ಇನ್ನು ಸುಮ್ಮನಿದ್ದರೆ ನನ್ನ ಸರ್ವ ನಾಶವಾಗುತ್ತದೆ. ಪತಿಯ ಸಿಟ್ಟನ್ನು ಹೇಗಾದರೂ ಮಾಡಿ ಕಡಿಮೆ ಮಾಡಬೇಕು. " ಸ್ವಾಮಿ, ಕ್ಷಮಿಸಿ! "ತನ್ನೆಲ್ಲ ಶಕ್ತಿಯನ್ನೂ ನಾಲಗೆಗೆ ತಂದು ಹೇಳಿದಳು; "ಕ್ಷಮಿಸಿ, ನನ್ನದು ತಪ್ಪಾಗಿದೆ, ಕ್ಷಮಿಸಿ! ಶಿಕ್ಷೆ ಕೊಡಿ! ಆ ಶಿಕ್ಷೆ ನನ್ನ ಅಪರಾಧವನ್ನು ಕರಗಿಸಲಿ. ನಿಮ್ಮ ಸಾನ್ನಿಧ್ಯ ಮತ್ತೆ ಸಿಗುವಂತಾಗಲಿ. "ಉಕ್ಕುತ್ತಿದ್ದ ಹಾಲಿಗೆ ಮತ್ತೆ ನೀರು ಚಿಮುಕಿಸಿದಂತೆ, ಭೋರ್ಗರೆದು ಬಂದ ನದಿಗೆ ಕಮರಿ ಎದುರಾದಂತೆ, "ತಪಸ್ಸು ಬಿಟ್ಟರೆ ಬೇರೆ ಶಿಕ್ಷೆ ನಾನು ಕಾಣೆ. ನಿನ್ನ ದುರ್ಗುಣ ಸುಟ್ಟು ಹೋಗಬೇಕಾದರೆ ಯಙ್ಞಕುಂಡದ ಭಸ್ಮ ಮಧ್ಯೆ ಕುಳಿತುಕೋ. ಯಾರಿಂದಲೂ ನಿನಗೆ ತೊಂದರೆಯಾಗಕೂಡದು. ಹಾಗಾಗಬೇಕಾದರೆ ನೀನು ಯಾರ ಕಣ್ಣಿಗೂ ಕಾಣಿಸಕೂಡದು. ಘನಾಹಾರ ತ್ಯಜಿಸಿ, ವಾಯುವನ್ನೇ ಆಹಾರವಾಗಿ ಸ್ವೀಕರಿಸು. ಹಾಗೆ ಮಾಡುತ್ತಾ ತಪಸ್ಸನ್ನು ಮಾಡುತ್ತಿರು. "