ರಾಮನ ಪಟ್ಟಾಭಿಷೇಕಕ್ಕೆ ತಂದಿದ್ದ ಸಾಮಗ್ರಿಗಳಿಂದಲೇ ಭರತನ ಪಟ್ಟಾಭಿಷೇಕಕ್ಕೆ ಪಟ್ಟು ಹಿಡಿದಿದ್ದಳು ಕೈಕೆ!

"ನಿನ್ನಪ್ಪ ಆ ನಿನ್ನ ಅಭಿಷೇಕಕ್ಕೆ ಏನೆಲ್ಲಾ ತಯಾರು ಮಾಡಿದ್ದಾರೋ, ಆ ಎಲ್ಲಾ ಸಾಮಗ್ರಿಗಳಿಂದಲೇ ಭರತನಿಗೆ ಯವ್ವರಾಜ್ಯಾಭಿಷೇಕ ಮಾಡಬೇಕು"....
ರಾಮನ ಪಟ್ಟಾಭಿಷೇಕಕ್ಕೆ ತಂದಿದ್ದ ಸಾಮಗ್ರಿಗಳಿಂದಲೇ ಭರತನ ಪಟ್ಟಾಭಿಷೇಕಕ್ಕೆ ಪಟ್ಟು ಹಿಡಿದಿದ್ದಳು ಕೈಕೆ!
ರಾಮನ ಪಟ್ಟಾಭಿಷೇಕಕ್ಕೆ ತಂದಿದ್ದ ಸಾಮಗ್ರಿಗಳಿಂದಲೇ ಭರತನ ಪಟ್ಟಾಭಿಷೇಕಕ್ಕೆ ಪಟ್ಟು ಹಿಡಿದಿದ್ದಳು ಕೈಕೆ!
ಅಲ್ಲಿಗೆ ತನ್ನ ದಾರಿಗೆ ರಾಮ ಬಂದನೆಂದು ಕೈಕೆಗೆ ಸಮಾಧಾನ. ಎಲ್ಲ ಸಿದ್ಧವಾಗಿದೆ. ಈಗ ನಾನು ಹೇಳುವುದೊಂದೇ ಬಾಕಿ. ಮೊದಲು ದಶರಥ ಋಣಿಯಾಗಿರುವುದನ್ನು ಹೇಳಿ, ವರ ಕೊಟ್ಟಿದ್ದನ್ನು ಪ್ರಸ್ತಾವಿಸಿ, ಈಗ ಹಿಂಜರಿಯುತ್ತಿರುವ ಅಸತ್ಯ ನಿಲುವನ್ನು ಪ್ರತಿಪಾದಿಸಬೇಕು. ಹೇಗೂ ಮೊದಲಿನಿಂದಲೂ ರಾಮ ನ್ಯಾಯ ಪಕ್ಷಪಾತಿ . ನೇರವಾಗಿ ಮಾತಿಗೆ ತಪ್ಪುತ್ತಿರುವುದು ಕಾಣಿಸುತ್ತಿರುವಾಗ, ಅಪ್ಪನೇ ಆದರೂ ಏನು, ಅದು ತಪ್ಪೇ ಎಂದು ಮಗನೇ ಹೇಳುತ್ತಾನೆ . ಅಲ್ಲಿಗೆ ಮುಗಿಯಿತು ಆಟ. ರಾಮ ನಾರುಡೆಗೆ ತಾನೇ ಕೈಯಿಟ್ಟಂತೆ!!!
