ಲಕ್ಷ್ಮಣ ಅವಾಕ್ ಆದ, ಕೇವಲ ವಿನೀತ ಮಗನ ಮೃದು ಮಧುರ ನುಡಿಗಳನ್ನು ಕೇಳುತ್ತಿದ್ದ ದಶರಥನಿಗೆ ದಿಗ್ಭ್ರಮೆಯಾಯಿತು!

"ಏ ರಾಮ! ಏನು ನಿನ್ನ ಗರ್ವ? ಶಿವ ಧನುವನ್ನು ಮುರಿದೆಯೆಂಬ ಅಹಂಕಾರವೆ? ನಿನ್ನನ್ನು ನೀನು ಬಹಳ ದೊಡ್ಡವನೆಂದುಕೊಂಡು ಬೀಗುತ್ತಿರುವೆಯಾ? ನಾನಾರೆಂದು ಗೊತ್ತೇ? ನಾನು ಪರಶುರಾಮ....
ರಾಮ-ಪರಶುರಾಮ
ರಾಮ-ಪರಶುರಾಮ
ಅದೇನು ಕಳೆ! ಅದೇನು ಪ್ರಭಾವ!! ನೋಡುಗರನ್ನು ಸೆಳೆವ, ಸೆಳೆದು ವಶ ಮಾಡಿಕೊಳ್ಳುವ ನಿಲುವು ಇವನದು! ಸಿಟ್ಟಾಗಿದ್ದ ಪರಶುರಾಮರು ತಣ್ಣಗಾಗಿಬಿಟ್ಟರು. ಅದೆಂತು ಈ ಮಾರ್ಪಾಡು ತನ್ನಲ್ಲಿ? "ಬೇಡ, ಬೇಡ. ಶಿವ ಧನುಸ್ಸನ್ನು ಮುರಿದ ಈ ರಾಮನ ಬಗ್ಗೆ ನಾನು ಮೃದುವಾಗಬಾರದು; ಆಕರ್ಷಿತನಾಗಬಾರದು"
"ಏ ರಾಮ! ಏನು ನಿನ್ನ ಗರ್ವ? ಶಿವ ಧನುವನ್ನು ಮುರಿದೆಯೆಂಬ ಅಹಂಕಾರವೆ? ನಿನ್ನನ್ನು ನೀನು ಬಹಳ ದೊಡ್ಡವನೆಂದುಕೊಂಡು ಬೀಗುತ್ತಿರುವೆಯಾ? ನಾನಾರೆಂದು ಗೊತ್ತೇ? ನಾನು ಪರಶುರಾಮ. ಎದುರಿಗೆ ಸಿಕ್ಕ ಯಾವ ಕ್ಷತ್ರಿಯನೂ ಬದುಕುಳಿದಿಲ್ಲ. ಆಗ ನೀನು ಸಿಗಲಿಲ್ಲ. ಈಗ ನಾನು ನನ್ನ ಶಪಥದಿಂದ ವಿರಮಿಸಿದ್ದೇನೆ. ಆದ್ದರಿಂದ ನಿನಗೆ ಪ್ರಾಣಭಯವಿಲ್ಲ! ಬದುಕಿಕೋ!! ಆದರೆ ನಿನ್ನ ಕೊಬ್ಬಿಗೆ ಪಾಠ ಕಲಿಸಬೇಕಿದೆ! "ಪರಶುರಾಮರು ಮಾತನಾಡುತ್ತಿದ್ದರೆ ಶ್ರೀರಾಮರು ಮುಂದೆ ಬಂದು ಭಾರ್ಗವ ರಾಮರ ಪಾದ ಮುಟ್ಟಿ ನಮಸ್ಕರಿಸಿದರು. " ತಮಗೂ ಪೂಜ್ಯರಾದ, ತಮ್ಮ ತಂದೆ ಜಮದಗ್ನಿಗಳ ಸೋದರ ಮಾವಂದಿರು ವಿಶ್ವಮಿತ್ರರು ನಮ್ಮ ಗುರುಗಳು. ಈಗ ತಾವೂ ನಮಗೆ ಗುರುಗಳಾದಂತೇ!"
