಸೇವಿಸುತ್ತಿರುವವರು, ಸಾಧನೆ ಮಾಡುತ್ತಿರುವವರು ಅದೆಷ್ಟು ಸಾವಿರ! ತನಗೆ ಒಲಿದೇ ಬಿಟ್ಟಿತು; ಪರಬ್ರಹ್ಮನ ಪುರುಷೋತ್ತಮ ರೂಪ. ಅವತರಿಸಿಯೇ ಬಿಟ್ಟ ! ನನಗೆ ಗುರುತ್ವ ಕೊಟ್ಟು ಉಪಕರಿಸಿಯೂ ಬಿಟ್ಟ. 
ಓಹ್ ! ವಸಿಷ್ಠರು ಅದೆಷ್ಟು ದೊಡ್ಡವರು! ಅವರಿಗೆ ಮಾತ್ರ ಗೊತ್ತಿತ್ತು ಈ ರಾಮ ನಾರಾಯಣನೆಂದು. ಅವರ ಗರಡಿಯಲ್ಲೇ ಆತ ತಯಾರಾಗುತ್ತಿದ್ದ. ಅವರಿಂದ ಎಲ್ಲ ಶಾಸ್ತ್ರಗಳನ್ನು ಕಲಿತಿದ್ದ. ಶಸ್ತ್ರಾಭ್ಯಾಸವೂ ಆಗಿತ್ತು. ಆದರೆ ವಸಿಷ್ಠರಿಗೆ ಶಾಸ್ತ್ರದಲ್ಲಿರುವ ನಂಬಿಕೆ ಶಸ್ತ್ರದಲ್ಲಿ ಇಲ್ಲ. ಆಸಕ್ತಿಯೂ ಕಡಿಮೆ. ಆದರೆ ರಾಮನಿಗೆ ಕ್ಷಾತ್ರ ಬೇಕಲ್ಲ? ಅದಕ್ಕೇ ತಮ್ಮ ಶಿಷ್ಯನನ್ನು ನನಗೊಪ್ಪಿಸಿಬಿಟ್ಟರು. ತಮಗೆ ಸಿಕ್ಕಿರುವ ರಾಮ ಗುರುಪಟ್ಟವನ್ನು ನನಗೆ ಕೊಟ್ಟುಬಿಟ್ಟರು! ನಿಜಕ್ಕೂ ಅವರು ದೊಡ್ಡವರೇ. ಅವರದು ವಿಶಾಲ ಮನಸ್ಸು. ಅವರನ್ನೇ ಸಾಯಿಸಲು ಹೋದವನ ಬಗ್ಗೆಯೂ ಅವರಿಗಿರುವ ಕರುಣೆ ಅದೆಷ್ಟು! ವಸಿಷ್ಠರನ್ನು ಅರ್ಥಮಾಡಿಕೊಳ್ಳುವುದು ಬಹು ಕಷ್ಟ. 
ದಶರಥ ತನ್ನ ಮಗನನ್ನು ಕಳಿಸಲಾಗದೇ ಒದ್ದಾಡುತ್ತಿದ್ದಾಗ ಎಂತಹ ಮಾತನಾಡಿಬಿಟ್ಟರು ವಸಿಷ್ಠರು! " ರಾಜ, ಇಕ್ಷ್ವಾಕು ವಂಶದಲ್ಲಿ ಧರ್ಮ ಪುರುಷನಾಗಿ ಹುಟ್ಟಿರುವೆ. ಮೂರು ಲೋಕಗಳಲ್ಲಿಯೂ ನೀನು ಧರ್ಮಾತ್ಮ ಎಂದು ಪ್ರಖ್ಯಾತನಾಗಿದ್ದೀಯೆ. 
