ಬಿಲ್ಲು ಮುರಿದದ್ದನ್ನು ಕೇಳಿದ್ದೀರಿ; ಅದರ ರಹಸ್ಯವನ್ನು ಹೇಳುತ್ತೇನೆ...

ಕೊಂಚ ಹೊತ್ತು ಏನಾಯಿತೆಂದು ಯಾರಿಗೂ ಹೊಳೆಯಲೇ ಇಲ್ಲ. ಕೆಲ ನಿಮಿಷಗಳಲ್ಲಿ ಎಲ್ಲ ನಿಚ್ಚಳವಾಯಿತು. ನೋಡುತ್ತಾರೆ; ಶ್ರೀರಾಮರ ಕೈಲಿ ಮೇಲಿನ ಅರ್ಧ ಭಾಗದ ಧನುವಿದೆ.
ರಾಮ-ಶಿವ ಧನಸ್ಸು
ರಾಮ-ಶಿವ ಧನಸ್ಸು
ಧಡಾ ! ಎಂಥ ಸದ್ದದು !!  ಸಿಡಿಲು ಬಡಿದಂತೆ ! ಪರ್ವತ ಸಿಡಿದಂತೆ !! ಭೂಕಂಪವಾದಂತೆ !!! 
(ತಸ್ಯ ಶಬ್ದೋ ಮಹಾನಾಸೀನ್ ನಿರ್ಘಾತ ಸಮನಿಹ್ ಸ್ವನಃ
ಭೂಮಿಕಂಪಶ್ಚ ಸುಮಹಾನ್ ಪರ್ವತಸ್ಯೇವ ಧೀರ್ಯತಃ)
ಸಭಾಸದರೆಲ್ಲ ಅದುರಿಬಿದ್ದರು. ಕೊಂಚ ಹೊತ್ತು ಏನಾಯಿತೆಂದು ಯಾರಿಗೂ ಹೊಳೆಯಲೇ ಇಲ್ಲ. ಕೆಲ ನಿಮಿಷಗಳಲ್ಲಿ ಎಲ್ಲ ನಿಚ್ಚಳವಾಯಿತು. ನೋಡುತ್ತಾರೆ; ಶ್ರೀರಾಮರ ಕೈಲಿ ಮೇಲಿನ ಅರ್ಧ ಭಾಗದ ಧನುವಿದೆ. ಕೆಳಗಿನ ಅರ್ಧ ಭಾಗ ಮುರಿದು, ಕಟ್ಟಿದ್ದ ದಾರಕ್ಕೆ ನೇತಾಡುತ್ತಿದೆ. ಶ್ರೀರಾಮರ ಮುಖದಲ್ಲಿ ಕಿರು ನಗೆ ಇದೆ.
**************
ಎಲ್ಲರಿಗೂ ನೆನಪಿದೆ; ಶ್ರೀರಾಮರು ಬಂದದ್ದು; ಬಿಲ್ಲಿಗೆ ನಮಸ್ಕರಿಸಿದ್ದು; ಕೊಂಚ ಹೊತ್ತು ಏನೋ ತುಟಿ ಅಲುಗಾಡುತ್ತಿದ್ದುದು. ತಮಗೇನೂ ಗೊತ್ತಾಗಲಿಲ್ಲ! ಏಕೆಂದೂ ಗೊತ್ತಾಗಲಿಲ್ಲ! ಆನಂತರ ಬಿಲ್ಲಿಗೆ ಮತ್ತೊಮ್ಮೆ ಹಣೆ ತಾಗಿಸಿ ನಮಸ್ಕರಿಸಿದ್ದೂ, ಆ ನಂತರ ತಮ್ಮ ಎಡಗೈಲಿ ಬಿಲ್ಲಿನ ಮಧ್ಯದ ಹಿಡಿ ಹಿಡಿದು ಎತ್ತಿದ್ದು; ಹೂ ಹಾರ ಎತ್ತಿದಂತೆ, ಮಲ್ಲಿಗೆ ಮಾಲೆ ಎತ್ತಿದಂತೆ, ಕೂಮಲ ಕೂಸೆತ್ತಿದಂತೆ.... ಅತಿ ಸುಲಭವಾಗಿ, ಸರಾಗವಾಗಿ ಮೇಲೆತ್ತಿಯೇ ಬಿಟ್ಟರು! ಸಭಾಸದರೆಲ್ಲ ಚಪ್ಪಾಳೆ! ಜನಕ ಸಿಂಹಾಸನದ ತುದಿಗೆ ಬಂದ!! ಉಸಿರಾಟ ಹೆಚ್ಚಿತ್ತು!! ಕಣ್ಣ ಮುಂದೆ ಅಸಂಭವವೊಂದು ಸಂಭವಿಸುತ್ತಿದೆ. ಮೂರ್ನಾಲ್ಕು ವರ್ಷಗಳಿಂದ ಹುಸಿಯಾದ ಪ್ರಯತ್ನವಿಂದು ನಿಜವಾಗುತ್ತಿದೆ! 
ಶ್ರೀರಾಮರು ಬಿಲ್ಲಿನ ನಡುವಿಗೆ ಬಿಗಿದಿದ್ದ ಆ ದಪ್ಪ ದಾರವನ್ನು ಬಿಚ್ಚಿದರು. ಎಡಗೈ ಬಿಲ್ಲಿನ ತುದಿಯನ್ನು ಹಿಡಿದು ಬಗ್ಗಿಸಿದರು, ಹೂವಾಡಿಗಿತ್ತಿ ದಾರಕ್ಕೆ ಹೂ ಪೋಣಿಸಿ ಗಂಟು ಹಾಕುವಷ್ಟು ಸುಲಭವಾಗಿ ದಾರವನ್ನು ಅದಕ್ಕೆ ಬಿಗಿಸಿ ಸುತ್ತಿದರು . ಓಹ್ ! ಹೆದೆ ಏರಿಸಿಯೇಬಿಟ್ಟರು!!
(ಆರೋಪ ಯತ್ಸ ಧರ್ಮಾತ್ಮಾ ಸಲೀಲಂ ಇವ ತತ್ ಧನುಃ)
ರಾಜ ತನ್ನ ಗಾಂಭೀರ್ಯವನ್ನು ಮರೆತು ಎದ್ದು ಚಪ್ಪಾಳೆ ತಟ್ಟಿದ. ಜನರೆಲ್ಲರೂ ಹುಚ್ಚೆದ್ದು ಚಪ್ಪಾಳೆ ತಟ್ಟಿದರು. ಕೆಲವರಿಗೆ ಸಂತೋಷ ತಾಳಲಾರದೇ ಭುಜವಸ್ತ್ರವನ್ನು ಹಾರಿಸಿದರು. ಶಿಳ್ಳೆ ಹೊಡೆಯಲೂ ಕೆಲವರಿಗೆ ಮನಸ್ಸಾಯಿತೇನೋ; ಆದರೆ ರಾಜಸಭೆಯೆಂದು ಸುಮ್ಮನಾದರು.
**************
ಕೇವಲ ಅರ್ಧ ಘಂಟೆ ಹಿಂದೆ ನಡೆದದ್ದೇನು? ವಿಶ್ವಮಿತ್ರರು ಶ್ರೀರಾಮರಿಗೆ ಧನುವನ್ನು ನೋಡ ಹೇಳಿದರು. ಧನುವಿದ್ದ ಪೆಟ್ಟಿಗೆಯ ಬಳಿ ಬಂದರು ರಾಮರು. ಬೆಳಿಗ್ಗೆ ಪೂಜೆ ಮಾಡಿದ್ದರಿಂದ ಸುಗಂಧ ಆ ಬಿಲ್ಲಿಂದ ಬರುತ್ತಿತ್ತು. ಹೂ ಹಾರಗಳಿಂದ ಅದು ಪೂಜಿಸಲ್ಪಟ್ಟಿತ್ತು. ತುಂಬ ಅಂದವಾದ ಬಳ್ಳಿಗಳನ್ನೂ, ಹಣ್ಣುಗಳನ್ನೂ ಆ ಬಿಲ್ಲಿನ ಮೇಲೆ ಬಿಡಿಸಲಾಗಿತ್ತು. ಹಿಂದೆ ತನ್ನ ಕಣ್ಣ ಮುಂದೆ ಆಗಾಗ ಗೋಚರಿಸುತ್ತಿದ್ದ ಬಿಲ್ಲದು! ಈಗದನ್ನು ನೋಡುತ್ತಿದ್ದಂತೆಯೇ ಅದರ ಹಿಂದೆ ಹೂಮಾಲೆ ಹಿಡಿದ ಚೆಲುವೆ! ಏನು ? ಓಹ್! ಏಕೆ ಈ ಹುಚ್ಚು ಹಿಡಿಸುವ ರೂಪ ಆಗಾಗ ಕಾಣುತ್ತಿದೆ? ಕಾಡುತ್ತಿದೆ?? ಈಗಲೂ! ಆದರೆ ಈಗದು ಬೇಡ. ಗುರುಗಳೆಡೆ ತಿರುಗಿ ಕೇಳಿದರು, "ಗುರುಗಳೇ, ಒಮ್ಮೆ ಮುಟ್ಟಲೇ?"
