ಹೌದು! ಗುರುಗಳು ಹೇಳಿದಂತೆ ಈ ಯುವಕ, ತನಗಿನ್ನ ಅತ್ಯಂತ ಚಿಕ್ಕವ ಅಷ್ಟು ಲೀಲಾಜಾಲವಾಗಿ ಸೆಳೆದುಬಿಟ್ಟ! ತಾನು ಇವನನ್ನು ತಪ್ಪು ತಿಳಿದಿದ್ದೆ! ಇವನಿಗಿರುವ ಶಕ್ತಿಯನ್ನು ನನಗೆ ಅಂದಾಜಿಸಲಾಗಲಿಲ್ಲ. ಚಿಂತೆಯಿಲ್ಲ! ಇದೇನೂ ನನ್ನ ಸೋಲಲ್ಲ! ಗುರುಗಳೇ ಹೇಳಿದ್ದಾರೆ; ಇವನು ಪುರುಷೋತ್ತಮನಂತೆ! ಕಣ್ಮುಚ್ಚಿ ಧ್ಯಾನದ ಆಳಕ್ಕಿಳಿದು ನೋಡಿದರು; ಈ ಶ್ರೀರಾಮ ಯಾರೆಂದು!! ಓಹ್! ತಾನು ಕಾಣುತ್ತಿರುವ ದೃಶ್ಯವನ್ನು ನಂಬಲೇ ಆಗುತ್ತಿಲ್ಲ! ದಶರಥನ ಯಾಗ ಮಂಟಪದ ಮೇಲಿದ್ದ ವಿಷ್ಣು. ಅವನನ್ನು ಬ್ರಹ್ಮ ಪ್ರಾರ್ಥಿಸಿದ್ದು, ವಿಷ್ಣು ತಾನು ದಶರಥನಿಗೆ ಮಗನಾಗಿ ಹುಟ್ಟುವೆನೆಂದು ಹೇಳಿದ್ದು, ಆನಂತರ ತನ್ನನ್ನು ನಾಲ್ಕು ಭಾಗ ಮಾಡಿಕೊಂಡು ರಾಮ, ಭರತ, ಲಕ್ಷ್ಮಣ, ಶತ್ರುಘ್ನರಾಗಿ ಹುಟ್ಟಿದ್ದು... ಎಲ್ಲವೂ ಕಾಣಿಸತೊಡಗಿತು! ದಿಗ್ಭ್ರಮಿತರಾಗಿ ಕೈಜೋಡಿಸಿದರು. " ಹೇ ರಾಮ! ನೀನಾರೆಂದು ನನಗೆ ಈಗ; ಇದೀಗ, ಈ ಬಿಲ್ಲನ್ನು ಸೆಳೆದಾಗ ಅರ್ಥವಾಯಿತು! (ನನ್ನಲ್ಲೂ ವಿಷ್ಣುವಿನ ಅಂಶ ಇದೆ ಎನ್ನುತ್ತಾರೆ!) ಆದರೆ ನೀನು ಸಾಕ್ಷಾತ್ ನಾರಾಯಣನೇ ಆಗಿರುವೆ! ನೀನು ಅಂದು, ಹಿಂದೆ, ಬಹು ಹಿಂದೆ ಮಧು-ಕೈಟಭರನ್ನು ಕೊಂದ ಮಧುಸೂದನನೇ ಹೌದು! ಹುಟ್ಟು- ಸಾವಿರದ ಸಚ್ಚಿದಾನಂದ ನೀನು. ನೀನೇ ದೇವತೆಗಳಲ್ಲೆಲ್ಲ ಉತ್ತಮ; ಅಗ್ರ! ನಿನಗೆ ಒಳ್ಳೆಯದಾಗಲಿ! ನೀನು ನಿನ್ನ ವಿರೋಧಿಗಳನ್ನು ನಿರ್ನಾಮ ಮಾಡಿ ಧರ್ಮ ಸ್ಥಾಪನೆ ಮಾಡು!! "