ಇಂದು ಹುಣ್ಣಿಮೆ. ಜಗತ್ತಿಗೇ ಬೆಳಕು. ನನಗೆ? ಇಂದಿನಿಂದ ಈ ಹುಣ್ಣಿಮೆ ರಂಡೆ ಹುಣ್ಣಿಮೆಯೆಂದು ಪ್ರಸಿದ್ಧವಾಗಲಿ...

ಇಂದಿಗೂ ಬೆಳಗಾವಿ ಜಿಲ್ಲೆಯಲ್ಲಿ " ಯಲ್ಲಮ್ಮನ ಗುಡ್ಡ " ಎಂಬ ಕ್ಷೇತ್ರವಿದೆ . ಅಲ್ಲಿ ಪೂರ್ಣಿಮೆಯಂದು ಜಾತ್ರೆ ನಡೆಯುತ್ತದೆ . ಆ ಹುಣ್ಣಿಮೆಯನ್ನು "ರಂಡೆ ಹುಣ್ಣಿಮೆ" ಎಂದೇ ಕರೆಯುತ್ತಾರೆ
ಪರಶುರಾಮ
ಪರಶುರಾಮ
ಬಂದರು. ಆಶ್ರಮದ ಸಮೀಪಕ್ಕೆ ಬಂದರು. ಬಾಗಿಲ ಹತ್ತಿರ ನಿಂತರು, ದೊಡ್ಡ ಅಳು, ದಕ್ಷಿಣದ ಅಂಚಿನಲ್ಲಿ ಸಿದ್ಧವಾಗಿರುವ ಚಿತೆ. ಜಮದಗ್ನಿಗಳ ಭಗ್ನ ದೇಹವನ್ನು ಅಣ್ಣಂದಿರು ಚಟ್ಟದಲ್ಲಿ ಹೊತ್ತು ತರುತ್ತಿದ್ದಾರೆ. ಅಕ್ಕ ಪಕ್ಕದ ಆಶ್ರಮ ವಾಸಿಗಳೆಲ್ಲ ಸಾಲಾಗಿ ಆ ಮೃತ್ಯು ಮೆರವಣಿಗೆಯ ಹಿಂದೆ ಹೋಗುತ್ತಿದ್ದಾರೆ. ತಾಯಿಯ ಚೀರಾಟದ ದೃಶ್ಯ ಹೃದಯ ಕಲಕುತ್ತಿದೆ. ಇನ್ನೇನು ಕೆಲವೇ ಕಾಲದಲ್ಲಿ ತನ್ನ ಗಂಡನಾಗಿದ್ದಾತ ಸುಟ್ಟು ಬೂದಿಯಾಗುತ್ತಾನೆ. ಇನ್ನೆಂದೂ ನೋಡಲಾಗದು? ಎಲ್ಲಿರುತ್ತಾನೋ? ಹೇಗಿರುತ್ತಾನೋ? ಒಂದೂ ಗೊತ್ತಾಗುತ್ತಿಲ್ಲ! ತಾನಿನ್ನೆಷ್ಟು ವರ್ಷ ಈ ವೈಧವ್ಯದ ನಿತ್ಯ ನರಕದಲ್ಲಿರಬೇಕೋ! ಇದ್ದಕಿದ್ದಂತೆಯೇ ರೇಣುಕೆ ಹುಚ್ಚು ಹಿಡಿದಂತೆ ಮಾತಾಡತೊಡಗಿದಳು. "ಇಂದು ಹುಣ್ಣಿಮೆ. ಜಗತ್ತಿಗೇ ಬೆಳಕು. ನನಗೆ? ಇಂದಿನಿಂದ ಈ ಹುಣ್ಣಿಮೆ ರಂಡೆ ಹುಣ್ಣಿಮೆಯೆಂದು