ರಾಮನಿಗೆ ರಾಜ್ಯ ಸಿಕ್ಕಿತೋ ಅಡ್ಡಿ ಹಾಳಾಗಲೆಂದು ಭರತನನ್ನು ದೇಶ ಬಿಟ್ಟು ಓಡಿಸುತ್ತಾನೆ. ಅಥವಾ ದಾರಿಯಲ್ಲಿ ಕೊಂದು ಹಾಕಿದರೂ ಹಾಕಿದನೇ'...'

ಈ ರಾಜ್ಯ ರಾಮನಿಗೆ ದಕ್ಕಿತೋ ಅಲ್ಲಿಗೆ ಮುಗಿಯಿತು ನಿನ್ನ ಕಥೆ . ಭರತನೂ ನತದೃಷ್ಟ . ಅವಮಾನ , ದಾರಿದ್ರ್ಯ ನಿಮಗೆ ಕಟ್ಟಿಟ್ಟ ಬುತ್ತಿ . ರಾಮ ರಾಜನಾದರೆ ಭರತ ಸತ್ತಂತೆಯೇ .
ಮಂಥರೆ-ಕೈಕೆ
ಮಂಥರೆ-ಕೈಕೆ
Updated on
ಕೈಕೆ ಕೊಟ್ಟಿದ್ದ ಕಂಠೀ ಹಾರವನ್ನು ಕಿತ್ತೆಸೆದಳು ಮಂಥರೆ! "ನಿನ್ನ ಅಙ್ಞಾನಕ್ಕಿಷ್ಟು ಬೆಂಕಿ ಹಾಕ " ಕಣ್ಣರಳಿಸಿ ನೋಡುತ್ತಿದ್ದ ರಾಣಿಯೆಡೆ ನೋಡುತ್ತ "ಅಯ್ಯೋ ಮಂದಮತಿ, ದುಃಖ ಪಡುವ ಕಾಲದಲ್ಲಿ ನಗುತ್ತಿರುವೆಯಲ್ಲೇ! ಗಂಡನ ಮತ್ತೊಬ್ಬ ಮಡದಿಯೆಂದರೆ ಹಿತ ಶತ್ರುವಿದ್ದಂತೇ. ಇನ್ನವಳ ಮಗ ನಿನಗೆ ಮೃತ್ಯುವಿದ್ದಂತೆ . ನಿನ್ನ ಮಗ ಭರತ ರಾಮನಿಗಿನ್ನ ಕೆಲವೇ ಘಂಟೆಗಳಿಗೆ ಚಿಕ್ಕವನು. ಹೀಗಾಗಿ ಅವನೂ ಸಿಂಹಾಸನಕ್ಕೆ ಯೋಗ್ಯ. ಹೀಗಾಗಿ ಭರತನಿಗೆ ಯಾವತ್ತಿದ್ದರೂ ರಾಮನಿಂದ ಹೆದರಿಕೆ ತಪ್ಪಿದ್ದಲ್ಲ. ರಾಮನಾದರೋ ಸಮಯ ಸಾಧಕ ಕ್ಷತ್ರಿಯ. ಬಂದ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳುತ್ತಾನೆ. ನಿನ್ನ ಭರತನನ್ನ ದಾರಿಯ ಮುಳ್ಳೆಂದು ಕಿತ್ತೊಗೆಯುತ್ತಾನೆ. ಭರತನಿಗೇನಾಗಬಹುದೆಂದು ಊಹಿಸಿಯೇ ನನಗೆ ನಡುಕ. ರಾಮನ ತಾಯಿ ಕೌಸಲ್ಯೆ ಆಗ ರಾಜಮಾತೆ. ಆ ರಾಜಮಾತೆಯ ಮುಂದೆ ನೀನೊಬ್ಬ ಸಾಮಾನ್ಯ ದಾಸಿಯಾಗಿ ತಲೆ ತಗ್ಗಿಸಬೇಕಾಗುತ್ತದೆ. ಭರತ ರಾಮದಾಸ, ಮಾಂಡವಿ ಸೀತಾದಾಸಿ. ನಿನ್ನ ಸೊಸೆ ಕಣ್ಣೀರಲ್ಲಿ ಕೈ ತೊಳೆಯಬೇಕಾಗುತ್ತದೆ."
( ಹರ್ಷಂ ಕಿಂ ಇದಂ ಅಸ್ಥಾನೇ ಕೃತ ವತ್ಯಸಿ ಬಾಲಿಶಾ
ಅರೇಃ ಸಪತ್ನೀ ಪುತ್ರಸ್ಯ ವೃದ್ಧಿಂ ಮೃತ್ಯೋರಿವ ಆಗತಾಂ
ಭರತಾ ದೇವ ರಾಮಸ್ಯ ರಾಜ್ಯ ಸಾಧಾರಣಾತ್ ಭಯಂ
ವಿದುಷಃ ಕ್ಷತ್ರಚಾರಿತ್ರೇ ಪ್ರಾಙ್ಞಸ್ಯ ಪ್ರಾಪ್ತಕಾರಿಣಃ
ಭಯಾತ್ ಪ್ರವೇಪೇ ರಾಮಸ್ಯ ಚಿಂತಯಂತೀ ತವಾತ್ಮಜಂ
ಉಪಸ್ಥಾಸ್ಯಸಿ ಕೌಸಲ್ಯಾಂ ದಾಸೀವ ತ್ವಂ ಕೃತಾಂಜಲಿಃ
ಹೃಷ್ಟಾಃ ಖಲು ಭವಿಷ್ಯಂತಿ ರಾಮಸ್ಯ ಪರಮಾಃ ಸ್ತ್ರಿಯಃ
ಅಪ್ರಹೃಷ್ಟಾ ಭವಿಷ್ಯಂತಿ ಸ್ನುಷಾಸ್ತೇ ಭರತ ಕ್ಷಯೇ )
ಮಂಥರೆ ಎಗರೆಗರಿ ಬೀಳುತ್ತಿದ್ದರೂ ಕೈಕೆಗೆ ಅದರ ಬಿಸಿ ತಟ್ಟಲೇ ಇಲ್ಲ. ತಟ್ಟುವುದಕ್ಕೆ ಕಾರಣಗಳೂ ಇಲ್ಲ. ಅವಳಿಗೆ ರಾಮರ ಬಗ್ಗೆ ಅಷ್ಟು ಅಕ್ಕರೆ, ಪ್ರೀತಿ. ರಾಮ ತನ್ನನ್ನೆಷ್ಟು ಗೌರವಿಸುತ್ತಾನೆಂದು ಅವಳ ಹೃದಯಕ್ಕೆ ತಿಳಿದಿತ್ತು. ಮಂಥರೆಯ ಕಲ್ಪನಾ ಬಡಬಡಿಕೆಯನ್ನು ಖಂಡಿಸುತ್ತ ಹೇಳಿದಳು; "ಅಯ್ಯೋ ಮಂಥರೆ, ನನ್ನ ಮೇಲಿನ ಪ್ರೀತಿಯಿಂದ ನೀನು ಏನೇನೋ ಕಲ್ಪನೆ ಮಾಡಿಕೊಳ್ಳುತ್ತಿರುವೆ. ರಾಮನೆಂದರೆ ಧರ್ಮಙ್ಞ, ದೊಡ್ಡವರಿಂದ ಪಾಠ ಕಲಿತ ವಿನೀತ, ಕೃತಙ್ಞ, ಸತ್ಯವಾದಿ, ಶುದ್ಧ. ಅಲ್ಲದೇ ರಾಮನೇ ಹಿರಿಯ ಮಗನಾದ್ದರಿಂದ, ಅವನಿಗೆ ಸಹಜವಾಗಿಯೇ ರಾಜನಾಗುವ ಅರ್ಹತೆಯಿದೆ. ಕೇವಲ ಸಹೋದರರನ್ನಷ್ಟೇ ಅಲ್ಲ ತನ್ನನ್ನು ಯಾರು ಆಶ್ರಯಿಸಿದ್ದಾರೋ, ಅವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುವನು. ರಾಮ ರಾಜನಾದರೆ ಭರತ ರಾಜನಾದಂತೇ!! ಅಕಸ್ಮಾತ್ ನೂರು ವರ್ಷಗಳ ನಂತರ ಭರತ ಬೇಕೆಂದರೆ, ತನ್ನ ಪಿತೃ ಪಿತಾಮಹ ಪರಂಪರೆಯ ರಾಜ್ಯವನ್ನು ಭರತನಿಗೆ ಕೊಡುವುದರಲ್ಲಿ ಯಾವ ಸಂದೇಹವೂ ಇಲ್ಲ.
