ಸಮಸ್ಯೆ ನಮ್ಮ ಬುಡಕ್ಕೇ ಬಂದು ಬಿಟ್ಟರೆ, ಯಾವ ಧಾರ್ಮಿಕ ನಿಷ್ಠೆಯೂ ನಮಗಿರುವುದಿಲ್ಲ. ತಕ್ಷಣ ದನಿ ಬದಲಿಸುತ್ತೇವೆ, ದಾರಿ ಬದಲಿಸುತ್ತೇವೆ..!

ಹೌದು. ನಾವೆಲ್ಲರೂ ಒಳ್ಳೆಯವರೇ. ಸಾಮಾನ್ಯ ಸ್ಥಿತಿಗಳಲ್ಲಿ ಹಾಗೂ ಅನ್ಯರ ಬಗ್ಗೆ ಮಾತನಾಡುವಾಗ ನಾವು ತುಂಬ ಉದಾರಿಗಳು. ಬೇರೆಯವರು ನ್ಯಾಯದಿಂದ ಅತ್ತಿತ ಗೆರೆಯಷ್ಟು ಚಲಿಸಿದರೂ ನಾವದನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
(ಹೌದು. ನಾವೆಲ್ಲರೂ ಒಳ್ಳೆಯವರೇ. ಸಾಮಾನ್ಯ ಸ್ಥಿತಿಗಳಲ್ಲಿ ಹಾಗೂ ಅನ್ಯರ ಬಗ್ಗೆ ಮಾತನಾಡುವಾಗ ನಾವು ತುಂಬ ಉದಾರಿಗಳು. ಬೇರೆಯವರು ನ್ಯಾಯದಿಂದ ಅತ್ತಿತ ಗೆರೆಯಷ್ಟು ಚಲಿಸಿದರೂ ನಾವದನ್ನು ಖಂಡಿಸುವವರೇ! ಅದೂ ಎಷ್ಟೆಂದರೆ ಶ್ರೀರಾಮರನ್ನೂ ವಿಮರ್ಶಿಸುವಷ್ಟು! ಆದರೆ ನಮ್ಮ ಒಳ್ಳೆಯ ಮನಸ್ಸು ಎನ್ನುವ ಮನಸ್ಸು(?) ಪರೀಕ್ಷೆಗೆ ಕುಳಿತಾಗ ಅದೇ ಧೈರ್ಯ ನಮಗಿರುತ್ತದೆ ಎಂದು ಗಟ್ಟಿದನಿಯಲ್ಲಿ ಹೇಳಲಾರೆವು. ಹಾಗೆ ಹೇಳಿಬಿಟ್ಟರೆ, ಅದರಿಂದಾಗುವ ಅಡಚಣೆಗಳೇನು? ಯಾರ್ಯಾರು ನಮ್ಮನ್ನು ವಿರೋಧಿಸಬಹುದು? ನ್ಯಾಯದ ದೃಷ್ಟಿಯಲ್ಲಿ ನಾವು ಸುರಕ್ಷಿತರಾಗಿದ್ದೇವೊ? ನಮಗಾಗುವ ನಷ್ಟವೇನು?-ಎಂದೆಲ್ಲ ಯೋಚಿಸುತ್ತೇವೆ. ಸಮಸ್ಯೆ ನಮ್ಮ ಬುಡಕ್ಕೇ ಬಂದ ಬಿಟ್ಟರೆ, ಯಾವ ಧಾರ್ಮಿಕ ನಿಷ್ಠೆಯೂ ನಮಗಿರುವುದಿಲ್ಲ! ತಕ್ಷಣ ದನಿ ಬದಲಿಸುತ್ತೇವೆ; ದಾರಿ ಬದಲಿಸುತ್ತೇವೆ. ಧಾರ್ಮಿಕ-ನ್ಯಾಯಿಕ ಯಾವ ಬದಲಾವಣೆಗೂ ಸಿದ್ಧರಾಗಿ ಬಿಡುತ್ತೇವೆ!!!!