ತಾನು ಸತ್ಯದ ಪ್ರತಿರೂಪವೆಂಬಂತೆ ಕೈಕೆ ಆರಂಭಿಸಿದಳು; "ರಾಮ, ನೀನೇ ಹೇಳು, ಯಾರದು ತಪ್ಪು ಅಂತ. ಹಿಂದೆ ಶಂಬರಾಸುರನ ಜೊತೆಗೆ ಯುದ್ಧ ಮಾಡುತ್ತಾ ಇದ್ದಾಗ ನಿನ್ನ ತಂದೆಗೆ ತುಂಬಾ ಗಾಯ ಅಗಿತ್ತು. ನಿಂತುಕೊಳ್ಳಕ್ಕಾಗದೇ ರಥದಲ್ಲೇ ಕುಸಿದು ಬಿದ್ದರು. ತಕ್ಷಣಾ ನಾನು ರಥ ಓಡಿಸಿಕೊಂಡು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಹೋದೆ. ಔಷಧಿ, ಆಹಾರ, ಸೇವೆ ಎಲ್ಲ ಮಾಡಿದೆ. ನಾಲಕ್ಕೈದು ದಿವಸಗಳಲ್ಲಿ ಗುಣ ಆಯ್ತು. ಪೂರ್ಣ ಗುಣ ಆದಮೇಲೆ ಹಿಂದಿನದೆಲ್ಲ ನೆನಪಾಗಿ ನನ್ನ ಕೈ ಹಿಡಿದುಕೊಂಡು, ನಿಮ್ಮಪ್ಪ, "ನಿನ್ನ ಕರ್ತವ್ಯಕ್ಕೆ ಮೆಚ್ಚಿದ್ದೀನಿ, ನಿನ್ನ ದಕ್ಷತೆಗೆ ಸೋತು ಹೋಗಿದೀನಿ, ಕಾಲಕ್ಕೆ ಸರಿಯಾಗಿ ನೀನು ಎಚ್ಚರ ವಹಿಸದೇ ಇದ್ದಿದ್ದರೇ, ನಾವಿಬ್ಬರೂ ಸತ್ತು ಇಷ್ಟುಹೊತ್ತಿಗೆ ನಾಲಕ್ಕು ದಿವಸಗಳಾಗ್ತಾ ಇತ್ತು. ನಿನ್ನ ಪ್ರೀತಿ, ಸೇವೆ ನನಗೆ ತುಂಬ ಮೆಚ್ಚುಗೆಯಾಗಿದೆ. ಕೇಳು, ಯಾವ ವರ ಕೇಳತೀಯೋ ಕೇಳಿಕೊ. ಒಂದಲ್ಲ, ಎರಡು ವರ ಕೇಳೂ" ಎಂದರು. ಆ ಅಸ್ತವ್ಯಸ್ತ ಸ್ಥಿತೀಲೇ, ಆ ಕ್ಷಣದಲ್ಲೇ ಯಾಕೆ ಸಾಧಾರಣವಾದ್ದು ಕೇಳಬೇಕು ಅಂತ, ನಿಧಾನವಾಗಿ ಯೋಚಿಸಿ ಒಳ್ಳೆ, ದೊಡ್ಡದೇ ಕೇಳೋಣ ಅಂತ ನಿಮ್ಮಪ್ಪನಿಗೆ ಕೇಳಿದೆ, "ಈಗ ಬೇಡಿ ಮಹಾಸ್ವಾಮಿ, ನನಗೆ ಬೇಕಾದಾಗ ಕೇಳ್ತೀನಿ, ಆವಾಗ್ ಕೊಡ್ತೀರಂತೆ" ಅದಕ್ಕೆ ಮಹಾರಾಜರು ತಮ್ಮ ಕೈಯ್ಯ ಕಂಕಣವನ್ನು ನನ್ನ ಕೈಗೆ ತೊಡಿಸುತ್ತ, "ಒಪ್ಪಿದೆ, ಯಾವಾಗಲಾದರೂ ಕೇಳು. ಏನನ್ನಾದರೂ ಕೇಳು. ಎಷ್ಟು ಬೆಲೆ ಇರೋದನ್ನಾದರೂ ಕೇಳು. ಎಷ್ಟು ಕಷ್ಟವಾದ್ದನ್ನಾದರೂ ಕೇಳು. ಮರುಮಾತಿಲ್ಲದೇ ಈಡೇರಿಸುತ್ತೀನಿ. ಇದಕ್ಕೆ ಸೂರ್ಯ ಚಂದ್ರರೇ ಸಾಕ್ಷಿ. ಅಗ್ನಿ-ವಾಯುಗಳೇ ಸಾಕ್ಷಿ. "ಅಂತ ದೊಡ್ಡದಾಗಿ ಪ್ರತಿಙ್ಞೆ ಮಾಡಿ, ಈಗ ನಾನೇನೋ ಕೇಳಿದರೆ ಹಿಂಜರೀತಾ ಇದ್ದಾರೆ, ಕೊಡೋಕೆ ಕಷ್ಟ ಅಂತ ಪೂಸಿ ಮಾಡ್ತಾ ಇದ್ದಾರೆ. ಅಳೋ ನಾಟಕ ಆಡ್ತಾ ಇದ್ದಾರೆ. ಇದು ಸರಿನಾ ರಾಮ? ನಾನು ಹೇಳಿದ್ದರಲ್ಲಿ ಒಂದು ಅಕ್ಷರ ಸುಳ್ಳಿದೆಯೋ ಕೇಳು ನಿಮ್ಮಪ್ಪನ್ನೇ." 
