'ಗುರು ದತ್ತಾತ್ರೇಯರ ಆದೇಶದಂತೆ, ರಾಜರನ್ನೆಲ್ಲ ಗೆದ್ದು ನನ್ನದಾಗಿಸಿಗೊಂಡಿದ್ದ ನೆಲವನ್ನೆಲ್ಲ ದಾನ ಮಾಡಿಬಿಟ್ಟೆ... '

ಹೌದು ! ಹೌದು !! ಇದನ್ನೂ ಗುರುಗಳು ಹೇಳಿದ್ದರು. ಅಂದು ತಾವೂ ಅಲ್ಲಿದ್ದುದನ್ನೂ, ಅಂದಿನ ಘಟನೆಗಳನ್ನೂ ಕಣ್ಣಿಗೆ ಕಟ್ಟುವಂತೆ ಹೇಳಿದ್ದರು. ಶ್ರೀರಾಮರ ಕಣ್ಣ ಮುಂದೆ ಆ ದೃಶ್ಯಗಳೆಲ್ಲ ಬಂದವು.
ಪರಶುರಾಮ
ಪರಶುರಾಮ
ಹೌದು ! ಹೌದು !! ಇದನ್ನೂ ಗುರುಗಳು ಹೇಳಿದ್ದರು. ಅಂದು ತಾವೂ ಅಲ್ಲಿದ್ದುದನ್ನೂ, ಅಂದಿನ ಘಟನೆಗಳನ್ನೂ ಕಣ್ಣಿಗೆ ಕಟ್ಟುವಂತೆ ಹೇಳಿದ್ದರು. ಶ್ರೀರಾಮರ ಕಣ್ಣ ಮುಂದೆ ಆ ದೃಶ್ಯಗಳೆಲ್ಲ ಬಂದವು. 
*************
ಗಂಧದ ತುಂಡುಗಳನ್ನು ಪೇರಿಸಿ ಸಿದ್ಧ ಪಡಿಸಿದ್ದ ಚಿತೆ. ಜಮದಗ್ನಿಗಳನ್ನು ಹೊತ್ತು ತಂದು ಮಲಗಿಸಿದ್ದಾರೆ. ದೊಡ್ಡ ಮಗ ತೂತು ಮಡಕೆಯಲ್ಲಿ ನೀರು ಸುರಿಸುತ್ತಾ ಮೂರು ಸುತ್ತು ಸುತ್ತಿದ್ದಾನೆ. ಅಪರ ಕರ್ಮ ಮಂತ್ರಗಳನ್ನು ಸುನಿತ್ಯರು ಪಠಿಸುತ್ತಿದ್ದಾರೆ. ಚಿತೆಯ ಮೇಲೆ ಜಮದಗ್ನಿಗಳ ದೇಹದ ಮೇಲಿದ್ದ ಕಟ್ಟಿಗೆಗಳಿಗೆ ತುಪ್ಪದ ಅಭಿಷೇಕ ಆಗಿದೆ. ಕೈಗೆ ಉರಿಯುವ ದೊಂದಿ ಬಂದಿತು. ಚಿತೆಗೆ ಬೆಂಕಿ ಹಚ್ಚಬೇಕು. ಇದ್ದಕ್ಕಿದ್ದಂತೆಯೇ ಅಶರೀರವಾಣಿ. "ನಿಲ್ಲಿ! ಜಮದಗ್ನಿಗೆ ಇನ್ನೂ ಆಯುಷ್ಯ ಮುಗಿದಿಲ್ಲ. ಹಿಂದೆಲ್ಲ ಎಷ್ಟೋ ಬಾರಿ ಸಿಟ್ಟುಗೊಂಡು ಶಪಿಸಿದಾಗ, ಕೆಲವು ನಿಷ್ಕಾರಣ ದಂಡನೆಯಾಗಿತ್ತು. ಕೆಲವು ಪುಟ್ಟ ತಪ್ಪುಗಳಿಗೆ ಭಾರೀ ಶಿಕ್ಷೆಗಳಾಗಿದ್ದುವು. ಇದಕ್ಕೆ ಜಮದಗ್ನಿ ದಂಡ ತರಬೇಕಾಗಿತ್ತು. ಅದಕ್ಕಾಗಿ ವಿಧಿ ಈ ಘಟ್ಟವನ್ನು ಏರ್ಪಡಿಸಿದೆ. ಈ ಅಂಕ ಈಗ ಮುಗಿದಿದೆ. ನಾನು ಭೃಗು. ನಮ್ಮ ವಂಶದ ಜಮದಗ್ನಿ ಇನ್ನೂ ಬದುಕಬೇಕಿದೆ. ನಿಮ್ಮ ಮುಂದೀಗ ಥಾಲಿಯಲ್ಲಿ ಸಂಜೀವಿನೀ ರಸ ಪ್ರತ್ಯಕ್ಷವಾಗುತ್ತದೆ. ಅದರ ರಸವನ್ನು ಭಗ್ನವಾದ ದೇಹ ಭಾಗಗಳಿಗೆಲ್ಲ ಸವರಿ. ಏಳುತ್ತಾನೆ ಜಮದಗ್ನಿ. " 
ಸೋದರಳಿಯನ ಸಂಸ್ಕಾರಕ್ಕೆ ಬಂದಿದ್ದ ವಿಶ್ವಮಿತ್ರರು ಸಂತುಷ್ಟರಾಗಿ ಶ್ರೀರಾಮರಿಗೆ ಕಥೆ ಹೇಳಿ ಮುಗಿಸಿ, "ಈ ಹುಣ್ಣಿಮೆ ಇನ್ನು ಮುಂದೆ ರಂಡೆ ಹುಣ್ಣಿಮೆಯೆಂದಲ್ಲ; ಮುತ್ತೈದೆ ಹುಣ್ಣಿಮೆಯೆಂದು ಆಚರಿಸಲ್ಪಡುತ್ತದೆ" ಎಂದು "ಓಂ ಸ್ವಸ್ತಿ" ಹೇಳಿದ್ದರು. 
**************
ಇದೀಗ ಶ್ರೀರಾಮರಿಗೆ ಸಮಸ್ಯೆ. ಹೆದೆ ಏರಿಸಿಬಿಟ್ಟಿದ್ದಾರೆ. ಬಾಣ ಪ್ರಯೋಗ ಆಗಲೇ ಬೇಕು. ಅದು ಧನುಃ ಶಾಸ್ತ್ರ. ಪರಶುರಾಮರ ಮೇಲೆ ಬಿಡಲೆ? ಗುರು ಸಂಬಂಧಿಯ ಮೇಲೆ ಬಾಣ ಪ್ರಯೋಗವೆ? ಅದರಲ್ಲಿಯೂ ಈಗಿನ ಪರಶುರಾಮರನ್ನು ನೋಡಿದರೇ ಕರುಣೆಯುಕ್ಕುತ್ತಿದೆ. ಬಿಲ್ಲು ಕೊಟ್ಟು ಯುದ್ಧ ಮಾಡುವುದಾಗಿ ಹೇಳಿದ್ದರು. ಈಗ ನೋಡಿದರೆ ಕೈಕಟ್ಟಿ ಅಂತರ್ಮುಖಿಯಾಗಿದ್ದಾರೆ. ಏನು ಯೋಚಿಸುತ್ತಿದ್ದಾರೋ? ನಾನೀಗ ಏನು ಮಾಡಬೇಕು? "ಸ್ವಾಮಿನ್, ತಾವೇ ಹೇಳಿದಂತೆ ಈಗ ಹೆದೆ ಏರಿಸಿದ್ದೇನೆ. ಬಾಣವನ್ನು ಹೂಡಿಬಿಟ್ಟಿದ್ದೇನೆ. ಆ ಕ್ಷಣದಲ್ಲಿ, ಆ ದುರ್ಬಲ ಮುಹೂರ್ತದಲ್ಲಿ ನನಗೂ ಕ್ಷಣಕಾಲ ಕೋಪ ಬಂದುಬಿಟ್ಟಿತು. ನೀವೇ ಆಹ್ವಾನಿಸಿದಮೇಲೆ, ನಿಮ್ಮನ್ನು ಸೋಲಿಸಲೇ ಸಿದ್ಧನಾಗಿಬಿಟ್ಟೆ! ಶರಸಂಧಾನ ಮಾಡಿಯೂ ಬಿಟ್ಟೆ!! ಕೋಪವೆಂಬುದು ಬಹಳ ಕೆಟ್ಟದ್ದು. ಪ್ರಥಮ ಗುರುಗಳು ಮತ್ತೆ ಮತ್ತೆ ಹೇಳುತ್ತಿದ್ದರು. "ರಾಮ ನೀನು ಕಲಿಯಬೇಕಾದ ಮೊದಲ ಪಾಠವೆಂದರೆ ಸಿಟ್ಟನ್ನು ನಿಗ್ರಹಿಸುವುದು. ಜನಸಾಮಾನ್ಯ ಸಿಟ್ಟುಗೊಂಡರೆ ಆಗುವ ಅನಾಹುತ ಅತ್ಯಲ್ಪ! ಸೈನಿಕ ಸಿಟ್ಟಾದರೆ, ಖಂಡಿತ ಹಿಂಸೆ! ಸೇನಾ ಪ್ರಮುಖ ಕೋಪ ಮಾಡಿಕೊಂಡರೆ ಅನೇಕ ಬಲಿ. ಅದರಲ್ಲಿಯೂ ರಾಜನಾದವನು ಸಿಟ್ಟುಗೊಂಡರೆ ಮಹಾ ಹಾನಿ. ಯುದ್ಧವೂ ಆಗಿ ಸಾವಿರಾರು ಮಂದಿ ಸಾಯಬಹುದು. ಆಸ್ತಿ ಹಾನಿಯಾಗುತ್ತದೆ. ದೇಶದಲ್ಲಿ ಆತಂಕ ಮೂಡಿ ಜನರ ಶಾಂತಿ ಭಂಗವಾಗುತ್ತದೆ. ಅದು ಕಾರಣ ನಿನ್ನ ಕೋಪ ಅತ್ಯಂತ ವಿರಳವಾಗಿರಬೇಕು. ಯುದ್ಧ ಸಂದರ್ಭ ವಿನಃ, ರಾಜನೆಂಬ ಕಾರಣಕ್ಕೆ ಕೋಪಗೊಂಡು ಅನ್ಯರಿಗೆ ಧಕ್ಕೆ ಮಾಡಬೇಡ " .ವಸಿಷ್ಠರ ಮಾತನ್ನು ಇಲ್ಲಿಯವರೆಗೆ ಚಚಾತಪ್ಪದೇ ಪಾಲಿಸುತ್ತಿದ್ದೇನೆ. ವಿನಾಕಾರಣ ಮೇಲೆ ಬಿದ್ದ ತಾಟಕೆಯ ಸಂಹಾರ ಮಾಡಲೂ ನಿಧಾನಿಸಿದ್ದೆ. ಗುರುಗಳ ಬೆಂಬಲ; ಒತ್ತಾಯ ಹಾಗೂ ಅವರ ರಕ್ಷಣೆಗಾಗಿ ಸುಬಾಹುವನ್ನು ಸಾಯಿಸಬೇಕಾಯಿತು. ಅಷ್ಟೇ! "ಕೊಂಚ ಕಾಲ ತಡೆದು ಹೇಳಿದರು, "ಇದೀಗ ತಾವು ನಮಗೆಲ್ಲ ಪೂಜ್ಯರು. ತಮ್ಮ ಮೇಲೆ ಕೈ ಎತ್ತಬಾರದಿತ್ತು! ಬಿಲ್ಲು ಎತ್ತಿಯೇ ಬಿಟ್ಟೆ. ಈಗ ಅದಕ್ಕೆ ಗ್ರಾಸ ಕೊಡದೇ ಇಳಿಸುವಂತಿಲ್ಲ! ಒಂದೇ ಸಾಧ್ಯತೆ ಇದೆ. ನೀವು ಕ್ಷಮೆ ಕೇಳಿದರೆ ಮಾತ್ರ ಹಿಂತೆಗೆದುಕೊಳ್ಳಬಹುದು." 
