ನಿಮ್ಮನ್ನು ಒಂದೇ ಏಟಿಗೆ ಮುಗಿಸಬಹುದು . ಆದರೂ ನಿಮ್ಮ ತಪ್ಪು ನಿಮಗೆ ಮೊದಲು ಗೊತ್ತಾಗಲಿ, ಆಮೇಲೆ ನಿಮ್ಮನ್ನು ರಕ್ಷಿಸಲು ಯಾರಿಗೂ ಸಾಧ್ಯವಿಲ್ಲ!!

ಋಷ್ಯಾಶ್ರಮದ ಉಳಿದ ಯತಿಗಳಿಗೆ ಧಕ್ಕೆ. ಬೇಡ, ನಿಲ್ಲಿಸೋಣ. ಎದ್ದು ತನ್ನಲ್ಲಿದ್ದ ವೈಷ್ಣವ ಧನುಸ್ಸಲ್ಲಿ ಬಾಣಗಳನ್ನು ಹೂಡಿದರು. ನಿಮಿಷಮಾತ್ರದಲ್ಲಿ ಲೋಹಗಳ ಗೋಡೆಯೊಂದು ನಿರ್ಮಾಣವಾಯಿತು...
ಪರಶುರಾಮ
ಪರಶುರಾಮ
ತಂದೆಯ ಹೆಣ ನೋಡಿ, ಅದರ ರಕ್ತಸಿಕ್ತ ಕಪ್ಪು ಕಪ್ಪಾಗಿದ್ದ ವೃದ್ಧ ದೇಹ ನೋಡಿ, ರಕ್ತದಿಂದ ಕೆಂಪಾಗಿದ್ದ ಅಪ್ಪನ ಬಿಳಿಗಡ್ಡ ನೋಡಿ, ಕಣ್ಣುಗಳಿಂದ ರಕ್ತ ಸುರಿದು ಕರೆಗಟ್ಟಿ ನೆಲದಲ್ಲಿ ಇಕ್ಕೆಡೆಯೂ ರಕ್ತದಿಂದ ತೊಯ್ದ ನೆಲ ನೋಡಿ.... ಒಟ್ಟಿನಲ್ಲಿ ಆ ಭಯಾನಕ ದೃಷ್ಯ ನೋಡಿ ಪರಶುರಾಮರಿಗೆ ಹೊಟ್ಟೆ ತೊಳಸಿತು; ತಲೆ ತಿರುಗಿತು. ಅತ್ತ ಅಳು ಇರದ, ಸಿಟ್ಟೂ ಮೂಡದ, ಮುಂದೆ ಏನು ಮಾಡಬೇಕೆಂದು ಖಚಿತವಾಗದ ತಲೆ ಸಿಡಿವ ಸ್ಥಿತಿ. ತಾಯಿ ನೆಲದಲ್ಲಿ ಬಿದ್ದು ಹೊರಳಾಡಿ ತನ್ನ ದುಃಖವನ್ನು ಹೊರಹಾಕುತ್ತಿದ್ದಾಳೆ! ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾಳೆ! ಅಣ್ಣಂದಿರೆಲ್ಲ ಅಳುತ್ತಿದ್ದಾರೆ. ಯಾರಿಗೂ ಏನು ಮಾಡಲೂ ತೋಚುತ್ತಿಲ್ಲ. ಅಷ್ಟು ಹೊತ್ತಿಗೆ ಬಂದವರು ವೃದ್ಧ ಕಾತ್ಯಾಯನರು. " ಹೀಗೇ ನೋಡುತ್ತ, ಅಳುತ್ತ ಇದ್ದರೆ ಹೇಗೆ? ಮುಂದಿನ ಕಾರ್ಯಗಳಾಗಬೇಕಲ್ಲ! ಪಕ್ಕದ ಆಶ್ರಮದಿಂದ ಪುರೋಹಿತರನ್ನು ಕರೆತರುವೆ. ಚಿತೆಯನ್ನು ಸಿದ್ಧಪಡಿಸಿ. " 
ತನ್ನ ಮುಂದೆ ನಡೆಯುತ್ತಿರುವುದೇನೂ ದಾಖಲಾಗುತ್ತಿಲ್ಲ ಮನಸ್ಸಿನಲ್ಲಿ! ಕೇವಲ ನೋವು. "ಯಾರು ಹೀಗೆ ಮಾಡಿದ್ದು? ಏಕೆ ಹೀಗೆ ಮಾಡಿದ್ದು? ತಪ್ಪೇ ಮಾಡದ, ಅತ್ಯಂತ ಸಾತ್ವಿಕ ಅಪ್ಪನನ್ನು ಏಕೆ ಕೊಂದದ್ದು? ಅದರಲ್ಲಿಯೂ ಇಷ್ಟು ದಾರುಣವಾಗಿ, ಇಷ್ಟು