ರಾಮರ ಪ್ರಮಾಣ ಕೇಳಿ ಮೆಟ್ಟಿಬಿದ್ದ ದಶರಥ !

ಕೈಕೆಯೂ ರಾಮರ ಪ್ರಮಾಣ ನೋಡಿ ಒದ್ದಾಡಿದರೂ ಮನಸ್ಸು ಒಳ್ಳೆಯದನ್ನು ಯೋಚಿಸಲಿಲ್ಲ.
ರಾಮರ ಪ್ರಮಾಣ ಕೇಳಿ ಕಾಡಿಗೆ ಕಳಿಸಲು ಸಿದ್ಧಳಾಗಿದ್ದ ಕೈಕೆಯೇ ಬೆಚ್ಚಿ ಬಿದ್ದಿದ್ದಳು, ರಾಮರನ್ನು ನೋಡಿ ಒದ್ದಾಡಿದ್ದಳು!
ರಾಮರ ಪ್ರಮಾಣ ಕೇಳಿ ಕಾಡಿಗೆ ಕಳಿಸಲು ಸಿದ್ಧಳಾಗಿದ್ದ ಕೈಕೆಯೇ ಬೆಚ್ಚಿ ಬಿದ್ದಿದ್ದಳು, ರಾಮರನ್ನು ನೋಡಿ ಒದ್ದಾಡಿದ್ದಳು!
ರಥ ನಿಧಾನವಾಗಿ ಸರಿಯುತ್ತಿದೆ. ಹೌದು ಜನರು ದಾರಿ ಬಿಡಬೇಕಲ್ಲ! ತುಂಬಿದ ಜನಸಂದಣಿ. ಶ್ರೀರಾಮರಿಗೆ ಜಯಕಾರ ಹಾಕುತ್ತಿದ್ದಾರೆ. ರಥವನ್ನೇ ಮುಟ್ಟಿ ನಮಸ್ಕರಿಸುತ್ತಿದ್ದಾರೆ.  ವಂದಿ ಮಾಗಧರು ಪರಾಕು ಹೇಳುತ್ತಿದ್ದಾರೆ. ಲಕ್ಷ್ಮಣ ಒಂದು ಕೈಲಿ ಛತ್ರಿ ಹಿಡಿದು ಮತ್ತೊಂದು ಕೈಲಿ ಚಾಮರ ಬೀಸುತ್ತಿದ್ದಾನೆ. ಎಷ್ಟು ಬೇಡವೆಂದರೂ ಕೇಳುತ್ತಿಲ್ಲ! ಆ ಕಾರ್ಯ ಮಾಡಲೇ ನಿಯುಕ್ತರಾದವರನ್ನು ಕಳಿಸಿ ತಾನೇ ಆ ಕೆಲಸ ಮಾಡುತ್ತಿದ್ದಾನೆ. ಅದರಲ್ಲೇ ಅವನಿಗೆ ಸುಖ.
ಶ್ರೀರಾಮರಿಗಿನ್ನ ಲಕ್ಷ್ಮಣನಿಗೇ ಹೆಚ್ಚು ಸಂತೋಷ; ರೋಮಾಂಚನ. ಅಣ್ಣನಿಗೇ ಅಂಟಿಕೊಂಡ ತಮ್ಮ. ಅಣ್ಣನ ಸುಖದಲ್ಲೇ ಸುಖ ಕಾಣುವಾತ. ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಅಣ್ಣ ಯಾವುದಾದರೂ ಚರ್ಚಾಸ್ಪರ್ಧೆಯಲ್ಲಿ ಗೆದ್ದರೆ, ಪಾರಿತೋಷಕ ಬಂದರೆ ಊರಲ್ಲೆಲ್ಲ ಅದನ್ನು ತೋರಿಸಿಕೊಂಡು ಬರುತ್ತಿದ್ದ ಹೆಮ್ಮೆ. ಖಡ್ಗ ಯುದ್ಧದಲ್ಲಿ ಗೆದ್ದಾಗಲೆಲ್ಲ ಮೆರೆಯುತ್ತಿದ್ದವನು ಲಕ್ಷ್ಮಣ. ಲಕ್ಷ್ಮಣನೇನೂ ಕಡಿಮೆ ಇಲ್ಲ. ಅವನೂ ಮಹಾ ಶೂರನೇ! ಅವರಿಬ್ಬರೂ ಸೇರಿ ಅಣಕುಯುದ್ಧವನ್ನು, ಬೇರೆ ರಾಜ್ಯದ ರಾಜಕುಮಾರರೊಡನೆ ಮಾಡುತ್ತಿದ್ದಾಗಲೆಲ್ಲ ಗೆಲುವು ಇವರಿಗೇ! ಆಗಲೇ ರಾಮರಿಗೆ ಲಕ್ಷ್ಮಣನ ಗುರಿ ಎಷ್ಟು ಕರಾರುವಾಕ್ಕೆಂದು ತಿಳಿಯುತ್ತಿತ್ತು.
