ಬಂತು ಬಂತು ಧನುವು ಬಂತು ಮಹಾ ಶಿವನ ಬಿಲ್ಲು ಬಂತು

ನಾನಂದು ನೇಗಿಲಿನಿಂದ ಉಳುತ್ತಿದ್ದೆ. ಯಙ್ಞ ಮಾಡಲು ನಿಶ್ಚಯಿಸಿದಾಗ ಯಜಮಾನ ಯಾಗಭೂಮಿಯನ್ನು ಶುದ್ಧಿ ಮಾಡಬೇಕು. ಹಾಗೇ ಭೂಮಿಯನ್ನು ಶೋಧಿಸುತ್ತಿದ್ದಾಗ.....
ಜನಕ ಮಹಾರಾಜ
ಜನಕ ಮಹಾರಾಜ
ಇನ್ನು ನಾನು ನನ್ನ ಮಗಳ ಕಥೆ ಹೇಳಲೇ ಬೇಕು. ಊರ್ಮಿಳೆ ನನ್ನ ಮಗಳು. ಸೀತೆ ಸಾಕು ಮಗಳು. ಆದರೆ ಅಪ್ಪನ ಅರಕೆಯನ್ನು ತೀರಿಸಿದ ಮಗಳು; ಹಿರಿಯ ಮಗಳು; ಅಕ್ಕರೆಯ ಮಗಳು. ಸಿಕ್ಕಿದ ಮಗಳು ಎಂಬುವುದನ್ನು ಬಿಟ್ಟರೆ ಯಾವುದೇ ಕಡಿಮೆ ಅವಳಿಗೆ ಮಾಡಲಿಲ್ಲ. ಅವಳು ನನಗೆ ಸಿಕ್ಕಾಗಲೇ ಆರೇಳು ವರ್ಷದ ಕನ್ಯೆ. ಅವಳೊಬ್ಬ ದೇವ ಕನ್ಯೆ ಇರಬೇಕು, ಅಥವ ಋಷಿಕನ್ಯೆ ಇರಬೇಕು. ಅಯೋನಿಜಾ (ಸಂಯೋಗದಿಂದ ಹುಟ್ಟದವಳು). ನನಗಿನ್ನೂ ಅಂದಿನ ಘಟನೆ ಸ್ಪಷ್ಟವಿದೆ.
 ನಾನಂದು ನೇಗಿಲಿನಿಂದ ಉಳುತ್ತಿದ್ದೆ. ಯಙ್ಞ ಮಾಡಲು ನಿಶ್ಚಯಿಸಿದಾಗ ಯಜಮಾನ ಯಾಗಭೂಮಿಯನ್ನು ಶುದ್ಧಿ ಮಾಡಬೇಕು. ಹಾಗೇ ಭೂಮಿಯನ್ನು ಶೋಧಿಸುತ್ತಿದ್ದಾಗ ಇವಳು ಕಂಡಳು. ಚಿನ್ನದ ಮೈಬಣ್ಣದ, ಮುದ್ದಾದ ಮುಖದ, ದುಂಡು ಗಲ್ಲದ, ನಯವಾದ ಚೂಪು ಮೂಗಿನ, ಹೊಳೆವ ಕಂಗಳ, ಕೆನ್ನೆ ಹೊಳಪಿನ, ಸುಂದರ; ಅತಿ ಸುಂದರ ಕನ್ಯೆ ಪ್ರತ್ಯಕ್ಷಳಾಗಿದ್ದಳು. ಅವಳಲ್ಲಿ ಹೇಗೆ ಬಂದಳು, ಎಲ್ಲಿಂದ ಬಂದಳು, ಯಾರು ಕರೆತಂದು ಬಿಟ್ಟರು ಎಂಬುದೊಂದೂ ಗೊತ್ತಾಗಲಿಲ್ಲ. ಅವಳನ್ನು ಕಂಡಾಗ ನಾನು ಉತ್ತಿದ್ದ ನೇಗಿಲ ಗೆರೆಯ ಮೇಲೆ ನಿಂತಿದ್ದಳು. ನೇಗಿಲಿನಿಂದ ಆದ ಗೆರೆಗೆ "ಸೀತಾ" ಎಂದು ತಮಗೂ ಗೊತ್ತು. ನಾನು "ಸೀತಾ" ಎಂದೆ, ಅವಳು "ಹಾಂ" ಎಂದಳು.