ಶ್ರೀರಾಮರು ದಶರಥನೆಡೆ ನೋಡಿದರು. ದಶರಥ ಏನೂ ಮಾತನಾಡದೇ ಗರಬಡಿದಂತೆ ಕುಳಿತಿದ್ದಾನೆ. ರಾಮರಿಗೆ ಚಿಕ್ಕತಾಯಿ ಹೇಳುತ್ತಿರುವುದು ಸರಿ ಎನ್ನಿಸಿತು. ಆದರೆ ಅಪ್ಪನನ್ನ ನೇರವಾಗಿಯೇ ದೋಷಿಯೆಂದು ಹೇಗೆ ಹೇಳುವುದು? ಆದರೂ ತನ್ನ ನಿಲುವು ಹೇಳಬೇಕಲ್ಲ? "ಅಮ್ಮ, ನಿನ್ನ ಉಪಕಾರವನ್ನು ಸ್ಮರಿಸದಷ್ಟು ಕೃತಘ್ನರಲ್ಲ ನಮ್ಮಪ್ಪ. ಇಷ್ಟಕ್ಕೂ ನೀನೇನು ಬಯಸಿದೆ, ನಮ್ಮಪ್ಪ ಯಾಕೆ ಮೌನವಾಗಿದ್ದಾರೆ?" 
ಇದೀಗ ಕೆಂಪಗೆ ಕಾದಿದೆ ಕಬ್ಬಿಣ. ಈಗಲೇ ಬಲವಾಗಿ ಸುತ್ತಿಗೆ ಏಟು ಬಿದ್ದರೆ ಬಗ್ಗಿಬಿಡುತ್ತದೆ. ಅತ್ಯಂತ ಸರಳವಾಗಿ, ಸುಲಭವಾದ ಮಾತೆಂಬಂತೆ ಹೇಳಿದಳು ಕೈಕೆ; "ರಾಮ ನೀನೇ ಹೇಳು, ಪ್ರತಿಯೊಬ್ಬ ತಾಯಿಗೂ ತನ್ನ ಮಗನ ಅಭ್ಯುದಯ ಮುಖ್ಯ ತಾನೆ? ಮಗನ ಪ್ರಗತಿಗೆ ಏನಾದರೂ ಅಡ್ಡಿಯಾದರೆ ಅದನ್ನು ತೊಲಗಿಸಬೇಕು ತಾನೆ? "ದಿಟ್ಟಿಸಿ ಕೇಳಿದಳು ಕೈಕೆ. "ಇದರಲ್ಲಿ ಯೋಚಿಸಬೇಕಾದ್ದು ಏನಿದೆ? ಎಲ್ಲ ತಾಯಂದಿರೂ ಹಾಗೇ ಮಾಡುತ್ತಾರೆ. ಆದರೆ ಅಪ್ಪನ ಸಂಕಟಕ್ಕೆ ಕಾರಣ ಕೇಳಿದರೆ, ಈ ಬೇರೆ ಪ್ರಶ್ನೆ ಯಾಕಮ್ಮ ಕೇಳ್ತಾ ಇದ್ದೀಯ? "ಸರಳವಾಗಿ ಉತ್ತರಿಸಿದರು ರಾಮರು; ಮುಂದಿನ ಕತ್ತಿ ಏಟಿಗೆ ತಲೆಕೊಟ್ಟು. "ಅಲ್ಲ ಎರಡಕ್ಕೂ ಸಂಬಂಧ ಇದೆ. ಸರಿ ಕೇಳಿಸ್ಕೊ. ನೀನೂ, ನಿನ್ನ ಅಪ್ಪನೂ ಆಡಿದಂತೆ ನೆಡೆಯೋಕಾದರೆ, ಕೊಟ್ಟ ಮಾತಿಗೆ ತಪ್ಪದವರಾದರೆ, ನೀವು ಸತ್ಯ ಪ್ರತಿಙ್ಞರಾದರೆ ನನ್ನ ಮಾತನ್ನು ಕೇಳಿಸ್ಕೊ." 