ಹಿಂಸೆ ಕೊಟ್ಟು ಸಾಯಿಸಬೇಕಿದ್ದರೆ ಅವರಿಗಿನ್ನೆಷ್ಟು ಸಿಟ್ಟಿರಬೇಕು? ಅಸಲು ಅವರು ಯಾರು? " ಪರಶುರಾಮರು ಮನಸ್ಸನ್ನು ನಿಗ್ರಹಿಸಿ ಕೇಂದ್ರೀಕರಿಸಿದರು! ಆಶ್ರಮದಲ್ಲಿ ನಡೆದ ಅನಾಹುತಗಳು ಕಾಣಿಸತೊಡಗಿದವು. ರಾಜಕುಮಾರರು! ಯಾರಿರಬಹುದು? ಕಾರ್ತವೀರ್ಯನ ಮಕ್ಕಳೋ? ಹಗೆ ತೀರಿಸಬಂದರೋ? ಕಣ್ಣು ಕೆಂಪಾಯಿತು. ಪರಶುವಿನ ಸುತ್ತ ಹಿಡಿ ಬಿಗಿಯಾಯಿತು. ಎದ್ದರು! ಅಣ್ಣಂದಿರು ಹತ್ತಿರ ಬಂದರು. ತಮ್ಮನ ಬೆಂಕಿ ಮುಖ ಕಂಡರು. " ಬೇಡ ರಾಮ! ಇದು ಕ್ರೋಧಕ್ಕೆ ಕಾಲವಲ್ಲ! ಮೊದಲು ತಂದೆಯ ಸಂಸ್ಕಾರ ಮಾಡೋಣ. ಆಮೇಲೆ ಏನು ಮಾಡಬೇಕೆಂದು ಯೋಚಿಸೋಣ. "ಪವನ ಮಂತ್ರವನ್ನು ಪಠಿಸುತ್ತ ನೆಲ ಬಿಟ್ಟು ಮೇಲೇರುತ್ತ ಹೇಳಿದರು ಪರಶುರಾಮರು, "ಆ ಕೆಲಸ ನೀವು ಮಾಡಿ, ಅಪ್ಪನನ್ನು ಹತ್ಯೆಗೈದವರನ್ನು ಸಾಯಿಸದೇ ನಾನು ಮರಳುವುದಿಲ್ಲ." 
************
ಮಾತಾಡಿಕೊಳ್ಳುತ್ತ ಹೋಗುತ್ತಿದ್ದಾರೆ ಕಾರ್ತವೀರ್ಯನ ಮಕ್ಕಳು, ಹಿಂದಿನಿಂದ ತಲೆ ಮೇಲೆ ಹಾದು ಬಂದು ನಿಂತ, ಕಿಡಿ ಸೂಸುತ್ತಿದ್ದ ಭೀಕರ ಪರಶುರಾಮರನ್ನು ಕಂಡೇ ನಡುಗಿಬಿಟ್ಟರು ಕಾರ್ತವೀರ್ಯನ ಮಕ್ಕಳು. ಆದರೂ ಏನೋ ಮೊಂಡು ಧೈರ್ಯ! "ನಿಮ್ಮನ್ನು ಒಂದೇ ಏಟಿಗೆ ಮುಗಿಸಬಹುದು! ಆದರೂ ನಿಮ್ಮ ತಪ್ಪು ನಿಮಗೆ ಮೊದಲು ಗೊತ್ತಾಗಲಿ! ಆಮೇಲೆ ನಿಮ್ಮನ್ನು ರಕ್ಷಿಸಲು ಯಾರಿಗೂ ಸಾಧ್ಯವಿಲ್ಲ!! "ಅಬ್ಬರಿಸಿದ ಪರಶುರಾಮರು ಕೇಳಿದರು; "ನೀವೇ ತಾನೇ ನನ್ನಪ್ಪನನ್ನು ಕೊಂದದ್ದು? ಹಾಗೆ ಸಾಯಿಸಲು ಅವರು ನಿಮಗೇನು ತಪ್ಪು ಮಾಡಿದ್ದರು? "ಸ್ವಲ್ಪ ಧೈರ್ಯ ಸಂಗ್ರಹಿಸಿಕೊಂಡು ಒಬ್ಬ ಹೇಳಿದ; "ಸೇಡು ತೀರಿಸಿಕೊಳ್ಳುವುದು ಧರ್ಮವೆಂದು ಶಾಸ್ತ್ರವೇ ಹೇಳಿದೆಯಲ್ಲ! ನಮ್ಮಪ್ಪನ ಸಾವಿನ ಸೇಡು ತೀರಿಸಿಕೊಂಡೆವು. ತಪ್ಪೇನಿದೆ?" 'ಇದೆ! 'ಅರಚಿ ಪರಶುವನ್ನು ಬೀಸಿದರು ಪರಶುರಾಮರು. 