ಏನು ವಿನಯ! ಎಷ್ಟು ಮೃದು ಭಾಷೆ!! ಪರಶುರಾಮರು ಕರಗುತ್ತಿದ್ದಾರೆ. "ಸ್ವಾಮಿ, ತಾವು ಮಾಡಿದ ಎಲ್ಲ ಸಾಹಸಗಳನ್ನೂ ಕೇಳಿದ್ದೇನೆ. ತಮ್ಮ ತಂದೆಗಾದ ಸಾವನ್ನೂ, ಅದಕ್ಕಾಗಿ ತಾವು ರೊಚ್ಚಿಗೆದ್ದದ್ದು, ಅದರಿಂದಾಗಿ ತಾವು ಇಪ್ಪತ್ತೊಂದು ಬಾರಿ ಭೂ ಪ್ರದಕ್ಷಿಣೆ ಮಾಡಿ ಹಲವಾರು ರಾಜರನ್ನು ನಾಶ ಮಾಡಿದ್ದೂ, ಎಲ್ಲವನ್ನೂ ಕೇಳಿದ್ದೇನೆ. ನಾನು ಕ್ಷತ್ರಿಯನಾಗಿದ್ದರೂ ನೀವು ಮಾಡಿದ ಕ್ಷಾತ್ರ ನಾಶವನ್ನು ಮೆಚ್ಚಿದ್ದೇನೆ!! ನೀವೀಗ ಪಿತೃ ಋಣದಿಂದ ಸಂಪೂರ್ಣವಾಗಿ ಮುಕ್ತರಾಗಿದ್ದೀರಿ." 
(ಶ್ರುತವಾನಸ್ಮಿ ಯತ್ ಕರ್ಮ ಕೃತವಾನಸಿ ಭಾರ್ಗವ
ಅನುರುಧ್ಯಾಮ್ ಅಹೇ ಬ್ರಮ್ಹನ್ ಪಿತುರಾನ್ ಋಣ್ಯಮಾಸ್ಥಿತಃ)
ಕಿವಿಯನ್ನೇ ನಂಬಲಾಗುತ್ತಿಲ್ಲ. ಎದುರಿಸಿ ಬಂದಿರುವ ತನ್ನನ್ನೇ ಪ್ರಶಂಸಿಸುತ್ತಿದ್ದಾನೆ. ಶತ್ರುವನ್ನು ಕೇವಲ ಮಾತಿನಿಂದಲೇ ಗೆಲ್ಲಬಲ್ಲ ಮಹಾ ಸಮರ್ಥನಿದ್ದಾನೆ ಇವನು. ಶಿವಧನುಸ್ಸು ಇವನಿಂದ ಮುರಿಯಲ್ಪಟ್ಟಿತೆಂದರೆ, ಇವನು ಶೂರನೇ ಇರಬೇಕು. ಈಗ ಪರಶುರಾಮರ ಮಾತಿನ ಶೈಲಿ ಬದಲಾಯಿತು! "ರಾಮ, ನಿನ್ನ ಅದ್ಭುತ ಪರಾಕ್ರಮವನ್ನು ಕೇಳಿರುವೆ. ನೀನು ಶಿವಧನುವನ್ನು ಲೀಲಾಜಾಲವಾಗಿ ಮುರಿದಿದ್ದನ್ನೂ ಕೇಳಿದ್ದೇನೆ. ಏನೇ ಆಗಲಿ, ನೀನು ಹರ ಧನವನ್ನು ಮುರಿದದ್ದು ಅತ್ಯಂತ ಆಶ್ಚರ್ಯ. ಅದು ಯಾರ ಊಹೆಗೂ ದಕ್ಕದ್ದು!"