(ಇದಂ ಧನುರ್ವರಂ ಬ್ರಮ್ಹನ್ ಸಂಸ್ಪೃಶಾಂ ಇಹಪಾಣಿನಾ?)
ವಿಶ್ವಮಿತ್ರರು, "ಮುಟ್ಟು-ಮುಟ್ಟು, ಕೇವಲ ಮುಟ್ಟುವುದೋ?"ಎಂದರು ಹಸನ್ಮುಖರಾಗಿ. ಶ್ರೀರಾಮರು ತಮ್ಮ ಬಲಗೈಯಿಂದ ಅದನ್ನು ಸವರಿದರು. ಮೈ ಝುಮ್ಮೆಂದಿತು!! ಯಾರನ್ನೋ ಮುಟ್ಟುತ್ತಿರುವ ಅನುಭವ!! ಅದೊಂದು ದಿವ್ಯಾನುಭವ. ಶ್ರೀರಾಮರು ನೋಡುತ್ತಿದ್ದಂತೆಯೇ ಧನು ಮಧ್ಯದಿಂದ ದಿವ್ಯ ಜ್ಯೋತಿಯೊಂದು ಹೊಳೆದಂತೆ; ಬೆಳೆದಂತೆ; ಆಕಾರ ತಳೆದಂತೆ!! ಬಿಟ್ಟಗಣ್ಣು ಬಿಟ್ಟು ನೋಡುತ್ತಾರೆ!! ಪೂರ್ಣ ಪ್ರಮಾಣದ ಈಶ್ವರಾಕಾರ; ಪರಶಿವಮೂರ್ತಿ. 
ತಲೆಯಲ್ಲಿ ಶಿಖರಗಟ್ಟಿದ ಜಟೆಯ ತುದಿಯಿಂದ ಧಾರೆಯಾಗಿ ಇಳಿಯುತ್ತಿರುವ ಗಂಗೆ. ಆ ಜಟೆಯ ಬುಡಕ್ಕೆ ಬಿದಿಗೆಯ ಚಂದ್ರನಂತೆ ಕಾಣುವ ಬಿಳುಪು ರೇಖೆ. ಹಣೆಯಲ್ಲಿ ತ್ರಿಪುಂಡ್ರ . ಮಧ್ಯದಲ್ಲಿ ಮುಚ್ಚಿರುವ ಅಸಮಾಕ್ಷಿ. ತೀಕ್ಷ್ಣ ಆದರೆ ಕರುಣಾಪೂರ್ಣ ಕಣ್ಗಳು, ನಿಡಿದಾದ ನಾಸಿಕ, ತುಂಬಿದ ತುಟಿಗಳು. ದುಂಡುಗಲ್ಲ. ಕೊರಳಲ್ಲಿ ಕೃಷ್ಣಸರ್ಪ. ತೋಳು-ಎದೆಗಳಲ್ಲೆಲ್ಲ ವಿಭೂತಿ ಪಟ್ಟೆಗಳು. ವ್ಯಾಘ್ರಚರ್ಮವನ್ನುಟ್ಟು ತ್ರಿಶೂಲ ಹಿಡಿದ ಎಡಕರ. ಮತ್ತೊಂದರಲ್ಲಿ ಪಿನಾಕ. ಇತ್ತ ಬಲಗೈನಲ್ಲಿ ಡಮರು; ಮತ್ತೊಂದು ವರದ ಹಸ್ತ. 