ಪ್ರಸಿದ್ಧವಾಗಲಿ. ಕುಪ್ರಸಿದ್ಧವಾಗಲಿ! ಧರ್ಮದ ಮೇಲೆ ಅಧರ್ಮದ ಪ್ರಭಾವದ ದುರಂತದ ನೆನಪಾಗಲಿ. ಸಾತ್ವಿಕತೆಯ ಮೇಲೆ ದೌರ್ಜನ್ಯದ ದರ್ಪ ಕಾಣಿಸಲಿ. ನಿಜವಾಗಿಯೂ ಮೃದುವಾಗಿರುವುದು, ಶಾಂತವಾಗಿರುವುದು, ಸಜ್ಜನರಾಗಿರುವುದು ಧರ್ಮವೇ ಎಂಬುದನ್ನು ಜನ ಚಿಂತಿಸುವಂತಾಗಲಿ. ಇಂದು ಮುಂಡೆ ಹುಣ್ಣಿಮೆ. ರಂಡೆ ಹುಣ್ಣಿಮೆ. ವಿಧವಾಹುಣ್ಣಿಮೆ. "ಕೂಗುತ್ತ, ಕೂಗುತ್ತ ಬಿದ್ದುಬಿಟ್ಟಳು. ಎಲ್ಲರೂ ಆಕೆಯ ಸುತ್ತ ನೆರೆದರು. (ಇಂದಿಗೂ ಬೆಳಗಾವಿ ಜಿಲ್ಲೆಯಲ್ಲಿ " ಯಲ್ಲಮ್ಮನ ಗುಡ್ಡ " ಎಂಬ ಕ್ಷೇತ್ರವಿದೆ . ಅಲ್ಲಿ ಪೂರ್ಣಿಮೆಯಂದು ಜಾತ್ರೆ ನಡೆಯುತ್ತದೆ . ಆ ಹುಣ್ಣಿಮೆಯನ್ನು "ರಂಡೆ ಹುಣ್ಣಿಮೆ" ಎಂದೇ ಕರೆಯುತ್ತಾರೆ - ಲೇ)
ಇದನ್ನೆಲ್ಲ ನೋಡುತ್ತಿದ್ದ ಪರಶುರಾಮರಿಗೆ ನೋವಿಗಿನ್ನ, ಕಾರುಣ್ಯಕ್ಕಿನ್ನ, ಅಳುವಿಗಿನ್ನ ಕೋಪ ಏರ ತೊಡಗಿತು. ಒಳಗೆ ಹೋಗಬೇಕೆಂದುಕೊಂಡವರು ಹಿಂದಕ್ಕೆ ತಿರುಗಿದರು; ಏನೋ ನಿಶ್ಚಯವಾದಂತೆ. ಆಶ್ರಮದ ಈಶಾನ್ಯಕ್ಕೆ ಒಂದು ಭೈರವ ದೇವಾಲಯ. ಅಲ್ಲಿ ಮೃತ್ಯುಂಜಯನ ಭೀಕರ ವಿಗ್ರಹ. ಸಾಮಾನ್ಯವಾಗಿ ಲಿಂಗರೂಪದಲ್ಲಿರುವ ಈಶ್ವರ ಕಾಲಭೈರವ ಮೂರ್ತಿಯಾಗಿದ್ದಾನೆ! ದಕ್ಷಸಂಹಾರದಲ್ಲಿ ರಕ್ತ ದೋಕುಳಿಯಾಡಿದ ರುದ್ರ. ಅಲ್ಲಿ ಪ್ರಾಣಿ ಬಲಿ! ಎಂದೂ ಗುಡಿಯೊಳಗೆ ಬಂದಿರದ ಪರಶುರಾಮರು ಗರ್ಭಗುಡಿಗೆ ಹೋದರು.
