'ಬೆಂಕಿ ಬಾಯಿನ ರಾಮ, ಗುಡುಗು ನಡಿಗೆಯ ರಾಮ, ವಿಷ್ಣು ಚಾಪವ ಹಿಡಿದ ಉರಿವ ರಾಮ'!

ವಸಿಷ್ಠರೇ ಬೆಚ್ಚಿದರೆಂದರೆ? ಹೌದು, ಬಂದಾತ ವಸಿಷ್ಠರಿಗೂ ಪೂಜ್ಯನಾಗಿದ್ದ. ಕ್ಷತ್ರಿಯರಿಗೆ ಯಮನಾಗಿದ್ದ. ವಿಷ್ಣುವಿನ ಅವತಾರವೆಂದು ಆಗ್ಗಾಗಲೇ ಪ್ರಸಿದ್ಧವಾಗಿದ್ದ. ಆ ಗಾತ್ರ ಭೀಮಗಾತ್ರ. ಭಾರೀ ಜಟೆ ಕಟ್ಟಿದ ಕೃಷ್ಣ ಗೋಪುರ.
ಪರಶುರಾಮ
ಪರಶುರಾಮ
ವಸಿಷ್ಠರೇ ಬೆಚ್ಚಿದರೆಂದರೆ? ಹೌದು, ಬಂದಾತ ವಸಿಷ್ಠರಿಗೂ ಪೂಜ್ಯನಾಗಿದ್ದ. ಕ್ಷತ್ರಿಯರಿಗೆ ಯಮನಾಗಿದ್ದ. ಹೌದು; ಆತನೇ ಪರುಶುರಾಮ. ವಿಷ್ಣುವಿನ ಆರನೆಯ ಅವತಾರವೆಂದು ಆಗ್ಗಾಗಲೇ ಪ್ರಸಿದ್ಧವಾಗಿದ್ದ. ಅಬ್ಬ! ಬ್ರಾಹ್ಮಣಿಕೆಗೆ ತದ್ವಿರುದ್ಧವಾದ ದಾರ್ಷ್ಠ್ಯ ಶರೀರ. ಆ ಗಾತ್ರ ಭೀಮಗಾತ್ರ. ಭಾರೀ ಜಟೆ ಕಟ್ಟಿದ ಕೃಷ್ಣ ಗೋಪುರ. ಅಪ್ಪನಂತೆ ಕೋಪಿಷ್ಠ. ಅವನು ಭೃಗು ವಂಶಸ್ಥನಾದ್ದರಿಂದ ಭಾರ್ಗವ ರಾಮನೆಂದು ಪ್ರಖ್ಯಾತಿ. ಕ್ಷತ್ರಿಯ ಮಾರಣ ಹೋಮಕ್ಕಾಗಿಯೇ 21 ಬಾರಿ ಭಾರತದ ಸುತ್ತ ಸುತ್ತಿ ಕ್ಷತ್ರಿಯರ ತಲೆ ತೆಗೆದ ಕೆಂಡದುಂಡೆಯ ಕ್ಷಾತ್ರಬ್ರಾಹ್ಮಣ. ಕೈಲಾಸಗಿರಿಯನ್ನು ದರ್ಶಿಸಲು ಸಾಧ್ಯವೇ? ಪ್ರಳಯದಲ್ಲಿ ಸರ್ವವನ್ನೂ ಸುಡುವ ಅಗ್ನಿಯ ತಾಪ ಸಹಿಸಲು ಸಾಧ್ಯವೇ? ಅಂತಹ ಪ್ರಖರ, ಪ್ರಚಂಡ, ಪ್ರಕೋಪ ಪ್ರಭೆ ಈ ಪರುಶುರಾಮರದು. ಆತನದು ತೇಜಸ್ಸಲ್ಲ, ಸುಡುವ ಮುಖ. ಅದನ್ನು ನೋಡಲೇ ಜನಸಾಮಾನ್ಯರಿಗೆ ಸಾಧ್ಯವಿಲ್ಲ. 
