ಕೈಕೆಗಿಂತ ಮೊದಲು ಪಟ್ಟ ಮಹಿಷಿಗೆ ಪಟ್ಟಾಭಿಷೇಕದ ಬಗ್ಗೆ ತಿಳಿಸಿದ್ದಿದ್ದರೆ ಮುಂದಿನ ರಾದ್ಧಾಂತವೇ ನಡೆಯುತ್ತಿರಲಿಲ್ಲವೇನೋ?

ಕ್ರಮಭಂಗ ಮಾಡಿದ್ದರ ಅಡ್ಡ ಪರಿಣಾಮ ಇದು. ಪದವಿಯೋ, ವಯಸ್ಸೋ, ಅರ್ಹತೆಯೋ ಈ ಯಾವುದೋ ಕಾರಣಗಳಿಗೆ ಅನುಗುಣವಾಗಿ ನಾವು ಮರ್ಯಾದೆ ಮಾಡಬೇಕು. ...ಹಾಗೊಮ್ಮೆ ಕೈಕೆ ಬಳಿ ಬಾರದೇ....
ಕೈಕೆ-ದಶರಥ
ಕೈಕೆ-ದಶರಥ
Updated on
(ಓದುಗರೆ, ಒಂದು ಕಥೆ; ಬಹುಶಃ ಜಾನಪದವಿರಬಹುದು; ಅದರಲ್ಲಿನ ವಿವರಣೆ ಇದು. ಯುದ್ಧವಾಗುತ್ತಿರುವಾಗ, ರಥ ಓಡುತ್ತಿದ್ದಾಗ, ರಥದ ಚಕ್ರ ತಿರುಗಲು ಸಹಾಯವಾದ ಕಡಾಣೆ ಬಿದ್ದು ಹೋಯಿತು. ತಕ್ಷಣವೇ ಕೈಕೆ ತನ್ನ ಬೆರಳನ್ನು ಕಡಾಣೆಯಾಗಿಸಿ, ಬಿಚ್ಚಿಹೋಗಬಹುದಿದ್ದ ರಥವನ್ನು ತಡೆಹಿಡಿದಳು. ಅವಳು ಹಾಗೆ ಮಾಡದಿದ್ದಿದ್ದರೆ, ರಥ ಉರುಳಿ ರಾಜ ಬಿದ್ದು, ಅನಾಹುತವಾಗುತ್ತಿತ್ತು. ಮರಣವೂ ಆಗಬಹುದಿದ್ದ ಅವಘಡ ತಪ್ಪಿಸಿದ್ದರಿಂದ ದಶರಥ ಕೈಕೆಗೆ ವರ ಕೊಟ್ಟ!?ಇದು ಕಥೆ.
ಕಡಾಣಿ ಹಾಗೆ ಜಾರಲು ಸಾಧ್ಯವೇ ಇಲ್ಲ. ಹಾಗೇನಾದರೂ ಆದರೆ ಸಾರಥಿಯ ಮುಂಜಾಗ್ರತೆಯ ಪ್ರಶ್ನೆಯಾಗುತ್ತದೆ. ಅಲ್ಲದೇ ಉರುಳುತ್ತಿರುವ ಚಕ್ರಕ್ಕೆ ಅಡ್ಡಲಾಗಿ ಜಟ್ಟಿಯ ಬೆರಳೂ ತುಂಡಾಗುವ ಸಾಧ್ಯತೆ ಇರುವಾಗ ಕೈಕೆ ಬೆರಳಿಡಲು ಸಾಧ್ಯವೆ? ತಿರುಗುತ್ತಿರುವ ಗಾಲಿಯನ್ನು ಆ ಬೆರಳು ತಡೆದು ನಿಲ್ಲಿಸಬಲ್ಲದೇ? ಅವಳ ಕೈಯ್ಯನ್ನೇ ಅದು ಕತ್ತರಿಸದೇ? ಕೋಮಲೆ ಕೈಕೆ ಇದನ್ನು ಮಾಡಲು ಸಾಧ್ಯವೆ?