(ರಾಮ ದಾಶರಥೇ ವೀರ ವೀರ್ಯಂ ತೇ ಶ್ರೂಯತೇ ಅದ್ಭುತಮ್
ಧನುಷೋ ಭೇದನಂ ಚೈವ ನಿಖಿಲೇನ ಮಯಾ ಶ್ರುತಮ್
ತದದ್ಭುತಂ ಅಚಿಂತ್ಯಂಚ ಭೇದನಂ ಧನುಷಸ್ತ್ವಯಾ)
"ಕ್ಷಮಿಸಿ. ತಾವು ಹಲವು ಬಾರಿ ಮುರಿದೆ, ಮುರಿದೆ ಎನ್ನುತ್ತಿರುವಿರಿ. ಜನಸಾಮಾನ್ಯರು ಹಾಗೆ ಹೇಳಿದರೆ ಬಿಡಿ. ಆದರೆ ತಮ್ಮಂತಹ ಪ್ರಾಙ್ಞರು ಹಾಗೆ ಹೇಳಬಾರದು. ನಾನು ಮುರಿಯಲಿಲ್ಲ. ಅದು ಮುರಿಯಲ್ಪಟ್ಟಿತು. ವ್ಯತ್ಯಾಸ ಇದೆ ತಾನೇ? ಈಶ್ವರನಿಗೆ ನಾನೆಂದಾದರೂ ಅಗೌರವ ತೋರಿಸುವೆನೆ? ಮತ್ತೊಂದು ಅಂಶವನ್ನು ತಾವು ದಯವಿಟ್ಟು ಗಮನಿಸಿ. ಅದು ಮುರಿದಾಗ ಅದರಲ್ಲಿ ಶಿವ ಇರಲಿಲ್ಲ. ಅದೊಂದು ದೇವ ರಹಸ್ಯ. ಇದಕ್ಕಿನ್ನ ಹೆಚ್ಚಾಗಿ ನಾನು ಹೇಳಬಾರದು. " 
ಶ್ರೀರಾಮನ ಮಾತಿನಲ್ಲಿ ಒಂದು ಅಧಿಕಾರ; ಒಂದು ಖಾಚಿತ್ಯ; ಒಂದು ದರ್ಶನ! ಏನೋ ಆಳವಾದ ವಿಷಯ ಹೇಳುತ್ತಿದ್ದಾನೆ. ತನಗೆ ಅರ್ಥವಾಗುತ್ತಿಲ್ಲ! ಇರಲಿ. ಹೇಗೂ ಬಂದಿದ್ದೇನೆ. ಅದೇನೆಂದು ನಿರ್ಣಯವೇ ಆಗಿಬಿಡಲಿ! ಹರಿಹರರಲ್ಲಿ ಭೇದವಿಲ್ಲವೆಂದು ನಂಬಿರುವ ನಾನು, ಧರಿಸಿರುವುದು ಹರಿಧನುವನ್ನು. ಇಟ್ಟಿರುವುದು ವಿಭೂತಿಯನ್ನು. ನನ್ನ ಗುರುಗಳು ತ್ರಿಮೂರ್ತಿಗಳೂ ಐಕ್ಯವಾಗಿರುವ ದತ್ತಾತ್ರೇಯರು. ಶಿವ ಧನುಸ್ಸನ್ನು ಮುರಿದಿಲ್ಲವೆನ್ನುತ್ತಿದ್ದಾನೆ. ಸರಿ. ಸರಿ. ಶಿವಧನುಸ್ಸು ಇವನಿಗೆ ಒಲಿಯಿತೆಂದರೆ ವಿಷ್ಣುಚಾಪವೂ ಸಾಧುವಾಗಬೇಕಲ್ಲ!? ಯೋಚಿಸುತ್ತ ಪರಶುರಾಮರು ತಿರುಗಿ ಹೇಳಿದರು; "ರಾಮ, ನನ್ನ ಈ ಧನುಸ್ಸನ್ನು ನೋಡು. ಇದು ನಾರಾಯಣನ ಬಿಲ್ಲು. ಇದು ನನ್ನ ತಂದೆಯವರಿಂದ ನನಗೆ ಬಂದಿದೆ. 