ಗುಡಿಗಳಿಗೆ ಪ್ರದಕ್ಷಿಣೆ ಮಾಡುತ್ತ, ಸುಮಂಗಲಿಯರು ಆರತಿ ಎತ್ತಲು ಬಂದಾಗ ನಿಲ್ಲುತ್ತ, ಪಟ್ಟಾಭಿಷೇಕಕ್ಕಾಗಿ ಸಿದ್ಧವಾಗಿದ್ದ ಬಿಳಿಯ ಹೋರಿ ಹಾಗೂ ಕುದುರೆಯನ್ನು ನೋಡುತ್ತ ಮುಂದುವರಿಯುತ್ತಿದ್ದಾರೆ. ಯೌವರಾಜ್ಯಾಭಿಷೇಕದ ಸ್ಥಳ. ಒಡ್ಡೋಲಗದ ಮಧ್ಯಭಾಗ. ದೇದಿಪ್ಯಮಾನವಾದ ಸಿಂಹಾಸನ. ಅದರಲ್ಲಿ ಹಾಸಿರುವ ವ್ಯಾಘ್ರಚರ್ಮ. ನೂರೆಂಟು ಮಂದಿ ಋತ್ವಿಜರು ಋಗ್ಮಂತ್ರಗಳನ್ನುಚ್ಛರಿಸುತ್ತ ಬೆಳ್ಳಿಯ ಬಿಂದಿಗೆಗಳಲ್ಲಿ ಗಂಗೆ, ಯಮುನೆ, ಗೋದಾವರಿ, ಅಘನಾಶಿನಿ, ಕಾವೇರಿ, ಸಿಂಧು, ಮಲಪ್ರಭಾ, ಘಟಪ್ರಭಾ, ಗೋದಾವರಿ, ನರ್ಮದಾ, ತಪತಿ, ಗೋಮತಿ, ರವಿ, ದಾಮೋದರ, ಮಾಹಿ, ಭಾಗೀರಥಿ, ಅಲಕನಂದಾ, ತುಂಗಭದ್ರಾ, ಪದ್ಮಾ, ಇಂದ್ರಾವತಿ, ಕಬಿನೀ, ಹೇಮವತಿ, ಕೊಯ್ನ, ಬ್ರಾಮ್ಹೀ, ಲೋಹಿತಾ, ಅರ್ಕಾವತಿ, ಶರಾವತಿ, ನೇತ್ರಾವತಿ, ವೇದವತಿ, ಪಯಸ್ವಿನಿ, ದಂಡವತಿ, ಪದ್ಮಾ, ಜಾಲಂಗಿ, ಆಜ್ಯ, ಇಚಮತಿ, ಚೂರ್ಣಿ.... ಇತ್ಯಾದಿ ಇತ್ಯಾದಿ ನದಿಗಳಿಂದ ಸಂಗ್ರಹಿಸಿರುವ ಮಂತ್ರಜಲವನ್ನು ಬೆಳ್ಳಿಯ ಬಿಂದಿಗೆಗಳಲ್ಲಿ ಧರಿಸಿದ್ದಾರೆ. 