ಅಪ್ರಯತ್ನವಾಗಿ ಶ್ರೀರಾಮರು ಶಿವನಿಗೆ ಬಾಗಿದರು; ನಮಿಸಿದರು. " ಶ್ರೀರಾಮ, ನಿನಗಾಗಿ ಅದೆಷ್ಟೋ ಕಾಲದಿಂದ ಧನುವಿನಲ್ಲಿದ್ದೇನೆ, ಈ ಧನುವನ್ನು ರಕ್ಷಿಸುತ್ತಿದ್ದೇನೆ. ಯಾರೂ ಇದನ್ನು ಮುಟ್ಟಲೂ ಬಿಡದಂತೆ ಕಾವಲು ಕಾಯುತ್ತಿದ್ದೇನೆ. ನಿನಗೆ ಪತ್ನಿಯಾಗಬೇಕಿರುವ ಸೀತೆಯನ್ನು ಯಾರು ಯಾರೋ ಬಯಸಿ ಬಂದರು. ಈ ಜನಕ ಘೋಷ ಮಾಡಿಬಿಟ್ಟನಲ್ಲ, "ಯಾರು ಈ ಬಿಲ್ಲಿಗೆ ಹೆದೆ ಏರಿಸುವರೋ ಅವರಿಗೆ ಸೀತೆಯನ್ನು ಕೊಡುವೆನು" ಎಂದು; ಯಾರಾದರೂ ಏರಿಸಿಬಿಟ್ಟರೆ? ಏನು ಗತಿ?! ಹೀಗಾಗಿ ಯಾರಿಗೂ ಇದನ್ನು ಅಲುಗಾಡಿಸಲೂ ಆಗದಂತೆ ನಾನೇ ಹಿಡಿದುಬಿಟ್ಟಿದ್ದೆ. ಇದೀಗ ನಿಜವಾದ ಯಜಮಾನ ಬಂದಿದ್ದೀ, ಇನ್ನು ನನಗೆ ಈ ಧನುಸ್ಸನ್ನು ರಕ್ಷಿಸುವ ಅವಶ್ಯಕತೆ ಇಲ್ಲ. ನಾನು ಹೋಗಿ ಬರಲೇ? "ಮುಖದ ತುಂಬ ನಗು ತುಂಬಿ ನುಡಿದ ಶಂಕರ. ಶ್ರೀರಾಮರು ಮೃದುವಾಗಿ ಕೃತಙ್ಞತೆಯಿಂದ ನುಡಿದರು; "ಮಹೇಶ್ವರ, ನಿಮ್ಮ ಪ್ರೀತಿಗೆ ವಂದನೆ. ಅಪ್ರಾರ್ಥಿತವಾಗಿ ಧನು ರಕ್ಷಣೆಯನ್ನು ಮಾಡಿದ್ದಕ್ಕೆ ಅತ್ಯಂತ ಕೃತಙ್ಞ. ಆದಿ ದೇವರಾದ ತಾವೇ ಸೀತೆ ನನ್ನ ಪತ್ನಿಯೆಂದು ತೀರ್ಮಾನ ಮಾಡಿದ ಮೇಲೆ ಮತ್ತಾವ ಮಾತಿದೆ? ತಾವು ಹೋದ ಮೇಲೆ ಈ ಧನುಸ್ಸಿಗೆ ಹೆದೆ ಏರಿಸಲೆ?". ಪೆಟ್ಟಿಗೆಯಿಂದ ಮೇಲೇಳುತ್ತ ಶಿವ ನುಡಿದ; "ರಾಮ, ಈಗ ಅದು ಹುಲು ಧನು, ನಾನೀಗ ಅಲ್ಲಿಲ್ಲ. ಶಿವ ಶಕ್ತಿ ರಹಿತ ಬಿಲ್ಲದು. ಏನಾದರೂ ಮಾಡು! ಶುಭವಾಗಲಿ." ಶಂಕರ ಕರಗಿಹೋದ. ಕೇವಲ ಶ್ರೀರಾಮ-ವಿಶ್ವಮಿತ್ರರಿಗೆ ಮಾತ್ರ ಈ ದೃಶ್ಯ ಕಂಡಿತು. ಶ್ರೀರಾಮರು ಗುರುಗಳೆಡೆ ತಿರುಗಿ ಕೇಳಿದರು; "ಗುರುಗಳೇ? ಈ ಬಿಲ್ಲನ್ನು ಅಲ್ಲಡಿಸಲಾಗುವುದೋ, ಅಥವ ಬಗ್ಗಿಸಲಾಗುವುದೋ ಎಂದು ಪ್ರಯತ್ನಿಸಲೇ?"