ಅಂದು ಬೆಳಿಗ್ಗೆ ಟಗರೊಂದರ ನೈವೇದ್ಯ. ರಕ್ತವೆಲ್ಲ ಹೆಪ್ಪುಗಟ್ಟಿತ್ತು. ಕಡಿದ ಗಂಡು ಕುರಿಯ ತಲೆಯನ್ನು ಭೈರವನ ಪಾದದ ಬಳಿಯಿಟ್ಟಿದ್ದರು. ಬಹುಶಃ ಭಕ್ತರು ಅದರ ದೇಹವನ್ನು ಒಯ್ದಿರಬೇಕು. ಕೆಂಡ ಸೂಸುವ ಕಣ್ಣಿಂದ ಭೈರವನನ್ನು ನೋಡುತ್ತ ಪರಶುವನ್ನು ಮೇಲೆತ್ತಿ ಗರ್ಜಿಸಿದರು "ರುದ್ರ ನೀನು. ಪ್ರಳಯದಲ್ಲಿ ಜಗತ್ತನ್ನೇ ನುಂಗುವೆ. ವಿಶ್ವವನ್ನೇ ಅಳಿಸಿಬಿಡುವೆ. ರೋದಯತಿ ಇತಿ ರುದ್ರಃ. ನಿನ್ನ ಹೆಸರೇ ಲಯಸೂಚಕ; ಪ್ರಲಯ ಪೋಷಕ. ನನ್ನೆದೆ ಈಗ ಸ್ಮಶಾನವಾಗಿದೆ. ನನ್ನ ತಾಯಿ ಅನ್ಯಾಯವಾಗಿ ಅಲ್ಲಿ ಗೋಳಾಡುತ್ತಿದ್ದಾಳೆ. ನಮಗೆ ದುಷ್ಟ ಕ್ಷತ್ರಿಯರಿಂದ ಅನ್ಯಾಯವಾಗಿದೆ. ರಾಜರ ದರ್ಪ ಮಿತಿ ಮೀರಿದೆ. ತಾವೇ ಸಾರ್ವಭೌಮರೆಂದೂ, ತಮ್ಮನ್ನು ಕೇಳುವವರೇ ಇಲ್ಲವೆಂದೂ ಮನಸೋ ಇಚ್ಛೆ ಮದಿಸಿ ಮೆರೆಯುತ್ತಿದ್ದಾರೆ. ಅವರ ದೌರ್ಜನ್ಯಕ್ಕೆ ಶಿಕ್ಷೆಯಾಗಬೇಕು. ಅವರಿಗೆ ಪಾಠ ಕಲಿಸಬೇಕು. ನಾನೀಗ ಪ್ರತಿಙ್ಞೆ ಮಾಡುತ್ತಿದ್ದೇನೆ, ಒಂದಲ್ಲ; ಎರಡಲ್ಲ, ಹಲವು ಬಾರಿ ಭಾರತ ಪ್ರದಕ್ಷಿಣೆ ಮಾಡುತ್ತೇನೆ. ಕ್ಷತ್ರಿಯರೆಲ್ಲರ ತಲೆ ಚೆಂಡಾಡುತ್ತೇನೆ! ಆಶೀರ್ವಾದ ಮಾಡು ದೇವ! ಈ ನನ್ನ ಶಪಥಕ್ಕೆ ಯಾವುದೇ ಅಡ್ಡಿಯಾಗದಿರಲಿ. ಹರ ಹರ ಮಹಾದೇವ್! "ಕೂಗಿ ಹೇಳಿದ್ದಾರೆ ಪರಶುರಾಮರು. ಉತ್ತರವೆಂಬಂತೆ, "ಜೈ ಮಹಾರುದ್ರ! ಜೈ ಕಾಲರುದ್ರ:" ಎಂಬ ಗಂಭೀರ ಧ್ವನಿ. ತಿರುಗಿ ನೋಡಿದರೆ ಕಾಪಾಲಿಕನೊಬ್ಬ ಕೈಲಿ ತ್ರಿಶೂಲ ಹಿಡಿದು ನಿಂತಿದ್ದಾನೆ. 