ರಾಮನಿನ್ನೂ ಹುಡುಗ. ಅವನಿಗೆ ಮೀಸೆ ಕೂಡ ಮೂಡದ ವಯಸ್ಸು. ಅವನಿಗೆ ರಾಕ್ಷಸರಿಂದ ಏನೋ ಅನಾಹುತವಾಗುತ್ತದೆಯೆಂದು ಎಣಿಸುತ್ತಿರುವೆ. ನಿನಗೆ ಗೊತ್ತಿಲ್ಲ, ರಾಮ ಈಗಾಗಲೇ ಮಹಾ ಧನುರ್ಧಾರಿ. ಅದೇನೇ ಇರಲಿ, ಅವನು ಸಮರ್ಥನಿರಲೀ ಬಿಡಲಿ, ವಿಶ್ವಮಿತ್ರರ ಬಳಿಯಿದ್ದಾನೆಂದರೆ ಅಗ್ನಿ ರಕ್ಷೆಯಲ್ಲಿರುವ ಅಮೃತದಂತೆ. ವಿಶ್ವಮಿತ್ರರನ್ನು ಏನೆಂದುಕೊಂಡಿರುವೆ? ಅವರು ಧರ್ಮಕ್ಕೇ ಆಕಾರ ಕೊಟ್ಟಂತೆ. ಶೌರ್ಯವೇ ಮೂರ್ತಿವೆತ್ತಂತೆ. ಪ್ರಪಂಚದಲ್ಲಿಯ ಬುದ್ಧಿಶಾಲಿಗಳಲ್ಲಿ ಪ್ರಥಮರು. ತಪಸ್ಸೆಂದರೆ ವಿಶ್ವಮಿತ್ರರು, ವಿಶ್ವಮಿತ್ರರೆಂದರೆ ತಪಸ್ಸು. ತ್ರಿಲೋಕದಲ್ಲಿರುವ ಮಂತ್ರಾಸ್ತ್ರವೆಲ್ಲ ಇವರಿಗೆ ಗೊತ್ತಿದೆ. ಗೊತ್ತಿರುವುದಷ್ಟೇ ಅಲ್ಲ, ಮನಸ್ಸು ಮಾಡಿದರೆ ಹಿಂದಿರದ ಅಪೂರ್ವ ಮಂತ್ರಾಸ್ತ್ರಗಳನ್ನು ಸೃಷ್ಟಿ ಮಾಡಬಲ್ಲ ಮಹಾತ್ಮರು. ನಮ್ಮ ಮಧ್ಯದಲ್ಲಿ, ಎಂದರೆ ಮುನಿ ಮಧ್ಯದಲ್ಲಿ ಅವರೇ ಎಲ್ಲ ಅರಿತವರು. ಮಹಾತ್ಮರು. ಅವರಿಗೆ ತಿಳಿಯದ ಭೂತ ಭವಿಷ್ಯತ್ ವರ್ತಮಾನಗಳಿಲ್ಲ. ಅಂತಹ ಮಹಾ ವೀರ್ಯವಂತರು. ಮಹಾ ತೇಜಸ್ವಿಗಳವರು. ಅವರಿದ್ದೆಡೆ ಯಶಸ್ಸು. ಇಂತಹ ಅಪೂರ್ವ ಋಷಿ ನಿಧಿಯೊಡನೆ ನಿನ್ನ ಮಕ್ಕಳನ್ನು ಕಳಿಸಲು ಸಂದೇಹ ಪಡಬೇಡ."