(ಯತ್ನವಾಂಶ್ಚ ಭವಿಷ್ಯಾಮಿ ತೋಲನೇ ಪೂರಣೇಪಿ ವಾ)
"ಆಗಬಹುದು, ಆಗಬಹುದು" .ಒಂದೇ ಉಸಿರಿಗೆ ರಾಜರೂ, ಮಹರ್ಷಿಯೂ ಹೇಳಿ ಬಿಟ್ಟರು. 
(ಬಾಢಂ ಇತಿ ಏವ ರಾಜಾ ಮುನಿಶ್ಚ ಸಮಭಾಷತ)
*************
ಶ್ರೀರಾಮರೀಗ ಧನುಸ್ಸನ್ನೆತ್ತಿ ಮಧ್ಯದಲ್ಲಿ ಹಿಡಿದಿದ್ದಾರೆ, ನಾಣಿನ ಮಧ್ಯಕ್ಕೆ ಕೈಯಿಟ್ಟು ಜನಕನೆಡೆ ನೋಡಿದರು. ಜನಕನಿಗೆ ಅಚ್ಚರಿ. ಹೆದೆ ಏರಿಸಿದ್ದಾಯಿತಲ್ಲ, ಇನ್ನೇನು ಮಾಡುತ್ತಿದ್ದಾರೆ ರಾಮರು? ವಿಶ್ವಮಿತ್ರರಿಗೂ ಪ್ರಶ್ನೆ, ಹೆದೆ ಏರಿಸಿದಮೇಲೆ ಪೆಟ್ಟಿಗೆಯಲ್ಲಿ ಇಡದೇ ರಾಮರೇಕೆ ನಿಂತಿದ್ದಾರಿನ್ನೂ? ಜನಕ ಕೇಳಿದ್ದು ಹೆದೆ ಏರಿಸಲು. ಶ್ರೀರಾಮರು ನಿಶ್ಚಯಿಸಿದ್ದು ಧನುಷ್ಟಂಕಾರ ಮಾಡಲು! ಭಾವೀ ಮಾವ ಕೇಳಿದಷ್ಟೇ ಏಕೆ, ಆತನ ಅಪೇಕ್ಷೆಗಿನ್ನ ತಾನು ಎತ್ತರವೆಂದು ರೂಪಿಸುವುದು ಶ್ರೀರಾಮಾಪೇಕ್ಷೆ. ಎಡ ಮುಷ್ಠಿಯಲ್ಲಿ ಧನುರ್ಮಧ್ಯವನ್ನು ಬಲವಾಗಿ ಹಿಡಿದು, ಬಲ ಹೆಬ್ಬೆರಳು, ತೋರು ಬೆರಳಲ್ಲಿ ದಾರವನ್ನು ಹಿಡಿದು ಎಳೆದು, ಎಳೆದು, ಕಿವಿಯ ವರೆಗೆ ಎಳೆದಾಗಲೇ ಮುಂದಿನದು ಹೀಗಾಗುವುದೆಂದು ಯಾರೂ ನಿರೀಕ್ಷಿಸಲಿಲ್ಲ. ಸ್ವತಃ ರಾಮರೂ! ಮುಂದೇನಾಯಿತು ಎಂದು ಮೊದಲೇ ಓದಿದಿರಲ್ಲ?
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com