ವಿಧಿ ವಿಕ್ರಮ ಕಾಂಡ

ಶ್ರೀರಾಮರು ವಿಧಿವಾದಿಗಳು. ಅವರ ಪ್ರಭಾವ ನನ್ನ ಮೇಲೆ ಸಾಕಷ್ಟೇ ಇದೆ. ಹೀಗಾಗಿ ಮುಂದಿನ ಕಥಾಭಾಗವನ್ನು ವಿಧಿವಿಕ್ರಮಕಾಂಡ ವೆಂದು ಕರೆಯುತ್ತಿದ್ದೇನೆ. ಅದೇ ವಿಧಿ, ದಾಳ ಉರುಳಿಸಿ ಶ್ರೀರಾಮ ಪಥವನ್ನೀಗ ಬದಲಿಸುತ್ತಿದೆ!
ರಾಮ
ರಾಮ
(ಜೀವನದಲ್ಲಿನ ಘಟನೆಗಳು ಎಷ್ಟು ಕರಾರುವಾಕ್ಕಾಗಿರುತ್ತವೆಂದರೆ, ಅತ್ಯಂತ ಎಚ್ಚರಿಕೆಯಿಂದ, ತುಂಬ ಆಲೋಚಿಸಿ, ಯೋಜನಾಬದ್ಧವಾಗಿ ಯಾರಾದರೂ ನಿರೂಪಿಸಿದ್ದಾರೋ ಎನಿಸುತ್ತದೆ. ಉದಾಹರಣೆಗೆ ಶರೀರದ ಅಂಗಾಂಗಗಳು, ಅವುಗಳು ಒಂದಕ್ಕೊಂದು ಹೊಂದಿಕೊಂಡು ಚಲಿಸುವ, ಕಾರ್ಯ ನಿರ್ವಹಿಸುವ, ದೇಹದೊಳಗಿನ ನಮ್ಮ ಕಣ್ಣಿಗೆ ಕಾಣದೆಯೇ, ನಮ್ಮ ಙ್ಞಾನಕ್ಕೆ ದಕ್ಕದೆಯೇ ತಮ್ಮ ಪಾಡಿಗೆ ತಾವು ಕ್ರಿಯಾಶೀಲವಾಗಿರುವ ಶ್ವಾಸಕೋಶ, ಮೇದೋಜೀರಕ, ಪಿತ್ತಕೋಶ, ಕರುಳುಗಳು... ಇತ್ಯಾದಿಗಳೆಲ್ಲ ಹೇಗೆ ಅನ್ಯೋನ್ಯವಾಗಿ ಕಿತ್ತಾಡದೇ, ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತವೆ ಎಂಬುದು ಅತ್ಯಾಶ್ಚರ್ಯಕರ. 
ಅಸಲು ಈ ಶರೀರದ ಗೂಡಿಗೆ, ಅದೂ ಒಂದು ನಿಮಿಷವೂ ಆಗಿರದ ಆ ಜೀವಕೋಶಕ್ಕೆ ಎಲ್ಲಿಂದ ಈ ಜೀವ ಬಂದು ಸೇರಿತು?  ಅಂದಿನಿಂದ ಸತತವಾಗಿ ಸಾಯುವ ತನಕ ಎಷ್ಟೆಷ್ಟೋ ವರ್ಷಗಳು ಅದೇ ಶರೀರದಲ್ಲುಳಿಯಿತು? ಅದೇ ನಮ್ಮ ದೈಹಿಕ ಕ್ರಿಯಗಳ ಮೇಲೆ ಗಮನವಿಟ್ಟಿದೆಯೋ, ಅಲ್ಲದೇ ನಮ್ಮ ಬದುಕಿನ ಬಾಲ್ಯ, ಯವ್ವನ, ವಾರ್ಧಕ್ಯಗಳನ್ನು ನಿಯಂತ್ರಿಸುತ್ತಿದೆಯೋ, ಕ್ಷಣ-ಕ್ಷಣದ ಕರಾರುವಾಕ್ಕು ಕಾರ್ಯಕ್ರಮ ಆ ಜೀವಕ್ಕಿದೆಯೋ, ಅಸಲು ಈ ಶರೀರಕ್ಕೆ ಬರುವ ಮೊದಲು ಇತ್ತೆಲ್ಲಿ ಅದು? ಈಗೇಕೆ ಬಂದಿದೆ? ಇದ್ದಕ್ಕಿದ್ದಂತೆಯೇ ಎಲ್ಲಿ ಮಾಯವಾಗಿ, ಆ ಕ್ಷಣದ ತನಕ ಚೈತನ್ಯ ಪೂರ್ಣವಾಗಿದ್ದ ದೇಹವನ್ನು ತಣ್ಣಗೆ ಮಾಡಿ ನಿಷ್ಕರುಣೆಯಿಂದ ಸಾಯಿಸಿ, ಎಲ್ಲಿಗೆ ಹೋಗಿಬಿಡುತ್ತದೆ? .... ಎಂದೆಲ್ಲ ಪ್ರಶ್ನೆಗಳೂ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಭೃಗುವಲ್ಲಿಯಲ್ಲಿ ಇವೇ ಪ್ರಶ್ನೆಗಳನ್ನು ಇಟ್ಟುಕೊಂಡು ತಪಸ್ಸು ಮಾಡೆಂದು ವರುಣ ಸೂಚಿಸುತ್ತಾನೆ. 