ತಮಗೆಲ್ಲ ಆ ಕಥೆ ಗೊತ್ತಿದ್ದರೂ ಸಭಾಸದರೆಲ್ಲ ಮೊದಲ ಬಾರಿಗೆ ಕೇಳುತ್ತಿದ್ದೇವೇನೋ ಎಂಬುವಂತೆ ಆಲಿಸುತ್ತಿದ್ದಾರೆ. ಒಟ್ಟಿನಲ್ಲಿ ಭೂಮಿಯನ್ನು ಊಳುತ್ತಿದ್ದಾಗ ಭೂಮಿಯಿಂದ  ಎದ್ದು ಬಂದಳೇನೋ ಎಂಬತೆ ಸಿಕ್ಕ ಇವಳು ನನ್ನ ಮಗಳಾಗಿ "ಸೀತಾ" ಎಂದೇ ವರ್ಧಿಸಿದಳು, ಪ್ರಖ್ಯಾತಳಾದಳು.
(ಕ್ಷೇತ್ರಂ ಶೋಧಯತಾ ಲಬ್ಧಾ ನಾಮ್ನಾ ಸೀತೇತಿ ವಿಶ್ರುತಾ 
ಭೂತಲಾದುತ್ಥಿತಾ ಸಾತು ವ್ಯವರ್ಧತ ಮಮ ಆತ್ಮಜಾ)
(ವಾಚಕರಲ್ಲಿ ವಿನಂತಿ: ಉಳುತ್ತಿದ್ದಾಗ ನೇಗಿಲಿಗೆ ಪೆಟ್ಟಿಗೆ ಸಿಕ್ಕಿತು, ಅದರಲ್ಲಿ ಮಗುವಿತ್ತು ಎಂಬುದಕ್ಕಾಗಲೀ, ಅದು ಮಗುವೇ ಎನ್ನುವುದಕ್ಕಾಗಲೀ ಮೂಲದಲ್ಲಿ ಆಧಾರವಿಲ್ಲ. ಅವೆಲ್ಲಾ ಚಲನಚಿತ್ರಗಳ ನಿರೂಪಣೆ. ಉಳುವಾಗ ಸಿಕ್ಕಿದ್ದೆಂಬ ಅರ್ಥದಲ್ಲಿ ಭೂಮಿಜೆ ಎಂಬುದು ಕಾವ್ಯಾಲಂಕಾರ. ಪೆಟ್ಟಿಗೆಯ ಕಥೆ ಒಪ್ಪಿದರೆ ಎಷ್ಟು ವರ್ಷಗಳಿಂದ ಅಲ್ಲಿತ್ತು, ಆಗ ಆ ಮಗುವಿಗೆ ಉಸಿರಾಟ/ ಆಹಾರ, ಇವುಗಳೆಲ್ಲ ಪ್ರಶ್ನೆಯಾಗುತ್ತದೆ. ಬಹುಶಃ ಸೀತೆ ಕಂಡಾಗ ದೇವತೆಯೊಬ್ಬಳು ತಂದು ಬಿಟ್ಟಿರಬಹುದು, ಅಥವ ಬಹುಮಂದಿ ಬಯಸುವಂತೆ ಭೂದೇವಿಯೇ ಅವಳನ್ನಲ್ಲಿ ನಿಲ್ಲಿಸಿ ಹೋಗಿರಬಹುದು. ಇನ್ನು ಸಿಕ್ಕಾಗ ಅವಳಿಗೆ ಆರೇಳು ವರ್ಷಗಳಾದರೂ ಆಗಿರಲೇ ಬೇಕು. ಮಗು ಎಂದುಬಿಟ್ಟರೆ, ಊರ್ಮಿಳೆಗಿನ್ನಾ ಕಿರಿಯಳಾಗಿಬಿಟ್ಟು