ಇನ್ನು ವರವಿಚಾರ. ತನ್ನ ಕಷ್ಟ ಸಮಯದಲ್ಲಿ ರಕ್ಷಿಸಿದ ಕೈಕೆಗೆ ಏನಾದರೂ ಬಹುಮಾನಿಸಬೇಕಾದ್ದು ಸಹಜ. ಹಾಗೇ ರಾಜ ಕೇಳಿದ ಕೂಡ. ಆದರೆ ಸಮಸ್ಯೆ ಇರುವುದು ವಿನಿಯೋಗದಲ್ಲಿ! ಕೇಳುವುದು ಯಾಚಕಾಧಿಕಾರ. ಕೇಳಿದ್ದನ್ನು ಕೊಡಲೇಬೇಕೆಂಬ ನಿಯಮ ಇದ್ದಂತಿಲ್ಲ. ಸಾಯದೇ ಇರುವ ವರ ಕೇಳಿದಾಗಲೆಲ್ಲ ಬ್ರಹ್ಮ ಅಡ್ಡಡ್ಡ ತಲೆಯಾಡಿಸಿದ್ದಾನೆ. ಜೊತೆಗೆ ವರ ಕೇಳುವ ಅವಧಿ ಅನಿರ್ದಿಷ್ಟವಾಗಿರುವುದೂ ವ್ಯಾವಹಾರಿಕವಲ್ಲ. ನಾಳೆ ಏನಾಗಬಹುದೆಂದು ಇಂದು ಊಹಿಸದ ಸ್ಥಿತಿಯಲ್ಲಿ, ಮುಂದೆಂದೋ ಕೇಳುವ ವರವನ್ನು ಈಡೇರಿಸುವುದಾಗಿ ಯಾರು ತಾನೇ ಹೇಗೆ ಹೇಳಬಲ್ಲರು? ವರವೇನೆಂದೇ ಖಚಿತವಾಗದಾಗ, ಅದನ್ನು ಮುಂದೆಂದೋ ಕೊಡುವ ಭರವಸೆ ಹೇಗೆ? ಹೀಗಾಗಿ ದಶರಥ ಭವಿಷ್ಯದಲ್ಲಿ ಏನೋ ಕೇಳುವ ವರಕ್ಕೆ ಮೂಗ ಬಸವನಂತೆ ತಲೆ ತೂಗಿದ್ದು ಅಂಥ ವಿವೇಕವಲ್ಲ! ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ವಿಧಿ ಬದ್ಧವೇ ಎಂಬುದೂ ಗಮನಾರ್ಹ! ಕಾನೂನಿಗೆ ವಿರೋಧವಾದ ಅಪೇಕ್ಷೆಯನ್ನು ಆಗ ಮಾಡಲು ಸಾಧ್ಯ ಹೇಗೆ? ಹೀಗಾಗಿ ಭವಿಷ್ಯದಲ್ಲಿ ಕೇಳಬಹುದಾದ ವರ ನೀಡಲು ದಶರಥ ಒಪ್ಪಿದ್ದೇ ಅವನ ಮೂರ್ಖ ನಿರ್ಧಾರ. ಇದರಿಂದಾಗಿಯೇ ಮುಂದಿನ ಅನಾಹುತ ಪರಂಪರೆ!-ಲೇಖಕರು)
ದಶರಥನಿಗೆ ಸಂತೋಷಾಧಿಕ್ಯ ಹಿಡಿದಿಡಲಾಗುತ್ತಿಲ್ಲ. ದುಃಖವನ್ನಾದರೂ ಮುಚ್ಚಿಡಬಹುದು; ಸುಖದ ಹಣೆಯ ಬರಹವೇ ಅದು. ಹಂಚಿಕೊಳ್ಳಲೇ ಬೇಕು. ಲಗುಬಗೆಯಿಂದ ಎದ್ದ. ರಾಣಿಗೆ ಹೇಳಬೇಕಲ್ಲ? ಹೊರಟ ರಾಣೀ ವಾಸದತ್ತ! ಮನಸ್ಸು ರಾಮ ಮಾತೆಗೆ ವಿಷಯ ಹೇಳಬೇಕೆಂದುಕೊಳ್ಳುತ್ತಿತ್ತೇನೋ ಆದರೆ ಇತ್ತೀಚಿನ ವರ್ಷಗಳಲ್ಲಿ ನಡೆದು ನಡೆದು ಅಭ್ಯಾಸ. ಕೈಕೆಯ ಗೃಹದ ಹಾದಿ ಹಿಡಿದ. (ಕ್ರಮಭಂಗ ಮಾಡಿದ್ದರ ಅಡ್ಡ ಪರಿಣಾಮ ಇದು. ಪದವಿಯೋ, ವಯಸ್ಸೋ, ಅರ್ಹತೆಯೋ... ಈ ಯಾವುದೋ ಕಾರಣಗಳಿಗೆ ಅನುಗುಣವಾಗಿ ನಾವು ಮರ್ಯಾದೆ ಮಾಡಬೇಕು. ಕೇಂದ್ರ ಮಂತ್ರಿ ಇದ್ದಾಗ, ರಾಜ್ಯದ ಮುಖ್ಯಮಂತ್ರಿಯನ್ನು ಮೊದಲು ಸ್ವಾಗತಿಸುವುದು