ಯುವರಾಜ ರಾಮ ಜಾರಿಗೊಳಿಸಬೇಕೆಂದುಕೊಂಡಿದ್ದ ಮೊದಲ ಶಾಸನ ಇಂದಿಗೂ ಮಾದರಿ!

"ಹೌದು! ಹೇಳಿ ನೀವು ಯುವರಾಜರಾಗುತ್ತಿದ್ದಂತೆ ಮೊದಲು ಯಾವ ಶಾಸನ ಮಾಡಬೇಕೆಂದಿದ್ದೀರಿ? "ಸೀತೆ ರಾಮರನ್ನು ಕೇಳಿದಳು. ಕ್ಷಣಮಾತ್ರವೂ ಯೋಚಿಸದೇ ಶ್ರೀರಾಮರು ಹೇಳಿದರು; "ಪ್ರಿಯೆ, ನೀನಂದುಕೊಂಡಂತೆ....
ರಾಮ
ರಾಮ
ಕೈಕೆಯ ನಂಜಿನ ಮಾತು ಕೇಳುತ್ತಿದ್ದಂತೆಯೇ "ರಾಮಾ" ಎಂದು ಚೀರಿ ಬುಡ ಕಡಿದ ಮರದಂತೆ ಉರುಳಿ ಬಿದ್ದುಬಿಟ್ಟ ದಶರಥ. ಹುಚ್ಚು ಹಿಡಿದಂತಾಯಿತು. ಬುದ್ಧಿಗೆಟ್ಟು ತೊದಲತೊಡಗಿದ. ಯದ್ವಾತದ್ವಾ ಬಡಬಡಿಸತೊಡಗಿದ. ಅಪಾಯ ಕಂಡ ಸರ್ಪ ಫೂತ್ಕರಿಸಿ ಹೆಡೆ ಎತ್ತಿ ಅಲ್ಲಾಡದಂತೆ ತಟಸ್ಥನಾಗಿಬಿಟ್ಟ.
*****************
ಸೀತೆಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದಾರೆ ರಾಮರು. ಸೀತೆಯ ಬೆರಳುಗಳು ರಾಮರ ತಲೆಗೂದಳೊಳಗೆ ಓಡಾಡುತ್ತಿವೆ. ಸಂತೋಷದ ಅಲೆ ಇಬ್ಬರನ್ನೂ ಅಪ್ಪಿದೆ. ನಿನ್ನೆ ಮಹಾರಾಜರು ಕರೆಸಿ ಹೇಳಿದ್ದ ಯೌವ್ವರಾಜ್ಯಾಭಿಷೇಕದ ಬಗ್ಗೆ ತಮ್ಮ ಸುಖವನ್ನು ಎಷ್ಟನೆಯ ಬಾರಿಯೋ ಹಂಚಿಕೊಳ್ಳುತ್ತಿದ್ದಾರೆ ಪರಸ್ಪರ. 
"ಹೌದು! ಹೇಳಿ ನೀವು ಯುವರಾಜರಾಗುತ್ತಿದ್ದಂತೆ ಮೊದಲು ಯಾವ ಶಾಸನ ಮಾಡಬೇಕೆಂದಿದ್ದೀರಿ? "ಸೀತೆ ರಾಮರನ್ನು ಕೇಳಿದಳು. ಕ್ಷಣಮಾತ್ರವೂ ಯೋಚಿಸದೇ ಶ್ರೀರಾಮರು ಹೇಳಿದರು; "ಪ್ರಿಯೆ, ನೀನಂದುಕೊಂಡಂತೆ ತಕ್ಷಣ ನನಗೆ ಶಾಸನಾಧಿಕಾರ ಸಿಗುವುದಿಲ್ಲ. ಯಾವುದಾದರೂ ಶಾಖೆಗಳನ್ನು ನಿರ್ವಹಿಸಲು ನನಗೆ ಹೇಳಿದರೆ ಆಗ ಅದನ್ನು ಮಾಡಬಹುದು. ಆದರೆ ಯಾವುದನ್ನು ಕೊಡುತ್ತಾರೆಂದು ನನಗೆ ಗೊತ್ತಿಲ್ಲ. ಅಕಸ್ಮಾತ್ ನನ್ನನ್ನೇ ಕೇಳಿದರೆ, ನನಗೆ ಶಿಕ್ಷಣ ಹಾಗೂ ಸಮಾಜ ಕಲ್ಯಾಣವನ್ನು ಕೊಡಬೇಕೆಂದು ಕೇಳುತ್ತೇನೆ."