(ದದರ್ಶ ಭೀಮ ಸಂಕಾಶಂ ಜಟಾ ಮಂಡಲ ಧಾರಿಣಂ
ಭಾರ್ಗವಂ ಜಾಮದಗ್ನ್ಯಂ ತಂ ರಾಜ ರಾಜ ವಿಮರ್ದಿನಂ
ಕೈಲಾಸಮಿವ ದುರ್ಧರ್ಷಂ ಕಾಳಾಗ್ನಿಮಿವ ದುಸ್ಸಹಂ 
ಜ್ವಲಂತಂ ಇವ ತಜೋಭಿರ್ ದುರ್ನೀಕ್ಷ್ಯಂ ಪೃಥಗ್ಜನೈಹಿ)
ಶ್ರೀರಾಮರಿಗೆ ಕುತೂಹಲ. ಅಪ್ಪನೇ ನಡುಗುತ್ತಿದ್ದಾನೆಂದರೆ, ವಸಿಷ್ಠರೇ ಈತನಿಗೆ ನಮಿಸಿ ಪೂಜೆ ಮಾಡುತ್ತಿದ್ದಾನೆಂದರೆ, ಎಂತಹವರಿರಬೇಕವರು? ಅವರ ಪೂಜೆ ಮುಗಿದ ಮೇಲೆ ಬೆಂಕಿ ಬಾಯಿ ತೆರೆಯಿತು. "ಎಲ್ಲಿ ನಿಮ್ಮ ರಾಮ? ನನ್ನ ಹೆಸರನ್ನೇ ಇಟ್ಟುಕೊಂಡ ರಾಮ ಎಲ್ಲಿ? ಶಿವ ಧನುವನ್ನು ಮುರಿದು ರುದ್ರನಿಗೆ ಅವಮಾನ ಮಾಡಿದ ರಾಮನೆಲ್ಲಿ?". ಅವನ ಮಾತು ಕೇಳಿ ದಶರಥ ಸ್ಥಂಭೀಭೂತನಾದ. ಹಿಂದೆ ಊರೂರು ಸುತ್ತಿ, ಕಂಡ-ಕಂಡ ಕ್ಷತ್ರಿಯರನ್ನು ಕೊಂದು ಕೊಂದು ಸುಮ್ಮನಾಗಿದ್ದ. ಹಾಗೆಂದು ಭಾವಿಸಿದ್ದೆ. ಆದರೆ ಈಗ ಮತ್ತೆ ಕೊಡಲಿ ಹಿಡಿದು ಯಮನಾಗಿದ್ದಾನೆ. ಏ, ಇಲ್ಲಿಲ್ಲ! ಈಗ ಮತ್ತೆ ಸಂಹಾರ ಕಾರ್ಯ ಮಾಡಲಾರ!!! 
(ಪೂರ್ವಂ ಕ್ಷತ್ರ ವಧಂ ಕೃತ್ವಾ ಗತ ಮನ್ಯುಃ ಗತ ಜ್ವರಃ
ಕ್ಷತ್ರಸ್ಯೋತ್ಸಾಧನಂ ಭೂಯೋ ನ ಖಲ್ವಸ್ಯ ಚಿಕೀರ್ಷಿತಂ)
ಅಪ್ಪ, ಗುರುಗಳು ಮುಂದಿದ್ದರಿಂದ ಸಹಜ ವಿನೀತರಾದ ಶ್ರೀರಾಮರು ಕೊಂಚ ಹಿಂದೆ ಸೀತೆಯೊಡನೆ ರಥವೇರಿ ಬರುತ್ತಿದ್ದರು. ಕುದುರೆಗಳು ಹಿಂದೆ ಹೆಜ್ಜೆ ಹಾಕಿದ್ದವು! ಸಾರಥಿ ಬೆದರಿಬಿಟ್ಟಿದ್ದ!! "ಪ... ಪ... ಪರುಶುರಾಮರು" ಎಂದಷ್ಟೇ ಹೇಳಿ ಲಗಾಮುಗಳನ್ನು ಬಿಟ್ಟು ನಡುಗುತ್ತ ಮುದುರಿ ಕುಳಿತ. ಓಹ್! ಪರಶು ರಾಮರು!! ಭಾರ್ಗವ ರಾಮರನ್ನು ಕಂಡು, ಅವರ ಜನಿವಾರ, ಹಣೆಗೆ ಹಚ್ಚಿದ ವಿಭೂತಿ, ಕಟ್ಟಿದ್ದ ವೀರಗಚ್ಚೆ, ಕೈಲಿ ಹಿಡಿದಿದ್ದ ಕಾಂತಿಯುತ ಬಿಲ್ಲು, ಅವನಿಗೆ ಬಾಗಿರುವ ಸ್ವಜನ... ಇವನ್ನೆಲ್ಲ ಕಂಡು ಸೀತೆಗೆ ರಥದಲ್ಲೇ ಇರಲು ಹೇಳಿ ಕೆಳಗಿಳಿದರು ಶ್ರೀರಾಮರು. ಓಹ್! ತನ್ನೆಡೆಗೇ ಬರುತ್ತಿದ್ದಾರೆ. ಬರುತ್ತಿದ್ದರೆ ತನ್ನ ಮಂದಿಯೆಲ್ಲ ದಾರಿ ಬಿಟ್ಟು ದೂರ ದೂರ ಹೋಗುತ್ತಿದ್ದಾರೆ. 
( ಕೃಷ್ಣ ವರ್ಣದ ರಾಮ / ಭುಜದ ಕೊಡಲಿಯ ರಾಮ
ಜಟೆಯ ಕಟ್ಟಿದ ರಾಮ / ಕೃದ್ಧ ರಾಮ
ಜಮದಗ್ನಿ ಪ್ರಿಯ ರಾಮ / ತಾಯ ತರಿದಾ ರಾಮ 
ಕ್ಷತ್ರಿಯರ ಯಮ ರಾಮ / ಕೊಡಲಿ ರಾಮ 
ಬೆಂಕಿ ಬಾಯಿನ ರಾಮ / ಗುಡುಗು ನಡಿಗೆಯ ರಾಮ
ವಿಷ್ಣು ಚಾಪವ ಹಿಡಿದ / ಉರಿವ ರಾಮ 
ಶಿವ ಧನುವ ಮುರಿದಿಟ್ಟ / ಸೀತೆಯಲಿ ಮನವಿಟ್ಟ 
ಶುಭ ರಾಮಗೆದುರಾದ / ಪರಶುರಾಮ )
ಫಕ್ಕನೆ ನೆನಪಿಗೆ ಬಂತು, ಗುರುಗಳು ಪರಶುರಾಮನ ಬಗ್ಗೆ ಮಾಡಿದ್ದ ವರ್ಣನೆ! ಹೇಳಿದ್ದ ಅಭಿಮಾನಪೂರಿತ ಮಾತು, ಕುತೂಹಲದ ಕಥೆ. 
**************
ಬ್ರಹ್ಮರ್ಷಿಯಾಗಬೇಕಿದ್ದ ಋಷಿ ಹುಟ್ಟುವಾಗಲೇ ಹುಬ್ಬುಗಂಟಿಟ್ಟು, ಕೆಂಪು ಮೋರೆಯಲ್ಲಿ ಬಿಸಿ ಉಸಿರಿಟ್ಟ!!! ಭೀಕರ ಕೂಸನ್ನು ಕಂಡ ದಾದಿ ಪ್ರಸೂತಿಕಾ ಗೃಹದಿಂದ ಓಡಿ ಹೋಗಿದ್ದಳು. ತಾಯಿ ಸತ್ಯವತಿ ಅತಿ ಭಾರದ, ಬಿಸಿ ದೇಹದ, ರುದ್ರ ಮುಖದ ಮಗುವನ್ನು ಪುತ್ರ ವಾತ್ಸಲ್ಯದಿಂದ ಎದೆಗೊತ್ತಿಕೊಂಡರೂ, ಗಂಡ ನುಡಿದಿದ್ದ ಭವಿಷ್ಯ ನೆನೆದು, ಅದು ನಿಜವಾಗುತ್ತಿರುವುದನ್ನು ಕಂಡು, ತಾನು ಮಾಡಿದ ತಪ್ಪಿನ ಘೋರ ನೋಡುತ್ತ ಕಡು ದುಃಖಿತಳಾದಳು.