ಒಂದೇ ಏಟಿಗೆ ಎಲ್ಲರ ಮೊಣಕಾಲುಗಳನ್ನೂ ಕತ್ತರಿಸಿತು! ಕುಸಿದು ಬಿದ್ದರು. ಮೂರ್ಛೆ ಹೋಗಲಿಲ್ಲ  ಕ್ಷತ್ರಿಯರಾದ್ದರಿಂದ! ಕೊಡಲಿ ಕೈಗೆ ವಾಪಸಾಯಿತು. 
"ಇದೆ. ನಿಮ್ಮಪ್ಪನನ್ನು ಜಮದಗ್ನಿಗಳು ಕೊಲ್ಲಲಿಲ್ಲ. ಕೊಂದವನು ನಾನು! ನನ್ನನ್ನು ತಾನೇ ನೀವು ಸಾಯಿಸಬೇಕಾದದ್ದು? ಹೌದಾ? ತಪ್ಪು ಒಪ್ಪಿಕೊಂಡು ಕ್ಷಮಾಪ್ಪಣೆ ಕೇಳಿ "ಕಾಲುಗಳು ಮುರಿದಿದ್ದರೂ, ರಕ್ತ ಸುರಿಯುತ್ತಿದ್ದರೂ ಒಬ್ಬ ಹೇಳಿದ; "ನಮ್ಮಪ್ಪನನ್ನು ಕೊಂದುಹಾಕಿದ ನಿನ್ನಲ್ಲಿ ಕ್ಷಮೆ ಏಕೆ ಕೇಳಬೇಕು? ಸತ್ತರೂ ಕೇಳುವುದಿಲ್ಲ." "ಹಾಗಾದರೆ ಸಾಯಿರಿ. ಆದರೆ ನಾನು ಮಾಡಿದ್ದು ಸರಿಯೆಂದು ಅರ್ಥ ಮಾಡಿಕೊಂಡು ಸಾಯಿರಿ.
ನಿಮ್ಮಪ್ಪನನ್ನು ಕೊಲ್ಲಲು ನನಗೆ ಕಾರಣವಿತ್ತು! ನಮ್ಮ ಆಶ್ರಮವನ್ನು ಹಾಳು ಮಾಡಿ ಹೋಮಧೇನುವಿನ ಕರುವನ್ನು ಅಪಹರಿಸಿದ್ದ. ವಾಪಸ್ ಕೊಡಲು ಕೇಳಿದರೂ ಅಸ್ತ್ರ-ಶಸ್ತ್ರ ಧರಿಸಿ ನಿಂತ! ಹಾಗಾಗಿ ಆತನನ್ನು ಶಿಕ್ಷಿಸಬೇಕಾಯಿತು. ನಮ್ಮಪ್ಪನನ್ನು ಕೊಲ್ಲಲು ನಿಮಗಾವ ಕಾರಣವೂ ಇರಲಿಲ್ಲ. ಹೌದೆ? "ಪರಶುರಾಮರು ಸಮಾಧಾನವಾಗಿಯೇ ಕೇಳಿದರು. ಬಹುಶಃ ತಾವು ಮಾಡಿದ್ದು ಸರಿಯಲ್ಲ ಎಂದು ಅವರಿಗನ್ನಿಸಿರಬೇಕು. "ಹೌದು! ಆದರೂ ನಮ್ಮಪ್ಪನ ಸಾವಿನ ಸೇಡು ತೀರಿಸಿಕೊಂಡ ಸಮಾಧಾನವಿದೆ!! "ಕೊಡಲಿ ಹಿಡಿದು ಹತ್ತಿರ ಬಂದರು. "ಸರಿ. ನಿಮ್ಮ ಸಮಾಧಾನ ನಿಮಗಿರಲಿ. ಈಗ ನನಗೂ ಅಂಥದೇ ನೆಮ್ಮದಿ ಸಿಗಬೇಕಲ್ಲ? "ಒಬ್ಬೊಬ್ಬರನ್ನೇ ಕಚಕ್ ಕಚಕ್ ಎಂದು ಕತ್ತರಿಸಲಾರಂಭಿಸಿದರು.