(ಯತೋ ವಾ ಇಮಾನಿ ಭೂತಾನಿ ಜಾಯಂತೆ
ಏನ ಜಾತಾನಿ ಜೀವಂತಿ 
ಯತ್ ಪ್ರಯಂತ್ಯಭಿಸಂವಿಶಂತಿ)
ಅಲ್ಲೇನೋ ಭೃಗುವಿಗೆ ಬ್ರಹ್ಮದರ್ಶನವಾಯಿತಂತೆ! " ಆನಂದೋ ಬ್ರಹ್ಮೇತಿ ವ್ಯಜಾನಾತ್" ಎಂದೇನೋ ಆತ ಹೇಳಿಬಿಟ್ಟ. ಅದನ್ನೋದಿದ್ದಷ್ಟೇ ನಮಗೆ ಗೊತ್ತು. ನಮಗೆ ಬ್ರಹ್ಮಾನುಭವ ಆಗಲಿಲ್ಲವಲ್ಲ!!
ನಮ್ಮಿಂದ ಹೊರನೋಡಿದರೆ ಅವೆಷ್ಟು ವೈವಿಧ್ಯಮಯ ಪಶುಪಕ್ಷಿ ಪ್ರಾಣಿ ಕೀಟ ಜಲಚರ, ಗಗನಚರ, ಭೂಚರಗಳು! ಅವೆಷ್ಟು ಕೋಟಿ ಕೋಟಿ! ಆ ಕೋಟಿ ಕೋಟಿಗಳಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಜಗತ್ತು; ತನ್ನದೇ ಚಿಂತನೆ; ತನ್ನದೇ ಲೆಕ್ಕಾಚಾರ, ತನ್ನದೇ ಬೇಕು- ಬೇಡಗಳು... ಅಬ್ಬೋ! ಇದೆಲ್ಲ ಹೇಗೆ ಸಾಧ್ಯವೆನ್ನುವಂತೆಯೇ ಇಲ್ಲ; ಸಾಧ್ಯವಾಗಿಬಿಟ್ಟಿದೆಯಲ್ಲ! ಈ ಎಲ್ಲ ಜೀವ-ನಿರ್ಜೀವಗಳ ಅಸ್ತಿತ್ವ ಏಕೆ, ಯಾವ ಪುರುಷಾರ್ಥಕ್ಕೆ? ಇರುವೆಯೋ, ಹಕ್ಕಿಯೋ ಬೆಳಗಿನಿಂದ ಸಂಜೆಯ ತನಕ ಸುತ್ತಿ, ಸುತ್ತಿ, ಓಡಾಡಿ, ಆಹಾರ ಸಂಗ್ರಹಿಸಿ, ಉಂಡು, ಮಲಗಿ, ಹುಟ್ಟಿಸಿ ಸಾಯುತ್ತವೆ. ತಾನೇನೋ ವಿಶೇಷವೆಂದೋ, ದೊಡ್ಡವನೆಂದೋ, ನಾಗರಿಕನೆಂದೋ ಮನುಷ್ಯ ಬೀಗುತ್ತಿದ್ದರೂ, ಆಳವಾಗಿ ಯೋಚಿಸಿದಲ್ಲಿ ಯಾವುದೇ ಜೀವಿಗಿನ್ನಾ ವಿಭಿನ್ನವಾಗಿ, ವಿಶೇಷ ಕಾರಣದಿಂದ ಇಲ್ಲಿದ್ದಾನೆ, ಗುರುತರವಾದದ್ದನ್ನು