ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಉರಿದು ಹೋಯಿತು ಕಾಡು, ಬಿದ್ದಿತಾ ಮಳೆಯು! ಮೊಳಕೆಯದು ನಕ್ಕಿತು !! ಗಿಡವದೋ ಬೆಳೆಯಿತು!

ಎಲೈ ಚಿತ್ತವೇ. ಇನ್ನು ಮುಂದೆ ನಿನ್ನಲ್ಲಿ ಕ್ರೋಧಕ್ಕೆ ಜಾಗವಿಲ್ಲ. ನಿನ್ನಲ್ಲಿರುವ ಕೋಪವೆಲ್ಲ ಸುಟ್ಟು ಹೋಗಲಿ!! ನೋಡ ನೋಡುತ್ತಿದ್ದಂತೆಯೇ ಜಮದಗ್ನಿಗಳ ಮುಖ ಗೌರವರ್ಣವಾಯಿತು.
ಉಕ್ಕುತ್ತಿದ್ದ ಹಾಲು ಸರ್ರನೆ ಕೆಳಗಿಳಿದುಬಿಟ್ಟಿತು! ಜಮದಗ್ನಿಗಳು ಪೂರ್ಣ ಶಾಂತರಾದರು. ಆದರೆ ನೋಡುತ್ತಾರೆ, ತಮ್ಮ ಹೆಂಡತಿ ಶವವಾಗಿ ಬಿದ್ದಿದ್ದಾಳೆ! ತಲೆ ಹಾರಿ ದೂರದಲ್ಲೆಲ್ಲೋ ಬಿದ್ದಿದೆ. ತನ್ನ ಮಕ್ಕಳನ್ನು ತಾನೇ ಸುಟ್ಟುಬಿಟ್ಟೆ! ಛೆ ಛೆ! ಎಂತಹ ಅನಾಹುತ! ಕೋಪದ ಕೈಗೆ ಬುದ್ಧಿ ಕೊಟ್ಟುಬಿಟ್ಟೆ. ಎಷ್ಟೊಂದು ಹಾನಿ. ಎಷ್ಟು ಬಲಿ! ಹೊಟ್ಟೆ ತೊಳಸುವಂತಾಯಿತು. 
ಹಾಗೆ ನೋಡಿದರೆ ಮಕ್ಕಳದು ತಪ್ಪೇ ಅಲ್ಲ. ಅಮ್ಮನನ್ನು ಕೊಲ್ಲಲು ಹೇಳಿದರೆ ಅದೆಂತು ಕೊಂದಾರು? ಅಂತೇ ಅಕಸ್ಮಾತ್ ಯಾವುದೋ ದುರ್ಬಲ ಕ್ಷಣದಲ್ಲಿ ಮಡದಿಗೆ ಅನ್ಯ ಮೋಹ ಉಂಟಾಗಿರಬಹುದು. ಆದರದು ಕ್ಷಣದಲ್ಲೇ ಸುಟ್ಟು ಹೋಯಿತಲ್ಲ. 
ಅವಳು ಮುಂದುವರಿಯಲಿಲ್ಲ. ಅಂತಹ ಸಣ್ಣ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆಯೇ ಋಷಿಗಳೆನ್ನಿಸಿಕೊಂಡವರು ಅಪ್ಸರಸಿಯರನ್ನು ಕಂಡಿಲ್ಲವೇ? ಕೂಡಿಲ್ಲವೇ? ತಮಗೆ ಹೆಂಡತಿಯರಿದ್ದೂ ಅನ್ಯ ಹೆಣ್ಣನ್ನು ಭೋಗಿಸಿಲ್ಲವೇ? ಅವರಿಗಾವ ಶಿಕ್ಷೆಯೂ ಇಲ್ಲದಿದ್ದಮೇಲೆ, ನನ್ನ ಮಡದಿ ಕೇವಲ ಮನಸ್ಸಿನಲ್ಲಿ ಕೊಂಚ ಕಾಲ ಆ ಗಂಧರ್ವನ ಭೋಗವನ್ನು ಕಲ್ಪಿಸಿದ ಮಾತ್ರಕ್ಕೇ ಈ ಮರಣದಂಡನೆಯೇ? 
ಪರಶುರಾಮರ ಮೇಲೆ ಅವರ ದೃಷ್ಟಿ ಹರಿಯಿತು. ಅದಾವ ಪಿತೃ ನಿಷ್ಠೆ ನನ್ನ ಮಗನಿಗೆ! ಹೇಳುತ್ತಿದ್ದಂತೆಯೇ ಕಡಿದೇ ಬಿಟ್ಟನಲ್ಲ! ಕ್ಷಣದಲ್ಲೇ ಮಗನ ಬಗ್ಗೆ ವಾತ್ಸಲ್ಯ ಅಧಿಕವಾಯಿತು. ಬಾಚಿ ತಬ್ಬಿಕೊಂಡರು. ಬೆನ್ನು ನೇವರಿಸಿ ಹೇಳಿದರು, "ರಾಮ, ಕೇಳು. ನಿನಗೆ ಏನಾದರೂ ವರ ಬೇಕಿದ್ದರೆ ಕೇಳು. ಸಂಕೋಚ ಪಡದೇ ಕೇಳು."