ಕೈಕೆ ಸಾಮಾನ್ಯ ಹೆಣ್ಣು. ತಾನೂ, ತನ್ನವರು, ತನ್ನ ಕುಟುಂಬ, ತನ್ನ ಬಂಧುಗಳು... ಈ ಸರತಿಯಲ್ಲಿ ಎಲ್ಲರಿಗೂ ಸುಖವನ್ನು ಬಯಸುವಾಕೆಯೇ! ಅದು ಕಾರಣವೇ ರಾಮರ ಬಗ್ಗೆಯೂ ಎಣೆ ಇಲ್ಲದ ಪ್ರೀತಿ. ಕೌಸಲ್ಯೆಗಿನ್ನ ಶ್ರೀರಾಮ ಪ್ರೀತಿ ತನ್ನಮೇಲೇ ಹೆಚ್ಚು (ಕೌಸಲ್ಯಾತೋ ಅತಿರಿಕ್ತಂ ಚ/ ಸ ತು ಶುಶ್ರೂಷತೇ ಹಿ ಮಾಂ)
ಎಂಬ ಅಸಹಜ ಸ್ಥಿತಿಯನ್ನೂ ಊಹಿಸಿಕೊಂಡಾಕೆ! ಹೀಗಾಗಿಯೇ ರಾಮ-ಭರತರಲ್ಲಿ ಆಕೆಗೆ ಭೇದವೇ ಇಲ್ಲ!! ಆದರೆ ತಾನು ಎನ್ನುವುದರಲ್ಲಿ ಸಿಂಹಪಾಲು ಸಂತಾನದ್ದೇ! ಎಲ್ಲಿವರೆಗೆ ತನಗಾಗಲೀ ಭರತನಿಗಾಗಲೀ ತೊಂದರೆ ಇಲ್ಲವೋ, ಅಲ್ಲಿವರೆಗೆ ಅವಳು ಒಳ್ಳೆಯವಳೇ! ಆದರೆ ಮಂಥರೆ ಬಿಡಿಸಿದ ಚಿತ್ರ ಅವಳನ್ನು ಅಲುಗಾಡಿಸಿಬಿಟ್ಟಿತು!! ಇದರಲ್ಲಿ ಮಂಥರೆಯ ತಪ್ಪು ನನಗೆ ಅಷ್ಟೇನೂ ಕಾಣುತ್ತಿಲ್ಲ. ಎಷ್ಟೇ ಆಗಲಿ ಆಕೆಯ ಮಟ್ಟವೇ ಅದು. ತಾನು, ತನ್ನ ಒಡತಿ, ಒಡತಿಯ ಮಗ, ಈ ಮೂವರೇ ಅವಳ ಪ್ರಪಂಚ. ಅವಳು ಭರತನ ವಕೀಲಿ ವಹಿಸಿದ್ದು ಏನೂ ದೊಡ್ಡ ವಿಷಯವಲ್ಲ! ಆದರೆ ಕೈಕೆ ಎಷ್ಟೇ ಆಗಲಿ ರಾಜ ಪುತ್ರಿ, ಈಗ ರಾಜಪತ್ನಿ. ಮಗನ ತಾಯಿ. ಅದರಲ್ಲಿಯೂ ಶ್ರೀರಾಮರನ್ನು ಅತಿ ಹತ್ತಿರದಿಂದ ಬಲ್ಲಾಕೆ! ಆತನ ಗುಣಗಳ ಬಗ್ಗೆ ತಾನೇ ಹೊಗಳಿದಾಕೆ!! ಅಷ್ಟು ಬೇಗ ಮಂಥರೆಯ (ಬಹುಶಃ ಹತ್ತು ನಿಮಿಷಗಳ) ಬೋಧನೆಗೆ ರಾಮ, ಶತ್ರುವಾಗಿ ಕಾಣಬೇಕೆ? ಇನ್ನೆಷ್ಟು ದುರ್ಬಲಳಿದ್ದಾಳು ಆಕೆ! ಭರತನನ್ನು ರಾಜನನ್ನಾಗಿಸುವ ನಡೆಯನ್ನಾದರೂ ಕ್ಷಮಿಸಬಹುದು; ಆದರೆ ರಾಮರಿಗೆ ವಿಧಿಸಿದ ಶಿಕ್ಷೆ, ಆಕೆ ನರಕದ ರಹದಾರಿಗೆ ಕೋರಿಕೊಂಡ ವರ!!!! -ಲೇಖಕರು)
ಮಂಥರೆಯ ಪ್ರಚೋದನೆ ಕೈಕೆಗೆ ಬಲವಾಗಿ ನಾಟಿತು. ’ ಛೇ ಛೇ! ಮಂಥರೆ ಇಲ್ಲದಿದ್ದಿದ್ದರೆ ನನ್ನ ಗತಿ ಏನಾಗುತ್ತಿತ್ತೋ! ಮಂಥರೆ ಎಷ್ಟು ಒಳ್ಳೆಯವಳು! ತನ್ನ ಹಿತದಲ್ಲಿ ಅವಳಿಗೆಷ್ಟು ಆಸಕ್ತಿ! ’ಪ್ರೀತಿ ಉಬ್ಬುಬ್ಬಿ ಕುಬ್ಜೆಯನ್ನು ಹಾಡಿ ಹೊಗಳಿದಳು. "ಮಂಥರೆ ನಿನ್ನನ್ನು ಏನೋ ಎಂದುಕೊಂಡಿದ್ದೆ. ಎಂಥ ಕುಶಾಗ್ರಮತಿ ನೀನು. ನಿನಗೆಷ್ಟು ದೂರದೃಷ್ಟಿ ಇದೆ! "ಎದ್ದು ಬಂದು ಅವಳನ್ನಪಿ ಬೆನ್ನು ಸವರುತ್ತ, " ಕುಬ್ಜೆ, ಎಷ್ಟು ಚನ್ನಾಗಿ ಮಾತಾಡ್ತೀಯ! ನನಗೆ ಗೊತ್ತೇ ಇರಲಿಲ್ಲ ನೀನು ಇಷ್ಟು ವಾಚಾಳಿ ಅಂತ! ಈ ಪ್ರಪಂಚದ ಕುಬ್ಜೆಯರಲ್ಲೆಲ್ಲ ನೀನೇ ಮೊದಲ ದರ್ಜೆ. ಗಾಳಿಯ ಹೊಡೆತಕ್ಕೆ ಬಾಗಿದ ತಾವರೆ ಬಳ್ಳಿಯ ಹಾಗೆ ಬಗ್ಗಿದ್ದೀಯ! ನಿನ್ನ ಎದೆ ಹೆಗಲಿನವರೆಗೆ ಉಬ್ಬಿದೆ. ಕೆಳಗಿನ ಹಿಂಭಾಗ ಮೇಲಿನ ಉನ್ನತ ಸ್ತನಗಳ ಮಧ್ಯೆ, ನಾಚಿಕೊಂಡ ನಿನ್ನ ಹೊಕ್ಕಳು ಆಳಕ್ಕೆ ಇಳಿದುಹೋಗಿದೆ. ನಿನ್ನ ಮುಖ ಪೂರ್ಣಚಂದ್ರನ ಹಾಗೆ ಶೋಭಾಯಮಾನವಾಗಿದೆ. ನಿನ್ನ ಸೊಂಟ ಡಾಬಿನಿಂದ, ಅದಕ್ಕೆ ಅಂಟಿಸಿರುವ ಚಿನ್ನದ ಬಳ್ಳಿ ಎಳೆಗಳಿಂದ ಎಷ್ಟು ಹೊಳೆಯುತ್ತಿದೆ. ಓಹೋ ನೀನು ನಡೆಯುತ್ತಿದ್ದರೆ ರಾಜ ಹಂಸಿಯಂತೆ ಕಾಣಿಸುತ್ತೀಯ..."
(ಕುಬ್ಜೇ ತ್ವಾಂ ನ ಅವಜಾನಾಮಿ ಶ್ರೇಷ್ಠಾಂ ಶ್ರೇಷ್ಠಂ ಅಭಿಧಾಯಿನೀಂ
ಪೃಥಿವ್ಯಾಂ ಅಸಿ ಕುಬ್ಜಾನಾಂ ಉತ್ತಮಾ ಬುದ್ಧಿ ನಿಶ್ಚಯೇ
ತ್ವಂ ಪದ್ಮಂ ಇವ ವಾತೇನ ಸಂನತಾ ಪ್ರಿಯದರ್ಶನಾ
ಉರಸ್ತೇ ಅಭಿನಿವಿಷ್ಟಂ ವೈ ಯಾವತ್ ಸ್ಕಂಧಂ ಸಮುನ್ನತಂ
ಅಧಸ್ತ ಅಚ್ಛೋದರಂ ಶಾತಂ ಸುನಾಭಂ ಇವ ಲಜ್ಜಿತಂ
ಪರಿಪೂರ್ಣಂತು ಜಘನಂ ಸುಪೀನೌಚ ಪಯೋಧರೌ
ವಿಮಲ ಇಂದು ಸಮಂ ವಕ್ತ್ರಂ ಅಹೋ ರಾಜಸಿ ಮಂಥರೇ
ಜಘನಂ ತವ ನಿರ್ಮೃಷ್ಟಂ ರಶನಾದಾಮ ಶೋಭಿತಂ
ಅಗ್ರತೋ ಮಮ ಗಚ್ಛಂತೀ ರಾಜ ಹಂಸೀವ ರಾಜಸೇ)
ಕೈಕೆಯ ಹೊಗಳಿಕೆ ಸೂತ್ರ ಹರಿದ ಗಾಳಿ ಪಟದಂತೆ ತೇಲತೊಡಗಿತು! ಕುರೂಪಿ ಮಂಥರೆಯೂ ನಾಚಿಕೊಂಡುಬಿಟ್ಟಳು!! ಭರತ ರಾಜನಾದಮೇಲೆ ಮಂಥರೆಯ ಗೂನಿಗೊಂದು ಬಂಗಾರದ ತಗಡು ಹೊದೆಸುವೆನೆಂದಳು. ಹೀಗೆ ಹೊಗಳುತ್ತ ಹೊಗಳುತ್ತ ಕೈಕೆಗೆ ಇದ್ದಕ್ಕಿದ್ದಂತೆಯೇ ವಾಸ್ತವದ ಅರಿವಾಗಿ, "ಹೌದು, ಇದೆಲ್ಲ ಸಾಧಿಸುವುದು ಹೇಗೆ? ಯಾರನ್ನು ಕೇಳಲಿ? ಯಾರಲ್ಲಿ ನಂಬಿಕೆ ಇಡಲಿ? ಯಾರು ತನ್ನ ಸಮಸ್ಯೆಯನ್ನರಿತು ತನಗೆ ಸಹಾಯ ಮಾಡಬಲ್ಲರು?.... ಅರೆ! ಹೌದಲ್ಲ. ಇಷ್ಟು ಹೇಳಿದ ಮಂಥರೆಯೇ ಇದಕ್ಕೂ ಉಪಾಯ ಹೇಳಬಲ್ಲಳು! ಮಂಥರೆಯ ಕೈಗಳನ್ನು ಬಿಗಿಯಾಗಿ ಹಿಡಿದು, "ಮಂಥರೆ, ಮಂಥರೆ, ಇದನ್ನು ಸಾಧಿಸುವ ಉಪಾಯ ಏನು? "( ಕೇನೋಪಾಯೇನ ಮಂಥರೆ?)