ಹೌದು. ಅಂದಿಗೆ ಎರಡು ವರ್ಷಗಳ ಹಿಂದೆ ತನ್ನ ತಂದೆ ಗಾಧಿಯ ಆಸ್ಥಾನಕ್ಕೆ ಬೆನ್ನು ಬಾಗಿದ, ಸುಕ್ಕು ಚರ್ಮದ, ಮೂಳೆ ದೇಹದ, ಅದುರುವ ಕಾಲಿನ ವೃದ್ಧರೊಬ್ಬರು; ಸಾಮಾನ್ಯ ಮುದುಕರಲ್ಲ, ಬೆಂಕಿಯ ಕಂಬದಂತೆ ಬರುತ್ತಿದ್ದಾರೆ!!!! ಅವರಿಗೆಷ್ಟೇ ವಯಸ್ಸಾಗಿದ್ದರೂ ಕೇವಲ ಮುಖವಲ್ಲ, ದೇಹ ತುಂಬ ತೇಜಸ್ಸು ಸೂಸುತ್ತಿದ್ದ ಋಷಿ. ಅವರೇ ಋಚೀಕರು. ಅವರ ಬಗ್ಗೆ ತಾನು ತುಂಬ ಕೇಳಿದ್ದಳು. ಅಶ್ವಮೇಧದ ಒಂದು ಕುದುರೆ ಸಿಗುವುದೇ ಕಷ್ಟ. ಅಂತಹದ್ದರಲ್ಲಿ ಅಶ್ವ ತೀರ್ಥದಲ್ಲಿ ಮಿಂದು, ಕುದುರೆ ಮೊಗದ ತುಂಬುರರು ನೀಡಿದ ಮಂತ್ರದಿಂದ, ವರ್ಷಗಟ್ಟಲೆ ತಪಸ್ಸು ಮಾಡಿ ಶತ ಶತ ಕುದುರೆಗಳನ್ನು ಪಡದಿದ್ದರು. ತುಂಬು ಸುಂದರವಾದ, ಮೃದುವಾದ, ದೃಢ ನಡಿಗೆಯ, ಗಟ್ಟಿ ಗೊರಸಿನ ಬಿಳಿ ಕುದುರೆಗಳಂತೆ! ಆಶ್ಚರ್ಯವೆಂದರೆ ಬಾಲ ಮಾತ್ರ ಹಳದಿ!! ಎರಡರಲ್ಲಿ ಒಂದು ಕಿವಿ ಮಾತ್ರ ಕಪ್ಪು!!! ಇಂತಹ ಶಕ್ತ, ಮಹಾ ಸಮರ್ಥ ಮಂತ್ರರ್ಷಿ. ಆದರೆ ಇಷ್ಟೆಲ್ಲ ಸಾಮರ್ಥ್ಯವಿದ್ದವರು ತಮ್ಮ ದೇಹವನ್ನೇಕೆ ಈ ದುರವಸ್ಥೆಯಲ್ಲಿ ಇಟ್ಟುಕೊಂಡಿದ್ದಾರೆ?
ಹೀಗೆ ಯೋಚನೆಗಳು ಬರುತ್ತಿದ್ದಂತೆಯೇ ಕನ್ಯಾ ಕೋಣೆಯ ಕಿಟಕೆಯಿಂದ ಆಸ್ಥಾನದ ವಿದ್ಯಮಾನಗಳನ್ನು ಕಾಣುತ್ತಿದ್ದಾಳೆ. ತನ್ನ ತಂದೆ ಗಾಧಿ ಅತಿ ಗೌರವದಿಂದ ಅವರನ್ನು ಕರೆತಂದು ತನ್ನ ಸಿಂಹಾಸನದಲ್ಲಿಯೇ ಕೂಡಿಸಿ ಪಾದ ಪೂಜೆ ಮಾಡಿ, "ತಮ್ಮಂತಹ ಮಹನೀಯರು ನಮ್ಮ ಅರಮನೆಗೆ ಬಂದದ್ದು ನನ್ನ ಭಾಗ್ಯ. ನನ್ನ ರಾಜ್ಯದ ಪುಣ್ಯ. ತಮ್ಮಂತಹವರು ಸುಮ್ಮ-ಸುಮ್ಮನೇ ಬರುವುದಿಲ್ಲ. ಹೇಳಿ, ನಾನೇನು ಸೇವೆ ಮಾಡಬೇಕು?"