(ಇಕ್ಷ್ವಾಕೂಣಾಂ ಕುಲೇ ಜಾತಃ ಸಾಕ್ಷಾತ್ ಧರ್ಮ ಇವಾಪರಃ
ತ್ರಿಷು ಲೋಕೇಷು ವಿಖ್ಯಾತೋ ಧರ್ಮಾತ್ಮ ಇತಿ ರಾಘವಃ 
ಕೃತಾಸ್ತ್ರಂ ಅಕೃತಾಸ್ತ್ರಂ ವಾ ನೈನಂ ಶಕ್ಯಂತಿ ರಾಕ್ಷಸಾಃ
ಗುಪ್ತಂ ಕುಶಿಕ ಪುತ್ರೇಣ ಜ್ವಲನೇನ ಅಮೃತಂ ಯಥ
ಏಷ ವಿಗ್ರಹವಾನ್ ಧರ್ಮಃ ಏಷ ವೀರ್ಯವತಾಂ ವರಃ
ಏಷ ಬುಧ್ಯಾಧಿಕೋ ಲೋಕೆ ತಪಸಶ್ಚ ಪರಾಯಣಂ
ಏಷ ಅಸ್ತ್ರಾನ್ ವಿವಿಧಾನ್ ವೇತ್ತಿ ತ್ರೈಲೋಕ್ಯೇನ ಚರಾಚರೇ
ಅಪೂರ್ವಾಣಾಂಚ ಜನನೇ ಶಕ್ತೋ ಭೂಯಃ ಸ ಧರ್ಮವಿತ್
ತೇನ ಅಸ್ಯ ಮುನಿಮುಖ್ಯಸ್ಯ ಸರ್ವಙ್ಞಸ್ಯ ಮಹಾತ್ಮನಃ
ನ ಕಿಂಚಿದಪಿ ಅವಿದಿತಂ ಭೂತಂ ಭವ್ಯಂಚ ರಾಘವ 
ಏವಂ ವೀರ್ಯೋ ಮಹಾತೇಜ ವಿಶ್ವಾಮಿತ್ರೋ ಮಹಾ ಯಶಾಃ
ನ ರಾಮಗಮನೇ ರಾಜಂ ಸಂಶಯಂ ಗಂತುಂ ಅರ್ಹಸಿ )
ಇಷ್ಟು ಬೆಂಬಲಿಸಿದಮೇಲೆ ತಾನೆ ದಶರಥನು ರಾಮನನ್ನು ಕಳಿಸಲು ಮನಸ್ಸು ಮಾಡಿದ್ದು ? .... ಹೀಗೆ ವಿಶ್ವಮಿತ್ರರ ಮನಸ್ಸು ಏನೇನನ್ನೋ ಯೋಚಿಸುತ್ತಿತ್ತು. ರಾಮ ಲಕ್ಷ್ಮಣರು ಕಾಡಿನಲ್ಲಿ ಮೊದಲ ರಾತ್ರಿ ಕಳೆದಿದ್ದರು. ಅವರಿಗದು ಒರಟು ನೆಲದ ಛಳಿಮನೆಯೆಂದು ಗೊತ್ತೇ ಆಗದಷ್ಟು ಸುಖವಾಗಿ ಮಲಗಿಬಿಟ್ಟಿದ್ದಾರೆ. ಆದರೆ ಏಕಿನ್ನೂ ಏಳುತ್ತಿಲ್ಲ? ಏಕೆ? ಓಹ್, ಅವರಿಗೆ ಅರಮನೆಯಲ್ಲಿ ಎಚ್ಚರಿಸುವ ವ್ಯವಸ್ಥೆ ಇತ್ತಲ್ಲ; ಹಾಗೆ ಅವರನ್ನು ಎಚ್ಚರಿಸಲು ವಂದಿಮಾಗಧರು, ಹೊಗಳು ಭಟ್ಟರು ಇಲ್ಲಿಲ್ಲವಲ್ಲ ? ಇರಲಿ, ಆ ಕೆಲಸವನ್ನು ನಾನೇ ಮಾಡುವೆ !!!!! 
" ಏಳು ಮೇಲೇಳು ಹೇ ರಾಮ ನೀನೇಳು 
ಏಳು ಕೌಸಲ್ಯಯಾ ಕಂದ ಬೇಗೇಳು
ಏಳಯ್ಯ ಜನರ ಕಣ್ಣಿನ ಕಣ್ಣಮಣಿಯೇಳು
ಪುರುಷ ಶಾರ್ದೂಲವೇ ನೀನು ಮೇಲೇಳು 
ಮೂಡಣದಿ ಮೂಡುತಿಹ ಬಾಲರವಿ ಏಳು 
ಸಂಧ್ಯೆಗಭಿವಂದಿಸುವ ಕರ್ತವ್ಯಕೇಳು 
ಆನ್ಹಿಕವನಾಚರಿಸಲುತ್ತಿಷ್ಠರಾಮ 
ರಾಮ ಉತ್ತಿಷ್ಠ ಉತ್ತಿಷ್ಠ ಶ್ರೀರಾಮ "
(ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾಸಂಧ್ಯಾ ಪ್ರವರ್ತತೆ
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾನ್ಹಿಕಂ)
-ಡಾ.ಪಾವಗಡ ಪ್ರಕಾಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com