( ಧರ್ಮಙ್ಹೋ ಗುರುಭಿರ್ದಾಂತಃ ಕೃತಙ್ಞಃ ಸತ್ಯವಾಕ್ ಶುಚಿಃ
ರಾಮೋ ರಾಙ್ಞಃ ಸುತೋ ಜ್ಯೇಷ್ಟೋ ಯೌವರಾಜ್ಯಂ ಅತಃ ಅರ್ಹತಿ
ಭ್ರಾತೃನ್ ಭೃತ್ಯಾಂಶ್ಚ ದೀರ್ಘಾಯುಃ ಪಿತೃವತ್ ಪಾಲಯಿಷ್ಯತಿ
ರಾಜ್ಯಂಚ ಯದಿ ರಾಮಸ್ಯ ಭರತಸ್ಯಾಪಿ ತತ್ ತದಾ
ಭರತಶ್ಚಾಪಿ ರಾಮಸ್ಯ ಧ್ರುವಂ ವರ್ಷ ಶತಾತ್ ಪರಂ
ಪಿತೃ ಪೈತಾಮಹಂ ರಾಜ್ಯಂ ಪ್ರಾಪ್ನುಯಾತ್ ಪುರುಷರ್ಷಭಃ )
ಕೈಕೆಗೆ ರಾಮರಲ್ಲಿ ಅಂತಹ ನಂಬುಗೆ. ಅಣುಮಾತ್ರ ಸಂಶಯವೂ ಆಕೆಗಿಲ್ಲ. ಮಂಥರೆ ಸೋತು ಹೋದಳು. ‘ಹೇಗಪ್ಪಾ, ಇವಳನ್ನು ಬದಲಾಯಿಸುವುದು? ಇಷ್ಟು ನಂಬಿಬಿಟ್ಟಿದ್ದಾಳೆ! ಇವಳಿಗೆ ಅರ್ಥವೇ ಆಗುತ್ತಿಲ್ಲವಲ್ಲ. ಇನ್ನಾವ ದಾಳ ಉರುಳಿಸಬೇಕು? ರಾಮ ರಾಜನಾದರೆ ಮುಂದಿನ ಕರಾಳ ಭವಿಷ್ಯ ಹೇಳುತ್ತೇನೆ. ಅದೇನಾದರೂ ಕೆಲಸ ಮಾಡುತ್ತೋ?! ’ಅಷ್ಟರೊಳಗೆ ಮತ್ತಿಬ್ಬರು ಚೇಟಿಯರನ್ನು ಕರೆದು ಬಹುಮಾನ ಕೊಟ್ಟಿದ್ದಾಳೆ ಕೈಕೆ. ರಾಮ ಬಂದರೆ ಅವನನ್ನು ಹೇಗೆ ಸತ್ಕರಿಸಬೇಕೆಂದು ಯೋಚಿಸುತ್ತಿದ್ದಾಳೆ. ಮಂಥರೆ ನುರಿತ ವಕೀಲಳಂತೆ ನ್ಯಾಯಾಧೀಶನನ್ನು ತನ್ನೆಡೆಗೆಳೆದುಕೊಳ್ಳಲು ಒಂದರ ಮೇಲೊಂದರಂತೆ ಆಘಾತಗಳ ಪಟ್ಟಿ ಮಾಡತೊಡಗಿದಳು. "ನಿನಗೆ ಭವಿಷ್ಯದ ದುರಂತ ಕಾಣುತ್ತಿದ್ದರೂ ಮೂರ್ಖಳಾದ್ದರಿಂದ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಚೆನ್ನಾಗಿ ತಿಳಿದುಕೋ; ರಾಮ ರಾಜನಾದರೆ, ಭರತನ ಮಕ್ಕಳಿಗೂ ರಾಜ್ಯ ಪದವಿ ತಪ್ಪಿಹೋಗುತ್ತದೆ. ಹೀಗಾಗಿ ನಿನ್ನ ಮಗ ಅತ್ಯಂತ ಕಷ್ಟಕ್ಕೆ ಸಿಕ್ಕಿಬೀಳುತ್ತಾನೆ. ರಾಮನಿಗೆ ರಾಜ್ಯ ಸಿಕ್ಕತೋ, ಅಡ್ಡಿ ಹಾಳಾಗಲಿ ಅಂತ ಭರತನನ್ನು ದೇಶ ಬಿಟ್ಟು ಓಡಿಸುತ್ತಾನೆ. ಅಥವಾ ದಾರಿಯಲ್ಲಿ ಕೊಂದು ಹಾಕಿದರೂ ಹಾಕುವವನೇ! ಅವನೋ ಆ ಲಕ್ಷ್ಮಣ; ಅವನು ಯಾವಾಗಲೂ ರಾಮನಿಗೇ ಬೆಂಬಲ. ರಾಮ ಯಾವ ಕಾರಣದಿಂದಲೂ ಲಕ್ಷ್ಮಣನಿಗೆ ತೊಂದರೆ ಮಾಡುವುದಿಲ್ಲ. ಆದರೆ ಭರತನಿಗೆ ಕಷ್ಟ ಕೊಡುತ್ತಾನೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇದಕ್ಕಿನ್ನ ಮುಖ್ಯವಾದ ಒಂದು ಕಾರಣ ಇದೆ. ನಿನ್ನ ಸೆರಗಿಗೆ ದಶರಥ ಸಿಕ್ಕಮೇಲೆ ಕೌಸಲ್ಯೆಗೆ ನೀನು ಎಷ್ಟು ಹಿಂಸೆ ಕೊಟ್ಟೆ ಙ್ಞಾಪಕ ಇದೆಯಾ? ಈಗ ರಾಮ ರಾಜನಾದರೆ ಅವಳು ಸೇಡು ತೀರಿಸಿಕೊಳ್ಳದೇ ಬಿಡುವಳೆ? ಈ ರಾಜ್ಯ ರಾಮನಿಗೆ ದಕ್ಕಿತೋ ಅಲ್ಲಿಗೆ ಮುಗಿಯಿತು ನಿನ್ನ ಕಥೆ. ಭರತನೂ ನತದೃಷ್ಟ. ಅವಮಾನ, ದಾರಿದ್ರ್ಯ ನಿಮಗೆ ಕಟ್ಟಿಟ್ಟ ಬುತ್ತಿ. ರಾಮ ರಾಜನಾದರೆ ಭರತ ಸತ್ತಂತೆಯೇ. 
( ಅನರ್ಥ ದರ್ಶಿನೀ ಮೌರ್ಖ್ಯಾನ್ ಆತ್ಮಾನಂ ಅವಬುಧ್ಯಸೇ
ಭವಿತಾ ರಾಘವೋ ರಾಜಾ ರಾಘವಸ್ಯ ಚ ಯಃ ಸುತಃ
ರಾಜವಂಶಾತ್ತು ಭರತಃ ಕೈಕೆಯೀ ಪರಿಹಾಸ್ಯತೇ
ಅಸಾವತ್ಯಂತ ನಿರ್ಭಗ್ನಸ್ತವ ಪುತ್ರೋ ಭವಿಷ್ಯತಿ
ಧ್ರುವಂ ತು ಭರತಂ ರಾಮಃ ಪ್ರಾಪ್ಯರಾಜ್ಯಂ ಅಕಂಟಕಂ
ದೇಶಾಂತರಂ ನಾಯಯಿತಾ ಲೋಕಾಂತರಂ ಅಥಾ ಅಪಿ ವಾ
ಗೋಪ್ತಾ ಹಿ ರಾಮಂ ಸೌಮಿತ್ರಿ೧ಕ್ಷ್ಮಣಂ ಚ ಅಪಿ ರಾಘವಃ
ತಸ್ಮಾತ್ ನ ಲಕ್ಷ್ಮಣೇ ರಾಮಃ ಪಾಪಂ ಕಿಂಚಿತ್ ಕರಿಷ್ಯತಿ
ರಾಮಸ್ತು ಭರತೇ ಪಾಪಂ ಕುರ್ಯಾತ್ ಇತಿ ನ ಸಂಶಯಃ
ದರ್ಪಾನ್ನಿರಾಕೃತಾ ಪೂರ್ವಂ ತ್ವಯಾ ಸೌಭಾಗ್ಯ ವತ್ತಯಾ
ರಾಮ ಮಾತಾ ಸಪತ್ನೀ ತೇ ಕಥಂ ವೈರಂ ನ ಯಾತಯೇತ್
ಯದಾಹಿರಾಮಃ ಪೃಥಿವೀಂ ಅವಾಪ್ಸತಿ
ಧ್ರುವಂ ಪ್ರನಷ್ಟೋ ಭರತೋ ಭವಿಷ್ಯತಿ
ಸಹೈವ ದೀನಾ ಭರತೇನ ಭಾಮಿನಿ )
*****************
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com