ಮಾಡುತ್ತಿದ್ದಾನೆ, ಎಂದು ನನಗೇನೋ ಅನ್ನಿಸುತ್ತಿಲ್ಲ. ಆದರೂ ಏನೋ ಲೆಕ್ಕಾಚಾರಗಳನ್ನು ಹಾಕುತ್ತ, ಕ್ರಮಬದ್ಧವಾಗಿ ಜೀವಿಸುತ್ತಿದ್ದೇವೆ. ಏನೇನನ್ನೋ ಸಾಧಿಸುತ್ತಿದ್ದೇವೆ, ಸಮಾಜಕ್ಕೆ ಅನುಕೂಲಗಳನ್ನು ಮಾಡುತ್ತಿದ್ದೇವೆ... ಎಂದೆಲ್ಲ ಅಂದುಕೊಂಡರೂ, ಕಾಲ ಕಳೆಯುತ್ತಿದ್ದಂತೆಯೇ ನಾವೇನೇನು ಮಹಾ ಮಹಾ ಮಹಿಮಾನ್ವಿತವಾದುವೆಂದುಕೊಳ್ಳುತ್ತೇವೆಯೋ ಅವೆಲ್ಲ ಕಾಲ ಪ್ರವಾಹದಲ್ಲಿ ಕೊಚ್ಚಿ ಹೋಗಿ, ಎಲ್ಲವೂ ಶೂನ್ಯವಾಗಿಬಿಡುತ್ತದೆ. ಹಾಗಾದರೆ ಈ ಜೀವನಕ್ಕೇನಾದರೂ ಅರ್ಥವಿದೆಯೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ. ಇದಕ್ಕಿನ್ನ ಮಹತ್ತರವಾದ ಪ್ರಪಂಚದ ಪ್ರಪ್ರಥಮ ಅಚ್ಚರಿಯೆಂದರೆ, ಇಷ್ಟೆಲ್ಲ ಜೀವನದಲ್ಲಿ ಅರ್ಥ ಕಾಣಿಸದಿದ್ದರೂ ನಾವು ಕ್ರಿಯಾಶೀಲರಾಗಿರುವುದಾಗಲೀ, ಸಾಧಿಸುವೆವೆಂದು ಹೂಂಕರಿಸುವುದಾಗಲೀ ನಿಲ್ಲಿಸುವುದೇ ಇಲ್ಲ.
ಇನ್ನೂ ಮುಂದಕ್ಕೆ ಹೋದರೆ, ನಾವಿರುವ ಗಗನ, ಅದರ ವಿಸ್ತಾರ, ಅದರೊಡಲಲ್ಲಿರುವ ಗ್ರಹತಾರೆಗಳು, ಅವುಗಳಲ್ಲಿ ಹತ್ತಿರದಲ್ಲಿರುವ ಸದಾ ಸ್ಫೋಟದ ಅಗ್ನಿಗೋಳ ಸೂರ್ಯ, ಅವನ ಸುತ್ತಲಿರುವ ಗ್ರಹಗಳು, ಕೋಟಿ ಕೋಟಿ ಕಿಲೋಮೀಟರ್ ದೂರದ ಅವುಗಳು ನಮ್ಮ ಮೇಲೆ ಪ್ರಭಾವ ಬೀರುವುದು... ಇವೆಲ್ಲ ವಿಸ್ಮಯ, ಅಚ್ಚರಿ, ಮೂಕ ಬೆರಗು. 