ರಾಮರ ಮೃದು ಮಾತು; ಅಷ್ಟೆ ಸ್ಪಷ್ಟವಾದ ಮಾತು ನಿಲ್ಲುತ್ತಿದ್ದಂತೆಯೇ ಪರಶುರಾಮರು ಹೇಳಿದರು, "ಬೇಡ ರಾಮ, ಬೇಡ. ಬಿಲ್ಲಿಳಿಸಬೇಡ. ಕ್ಷಮೆ ಕೇಳಿ ನನಗಾಗಬೇಕಾದ ಶಿಕ್ಷೆಯನ್ನು ಕಡಿಮೆ ಮಾಡಿಕೊಳ್ಳಲು ನನ್ನ ಅಭಿಮಾನ ಒಪ್ಪುವುದಿಲ್ಲ. ನಿಷ್ಕಾರಣವಾಗಿ ನಾನು ಅನೇಕರನ್ನು ಹತ್ಯೆ ಮಾಡಿದ್ದಕ್ಕೆ ಶಿಕ್ಷೆಯಾಗಲೇಬೇಕು! ಒಂದರ್ಥದಲ್ಲಿ ಈಗಾಗಲೇ ಆರಂಭವಾಗಿದೆ. ಗುರು ದತ್ತಾತ್ರೇಯರ ಆದೇಶದಂತೆ ನಾನು ರಾಜರನ್ನೆಲ್ಲ ಗೆದ್ದು ನನ್ನದಾಗಿಸಿಕೊಂಡಿದ್ದ ನೆಲವನ್ನೆಲ್ಲ ದಾನ ಮಾಡಿಬಿಟ್ಟೆ ಕಶ್ಯಪ ಮಹರ್ಷಿಗಳಿಗೆ" 
( ಕಶ್ಯಪಾಯ ಮಯಾ ದತ್ತಾ ಯದಾ ಪೂರ್ವಂ ವಸುಂಧರಾ )
ದಾನಕೊಂಡ ಕಶ್ಯಪರು ಹೇಳಿದ್ದರು, "ನನಗೆ ದಾನ ಕೊಟ್ಟಮೇಲೆ ಇದು ನನ್ನ ಭೂಮಿಯಾಯಿತು. ದಾನ ಮಾಡಿದ ವಸ್ತುವನ್ನು ದಾನ ಕೊಟ್ಟಾತ ಉಪಯೋಗಿಸಿಕೊಳ್ಳುವಂತಿಲ್ಲ. ಅರ್ಥವಾಯಿತೆ? " ಶ್ರೀರಾಮರಿಗೆ ಬಿಡಿಸಿ ಹೇಳುತ್ತಿದ್ದಾರೆ ಪರಶುರಾಮರು, " ನನ್ನನ್ನು ತದೇಕ ದೃಷ್ಟಿಯಿಂದ ನೋಡುತ್ತ ನುಡಿದಿದ್ದರು ಕಶ್ಯಪರು; ಈ ಭೂಮಿಯ ಮೇಲೆ ನೀನು ವಾಸ ಮಾಡುವಂತಿಲ್ಲ. " 
( ವಿಷಯೇ ಮೇ ನ ವಸ್ತವ್ಯಮ್ ಇತಿ ಮಾಂ ಕಶ್ಯಪೋ ಅಬ್ರವೀತ್ )
ಅಂದಿನಿಂದ ನಾನು ಮಹೇಂದ್ರ ಪರ್ವತದಲ್ಲಿ ವಾಸ ಮಾಡುತ್ತಿದ್ದೇನೆ. ಭಾರತಕ್ಕೆ ಇಳಿಯುವುದೇ ಇಲ್ಲ. ಅಕಸ್ಮಾತ್ ತಾಯಿ-ಅಣ್ಣಂದಿರನ್ನು ನೋಡಲೋ, ಮಿತ್ರ ಋಷಿಗಳನ್ನು ಭೇಟಿಯಾಗಲೋ ಬಂದರೂ, ಕಶ್ಯಪರಿಗೆ ಮಾತು ಕೊಟ್ಟಂತೆ ಅಂದೇ ರಾತ್ರಿಯಾಗುವುದರೊಳಗೆ ಮಹೇಂದ್ರಗಿರಿಗೆ ವಾಪಸಾಗಬೇಕು. 