ಕಮಲ, ನೈದಿಲೆ, ಪಾರಿಜಾತ, ಮಲ್ಲಿಗೆ, ಕನ್ನೈದಿಲೆ, ಗುಲಾಬಿ, ಸೇವಂತಿಗೆ, ಗುಲ್ಬಹಾರ್, ಚಂಪಕ, ಚಮೇಲಿ, ಸೂರ್ಯಕಾಂತಿ, ಕೇದಗೆ .... ಇತ್ಯಾದಿ ಹೂಗಳ ಬುಟ್ಟಿಬುಟ್ಟಿ ಸಾಲುಗಳು ಕಾಯುತ್ತಿವೆ. ಅರಮನೆಯ ಮುಂದೆ ನೂರೆಂಟು ಬಣ್ಣಗಳ ರಂಗೋಲಿ ಹಾಕಿದೆ. ನೃತ್ಯ, ವಾದ್ಯ, ಗಾಯನ , ಭಿತ್ತಿಚಿತ್ರ ಪ್ರದರ್ಶನ, ಕುಸ್ತಿ, ತಮ್ಮ ತಮ್ಮ ರಾಜ್ಯದ ಸ್ತಬ್ಧಚಿತ್ರಗಳು, ಜನಪದ ಹುಲಿಕುಣಿತ, ಕರಡಿ ಕುಣಿತ, ಗೊರವಯ್ಯಗಳು, ಎಣ್ಣೆ ಸಿದ್ಧರು, ಭಜನಾ ತಂಡಗಳು... ಒಂದೇ ಎರಡೇ? ದಾರಿಯುದ್ದಕ್ಕೂ ಎಲ್ಲೆಲ್ಲಿ ನೋಡಿದರೂ ಸಂಭ್ರಮವೋ ಸಂಭ್ರಮ. ಹರ್ಷವೋ ಹರ್ಷ. ಎಲ್ಲವನ್ನೂ ನೋಡುತ್ತ, ಎಲ್ಲವನ್ನೂ ಅಧ್ಯಯನ ಮಾಡುತ್ತ, ವಂದನೆಗಳನ್ನು ಸ್ವೀಕರಿಸುತ್ತ, ಆಶೀರ್ವಾದಗಳಿಗೆ ತಲೆಬಾಗುತ್ತ, ಮಿತ್ರರ ಕೈ ಕುಲುಕುತ್ತ, ಪುರಜನರಿಗೆ ಕೈ ಬೀಸುತ್ತ ಮುಂದುಮುಂದಕ್ಕೆ ಹೋಗುತ್ತಿದ್ದಾರೆ.
          **************
ಏನಾಗಿದೆ! ಎಂದೂ ತಾನು ಕಾಣದ ದೃಶ್ಯ. ತಲೆಕೆದರಿದೆ, ಕೈ ನಡುಗುತ್ತಿದೆ, ಮುಖ ಕೆಟ್ಟಿದೆ. ಕಣ್ಣುಗಳಲ್ಲಿ ನೀರಿರಬೇಕು. ಬಳಲಿ ಕುಸಿದಂತೆ ಕಾಣುತ್ತಿದ್ದಾರೆ ತಂದೆ. ಇಲ್ಲಿನವರೆಗಿದ್ದ ಉತ್ಸಾಹ, ಸಂಭ್ರಮ ಝರ್ರೆಂದು ಇಳಿದು ಹೋಯಿತು ರಾಮರಿಗೆ. ನಮಸ್ಕಾರ ಮಾಡಿದ ರಾಮರು ತಾಯಿಯ ಕಡೆ ತಿರುಗಿ ಕೇಳಿದರು; " ಅಮ್ಮ, ಗೊತ್ತಿಲ್ಲದೇ ಅಪ್ಪನಿಗೆ ತಪ್ಪು ಮಾಡಿದೆನೆ? ಇಷ್ಟೊಂದು ಸಿಟ್ಟು ಮಾಡಿಕೊಂಡಿದ್ದಾರೆ.  ಏಕೆ? ನೀನಾದರೂ ಒಂದು ಮಾತು ಹೇಳಬಾರದೆ? ಏನಾದರೂ ಅನಾರೋಗ್ಯವೆ? ಮನಸ್ಸಿಗೆ ಏನಾದರೂ ನೋವಾಗಿದೆಯೋ? ದೂರದಲ್ಲಿರುವ ತಮ್ಮಂದಿರಿಗೆ ಏನೂ ಕಷ್ಟ ಬಂದಿಲ್ಲ ತಾನೆ? ಬೇರೆ ಅಮ್ಮಂದಿರಿಗೇನೂ ನೋವಾಗಿಲ್ಲವಷ್ಟೆ!" 