ಪರಶುರಾಮರು ಕೈ ಮುಗಿದು ಕೇಳಿದರು, "ತಂದೆ, ಇನ್ನು ಮುಂದೆ ನೀವು ಕೋಪ ಮಾಡಿಕೊಳ್ಳುವುದೇ ಇಲ್ಲವೆಂದು ವರ ಕೊಡಿ. "ಮರುಕ್ಷಣವೇ ಜಮದಗ್ನಿಗಳು ತಮ್ಮ ಮನಸ್ಸಿಗೆ ಆದೇಶ ಮಾಡಿದರು, "ಎಲೈ ಚಿತ್ತವೇ. ಇನ್ನು ಮುಂದೆ ನಿನ್ನಲ್ಲಿ ಕ್ರೋಧಕ್ಕೆ ಜಾಗವಿಲ್ಲ. ನಿನ್ನಲ್ಲಿರುವ ಕೋಪವೆಲ್ಲ ಸುಟ್ಟು ಹೋಗಲಿ!! "ನೋಡ ನೋಡುತ್ತಿದ್ದಂತೆಯೇ ಜಮದಗ್ನಿಗಳ ಮುಖ ಗೌರವರ್ಣವಾಯಿತು. ಅಲ್ಲಿದ್ದ ನಸು ಗುಲಾಬಿಯ ಬಣ್ಣ ಮಾಯವಾಯಿತು. ಮುಂದೆ ಇದರಿಂದಾಗುವ ಅನಾಹುತದ ಅರಿವಿದ್ದರೆ ಮಗ ಕೋಪ ಬಿಡೆಂದು ಹೇಳುತ್ತಿರಲಿಲ್ಲ, ಅಪ್ಪ ಶಾಂತ , ಪರಮಶಾಂತರಾಗಿ ಪರಿವರ್ತಿತರೂ ಆಗುತ್ತಿರಲಿಲ್ಲ. ಮುಖದಲ್ಲಿ ನಗು ತುಂಬಿ ಹೇಳಿದರು, "ನಿನಗೆ ಬೇಕಾದದ್ದೇನನ್ನೂ ಕೇಳಲಿಲ್ಲ , ಇನ್ನೊಂದು ವರ ಕೇಳು. "ಮಗ ಹಿಂದು-ಮುಂದು ನೋಡುತ್ತ ಕೇಳಿದ, "ನಾನೊಂದು ಕೇಳುವೆ , ನೀವು ಸಿಟ್ಟು ಮಾಡಿಕೊಳ್ಳೊಲ್ಲ ತಾನೆ? "ಜಮದಗ್ನಿಗಳೀಗ ಕೋಪವೆಂದರೇನೆಂದೇ ಕಲ್ಪಿಸಿಕೊಳ್ಳಲಾಗದಷ್ಟು ತಣ್ಣಗಾಗಿಬಿಟ್ಟಿದ್ದಾರೆ! "ಎಲ್ಲಿದೆ ನನಗೆ ಸಿಟ್ಟು? ಆಗಲೇ ಸತ್ತು ಹೋಗಿದೆ ಅದು. ಚಿಂತೆಯಿಲ್ಲ ಕೇಳು. ನಿನ್ನಮ್ಮನನ್ನು ಸಾಯಿಸಿದ್ದಕ್ಕೆ ನಾನು ಶಿಕ್ಷೆ ಮಾಡಿಕೊಳ್ಳಬೇಕೆಂದು ನೀನು ಹೇಳಿದರೆ ಅದಕ್ಕೂ ‘ಅಸ್ತು’ ಎನ್ನುವೆ. " 
ಓಹ್! ಅಪ್ಪನಲ್ಲಿ ಎಂಥ ಮಾರ್ಪಾಡು! ಕಾಲಿಗೆ ಬಿದ್ದು ಹೇಳಿದ; "ಛೆ ಛೆ! ಅಪ್ಪನಿಗೆ ಶಿಕ್ಷೆಯಾಗಬೇಕೆಂದು ಯಾವ ಮಗ ಬಯಸುತ್ತಾನೆ? ಆದರೆ ತಾವು ಅಮ್ಮನನ್ನು ಮತ್ತೆ ಬದುಕಿಸಬೇಕು. " 
ಕ್ಷಣಕಾಲ ಮೌನ. ಆಗ್ಗಾಗಲೇ ತಾವು ಮಾಡಿದ್ದು ಸರಿಯಲ್ಲ ಎನ್ನಿಸುತ್ತಿತ್ತು. ಈಗ ಮಗ ಕೇಳುತ್ತಿದ್ದಾನೆ. ಪದ್ಮಾಸನದಲ್ಲಿ ಕುಳಿತರು. ಮನಸ್ಸಿನಲ್ಲಿ ತಮ್ಮ ವಂಶದ ಮೂಲ ಭೃಗು ಮಹರ್ಷಿಗಳನ್ನಾಹ್ವಾನಿಸಿದರು. ಒಟ್ಟಿಗೇ ತಮ್ಮ ಮುತ್ತಜ್ಜನ ಅಣ್ಣ ಶುಕ್ರಾಚಾರ್ಯರನ್ನೂ ಕರೆದರು. ಅಪ್ಪ - ಮಕ್ಕಳಿಬ್ಬರೂ ಮುಚ್ಚಿದ ಅಕ್ಷಿಯ ಮುಂದೆ ಬಂದರು. ತಮ್ಮ ಅಹವಾಲನ್ನು ಜಮದಗ್ನಿಗಳು ಸಲ್ಲಿಸಿದರು. ಭೃಗುಗಳು ಮಗನಿಗೆ ಹೇಳಿದರು; ಇನ್ನಾರಿಗೂ ತಿಳಿಯದ ವಿದ್ಯೆ ನಿನ್ನಲ್ಲಿದೆ. ಯಾರು ಯಾರಿಗೋ ಅದನ್ನು ಪ್ರಯೋಗಿಸಿದ್ದೀಯೆ. ಈಗದನ್ನು ನಮ್ಮ ವಂಶಜನಿಗಾಗಿ ಉಪಯೋಗಿಸು. "ಶುಕ್ರಾಚಾರ್ಯರು ಜಮದಗ್ನಿಯನ್ನುದ್ದೇಶಿಸಿ ಹೇಳಿದರು; " ನೀನು ಕಣ್ಣು ಬಿಡುವ ಹೊತ್ತಿಗೆ ನಿನ್ನ ಮುಂದೆ ಐದು ದೊನ್ನೆಗಳಿರುತ್ತವೆ. ಒಂದೊಂದು ದೊನ್ನೆಯಲ್ಲಿಯೂ ಸಂಜೀವನಿ ರಸವಿದೆ. ರೇಣುಕೆಯ ತಲೆಯನ್ನು ಸೇರಿಸಿ ಒಂದು ದೊನ್ನೆ ಪೂರ್ಣ ಹಸಿರನ್ನು ಕುತ್ತಿಗೆ ಸುತ್ತಲೂ ಹಚ್ಚು. "
ಕಣ್ಣು ತೆಗೆಯದೇ ಕೇಳಿದರು ಜಮದಗ್ನಿಗಳು, "ಹಾಗಾದರೆ ಉಳಿದ ನಾಲ್ಕೇಕೆ? ". ನಗುತ್ತ ಹೇಳಿದರು ಶುಕ್ರಾಚಾರ್ಯರು, " ಮತ್ತೊಮ್ಮೆ ನೀನು ಕರೆಯದಿರಲು! " .ಕಣ್ಣು ತೆರೆದರೆ ಮುಂದೆ ಐದು ಪರ್ಣಪಾತ್ರೆಗಳಲ್ಲಿ ಸಂಜೀವಿನಿಯ ಅದ್ಭುತ ರಸ. ದೊನ್ನೆ ಕೈಗಿತ್ತು ಮಗನಿಗೆ ಹೇಳಿದರು ಜಮದಗ್ನಿಗಳು; "ಅಮ್ಮನ ತಲೆಯನ್ನು ಶರೀರಕ್ಕೆ ಅಂಟಿಸು . ಈ ದ್ರವವನ್ನು ಅಂಟಿಸಿದ ಜಾಗದ ಸುತ್ತ ಹಚ್ಚು."