"ತಾವು ಪರಶುರಾಮರು. ಋಷಿಪುತ್ರರು. ತಮ್ಮ ಆಶ್ರಮದಲ್ಲಿ ನಾನೊಂದು ಪಕ್ಷ ಇದ್ದೆ . ನಿಮ್ಮ ತಂದೆಯವರಿಗಾದ ಅನ್ಯಾಯದ ಕೊಲೆ ಕೇಳಿದೆ. ಅಲ್ಲಿಗೇ ಹೋಗುತ್ತಿದ್ದೇನೆ. ಸ್ವಾಮಿ, ನೀವು ಈಗ ಮಾಡಿದ ಪ್ರತಿಙ್ಞೆಯನ್ನೂ ಕೇಳಿದೆ. ತಮಗಾಗಿರುವ ನೋವಿನಲ್ಲಿ ಹೀಗೆ ನಿರ್ಧರಿಸುವುದು ಸರಿಯೇ! ಆದರೆ ನನ್ನದೊಂದು ಮನವಿ. ಕ್ಷತ್ರಿಯರೆಲ್ಲರ ನಾಶವಾದರೆ, ಆಡಳಿತವೇ ಇಲ್ಲದೇ, ಪ್ರಜಾ ಪರಿಪಾಲನೆಯೇ ಇಲ್ಲದೇ ದೇಶ ಕ್ಷೋಭೆಗೊಳ್ಳುತ್ತದೆ. ಆದ್ದರಿಂದ ತಾವು ಎರಡು ತಿದ್ದುಪಡಿಗಳನ್ನು ಮಾಡಬೇಕು. ಒಂದು, ನಿಮ್ಮ ಈ ಮಾರಣ ಹೋಮಕ್ಕೆ ಕಾಲದ ಮಿತಿಯನ್ನು ಹಾಕಬೇಕು. ಹಾಗೂ ಯಙ್ಞ ನಿರತ ಅರಸರನ್ನು ವಧೆ ಮಾಡಬಾರದು! "ಕೈಮುಗಿದು ಕೇಳಿದ ಆ ಉಗ್ರ ಸನ್ಯಾಸಿಯ ಮಾತುಗಳು ಪರಶುರಾಮರ ಹೃದಯಕ್ಕೆ ತಟ್ಟಿತು.
*************
"ಅಂದಿನಿಂದ ವರ್ಷ ಪರ್ಯಂತ ಪರಶುರಾಮ ಸುತ್ತಿದ. ಕಂಡ ಕಂಡ ರಾಜರನ್ನು ಕಡಿದ. ಮತ್ತೊಂದು ಬಾರಿ ಸುತ್ತು ಹಾಕಿದ. ಮೊದಲ ಸುತ್ತಿನಲ್ಲಿ ಸಿಗದವರು ಎರಡನೆಯ ಬಾರಿ ಬಂದಾಗ ಸಿಕ್ಕಿ ಹಾಕಿಕೊಂಡರು. ಪರಶುವಿಗೆ ಸಿಗದೆಯೇ ಹೋದವರು ಅಯೋಧ್ಯೆಯ ದಶರಥ, ಮಿಥಿಲೆಯ ಜನಕ, ಕಾಶಿಯ ವಿಶ್ವನಾಥ ವರ್ಮ, ಕೇಕಯ ರಾಜ, ಅಂಗದೇಶದ ರೋಮಪಾದ, ಸೌವೀರದ ಶೌರಿ, ಸೌರಾಷ್ಟ್ರದ ಮಹಾಬಲ, ಸಿಂಧು ದೇಶದ ಬೃಹದ್ಬಲ... ಇತ್ಯಾದಿ ಹದಿನೆಂಟು ಮಹಾರಾಜರು. ಕಾರಣ ಇವರೆಲ್ಲ ಸೇರಿ ಒಂದು ಯೋಜನೆ ಮಾಡಿದ್ದರು. ಪರಶುರಾಮರ ಪ್ರತಿಙ್ಞೆ , ಅದಕ್ಕಿರುವ ವಿನಾಯಿತಿಗಳನ್ನೆಲ್ಲ ಅರಿತು ಮಾಡಿಕೊಂಡ ಏರ್ಪಾಡೆಂದರೆ, ಸದಾ ಯಾಗ ವಾಟಿಕೆಯಲ್ಲಿ ಯಙ್ಞಕುಂಡ ಪ್ರಜ್ವಲಿಸುತ್ತಿರಬೇಕು! ಪರಶುರಾಮರು ಬರುವ ಸುದ್ದಿ ತಿಳಿದೊಡನೇ ಪತ್ನೀ ಸಮೇತರಾಗಿ ಯಾವುದೋ ಯಙ್ಞ ಮಾಡುವುದು. ಎಷ್ಟು ಬಾರಿ ಬಂದರೂ ದಶರಥ ಕೌಸಲ್ಯೆಯೊಡನೆ ಯಙ್ಞ ಕುಂಡದ ಮುಂದೇ ಇರುತ್ತಿದ್ದ.... ಹೀಗಾಗಿ ನಿನ್ನ ತಂದೆ ಪರಶುರಾಮರಿಗೆ ಸಿಗಲೇ ಇಲ್ಲ!! "ವಿಶ್ವಮಿತ್ರರು ಕಥೆ ಹೇಳಿ ಮುಗಿಸಿದ್ದರು.
**************
ಪರಶುರಾಮರನ್ನು ಸಮೀಪಿಸುತ್ತಿದ್ದ ಶ್ರೀರಾಮರ ಕಣ್ಣ ಮುಂದೆ ಈ ಎಲ್ಲ ಚಿತ್ರಗಳೂ ಮೂಡಿದವು. ಬಂದೇ ಬಿಟ್ಟರು ಪರಶುರಾಮರು. ಶ್ರೀರಾಮರು ತಂದೆಗಿನ್ನ ಅಡಿ ಹಿಂದೆ ಬಂದು ನಿಂತರು. ಮೇಲಿನಿಂದ ಕೆಳಗೆ ದಿಟ್ಟಿಸಿದರು ರಾಮರನ್ನು. "ಚಿನ್ನದ ಕಿರೀಟದ ಕೆಳಗೆ ಅಗಲವಾದ ಹಣೆ. ಮಧ್ಯದಲ್ಲಿ ತಿಲಕ. ತುಂಬು ಹುಬ್ಬು. ಏನೋ ಆತ್ಮೀಯತೆಯನ್ನು ಸೂಸುತ್ತಿರುವ ಕಣ್ಣುಗಳು. ನೀಳ ನಾಸಿಕ. ಪೂರ್ಣ ಕೆನ್ನೆಗಳು. ದೃಢವಾದ ತುಟಿಗಳು. ತುಸು ಶ್ಯಾಮಲ-ಸ್ವಲ್ಪ ಕಪ್ಪೇ. ಅಗಲವಾದ ಎದೆಯನ್ನು ಶಲ್ಯ ಮುಚ್ಚಿದೆ. ಅಲ್ಲಿವರೆಗೆ ಕಂಡ ಕೋಮಲತೆ, ಕೆಳಗೆ ಭುಜಗಳಿಗೆ ಇಳಿದಾಗ ಮಾಯ!! ಉಬ್ಬಿದ ಮಾಂಸ ಖಂಡಗಳ ತೋಳುಗಳು. ಬಹುಶಃ ಬಹು ಗಟ್ಟಿಗಿರಬಹುದಾದ ನೀಳ ಕೈಗಳು. ಅಷ್ಟು ಉದ್ದದ ಕೈಗಳನ್ನು ತಾನು ಕಂಡೇ ಇಲ್ಲ. ಮೊಣಕಾಲನ್ನು ದಾಟಿವೆ!! ನಿಜಕ್ಕೂ ಆಜಾನುಬಾಹುವೆಂದರೆ ಈತನೇ! 
---೦೦---
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com