ಏನು ಇದ್ದಕ್ಕಿದ್ದಂತೆಯೇ ತನ್ನನ್ನೂ ಅಪ್ಪನೊಡನೆ ಸೇರಿಸುತ್ತಿದ್ದಾರೆ ಅಮ್ಮ? ಅತ್ಯಂತ ಗಂಭೀರವಾಗಿ, ರಾಜಾದೇಶವನ್ನು ಘೋಷಿಸುವ ಮಂತ್ರಿಯ ದೃಢ ದೊಡ್ಡ ಮಾತಿನಲ್ಲಿ ನುಡಿದಳು ಕೈಕೆ; ತಾನು ಮಾತನಾಡುವುದನ್ನು ಕೇಳಿ ರಾಮನೇನೆಂದುಕೊಳ್ಳುವನೆಂಬುದನ್ನೂ ಯೋಚಿಸದೆ. "ಹೇಳಿದೆನಲ್ಲ, ದೇವಾಸುರ ಯುದ್ಧದಲ್ಲಿ ಗಾಯಗೊಂಡ ರಾಜರನ್ನು ರಕ್ಷಿಸಿದಾಗ ನಿಮ್ಮಪ್ಪ ಎರಡು ವರಗಳನ್ನು ಕೊಟ್ಟಿದ್ದರು ಎಂದು. ಇದೀಗ ನಾನವುಗಳನ್ನು ಕೊಡು ಅಂತ ಕೇಳಿದೆ. " )
ಪುಟ್ಟ ವಿರಾಮ ಕೊಟ್ಟ ಕೈಕೆ ಮತ್ತೊಮ್ಮೆ ರಾಮರನ್ನು ನೋಡಿ, ಆತ ಗಮನವಿಟ್ಟು ಕೇಳುತ್ತಿರುವುದನ್ನು ಅರಿತು, ಬೆಂಕಿಯುಂಡೆಗಳನ್ನೆಸೆದುಬಿಟ್ಟಳು.... "ಭರತನಿಗೆ ಪಟ್ಟ ಕಟ್ಟಬೇಕು ಅನ್ನೋದೊಂದು. ರಾಮ, ನೀನು ದಂಡಕಾರಣ್ಯಕ್ಕೆ ಹೋಗಬೇಕು ಅನ್ನೋದಿನ್ನೊಂದು. ನಿಶ್ಶಬ್ದ. ಗಾಳಿಯೂ ಆಡದ ರವ ರಹಿತ ಕಾಲವೇ ನಿಂತ ಕ್ಷಣ!!! ಬೇರಾರಾಗಿದ್ದರೂ ಏನು ಹೇಳುತ್ತಿದ್ದರೋ, ಶ್ರೀರಾಮರು ಮಾತ್ರ ಏನೂ ಆಗದವರಂತೆ ಅವಿಚಲಿತರಾಗಿ ನಿಂತಿದ್ದರು. ಸೂಕ್ಷ್ಮವಾಗಿ ನೋಡಿದರೆ ಮುಖದಲ್ಲಿ ಸದಾ ಇರುವ ಮಂದಹಾಸ ಕೊಂಚ ಕಡಿಮೆಯಾಗಿರಬಹುದು!! ಇನ್ನೂ ಮುಗಿದಿಲ್ಲವೆಂಬಂತೆ ಕೈಕೆ ಗಾಯಕ್ಕೆ ಉಪ್ಪು ಸವರಿಬಿಟ್ಟಳು!! "ನಿನ್ನಪ್ಪ ಆ ನಿನ್ನ ಅಭಿಷೇಕಕ್ಕೆ ಏನೆಲ್ಲಾ ತಯಾರು ಮಾಡಿದ್ದಾರೋ, ಆ ಎಲ್ಲಾ ಸಾಮಗ್ರಿಗಳಿಂದಲೇ ಭರತನಿಗೆ ಯವ್ವರಾಜ್ಯಾಭಿಷೇಕ ಮಾಡಬೇಕು. ಮತ್ತೂ ಕೆಟ್ಟ ಉಸಿರು ಬಿಟ್ಟಿತು ಕೊಳಕುಮಂಡಲ! "ನೀನೀಗ ಸರಿಯಾಗಿ ಕೇಳಿಸ್ಕೊ. ಒಂಬತ್ತು ಮತ್ತು ಐದು, ಒಟ್ಟು ಹದಿನಾಲ್ಕು ವರ್ಷಗಳು ದಂಡಕಾರಣ್ಯವನ್ನು ಪ್ರವೇಶಿಸಬೇಕು. 
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com