****************
ಅಪ್ಪನನ್ನು ಸಾಯಿಸಿದವರನ್ನು ಸಾಯಿಸಿದ್ದಾಯಿತು. ಆದರೆ ಅಪ್ಪ ಮತ್ತೆ ಬರೊಲ್ಲವಲ್ಲ! ಪ್ರಯೋಜನವೇನು? ದುಃಖ, ಉದ್ವಿಗ್ನತೆ, ಏನೂ ಮಾಡಲಾಗದ ಹಪಹಪಿಕೆ, ಮೃತ್ಯುವಿನ ಮುಂದೆ ನಾವೆಷ್ಟು ಅಲ್ಪರೆಂಬ ಸತ್ಯದ ತೀಕ್ಷ್ಣತೆ... ಈ ಎಲ್ಲ ಮಿಶ್ರವಾಗಿ ಸುಸ್ತಾಗಿ ಕಾಲೆಳೆದುಕೊಂಡು ಆಶ್ರಮಕ್ಕೆ ವಾಪಸಾಗುತ್ತಿದ್ದಾರೆ. ತುಂಬಾ ಬಳಲಿಕೆ, ನಿಃಶಕ್ತಿ, ಸಂಕಟ... ಮರದ ಕೆಳಗೆ ಕುಳಿತುಬಿಟ್ಟರು. ಅತ್ತ ಏನಾಗಿದೆಯೋ, ಅಪ್ಪನ ಕಳೇವರ ಸುಟ್ಟು ಹೋಗಿದೆಯೇನೋ, ಅಮ್ಮನ ಶೋಕಕ್ಕೆ ಪಾರ ಉಂಟೆ? ನಮಗೆ ಮುಂದೇನು ಗತಿ?..... ಈ ಯೋಚನೆಗಳಲ್ಲಿದ್ದಾಗಲೇ ದೂರದಲ್ಲಿ ಎದ್ದ ಧೂಳು, ಕುದುರೆಗಳ ಕೆನೆತ, ಆಯುಧಗಳ ಹೊಳೆತ, ಸೈನಿಕರ ಅಸ್ಪಷ್ಟ ಮಾತುಗಳು.
ಕೆಲವು ನಿಮಿಷಗಳಲ್ಲೇ ಸೈನ್ಯ ಹತ್ತಿರವಾಯಿತು. ಹಲವಾರು ರಥಗಳು. ಅನೇಕ ರಾಜ ಪೋಷಾಕಿನ ರಾಜರುಗಳು! ಸುಮಾರು ಐನೂರು ಲೆಕ್ಕ ಕಟ್ಟಬಹುದಾದ ಸೈನ್ಯ. ತಮ್ಮ ಆಶ್ರಮದ ದಿಕ್ಕಿಗೇ ಹೋಗುತ್ತಿದ್ದಾರೆ. ತಕ್ಷಣವೇ ಅರ್ಥವಾಯ್ತು! ಇವರು ಬಹುಶಃ ನನ್ನನ್ನು ಸಾಯಿಸಲು ಹೋಗುತ್ತಿದ್ದಾರೆ. ಆಶ್ರಮದ ಹತ್ತಿರ ಹೋಗಲು ಬಿಟ್ಟರೆ, ಅದೆಲ್ಲ ಹಾಳಾಗುತ್ತದೆ. ಋಷ್ಯಾಶ್ರಮದ ಉಳಿದ ಯತಿಗಳಿಗೆ ಧಕ್ಕೆ. ಬೇಡ, ನಿಲ್ಲಿಸೋಣ. ಎದ್ದು ತನ್ನಲ್ಲಿದ್ದ ವೈಷ್ಣವ ಧನುಸ್ಸಲ್ಲಿ ಬಾಣಗಳನ್ನು ಹೂಡಿದರು. ನಿಮಿಷಮಾತ್ರದಲ್ಲಿ ಲೋಹಗಳ ಗೋಡೆಯೊಂದು ನಿರ್ಮಾಣವಾಯಿತು. 