ಅಪ್ಪ ಹೇಳಿದಂತೆ ಮಾಡಿದ ಮಗ. ರೇಣಕೆ ಎದ್ದು ಕುಳಿತಳು. ನಿಧಾನವಾಗಿ ಒಂದೊಂದೇ ನೆನಪಾಯಿತು. ಮಗ ಕೊಡಲಿ ಬೀಸಿದ್ದು, ತಾನು ಬಿದ್ದದ್ದು... ಅಷ್ಟೇ ನೆನಪು. ಕೊಂಚ - ಕೊಂಚವಾಗಿ ಈಗ ಅರ್ಥವಾಗತೊಡಗಿತು. ಪರಶುರಾಮರು ಬಂದು ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದರು. ಮಗನ ತಲೆ ಸವರಿ ಹೇಳಿದಳು ರೇಣುಕೆ; "ತಪ್ಪಿಗೆ ಶಿಕ್ಷೆಯಾಗಲೇ ಬೇಕಲ್ಲ? " ಎದ್ದು ಗಂಡನಿಗೆ ನಮಸ್ಕರಿಸಿದವಳನ್ನೆತ್ತಿ ಆಲಿಂಗಿಸಿದರು ಜಮದಗ್ನಿಗಳು. ಏನಿದು? ಯಾವಾಗಲೂ ಸುಡುತ್ತಿದ್ದ ಗಂಡನೀಗ ಸುಖೋಷ್ಣವಾಗಿದ್ದಾನೆ? ಅನಂತರ ನಿಧಾನವಾಗಿ ಗೊತ್ತಾಯಿತು ಆ ಪರಿವರ್ತನೆಯ ಕಾರಣವೇನು ಎಂದು. 
" ನಿನ್ನ ಮನಸ್ಸಿನಲ್ಲಿ ಏನೋ ಹೇಳಬೇಕೆಂದು ಒದ್ದಾಡುತ್ತಿದ್ದೀಯ. ಹೇಳು. " ಪರುಶುರಾಮರು ಅಪ್ಪನ ಮಾತನ್ನು ಕೇಳಿ, " ಅಪ್ಪ ನಿನಗಿನ್ನು ಸಿಟ್ಟು ಬರೊಲ್ಲ. ಅಮ್ಮ ಬದುಕಿಬಿಟ್ಟಳು. ಇದಕ್ಕಿನ್ನ ಇನ್ನಾವ ಸಂತೋಷ ದೊಡ್ಡದು? ಆದರೂ ಅಣ್ಣಂದಿರನ್ನು ನೆನೆಸಿಕೊಂಡರೆ - " ಪರಶುರಾಮರಿಗೆ ಕಂಠ ಕಟ್ಟಿತು, ಕಣ್ಣಲ್ಲಿ ನೀರಾಡಿತು. ಜಮದಗ್ನಿಗಳು ಸಮಾಧಾನವಾಗಿ ಹೇಳಿದರು. " ಶುಕ್ರಾಚಾರ್ಯರಿಗೆ ನೀನು ಹೀಗೇ ಕೇಳುವೆಯೆಂದು ಗೊತ್ತಿತ್ತು. ಅದಕ್ಕೇ ನಾನೊಂದು ಕೇಳಿದರೆ ಅವರು ಐದು ಕೊಟ್ಟಿದ್ದಾರೆ!! " 
****************
ವಿಶ್ವಮಿತ್ರರು ಕಥೆ ಮುಗಿಸಿದ್ದರು. ಆದರೆ ಶ್ರೀರಾಮರಿಗೆ ಕುತೂಹಲ ಮುಗಿದಿರಲಿಲ್ಲ. “ ಗುರುಗಳೇ , ನಾನು ಚಿಕ್ಕವನಾಗಿದ್ದಾಗ ಅಪ್ಪ ಒಮ್ಮೆ ಇದ್ದಕ್ಕಿದ್ದಂತೆಯೇ ಅಮ್ಮನನ್ನು ಅವಸರವಸರವಾಗಿ ಪಕ್ಕದಲ್ಲಿ ಕೂಡಿಸಿಕೊಂಡು ಯಾವುದೋ ಯಙ್ಞ ಮಾಡಲಿಕ್ಕೆ ಆರಂಭಿಸಿಬಿಟ್ಟರಂತೆ . ಅರಮನೆಯ ನಿತ್ಯ ಯಙ್ಞಕುಂಡದಲ್ಲಿ ನಿತ್ಯಾಗ್ನಿಹೋತ್ರ !! ಹವಿಸ್ಸು ಕೊಡುತ್ತಿದ್ದಾಗ ಈ ಪರಶುರಾಮರು ಬಂದಿದ್ದರಂತೆ . ಅಪ್ಪ ಅಮ್ಮಂದಿರು ಯಙ್ಞ ಮಾಡುತ್ತಿದ್ದುದನ್ನು ಕಂಡು ಆಶೀರ್ವದಿಸಿ ಹೋದರಂತೆ . ಎಲ್ಲರೂ ಆಗ ಮಾತನಾಡಿಕೊಳ್ಳುತ್ತಿದ್ದರು ; ‘ ಗಂಡಾಂತರ ತಪ್ಪಿತು !! ರಾಜರು ಉಳಿದರು ! ’ ಎಂದು . ಅದೇಕೆ ? ಅದೇನು ಎಂಬುದನ್ನು ಹೇಳುವಿರಾ ? ”
---000---
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com
 

Related Stories

No stories found.

Advertisement

X
Kannada Prabha
www.kannadaprabha.com