ಲಕ್ಷ್ಮಣನಿಗೆ ಅತ್ತಿಗೆಯಾಗುವುದು ಮುಜುಗರವಾಗುತ್ತದೆ. "ಭೂಗರ್ಭದಲ್ಲಿ ದೊರೆತ ದಿವ್ಯ ಸ್ತ್ರೀಯ ವಯಸ್ಸನ್ನು ಊಹಿಸಲು ಶಕ್ತ್ಯವಿಲ್ಲ" ಎಂದು ಮುಕ್ತಾಯ ಮಾಡುತ್ತಾ, ದಿ.ವಿದ್ವಾನ್ ರಂಗನಾಥ ಶರ್ಮಾ ಅವರು ಶ್ರೀಮದ್ ವಾಲ್ಮೀಕಿ ರಾಮಾಯಣಂ ಬಾಲಕಾಂಡಃ ಎಂಬ ಅನುವಾದದ ಅನುಬಂಧದಲ್ಲಿ ವಯಸ್ಸಿನ ಬಗ್ಗೆ ಚರ್ಚೆ ಮಾಡಿರುವುದನ್ನು ಆಸಕ್ತರು ಓದಬಹುದು- ಲೇ)
ಧನುವಿದ್ದ ಪೆಟ್ಟಿಗೆ ಮುಚ್ಚಳ ತಗೆದರು. ಅದರೆಡೆ ಅಭಿಮಾನದಿಂದ ನೋಡಿದ ಜನಕ ಮಹಾರಾಜ, " ಮಹರ್ಷಿಗಳೇ, ನಮ್ಮ ಜನಕ ವಂಶ ಅಂದಿನಿಂದ ಪೂಜಿಸಿಕೊಂಡು ಬಂದಿರುವ ಧನುಶ್ರೇಷ್ಠ ಇದು. ಎಂತಹ ಮಹಾವೀರರಿಗೂ ಇದನ್ನು ಬಗ್ಗಿಸಲಾಗಲಿಲ್ಲ. ಸುರರು ಸೋತರು. ಅಸುರರು ಅಲ್ಲಾಡಿ ಹೋದರು. ರಾಕ್ಷಸರ ರೆಟ್ಟೆ ಬಿದ್ದು ಹೋಯಿತು. ಗಂಧರ್ವರು ಗೆಲ್ಲಲಿಲ್ಲ. ಯಕ್ಷರು ಯಾರೂ ಜಯಿಸಲಿಲ್ಲ. ಕಿನ್ನರರು ಕಿರಿಚಿದರು. ಉರಗರು ಉರುಳಿಬಿದ್ದರು. ಇವರೆಲ್ಲಾ ಈ ಧನುಸ್ಸಿನ ಮುಂದೆ ಮುರುಟಿ ಹೋಗಿರುವಾಗ, ಮನುಷ್ಯರಾವ ಗಿಡದ ತೊಪ್ಪಲು? ಯಾರಾದರೂ ಬಗ್ಗಿಸಬಲ್ಲರೇ ಇದನ್ನು? ಬಗ್ಗಿಸಿ ಆ ದಾರ ಕಟ್ಟಬಲ್ಲರೇ? ಕಟ್ಟಿ ಬಾಣ ಹೂಡಬಲ್ಲರೇ? ಅಥವ ಹೆದೆಯನ್ನೇರಿಸಿ ಠೇಂಕಾರ ಮಾಡಬಲ್ಲರೆ? ಕನಿಷ್ಠ ಯಾರಿಗಾದರೂ ಇದನ್ನು ಅಲ್ಲಾಡಿಸಲು ಸಾಧ್ಯವೇ? 