(ತದಿದಂ ಘೋರ ಸಂಕಾಶಂ ಜಾಮದಗ್ನ್ಯಂ ಮಹದ್ಧನುಃ)
ಆ ಶಿವಧನು ಹಾಗೂ ಈ ವೈಷ್ಣವಧನು, ಎರಡೂ ದಿವ್ಯವಾದ ಬಿಲ್ಲುಗಳು. ಅತ್ಯುತ್ತಮವಾದುವು. ದೇಶದಲ್ಲೇ ಶ್ರೇಷ್ಠವಾದುವು. ಇಷ್ಟು ದೃಢವಾಗಿ ಈ ಎರಡನ್ನೂ ನಿರ್ಮಿಸಿದ್ದು ದೇವಲೋಕ ಶಿಲ್ಪಿ ವಿಶ್ವಕರ್ಮ. ಈ ಎರಡರಲ್ಲಿ ಒಂದನ್ನು ವಿಶ್ವಕರ್ಮನು ತ್ರ್ಯಂಬಕನಿಗೆ ಕೊಟ್ಟ. ಎರಡನೆಯ ಬಿಲ್ಲನ್ನು ದೇವತೆಗಳೆಲ್ಲ ಸೇರಿ ವಿಷ್ಣುವಿಗೆ ಕೊಟ್ಟರು!!
(ಇಮೆ! ದ್ವೇ ಧನುಷೀ ಶ್ರೇಷ್ಠೇ ದಿವ್ಯೇ ಲೋಕಾಭಿ ವಿಶ್ರುತೇ
ದೃಢೇ ಬಲವತೀ ಮುಖ್ಯೇ ಸುಕೃತೇ ವಿಶ್ವಕರ್ಮಣಾ
ಅತಿಸೃಷ್ಟಂ ಸುರೈರೇಕಂ ತ್ರ್ಯಂಬಕಾಯ ಯುಯುತ್ಸವೇ 
ಇದಂ ದ್ವಿತೀಯಂ ದುರ್ಧರ್ಷಂ ವಿಷ್ಣೋರ್ದತ್ತಂ ಸುರೊತ್ತಮೈಃ )
ಪರಶುರಾಮರು ಹೇಳುತ್ತಿರುವುದನ್ನು ಶ್ರೀರಾಮರು ತದೇಕಚಿತ್ತರಾಗಿ ಆಲಿಸಿದರು. "ರಾಮ, ನೀನು ಕ್ಷತ್ರಿಯ. ಕ್ಷಾತ್ರ ಧರ್ಮಾನುಸಾರ ಯುದ್ಧಕ್ಕೆ ಕರೆದರೆ ಹಿಂದಕ್ಕೆ ಹೋಗುವಂತಿಲ್ಲ. ನನ್ನ ಸವಾಲು ಇಷ್ಟೆ. ಈ ವೈಷ್ಣವ ಧನುಸ್ಸನ್ನು ನೀನು ಧರಿಸುವುದಾದರೆ, ಎಂದರೆ ಹೆದೆ ಏರಿಸಿದೆಯಾದರೆ, ಅದು ನಿನಗೆ ಸಾಧ್ಯವಾದರೆ, ನಿಜಕ್ಕೂ ನೀನು ಈ ಬಿಲ್ಲು ಹಿಡಿದು ನಿಂತರೆ, ನಿನ್ನೊಡನೆ ದ್ವಂದ್ವ ಯುದ್ಧ ಮಾಡುವುದು ಯೋಗ್ಯವೆಂದು ನಿರ್ಧರಿಸುತ್ತೇನೆ. ನಿನ್ನೊಡನೆ ಯುದ್ಧ ಮಾಡುವೆ.