ಅನಿರೀಕ್ಷಿತ ಅಡ್ಡಿಯಿಂದಾಗಿ ಎಲ್ಲರೂ ಅಪ್ರತಿಭರಾಗಿ ನಿಂತರು. ಗೋಡೆಯ ಮೇಲಕ್ಕೆ ನೆಗೆದು ಕೇಳಿದರು ಪರಶುರಾಮರು; "ಯಾರು ನೀವು? ಎಲ್ಲಿಗೆ ಹೊರಟಿದ್ದೀರಿ? "ಮುಂದಿನ ರಥದಲ್ಲಿದ್ದವನೊಬ್ಬ ಹೇಳಿದ; "ಅದನ್ನು ಕೇಳಲು ನೀನಾರು? ಜಮದಗ್ನಿಗಳ ಆಶ್ರಮದ ಒಬ್ಬ ಶಿಷ್ಯನಾದರೆ, ಆಶ್ರಮಕ್ಕೆ ಓಡಿ ಹೋಗಿ ಹೇಳು, "ಕಾರ್ತವೀರ್ಯನ ಬಂಧುಗಳೆಲ್ಲ ಬರುತ್ತಿದ್ದಾರೆ, ಅವನ್ಯಾರೋ ಪರಶುರಾಮ ನಮ್ಮ ಹಿರಿಯನನ್ನೂ, ಅವನ ಮಕ್ಕಳನ್ನೂ ಸಾಯಿಸಿದ್ದಾನೆ. ಈಗ ಅವನ ಇಡೀ ಕುಟುಂಬವನ್ನೇ ನಾಶಮಾಡಲು ನಾವು ಯಮ ಕಿಂಕರರು ಬರುತ್ತಿದ್ದೇವೆಂದು ಹೇಳು."
ಲೆಕ್ಕ ಹಾಕಿದರು. ಹನ್ನೆರಡು ರಥಗಳು. ಉಳಿದವರೆಲ್ಲ ಸೈನಿಕರು. ಸಾಮಾನ್ಯರಿಗೇಕೆ ಶಿಕ್ಷೆ? ಹನ್ನೆರಡು ಬಾಣಗಳನ್ನು ಹೂಡಿದರು. "ನೀವು ಯಮ ಕಿಂಕರರಾದರೆ ನಾನು ಯಮ ಧರ್ಮರಾಯ. ನಾನೇ ಆ ಪರಶುರಾಮ. ಪರಶುರಾಮನನ್ನೂ, ಅವನ ಕುಟುಂಬವನ್ನೂ ಶಿಕ್ಷಿಸುವ ಶಕ್ತಿ ನಿಮಗಿಲ್ಲ. ಈಗ ನೋಡಿ ಏನಾಗುತ್ತದೋ!! "ಜೋರಾಗಿ ಮಂತ್ರ ಹೇಳಿದರು, ಹೆದೆಯನ್ನು ಎಳೆದರು, ಬಿಟ್ಟರು. ಒಂದೇ ಬಾರಿಗೆ ಹನ್ನೆರಡೂ ಮಂದಿಯ ಎದೆ ಸೀಳಿ, ಅರಚುತ್ತ ರಥದಿಂದ ಬಿದ್ದು ಸತ್ತರು! ತಮ್ಮ ನಾಯಕರು ಬೀಳುತ್ತಿದ್ದಂತೆ ಸೈನ್ಯ ಅರಚುತ್ತ ಓಡಿಹೋಯಿತು. 
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com