ಉಪ್ಪರಿಗೆಯ ಶಿಖರದಲ್ಲಿ ಕನಸು ಕಾಣುತ್ತಿದ್ದ ಸೀತೆ ನೆಲಕ್ಕಿಳಿದಳು. " ಹೌದೌದು. ಶ್ರೀರಾಮರೀಗ ಯುವರಾಜರಾಗುತ್ತಾರಷ್ಟೇ! ಪೂರ್ಣಾಧಿಕಾರ ಬರಲು ತನ್ನ ಪತಿ ಮಹಾರಾಜರಾಗಬೇಕು. ಅದು ಈಗಿನ ಮಾತಲ್ಲ. ಬೇಗಾಗಬೇಕೆಂದು ಬಯಸುವುದೂ ಸರಿಯಲ್ಲ! ವಿಧಿಯ ಇಚ್ಛೆ ಯಾವಾಗ ಇದ್ದರೆ ಆಗ ಆಗಲಿ. "ಗಂಡನ ತೋಳಿನ ಮೇಲೆ ಕೈ ಆಡಿಸುತ್ತ ಕೇಳಿದಳು; "ಹೌದು! ಅದೇನು? ಕೃಷಿ, ಕಾರ್ಖಾನೆ, ಕೈಗಾರಿಕೆ, ಸಾರಿಗೆ, ಗಣಿ, ವಿದೇಶ, ಗೃಹ, ಧನ.... ಈ ಎಲ್ಲ ವಿಭಾಗಗಳನ್ನೂ ಬಿಟ್ಟು ಕೇವಲ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಕೇಳಬೇಕೆಂದಿದ್ದೀರಿ?"
ಮಲಗಿದ್ದ ರಾಮರು ಎದ್ದು ಕುಳಿತರು. ಅವರ ನೋಟ ಗಂಭೀರವಾಯಿತು. ಮಾತು ಖಚಿತವಾಯಿತು. "ಜನಕ್ಕೆ ಒಳಿತಾಗಬೇಕಿದ್ದರೆ ಮೊದಲು ಙ್ಞಾನದ ಮಟ್ಟ ಹೆಚ್ಚಬೇಕು. ಅಧ್ಯಯನದಲ್ಲಿಯೂ ಇಲ್ಲಿಯ ತನಕ ಕೇವಲ ಗುರುಪ್ರಭಾವಕ್ಕೆ ಒಳಗಾದ ಶಿಷ್ಯನ ವಿದ್ವತ್ತು ವಿಕಸಿಸುತ್ತಿದೆಯೇ ವಿನಃ ಹೆಚ್ಚು ಹೆಚ್ಚು ಚಿಂತನೆಗಳು, ಹೊಸ ಹೊಸ ಆವಿಷ್ಕಾರಗಳೂ ಆಗುತ್ತಿಲ್ಲ. ವೇದಾಧ್ಯಯನವನ್ನು ಹಲವಾರು ವರ್ಷಗಳು ನಡೆಸುತ್ತಿದ್ದಾರಾಗಲೀ, ವೇದಾಂತದ ಬಗ್ಗೆ ಕುತೂಹಲವಾಗಲೀ ಉತ್ಸಾಹವಾಗಲೀ ಇಲ್ಲ. ಎಲ್ಲಾ ಮುದುಕರಾದಮೇಲೆ, ಸಂಸಾರ ಬಿಟ್ಟಮೇಲೆ, ಸನ್ಯಾಸಿಗಳಿಗೆ ಎಂಬ ಭಾವನೆ ಬೆಳೆದುಬಿಟ್ಟಿದೆ. ನಿಜವಾದ ವಿದ್ಯೆಯೆಂದರೆ ವೇದಾಂತವೇ ಎಂಬ ಅರಿವನ್ನು ಹೆಚ್ಚಿಸಬೇಕಿದೆ. ಲೌಕಿಕ, ಸಾಮಾಜಿಕ, ವೃತ್ತಿ, ಸಂಸಾರ, ಆಸ್ತಿ, ಅಭಿವೃದ್ಧಿ.... ಎಲ್ಲ ಸರಿ, ಇವೆಲ್ಲ ಜೀವನದಲ್ಲಿನ ಕುತೂಹಲ ಘಟ್ಟಗಳೇ; ರಸಾಧ್ಯಾಯಗಳೇ ಸರಿ. ಇಲ್ಲವೆನ್ನುವುದಿಲ್ಲ. ಆದರೆ ಇವಿಷ್ಟೇ ಜೀವನ ಅಲ್ಲ. ಇದರಾಚೆಗೂ ಏನೋ ಇದೆ. ಜೀವಿಯ ಹುಟ್ಟಿನ ಹಿಂದಿನ ಹಗರಣಗಳೇನು? ಹೇಗಿದ್ದ, ಎಲ್ಲಿದ್ದ, ಏನೇನು ಮಾಡಿದ.... ಇವಾವುವೂ ನಮಗೆ ಗೊತ್ತಿಲ್ಲ. ಸತ್ತ ಮೇಲೆ ಏನು? ಅಲ್ಲಿಗೇ ಮುಕ್ತಾಯವೆ? ಮುಂದೇನಾದರೂ ಇದ್ದರೆ ಅದೇನು? ಭವಿಷ್ಯದ ಬೆಳಕೇನು? ... ಇವೂ ಗೊತ್ತಿಲ್ಲ. 
ನಮ್ಮ ಗುರುಗಳು ವಸಿಷ್ಠರಿಗೂ ಈ ಬಗ್ಗೆ ಹೆಚ್ಚು ಆಸಕ್ತಿ ಇದ್ದಂತಿಲ್ಲ. ಅವರು ಬಹು ದೊಡ್ಡವರೇ ಋಗ್ವೇದದ ಏಳನೆಯ ಮಂಡಲ ಪೂರ ಅವರೇ ದರ್ಶಿಸಿದ್ದಾರೆ. ಅದರಲ್ಲಿ 840 ಋಚೆಗಳಿವೆ. ಬಹುದೊಡ್ಡ ದಾರ್ಶನಿಕರವರು. ಆದರೂ ಅವರ ಹೆಸರು ಉಪನಿಷತ್ತಿನಲ್ಲಿ ಇಲ್ಲ. ಹಾಗೆ ನೋಡಿದರೆ ಅವರ ಶಿಷ್ಯರು ವಾಮದೇವ ಗೌತಮರು; ಅವರ ಹೆಸರು ಬೃಹದಾರಣ್ಯಕೋಪನಿಷತ್ತಿನಲ್ಲಿದೆ. ಅವರನ್ನು ಉದ್ಧರಿಸಿದ್ದು ಯಾಙ್ಞಾವಲ್ಕ್ಯ ಮಹರ್ಷಿಗಳು. ಓಹ್ !.... ಅವರದೊಂದು ದೊಡ್ಡ ಕಥೆ. ಮಹಾಸಾಹಸಿ, ಮಹಾ ತಪಸ್ವಿ. ಅವರ ಬಗ್ಗೆ ಇನ್ನೆಂದಾದರೂ ಹೇಳುವೆ. ಅವರೇ ಬೃಹದಾರಣ್ಯಕವನ್ನು ಬರೆದದ್ದು. ಅವರೇ ಸತ್ಯವಾದ, ಮಹಾ ವಾಕ್ಯವಾದ, ಶಾಶ್ವತ ನಿರಂತರ ನಿರಪೇಕ್ಷ ಬ್ರಹ್ಮನ್ ಬಗ್ಗೆ ಮಾತನಾಡಿ, "ಅಹಂ ಬ್ರಹ್ಮ ಅಸ್ಮಿ" ಎಂಬ ಪರಮ ಘೋಷವನ್ನು ಮಾಡಿದ್ದು. ಇದನ್ನೇ ನಾವು ಅರಿಯಬೇಕಿದೆ. ಈ ಮಹಾ ಸತ್ಯವನ್ನು ಜನರಿಗೆ ಅರ್ಥವಾಗುವಂತೆ ಹೇಳುವ, ಅಖಂಡ ಭಾರತವನ್ನು ಪರ್ಯಟಿಸಿ ಈ ಉಪನಿಷತ್ತಿನ ದರ್ಶನವನ್ನು ಮಾಡಿಸುವ ಮಹಾನುಭಾವ ಯಾವಾಗ ಬರುತ್ತಾನೋ, ಯಾವ ಅವತಾರದಲ್ಲಿ ಬರುತ್ತಾನೋ ಎಲ್ಲಿ ಬರುತ್ತಾನೋ ಕಾದು ನೋಡಬೇಕಿದೆ."