( ಸೋ ಅಹಂ ಗುರುವಚಃ ಕುರ್ವನ್ ಪೃಥಿವ್ಯಾಂ ನ ವಸೇ ನಿಶಾಂ )
ಪರಶುರಾಮರು ಏನು ಹೇಳುತ್ತಿದ್ದಾರೆಂದು ಸ್ಪಷ್ಟವಾಗಲಿಲ್ಲ. ಆದರೆ ಪರಶುರಾಮರ ಮಾತು ಮುಂದುವರಿದಾಗ ಎಲ್ಲವೂ ಸ್ಪಷ್ಟವಾಯಿತು. " ನನ್ನಲ್ಲಿ ಎರಡು ವಿಶೇಷ ಶಕ್ತಿಗಳಿವೆ. ನಾನು ತಪದಿಂದ ಸಂಪಾದಿಸಿರುವ ಪವಿತ್ರವಾದ ಪುಣ್ಯಲೋಕಗಳು; ಎರಡು, ಗುರುಗಳಿಂದ ವಿಶೇಷ ಸಂದರ್ಭಗಳಲ್ಲಿ ಬಳಸಿಕೊಳ್ಳುವ ಗಗನ ಗಮನ. ಈ ಎರಡರಲ್ಲಿ ನೀನು ಬಾಣ ಬಿಟ್ಟು ಕೆಲವು ಪುಣ್ಯಲೋಕಗಳನ್ನು ಸುಟ್ಟುಬಿಡು. ನಾನು ಮನೋವೇಗದಿಂದ ಮಹೇಂದ್ರಗಿರಿಗೆ ಹೋಗಿಬಿಡುತ್ತೇನೆ. 
( ಲೋಕಾಸ್ತ್ವಪ್ರತಿಮಾ ರಾಮ ಜಹಿ ತಾನ್ ಶರಮುಖೇನ
ಮನೋಜವಂ ಗಮಿಷ್ಯಾಮಿ ಮಹೇಂದ್ರಂ ಪರ್ವತೋತ್ತಮಂ )
ಮನಸ್ಸಿಲ್ಲದ ಮನಸ್ಸಿನಿಂದ ಶ್ರೀರಾಮರು ಸೆಳೆದು ಬಿಟ್ಟರು ಬಾಣವನ್ನು. ಅದು ಹೋಗಿ ಪರಶುರಾಮರು ಸಂಪಾದನೆ ಮಾಡಿರುವ ಕೆಲ ಪುಣ್ಯಲೋಕಗಳನ್ನು ಸುಟ್ಟುಹಾಕಿತು. ಆನಂತರ ಪರಶುರಾಮರು ದಶರಥರಾಮರಿಗೆ ಹರಸಿ ಆಕಾಶದಲ್ಲಿ ಹಾರಿ ಹೋದರು ಮಹೇಂದ್ರ ಗಿರಿಗೆ!
 ಹಸ್ತಿ ಹಸುವಾದಂತೆ, ಸರ್ಪ ಸರವಾದಂತೆ,
ಜ್ವಾಲೆ ಸೊಡರಾದಂತೆ, ಶಿಲೆ ಬೆಣ್ಣೆಯಾದಂತೆ
ಬಿರುಬಿಸಿಲು ತಂಪಾಗಿ ರಾಮರನು ಹರಸುತ್ತ
ಮಹೇಂದ್ರಕೇರಿದರು ಪರಶುರಾಮ 
ಅತ್ಯಲ್ಪಕಾಲದಲ್ಲೇ ಶ್ರೀರಾಮರಿಗೆ ಆತ್ಮೀಯರಾಗಿದ್ದ ಪರಶುರಾಮರು ಗಾಳಿಯಲ್ಲಿ ಹಾರಿ ಕಣ್ಣಿಗೆ ಕಾಣದಾದದ್ದು ಅಪ್ರಿಯವಾಗಿತ್ತು. ಹಿಂದಿನ ದಿನ ಗುರುಗಳಾದ ವಿಶ್ವಮಿತ್ರರೂ ಹೋಗಿಬಿಟ್ಟಿದ್ದರು. ಮನಸ್ಸು ತುಂಬ ಕಹಿಯಾಗಿದ್ದು, ಸೀತೆಯನ್ನು ಕಾಣುತ್ತಿದ್ದಂತೆಯೇ ಪ್ರಫುಲ್ಲವಾಯಿತು.
(ಕಲ್ಯಾಣಕಾಂಡ ಮುಗಿಯಿತು. )
---೦೦೦---
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com