ಸಭಾ ಮರ್ಯಾದೆಯಲ್ಲ! ಆಯಾ ಹುದ್ದೆಗನುಗುಣವಾಗಿ ಗೌರವ ಸಂದಾಯ. ಇದನ್ನರಿಯದವನೇ ದಶರಥ? ಮಹರ್ಷಿ ತುಲ್ಯನೆಂದು ಬೇರೆ ವಾಲ್ಮೀಕಿಗಳ ಪರಾಕು! ಇಲ್ಲಿಯವರೆಗೂ ಏನೇ ಇದ್ದಿರಲಿ, ಈಗ ರಾಮ ಪಟ್ಟಾಭಿಷೇಕ ಸಂದರ್ಭದಲ್ಲಿಯಾದರೂ ರಾಮ ತಾಯಿಗೆ, ಪಟ್ಟ ಮಹಿಷಿಗೆ ಪ್ರಥಮ ಪೂಜೆ ಬೇಡವೆ? ಇಲ್ಲ! ಮೋಹಿತ ರಾಜ ಬಂದೇ ಬಿಟ್ಟ ಕೈಕಾ ಸದನಕ್ಕೆ!! ಹಾಗೊಮ್ಮೆ ಕೈಕೆ ಬಳಿ ಬಾರದೇ ರಾಮಮಾತೆಗೆ, ಪಟ್ಟ ಮಹಿಷಿಗೆ, ಪ್ರಥಮ ಪತ್ನಿಗೆ ವಿಷಯ ತಿಳಿಸಲು ಬಂದಿದ್ದಿದ್ದರೆ, ಮುಂದಿನ ರಾದ್ಧಾಂತವೇ ನಡೆಯುತ್ತಿರಲಿಲ್ಲವೇನೋ!! ಪ್ರೀತಿ ಇರುವುದು ಬೇರೆ, ಅದನ್ನು ಅನುಭವಿಸುವುದೋ ಪ್ರಶಂಸಿಸುವುದೋ ಬೇರೆ; ಆದರೆ ಮೋಹಿತನಾಗುವುದೇ ಬೇರೆ! ಹೊಸ ಮನೆ ಕಟ್ಟುವುದು, ಸುಖಿಸುವುದೂ, ಯಾವುದೋ ಕಾರಣದಿಂದ ಬಾಡಿಗೆಗೆ ಕೊಡುವುದೂ ಬೇರೆ; ಆದರೆ ಬಾಡಿಗೆದಾರರು ಅವರಿಗೆ ತಕ್ಕಂತೆ ಗೋಡೆಯ ಮೇಲೆ ಮೊಳೆ ಹೊಡೆದರೆ ತನ್ನ ಎದೆಯಮೇಲೇ ಗೂಟ ನಟ್ಟಂತೆ ಒದ್ದಾಡುವುದು ಬೇರೆ. ನಾವು ಮೋಹಿತರಾದಾಗಲೇ ನಮಗೆ ದುಃಖ, ಸಂಕಟಗಳ ಸರದಿ -ಲೇಖಕರು)
ರಾಜ ಬಂದಾಗ, ಸುಂದರ ಸಾಲಂಕೃತ ಮನೆಗೆ ಬಂದಾಗ, ಲತಾ ಕುಂಜಗಳ ದಂತಪೀಠಗಳ ಮನೆಗೆ ಬಂದಾಗ, ಗಿಳಿ ನವಿಲುಗಳ ರವಭರಿತ ಮಧುರ ಮನೆಗೆ ಬಂದಾಗ, ವಜ್ರ ನಿರ್ಮಿತ ಜಗುಲಿಗಳಿಂದ ಕೂಡಿದ, ಬಂಗಾರದ ತಗಡು ಅಂಟಿಸಿದ್ದ ಗೋಡೆಗಳ ಭವ್ಯ ಭವನಕ್ಕೆ ಬಂದಾಗ ಎಂದೂ ಒಂಟಿಯಾಗಿರಲಿಲ್ಲ. ಬರುವ ಮುನ್ನವೇ ಕೈಕೆ ವಿವಿಧ ಸಾಮಗ್ರಿಗಳಿಂದ ಎದುರುಗೊಳ್ಳುತ್ತಿದ್ದಳು. ಇಂದು ಮೊಂಕು ಮುಸುಕಿದ, ಶೂನ್ಯ ಸಾಮ್ರಾಜ್ಯದ, ಬಿಕೋ ಎನ್ನುತ್ತಿದ್ದ ಕೈಕೆಯ ಕಪ್ಪು ಕೋಣೆ ಅನುಚಿತ ಸ್ವಾಗತ ಬಯಿಸಿತು. " ಎಲ್ಲಿ? ರಾಣಿಯವರು ಎಲ್ಲಿ? ಕೈಕಾದೇವಿ ಎಲ್ಲಿ? "ಎಂದು ಕೂಗಿದ ಪ್ರಶ್ನೆಗೆ ತಲೆತಗ್ಗಿಸಿದ ಕಂಚುಕಿ, "ಕ್ಷಮಿಸಿ ಮಹಾರಾಜ. ಈಗ ಕೊಂಚಹೊತ್ತಿಗೆ ಮುನ್ನ ರಾಣಿಯವರು ಕೋಪಗೃಹಕ್ಕೆ ಹೋದರು. "ಹಾರುತ್ತಿದ್ದ ಹಕ್ಕಿ ಕಲ್ಲು ತಗುಲಿ ನೆಲಕ್ಕೆ ಬಿದ್ದಿತು. 