ಶ್ರೀರಾಮರ ಮಾತಿನಲ್ಲಿ ಮಗ್ನಳಾಗಿಬಿಟ್ಟಿರುವ ಮಡದಿಯನ್ನು ಮೆಚ್ಚುತ್ತ, ಶ್ರೀರಾಮರು ಮಾತು ಮುಂದುವರಿಸಿದರು. "ಇದು ಮುಂದೆ ಆಗಲೇ ಬೇಕಿರುವ ವಿದ್ವತ್ ದರ್ಶನ. ಆದರೆ ಈಗ ಆಗಬೇಕಿರುವ ಮತ್ತೊಂದು ಮಹಾ ಮುಖ್ಯ ವಿಷಯವಿದೆ. ಅದೆಂದರೆ ನಾಸ್ತಿಕತೆಯ ಬೀಜಗಳನ್ನು ಹಲವರು ಹರಡುತ್ತಿದ್ದಾರೆ, ಅದನ್ನು ನೋಡುತ್ತಿದ್ದೇವೆ ನಾವು. ವೇದದ ನಾಸದೀಯ ಸೂಕ್ತದ ಕುತೂಹಲ ವಿಸ್ಮಯ ಬೆರಗು ಭಾಷೆಯನ್ನು ಪೂರ್ಣವಾಗಿ, ಆಳವಾಗಿ ಅರ್ಥಮಾಡಿಕೊಳ್ಳದೇ, ಕೆಲವರು ತಮ್ಮ ವಾದಕ್ಕೆ ಅದೇ ಆಧಾರವೆಂಬಂತೆ ಮಾತನಾಡುತ್ತಿದ್ದಾರೆ. ದೌರ್ಭಾಗ್ಯವೆಂದರೆ ನಮ್ಮ ಆಸ್ಥಾನದ ಋಷಿಗಳೊಬ್ಬರೂ ಈ ನಾಸ್ತಿಕತೆಯ ಪ್ರಚಾರ ಮಾಡುತ್ತಿದ್ದಾರಂತೆ. ನನಗೆ ಅವಕಾಶ ಸಿಕ್ಕರೆ ನಾನಿದನ್ನು ಖಂಡಿಸಬೇಕು. ತರ್ಕಕ್ಕಾಗಿ ತರ್ಕ, ಮೋಜಿಗಾಗಿ ತರ್ಕ, ವಿರೋಧಕ್ಕಾಗಿ ತರ್ಕ... ಇಂತಹ ಮಾತುಗಳಿಂದ ಜನರು ಭ್ರಮಿತರಾಗುತ್ತಾರೆ. ಅದರ ನಿವಾರಣೆಯಾಗಬೇಕಿದೆ. ಇವನ್ನೆಲ್ಲ ಆಗ ಮಾಡಲು, ಪ್ರಸಿದ್ಧಿ ಮಾಡಲು, ಪ್ರಚಾರ ಮಾಡಲು ನನಗೆ ಸ್ವತಂತ್ರವಾದ ಸರಕಾರೀ ಯಂತ್ರ ಬೇಕಾಗಿದೆ. ಅದೀಗ ಸಿಗುವ ಸಾಧ್ಯತೆ ಇದೆ. ಸಿಕ್ಕರೆ ಈ ಕೆಲಸವನ್ನು ತುಂಬ ಇಷ್ಟಪಟ್ಟು ಮಾಡುತ್ತೇನೆ. 