ಅಲ್ಲಿಗೆ ಕೈಕೆ ಸಂಪೂರ್ಣ ಮಂಥರೆಯ ವಶವರ್ತಿಯಾದಳು. ತನ್ನ ಜುಟ್ಟನ್ನು ಪೂರ್ಣ ಅವಳ ಕೈಗೇ ಕೊಟ್ಟುಬಿಟ್ಟಳು. ಪದವೀಧರನಿಗೆ ಸಂದೇಹ ಬಂದರೆ ಪ್ರಾಧ್ಯಾಪಕನನ್ನು ಕೇಳಬೇಕು ತಾನೆ? ಕೈಕೆಳಗಿನ ಆಳನ್ನು ಸಹಾಯಕ್ಕೆ, ಮಾರ್ಗದರ್ಶನಕ್ಕೆ ಕೇಳುವುದೆ? 
"ನೆನಪಿದೆಯಾ ನಿನಗೆ? ಹಿಂದೆ ಯುದ್ಧ ನಡೆದಾಗ, ದೇವತೆಗಳಿಗೆ ಸಹಾಯ ಮಾಡಲು ನಿನ್ನ ಗಂಡ ಹೋದಾಗ, ಅವನಿಗೂ ಸಾಕಷ್ಟು ಗಾಯಗಳಾದವು. ಒಮ್ಮೆ ಪ್ರಙ್ಞೆ ತಪ್ಪಿ ಬಿದ್ದೇ ಬಿಟ್ಟ! ಆಗ ನೀನು ಅವನನ್ನು ಹೊರತಂದು ಉಪಚರಿಸಿದೆ. ಎದ್ದ ಗಂಡ ಎರಡು ವರಗಳನ್ನು ಕೇಳಿಕೊಳ್ಳಲು ಹೇಳಿದ. ನೀನು ನಿನಗೆ ಬೇಕಾದಾಗ ಅವುಗಳನ್ನು ಉಪಯೋಗಿಸಿಕೊಳ್ಳುವುದಾಗಿ ಹೇಳಿದೆ. ಅದಕ್ಕವನು ಒಪ್ಪಿಕೊಂಡ. ಈಗದನ್ನು ಉಪಯೋಗಿಸಿಕೋ"
(ತತ್ರಾಕರೋನ್ ಮಹಾ ಯುದ್ಧಂ ರಾಜಾ ದಶರಥಸ್ತದಾ
ಅಸುರೈಶ್ಚ ಮಹಾಬಾಹುಃ ಶಸ್ತ್ರೈಶ್ಚ ಶಕಲೀಕೃತಃ
ಅಪವಾಹ್ಯ ತ್ವಯಾದೇವಿ ಸಂಗ್ರಾಮಾನ್ ನಷ್ಟ ಚೇತನಃ
ತತ್ರಾಪಿ ವಿಕ್ಷತಃ ಶಸ್ತ್ರೈಃ ಪತಿಸ್ತೇ ರಕ್ಷಿತಸ್ತ್ವಯಾ
ತುಷ್ಟೇನ ತೇನ ದತ್ತೌ ತೇ ದ್ವೌ ವರೌ ಶುಭದರ್ಶನೇ
ಸತ್ವಯ ಉಕಃ ಪತಿರ್ದೇವಿ ಯದ ಇಚ್ಛೇಯಂ ತದಾ ವರೌ
ಗೃಹ್ಣೀಯಾಂ ಇತಿ ತತ್ತೇನ ತಥಾ ಇತಿ ಉಕ್ತಂ ಮಹಾತ್ಮನಾ)
*****************
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com