(ಇದಂ ಧನುರ್ವರಂ ಬ್ರಮ್ಹನ್ ಜನಕೈರ್ ಅಭಿಪೂಜಿತಂ
ರಾಜಭಿಶ್ಚ ಮಹಾವೀರೈರ್ ಅಶಕ್ತ್ಯಂ ಪೂರಿತುಂ ತದ
ನೈತತ್ ಸುರಗಣಾಃ ಸರ್ವೇ ನ ಅಸುರಾ ನ ಚ ರಾಕ್ಷಸಾಃ
ಗಂಧರ್ವ ಯಕ್ಷ ಪ್ರವರಾಃ ಸಂ ಕಿನ್ನರ ಮಹೋರಗಾಃ
ಕ್ವ ಗತಿರ್ ಮಾನುಷಾಣಾಂ ಚ ಧನುಷೋ ಅಸ್ಯ ಪ್ರಾಪೂರಣೇ
ಆರೋಪಣೆ ಸಮಾಯೋಗೇ ವೇಪನೇ ತೋಲನೇ ಅಪಿ ವಾ)
" ಮಹರ್ಷಿಗಳೇ , ಈಗ ಈ ಬಿಲ್ಲನ್ನು ತರಿಸಿರುವೆ , ನಿಮ್ಮ ರಾಜಕುವವರಿಗೆ ದಯವಿಟ್ಟು ತೋರಿಸಿ . " 
(ತದೇ ತತ್ ಧನುಷಾಂ ಶ್ರೇಷ್ಠಂ ಆನೀತಂ ಮುನಿಪುಂಗವ 
ದರ್ಶಯೈತನ್ ಮಹಾಭಾಗ ಅನಯೋ ರಾಜಪುತ್ರಯೋ)
ಮಹರ್ಷಿಗಳು ರಾಮರೆಡೆಗೆ ನೋಡಿದರು. ಶ್ರೀರಾಮರೆದ್ದರು. ಬಳಿಗೆ ಬಂದರು. ಮುನಿಗಳಿಗೆ ವಂದಿಸಿದರು. " ಇದು ಕೇವಲ ನೋಡುವುದರಲ್ಲಿ ಮುಗಿಯುವುದಿಲ್ಲ, ಮುಂದೇನೋ ಇದೆ" ಎಂದು ಯೋಚಿಸುತ್ತಿದ್ದಾಗ ಗುರುಗಳು ಹೇಳಿದರು; "ರಾಮ, ನಿನ್ನನ್ನು ಕರೆತಂದದ್ದು ಇದಕ್ಕೇ! ಯಾಗ ಎನ್ನುವುದೊಂದು ನೆಪ!! ನಿನ್ನ ಆಗಮನದ ಉದ್ದಿಶ್ಯ ಈಗ ಸಫಲವಾಗುತ್ತಿದೆ. "ಜನಕ ಮಹಾರಾಜ ರಾಮರನ್ನೀಗ ಬಯಸಿ-ಬಯಸಿ ನೋಡಿದ. ದುಂಡಾದ ಪುಷ್ಟ ಬಾಹುಗಳು, ನೆಟ್ಟನೆಯ ನಿಲುವು, ಕೌಮಾರ್ಯವಿದ್ದರೂ ದೃಢ ಶರೀರ, ಮುಖದಲ್ಲಿ ಮಂದಹಾಸವಿದ್ದರೂ ಅದರಲ್ಲಿ ಗೆಲ್ಲುವ ಕೆಚ್ಚು. ಈತನೇನಾದರೂ ಬಿಲ್ಲೆತ್ತಿಬಿಟ್ಟರೆ ಸಾಕು; ನಮ್ಮ ಸೀತೆಗೆ ಒಳ್ಳೆಯ ಗಂಡ. ವಿಶ್ವಮಿತ್ರರು ರಾಮರಿಗೆ ಹೇಳಿದರು; "ರಾಮ, ಬಿಲ್ಲನ್ನು ನೋಡು. " (ವತ್ಸರಾಮ ಧನುಃ ಪಶ್ಯ) 
ರಾಮರಿಗೆ ಮಾತ್ರ ಕೇಳುವಂತೆ ವಿಶ್ವಮಿತ್ರರು ಹೇಳಿದ್ದರು. ಅದರೆ ಜನರೆಲ್ಲರಿಗೂ ಕೇಳಿಸುವಂತೆ ಘೋಷಿಸಿದ ಜನಕ; " ಅಕಸ್ಮಾತ್ ರಾಮರೇನಾದರೂ ಧನುಸ್ಸಿಗೆ ಹೆದೆ ಏರಿಸಿದರೆ ಅಯೋನಿಜಳಾದ ಸೀತೆಯನ್ನು ದಾಶರಥಿಗೆ ಕೊಡುವೆ. ಕೊಟ್ಟು ಮದುವೆ ಮಾಡುವೆ"
(ಯದ್ ಯಸ್ಯ ಧನುಷೋ ರಾಮಃ |ಕುರ್ಯಾತ್ ಆರೋಪಣಂ ಮುನೇ||
ಸುತಾಂ ಅಯೋನಿಜಾ ಸೀತಾಂ |ದದ್ಯಾಂ ದಾಶರಥೇ ಅಹಂ||)
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com