ಹಾಗಾದರೆ ಇವೆಲ್ಲ ಹೇಗೆ? ಏಕೆ? ಯಾವ ಸೂತ್ರಕ್ಕೆ ಅನುಗುಣವಾಗಿ ನೆಡೆಯುತ್ತಿದೆ? ಎಂದೆಲ್ಲ ಯೋಚಿಸಿದಾಗ ಸಂಪ್ರದಾಯ, ತತ್ವಙ್ಞಾನ ಹೇಳುತ್ತದೆ; ಅದೇ ವಿಧಿ. ಯಾವುದು ಈ ವಿಧಿ, ಏನೀ ವಿಧಿ ಎಂದರೆ? ಎಲ್ಲಿದೆ? ನಮ್ಮೊಳಗೋ, ಹೊರಗೋ, ಸರ್ವವ್ಯಾಪ್ತವೋ, ಅದರ ರಾಜಧಾನಿ ಯಾವುದು? ಸಿಬ್ಬಂದಿ ಹೇಗೆ? ಕಾರ್ಯವಿಧಾನವೆಂತು? ಅಸಲು ಅದರ ಸ್ವರೂಪವೇನು?.... ಈ ಯಾವ ಪ್ರಶ್ನೆಗಳಿಗೂ ನಮಗೆ ಉತ್ತರ ಸರಿಯಾಗಿ, ನಿಜವಾಗಿ ಗೊತ್ತಿಲ್ಲ. ಗೊತ್ತಿರುವುದೆಲ್ಲ ಓದಿದ್ದು, ಕೇಳಿದ್ದು, ಯೋಚಿಸಿದ್ದು, ಅರ್ಥಕ್ಕೆ ಸಿಕ್ಕಿದ್ದು, ಅರ್ಥವಾದದ್ದು. ಅಷ್ಟೇ. ಅಷ್ಟೇನೋ ಇನ್ನೆಷ್ಟೋ? ಗೊತ್ತಿಲ್ಲ ಗೊತ್ತಿಲ್ಲ ಕೆಣಕಿದಷ್ಟೂ, ಕೆದಕಿದಷ್ಟೂ, ಸಂದೇಹಗಳು, ಅನುಮಾನಗಳು. ಈ ಯೋಚನೆಗಳನ್ನು ಮಾಡದೇ ಉಳಿದುಬಿಡುವುದೇ ಎಷ್ಟೋ ಬಾರಿ ಸಮಂಜಸ ಎನಿಸುತ್ತದೆ.
ಈ ವಿಧಿಯನ್ನು ಒಪ್ಪದ ವಾದವೂ ಒಂದುಂಟು. ನಾವೇ ರೂಪಿಸಿಕೊಳ್ಳುವ ಜೀವನ, ಅದರ ಸೋಲು, ಗೆಲುವುಗಳೆಲ್ಲ ಸ್ವಯಂಕೃತ. ಕಣ್ಣಿಗೆ ಕಾಣದ, ಕೇವಲ ಆಧಾರವೇ ಇಲ್ಲದ ನಂಬಿಕೆಯನ್ನಾಧರಿಸಿದ ವಿಧಿಗೆ ಇಲ್ಲಿ ಜಾಗವೇ ಇಲ್ಲ. ಈ ಚಿಂತನೆಯೇ ಪೌರುಷವಾದ. ಈ ಎರಡೂ ವಾದಗಳನ್ನು ಒಪ್ಪಿರುವವರೂ, ತಮ್ಮ ತಮ್ಮ ಜೀವನವನ್ನು ಅದರಂತೆ ಕಾಣುವವರೂ ಕೋಟಿ ಕೋಟಿ ಮಂದಿ. ಇಬ್ಬರೂ ಒಂದಾಗುವ ಮಾತೇ ಇಲ್ಲ! ಅವರವರ ಗ್ರಹಿಕೆ, ಅವರವರ ಅನುಭವ ಅವರವರಿಗೆ ಪ್ರಮಾಣ 
ರಾಮಾಯಣದಲ್ಲೂ ಙ್ಞಾತಾಙ್ಞಾತವಾಗಿ ಈ ಚರ್ಚೆ ಸ್ಥಾನ ಗಳಿಸಿದೆ. ಆದ್ಯಂತವಾಗಿ ಇದೇ ರಾಮಾಯಣದ ತತ್ವವೇನೋ ಎಂಬಷ್ಟು ಗಾಢವಾಗಿ ಮಂಡಿಸಲ್ಪಟ್ಟಿದೆ. ನಾನು ವಿಧಿವಾದವನ್ನು ಒಪ್ಪಿರುವಾತ; ನಂಬಿರುವಾತ. ನನಗೆ ಪ್ರಿಯವಾದ ಶ್ರೀರಾಮರು ವಿಧಿವಾದಿಗಳು. ಅವರ ಪ್ರಭಾವ ನನ್ನ ಮೇಲೆ ಸಾಕಷ್ಟೇ ಇದೆ. ಹೀಗಾಗಿ ಮುಂದಿನ ಕಥಾಭಾಗವನ್ನು ವಿಧಿವಿಕ್ರಮಕಾಂಡ ವೆಂದು ಕರೆಯುತ್ತಿದ್ದೇನೆ. ಅದೇ ವಿಧಿ, ದಾಳ ಉರುಳಿಸಿ ಶ್ರೀರಾಮ ಪಥವನ್ನೀಗ ಬದಲಿಸುತ್ತಿದೆ! 
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com