ಇಷ್ಟಲ್ಲದೇ ಮತ್ತೊಂದು ಮಹಾವಿದ್ಯೆ ಪಕ್ಕದ ದೇಶಗಳಲ್ಲಿ ಇವೆಯಂತೆ. ಅದೆಂದರೆ ವೈಙ್ಞಾನಿಕ ಚಿಂತನೆ. ನಮ್ಮ ಉಪನಿಷತ್ತುಗಳಲ್ಲಿಯೂ ಅದರ ಬಗ್ಗೆ ಸೂಚನೆಗಳಿವೆ. ತೈತ್ತರೀಯ ಭೃಗುವಲ್ಲಿಯಲ್ಲಿಯೇ "ವಿಙ್ಞಾನಂ ಬ್ರಹ್ಮ ಇತಿ ವ್ಯಜಾನಾತ್" ಎಂಬ ದರ್ಶನವಿದೆ. ಆದರೆ ಅದರ ಬಗ್ಗೆ ನಮ್ಮವರಿಗೆ ಹೆಚ್ಚು ಆಸ್ಥೆ ಇಲ್ಲ. ವಿಙ್ಞಾನದ ಅನ್ವೇಷಣೆಗೆ ನಾವು ಹೆಚ್ಚು ಪ್ರಯತ್ನಿಸಲಿಲ್ಲ. ಗುರುಗಳು ವಿಶ್ವಮಿತ್ರರು ಹೇಳುತ್ತಿದ್ದರು; ಗಗನದಲ್ಲಿ ಹಾರುವ ವಿಮಾನವನ್ನು ನಮ್ಮ ಪೂರ್ವಜರು ಬಹು ಹಿಂದೆ ಬಳಸುತ್ತಿದ್ದರಂತೆ. ಬಲಿ ಚಕ್ರವರ್ತಿಯ ಓಡಾಟ ಇದರಲ್ಲೇ ಆಗುತ್ತಿತ್ತಂತೆ. ಆತ ಕೊನೆಗೆ ನಮ್ಮ ಭಾರತವನ್ನು ಬಿಟ್ಟು "ಸುತಲ" ವೆಂಬ ರಾಜ್ಯವನ್ನು ಕಟ್ಟುಕೊಂಡು ಹೋಗಿ ಅಲ್ಲಿಯೇ ನೆಲೆಸಿಬಿಟ್ಟನಂತೆ! ಈಗ ಆ ವಿದ್ಯೆ "ಸ್ವರ್ಣಲಂಕೆ" ಯಲ್ಲಿದೆಯಂತೆ. ಅಲ್ಲಿನ ರಾಜ ರಾವಣ ಪುಷ್ಪಕ ವಿಮಾನದಲ್ಲಿಯೇ ಓಡಾಡುವನಂತೆ! ಈತನೇ ನಮ್ಮ ವಂಶದ ಅನರಣ್ಯ ರಾಜನ ಮೇಲೆ ಯುದ್ಧಕ್ಕೆ ಬಂದಿದ್ದನೆಂದು ಅರಮನೆಯ ವಂದಿ ಮಾಗಧರು ಆ ಕಥೆಯನ್ನು ಹೇಳುತ್ತಾರೆ. ನನಗೆ ಆ ವಿಮಾನ ವಿದ್ಯೆಯನ್ನು ಕಲಿತು ನಮ್ಮ ಭಾರತದಲ್ಲಿ ಪ್ರಚಾರ ಮಾಡಬೇಕೆಂಬ ತೀವ್ರ ಬಯಕೆ ಇದೆ." 
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com