ಶ್ರೀರಾಮರು ಸ್ವಗತವೆಂಬಂತೆ ಹೇಳಿಕೊಂಡರು; " ಮಹಾರಾಜರಿಗೆ ನನ್ನನ್ನು ಕಂಡರೆ ತುಂಬ ಪ್ರೀತಿ. ನೋಡುತ್ತಿದ್ದಂತೆ ಎದ್ದು ಬಂದು ಅಪ್ಪಿಕೊಳ್ಳುತ್ತಿದ್ದ ಅಪ್ಪ, ಇಂದೇಕೆ ಅಭಿವಾದನೆ ಮಾಡಿದರೂ, ಪಿಳಪಿಳನೆ ಕಣ್ಣುಬಿಟ್ಟು ಎಲ್ಲವನ್ನೂ ನೋಡುತ್ತಿದ್ದಾರಾಗಲೀ ಒಂದೇ ಒಂದು ಮಾತೂ ಇಲ್ಲ. ಕುಗ್ಗಿಹೋದಂತೆ ಕಾಣುತ್ತಿದ್ದಾರೆ" . ಮತ್ತೆ ಕೈಕೆ ಎಡೆಗೆ ತಿರುಗಿ, " ಅಮ್ಮ, ಅಪ್ಪನಿಗೆ ಸಂತೋಷ ಉಂಟುಮಾಡದೇ, ಅಪ್ಪ ಹೇಳಿದ್ದನ್ನು ಕೇಳದೇ, ಅಪ್ಪನಿಗೆ ಸಿಟ್ಟು ಬರುವಂತೆ ಮಾಡಿ ಕ್ಷಣ ಕೂಡ ಜೀವಿಸಿರಲು ನನಗಿಷ್ಟವಿಲ್ಲ! ಯಾವ ಕಾರಣದಿಂದ ಮಹಾವೀರನಾದ ನಮ್ಮಪ್ಪನಿಗೆ ಈರೀತಿ ವಿಕಾರ ಸ್ಥಿತಿ ಬಂದಿದೆ? " 
" ರಾಮ , ನೀನಂದುಕೊಂಡಿರುವುದೇನೂ ಕಾರಣ ಅಲ್ಲ. ಒಂದು ಪುಟ್ಟ ಮಾತಿಗೆ ಹೀಗೆ ತಲೆ ಕೆಡಿಸಿಕೊಂಡಿದ್ದಾರೆ. "ಶ್ರೀರಾಮರು ದೀನರಾಗಿ ತಾಯಿಯ ಕಡೆ ನೋಡಿದರು. ಕೈಕೆ ಮಾತು ಮುಂದುವರಿಸಿದಳು. "ಮಗೂ, ಮಹಾರಾಜರಿಗೆ ಯಾವ ಸಿಟ್ಟೂ ಇಲ್ಲ, ಯಾವ ನೋವೂ ಇಲ್ಲ. ತನ್ನ ಮನಸ್ಸಿನಲ್ಲಿರೋ ಒಂದು ವಿಷಯವನ್ನು ನಿನಗೆ ಹೇಳೋಕೆ ಆಗದೇ, ಹೇಳಿದರೆ ನೀನೆಲ್ಲಿ ಸಿಟ್ಟು ಮಾಡಿಕೊಳ್ತಿಯೋ ಅಂತ ಹೆದರಿಕೊಂಡು ಮಾತಾಡದೇ ಇದ್ದಾರೆ. ಪ್ರೀತಿಪಾತ್ರನಾದ ನಿನಗೆ ಅಪ್ರಿಯವನ್ನು ಹೇಳೋಕೆ ಅವರಿಗೆ ಮಾತು ಬರ್ತಿಲ್ಲ. ನಿನಗೆ ಪ್ರಿಯವಾಗಲಿ, ಅಪ್ರಿಯವಾಗಲಿ ಮಹಾರಾಜರು ಹೇಳಿದ್ದನ್ನು ನೀನು ನಡೆಸುವಂತಿದ್ದರೆ, ಎಲ್ಲವನ್ನೂ ನಿನಗೆ ನಾನೇ ಹೇಳತೀನಿ. "