ಬಾಗಿದ ಮುಖವೆತ್ತಿ ಅಪ್ಪನನ್ನು ನೋಡುತ್ತ ಹೇಳುತ್ತಿದ್ದಾರೆ; "ಗಾಧಿ, ನಿನ್ನ ವಿನಯ, ನಿನ್ನ ಪರಾಕ್ರಮ, ನಿನ್ನ ಶಕ್ತಿ, ಇವುಗಳ ಬಗ್ಗೆ ನನಗೆ ತುಂಬ ಗೌರವವಿದೆ. ನೆನಪಿದೆಯಾ? ಹಿಂದೆ, ಐದು ವರ್ಷಗಳ ಹಿಂದೆ ಬಂದಾಗ ನಿನ್ನ ನನಸಾಗದ ಕನಸನ್ನು ಹೇಳಿಕೊಂಡಿದ್ದೆ." ಮತ್ತೆ ತುಸು ಬಾಗಿ ಅಪ್ಪ ಹೇಳಿದರು, " ಹೌದು ಗುರುಗಳೇ, ಇಂದಿಗೂ ಆ ಬಯಕೆ ಹಾಗೇ ಉಳಿದು ಹೋಯಿತು. ಒಂದಾದರೂ ಮಾಡೋಣವೆಂದರೆ ಒಂದೂ ಸಿಗಲಿಲ್ಲ. "ಖಿನ್ನರಾಗಿ ತನ್ನ ತಂದೆ ಹೇಳುತ್ತಿದ್ದರೆ ಅವರನ್ನು ತಡೆದು, " ಬೇಡ, ಬೇಡ! ಅಷ್ಟು ನಿರಾಶೆ ಬೇಡ. ನಿನ್ನ ಅಸದೃಶ ಬಯಕೆಯನ್ನು ಈಡೇರಿಸಲೇ ನಾನು ಬಂದಿದ್ದು."
ಅಪ್ಪ ಒಮ್ಮೆಗೇ ಉತ್ಸಾಹಗೊಂಡದ್ದು, ಮುಖದ ತುಂಬ ನಗು ಆವರಿಸಿದ್ದು ಕಂಡು ತನಗೂ ತುಂಬ ಸಂತಸವಾಯಿತು. ನಂಬಲಾರದ ಧ್ವನಿಯಲ್ಲಿ ಅಪ್ಪ ಹೇಳಿದರು; "ಹೌದಾ? ನಾನು ಇನ್ನೂರು ಅಶ್ವಮೇಧಗಳನ್ನು ಮಾಡಬಲ್ಲೆನೇ? ನನಗಾ ಅದೃಷ್ಟವಿದೆಯೇ? ತಾವು ಅಂತಹ ಅಶ್ವ ಸಂಪತ್ತನ್ನು ಗಳಿಸಿದ್ದೀರೆಂದು ಕೇಳಿದ್ದೆ. ಆದರೆ ನಿಮ್ಮಲ್ಲಿ ಬಂದು ನಾನು ನಿಮ್ಮ ಕುದುರೆಗಳನ್ನು ಕೊಡಿ ಎಂದು ಕೇಳಲು ಹಿಂಜರಿದೆ. ಅಂದರೆ... ಈಗ... ತಾವು... ತಮ್ಮ... ತೇಜಿಗಳ ಐಶ್ವರ್ಯವನ್ನು .." ಒಂದೊಂದೇ ಪದವನ್ನು ಸಂತಸದ ರೂಮಾಂಚನದಿಂದ ತುಸು ತೊದಲುತ್ತ ಹೇಳುತ್ತಿದ್ದರೆ, ಋಚೀಕರು ಕೈ ಅಡ್ಡವಿಟ್ಟು ಹೇಳಿದರು, " ಹೌದು. ಆ ಎಲ್ಲ ಅಶ್ವಗಳನ್ನೂ ನಿನಗೆ ಕೊಡಬೇಕೆಂದೇ ಬಂದಿರುವೆ. "ನಂಬಲಾಗದೇ ಮತ್ತೆ ಋಷಿಗಳ ಕಾಲಿಗೆ ಬಿದ್ದು, "ನನ್ನನ್ನು ಉದ್ಧಾರ ಮಾಡುತ್ತಿರುವ, ಯಾರೂ ಮಾಡಿರದ ಯಙ್ಞ ಸರಣಿಯನ್ನು ಮಾಡಿ ಕೀರ್ತಿವಂತನನ್ನಾಗಿ ಮಾಡುತ್ತಿರುವ ತಮಗೆ ಏನು ಕಾಣಿಕೆ ಸಲ್ಲಿಸಲಿ? "ಋಚೀಕರು ಬಾಗಿದ್ದ ಸೊಂಟವನ್ನು ಮೇಲೆತ್ತಿ ಹೇಳಿದರು, "ರಾಜ, ಹೀಗೆ ನೀನು ಕೇಳುತ್ತೀಯೆಂದೂ ಗೊತ್ತಿತ್ತು. ಅದಕ್ಕೇ ಕಷ್ಟ ಪಟ್ಟು ಹಲ ವರ್ಷಗಳ ಕಠಿಣ ತಪಸ್ಸನ್ನು ಮಾಡಿ ಈ ಅಶ್ವ ಸಾಮ್ರಾಜ್ಯವನ್ನು ಸಾಧಿಸಿದೆ. ಅದರಲ್ಲೂ ಸ್ವಾರ್ಥ; ಇದನ್ನು ನಿನಗೆ ಕೊಟ್ಟು ನನ್ನ ಇಛ್ಛೆಯನ್ನು ತೀರಿಸಿಕೊಳ್ಳಲೇ ಬಂದೆ. "ತಾನು ಯೋಚಿಸುತ್ತಿದ್ದಾಳೆ, "ಋಷಿಗಳಿಗೆ ಈ ಮುದಿ ವಯಸ್ಸಿನಲ್ಲಿ ಏನು ಆಸೆ? ಇಷ್ಟಕ್ಕೂ ಬೇಕಿದ್ದನ್ನು ಪಡೆಯಬಲ್ಲ ತಪಸ್ವಿಗೆ ನನ್ನಪ್ಪನಿಂದ ಏನಾಗಬೇಕಿದೆ?". 
ಅತ್ತ ಋಚೀಕರು ಮುಂದುವರಿಸಿದರು. ಮುಖದ ತುಂಬ ಸಂತಸ ತುಂಬಿತ್ತು. ಅವರು ಹೇಳಿದ್ದು ಕೇಳಿ ತನಗೆ ಗರಬಡಿದಂತಾಯಿತು! ಕೃಷ್ಣ ಸರ್ಪವೊಂದು ಸನಿಹಬಂದಂತೆ!! ಹುಲಿಯೊಂದು ತನ್ನನ್ನು ಕಂಡು ಗರ್ಜಿಸಿದಂತೆ!! ಅಧೀರೆಯಾಗಿ ಕುಸಿದುಬಿಟ್ಟಳು. ಸಖಿಯರು ಶೈತ್ಯೋಪಚಾರ ಮಾಡುತ್ತಿದ್ದಾರೆ. ಸತ್ಯವತಿ ಕೇಳಿದ್ದೇನು? ಋಚೀಕರು ಹೇಳಿದ್ದೇನು? ಗಾಧಿ ಒದ್ದಾಡುತ್ತ ಬಿಳಿಚಿಕೊಂಡದ್ದೇಕೆ? (ಮುಂದುವರೆಯುತ್ತದೆ...)
- ಡಾ. ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com