(ಕ್ಷತ್ರ ಧರ್ಮಂ ಪುರಸ್ಕೃತ್ಯ ಗೃಷ್ಣೀಷ್ವ ಧನುರುತ್ತಮಂ
ಯೋಜಯಸ್ವ ಧನುಃ ಶ್ರೇಷ್ಠೇ ಶರಂ ಪರಪುರಂಜಯಂ
ಯದಿ ಶಕ್ನೋಷಿ ಕಾಕುತ್ಸ್ಥ ದ್ವಂದ್ವಂ ದಾಸ್ಯಮಿತೇ ತತಃ)
ಈ ಪರಶುರಾಮರು ಮತ್ತೆ ಮತ್ತೆ ಸಾಧ್ಯವಾದರೆ, ಸಾಧ್ಯವಾದರೆ ಎಂದೇಕೆ ನನ್ನನ್ನು ಕೆಣಕುತ್ತಿದ್ದಾರೆ? ನಾನವರಿಗೆ ಕೊಟ್ಟ ಗೌರವದಿಂದ ನನ್ನನ್ನೇನು ಅಶಕ್ತನೆಂದುಕೊಂಡರೋ? ಹಾಗಾದರೆ ಅದು ತಪ್ಪು!! ಯೋಚಿಸುತ್ತಿದ್ದ ಶ್ರೀರಾಮರು ಕಠಿಣರಾದರು. ಮೃದು ಧ್ವನಿಯೀಗ ದೃಢವೂ, ಗಡುಸೂ ಆಯಿತು! "ಏನು ಸ್ವಾಮಿ, ನೀವು ನನ್ನನ್ನೇನು ಅಶಕ್ತನೆಂದೂ, ಕೈಲಾಗದವನೆಂದೂ ಭಾವಿಸಿದಂತಿದೆ. ಕ್ಷಾತ್ರ ಧರ್ಮದ ಮಾತೆತ್ತಿ ನನ್ನನ್ನೇನೆಂದು ಕರೆಯುತ್ತಿದ್ದೀರಿ? ನನ್ನ ಕ್ಷಾತ್ರ ಶಕ್ತಿಯನ್ನು ಅವಗಣನೆ ಮಾಡುತ್ತಿದ್ದೀರೋ? ಹಾಗಾದರೆ ನನ್ನ ಪರಾಕ್ರಮವನ್ನಾದರೂ ನೋಡಿ!! 
(ವೀರ್ಯ ಹೀನಂ ಇವ ಅಶಕ್ತಂ ಕ್ಷತ್ರ ಧರ್ಮೇಣ ಭಾರ್ಗವ
ಅವಜಾನಾಸಿ ಮೇ ತೇಜಃ ಪಶ್ಯಮೇ ಅದ್ಯ ಪರಾಕ್ರಮಂ)
ಎಂದೂ ಅಣ್ಣನ ಬಾಯಿಂದ ಇಂತಹ ಮಾತುಗಳನ್ನು ಕೇಳದ ಲಕ್ಷ್ಮಣ ಅವಾಕ್ ಆದ! ಕೇವಲ ವಿನೀತ ಮಗನ ಮೃದು ಮಧುರ ನುಡಿಗಳನ್ನು ಕೇಳುತ್ತಿದ್ದ ದಶರಥನಿಗೆ ದಿಗ್ಭ್ರಮೆಯಾಯಿತು!! ಮಾತನಾಡುತ್ತ ಆಡುತ್ತ ಧ್ವನಿ ಕಠಿಣವಾಯಿತು. ಸದಾ ಮೃದುವಾಗಿದ್ದ ಮುಖ ಕೆಂಪಾಯಿತು. ವಿನೀತವಾಗಿದ್ದ ದೇಹ ಸೆಟೆದು ನಿಂತಿತು. ಎಡಗೈ ಎದ್ದಿತು, ಚಾಚಿತು, ಪರಶುರಾಮರು ಹಿಡಿದಿದ್ದ ವೈಷ್ಣವ ಧನುಸ್ಸನ್ನು ಲೀಲಾಜಾಲವಾಗಿ ಎಳೆದುಬಿಟ್ಟಿತು. 
( ರಾಘವಃ ಕೃದ್ಧೋ ಭಾರ್ಗವಸ್ಯ ಶರಾಸನಂ
ಶರಂಚ ಪ್ರತಿ ಜಗ್ರಾಹ ಹಸ್ತಾಲ್ಲಘು ಪರಾಕ್ರಮಃ )
---೦೦೦---
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com