" ಏನಮ್ಮ ಇದು? ಇಷ್ಟು ವರ್ಷವಾದರೂ ನನ್ನನ್ನ ನೀನು ಇಷ್ಟೇನಾ ಅರ್ಥ ಮಾಡಿಕೊಂಡಿರೋದು? " ನೋಡುತ್ತಿದ್ದ ದೃಷ್ಟಿಯನ್ನು ಅಮ್ಮನೆಡೆಯಿಂದ ಕಿತ್ತು ಶೂನ್ಯದಲ್ಲಿ ನೋಡುತ್ತ, ಗಂಭೀರ ಧ್ವನಿಯಲ್ಲಿ ಘಂಟಾನಾದದಂತೆ ರಾಮರು ಹೇಳಿದರು. "ಅಪ್ಪನೇನಾದರೂ ಆದೇಶ ಕೊಟ್ಟರೆ, ಬೆಂಕಿಯಲ್ಲಿ ಬೀಳೆಂದರೂ ಬೀಳುತ್ತೇನೆ.  ಮಹಾ ವಿಷವನ್ನು ಕುಡಿಯೆಂದರೆ ಮರು ಮಾತಾಡದೇ ಕುಡಿಯುವೆ. ಸಮುದ್ರದಲ್ಲಿ ಬೀಳೆಂದರೂ ಮರುಕ್ಷಣವೇ ಬೀಳುವೆ. " 
ದಶರಥ ಮೆಟ್ಟಿಬಿದ್ದ. ಎಂಥ ಮಗ? ಎಂಥ ಮಾತು? ಇಂತಹವನಿಗೆ ಎಂತಹ ಗತಿ! ರಾಮರು ಖಚಿತ ಧ್ವನಿಯಲ್ಲಿಯೇ ಹೇಳಿದರು, " ಹೇಳಮ್ಮ, ಅಪ್ಪ ಏನು ಹೇಳಿದರು? "ಕೈಕೆಯೂ ರಾಮರ ಪ್ರಮಾಣ ನೋಡಿ ಒದ್ದಾಡಿದರೂ ಮನಸ್ಸು ಒಳ್ಳೆಯದನ್ನು ಯೋಚಿಸಲಿಲ್ಲ.  ಕ್ಷಣ ಬಿಟ್ಟು ಹೇಳಿದರು ರಾಮರು; "ಅಮ್ಮ ಹೇಳು, ಮಹಾರಾಜರ ಅಪೇಕ್ಷೆ ಏನೆಂದು ಹೇಳು. ಅವರು ಏನೇ ಹೇಳಿರಲಿ, ಅವರು ಹೇಳಿದ್ದನ್ನು ಮಾಡುವೆನೆಂದು ಪ್ರತಿಙ್ಞೆ ಮಾಡಿರುವೆ. ರಾಮ ಎರಡು ಮಾತಿನವನಲ್ಲ..." (ಮುಂದುವರೆಯುತ್ತದೆ.....)
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com