(ದೇವ ದೇವೀಂ ಭೃಶಂ ಕೃದ್ಧಾ ಕ್ರೋಧಾಗಾರಮಭಿದ್ರುತಾ
ಪ್ರತೀಹಾರ್ಯಾ ವಚಃ ಶ್ರುತ್ವಾ ರಾಜಾ ಪರಮ ದುರ್ಮನಾಃ)
ಏನು? ಕೈಕೆ ಕೋಪಗೃಹಕ್ಕೆ? ಅವಳೆಂದೂ ಕೋಪ ಮಾಡಿಕೊಂಡೇ ಇಲ್ಲ. ಕೋಪಿಸಲಲ್ಲ; ಅಸಮಾಧಾನಗೊಳ್ಳಲೂ ಕಾರಣವಿಲ್ಲ! ಅವಳು ಹೇಳಿದುದು ಯಾವುದು ಆಗದೇ ಇದೆ? ಕ್ರೋಧ ಮನೆಯ ದಾರಿಯಲ್ಲಿ ಯಾರೂ ಇಲ್ಲ! ದೀಪವೇ ಹಚ್ಚಿಲ್ಲ! ಕಾಲಿಗೇನೋ ಒತ್ತಿತು! ಎತ್ತಿ ನೋಡಿದ. ಗೆಜ್ಜೆ! ಕೊಂಚ ದೂರದಲ್ಲಿ ಕಂಠೀಹಾರ!! ಓಹ್!! ಮುಂದೆ ಬಂಗಾರ ಬಳೆಗಳು!!!
ಕೋಪಗೃಹದ ಬಾಗಿಲಲ್ಲೆ ಮುದುಡಿ ಬಿದ್ದ ಮುಡಿದ ಮಾಲೆ
ಮೊಬ್ಬು ಬೆಳಕು ಮಂದದೀಪ, ಚಿನ್ನಡಾಬು ತುಳಿದು ನಿಂತ!
ಮಂಚ ಖಾಲಿ ಕೆಳಗೆ ಕಪ್ಪು ಸೀರೆಯುಟ್ಟ ಕಾಮುಕಾಂಗಿ!
ನೆಲದ ಧೂಳು ಸೀರೆ ಮೆತ್ತೆ. ಉಟ್ಟ ಬಟ್ಟೆ ಅಸ್ತವ್ಯಸ್ತ 
ಬಿರಿದ ಕೇಶ ತಿಲಕವಿಲ್ಲ ಕಣ್ಣ ಕೊಳದ ತುಂಬ ನೀರು!
ಬಾಲೆ ಮಡದಿ ಬರಿಯ ನೆಲದಿ ಅಳುತ ಬಿದ್ದಿರುವುದ ಕಂಡ!
ಹರಿದ ಹಾರ, ಮುರಿದ ಮೂರ್ತಿ, ಕಡಿದ ಕದಳಿಯಂತೆ ಕೈಕೆ
ನೆಲಕೆ ಬಿದ್ದ ರತಿಯೊ ಸತಿಯೊ? ತನ್ನ ಪ್ರಾಣ ಪತಿತವಾಯ್ತೊ?
ಎನುತ ರಾಜ ತಳಮಳಿಸುತ ಎದೆಯು ನಡುಗೆ ಕುಸಿದು ಬಿದ್ದ
ಮುದಿಯ ಮನಕೆ ಮುಳ್ಳು ಮುರಿಯೆ ತಡವರಿಸುತ ಸಂತೈಸಿದ.(ಮುಂದುವರೆಯುವುದು....)  
*****************
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com