ಕ್ಯಾಸಿನೊ ಬಲೆಯಲ್ಲಿ ಜರ್ಜರಿತ ಜಾರ್ಜಿಯಾ!.

ಜನ ಸಾಕಷ್ಟು ನೆಮ್ಮದಿಯಿಂದ ಬದುಕುತ್ತಿದ್ದರು. ಜನರ ನೆಮ್ಮದಿಯನ್ನ ಎಂದೂ ಗಣನೆಗೆ ತೆಗೆದುಕೊಳ್ಳದ ಒಂದಷ್ಟು ಶಕ್ತಿ ಕೇಂದ್ರಗಳು ಜಾಗತಿಕವಾಗಿ ಪ್ರಬಲ ಶಕ್ತಿಯಾಗಲು ಹೊಡೆದಾಟ ನಡೆಸುತ್ತಲೆ ಬಂದಿವೆ.
ಕ್ಯಾಸಿನೊ ಬಲೆಯಲ್ಲಿ ಜರ್ಜರಿತ ಜಾರ್ಜಿಯಾ!
ಕ್ಯಾಸಿನೊ ಬಲೆಯಲ್ಲಿ ಜರ್ಜರಿತ ಜಾರ್ಜಿಯಾ!
Updated on
ಜಾರ್ಜಿಯಾ ಎನ್ನುವ ದೇಶ ಮೊದಲಿಗೆ ಯುಎಸ್ಎಸ್ಆರ್ ನ  ಭಾಗವಾಗಿತ್ತು. ಅಮೇರಿಕಾ ಮತ್ತು ರಷ್ಯಾ ನಡುವಿನ ಶೀತಲ ಸಮರದಲ್ಲಿ ಕೊನೆಗೂ ಕಮ್ಯುನಿಸ್ಟ್ ರಷ್ಯಾ ಸೋಲುತ್ತದೆ. ಸೋವಿಯತ್ ಯೂನಿಯನ್ ಛಿದ್ರವಾಗುತ್ತವೆ. ಹೀಗೆ ಛಿದ್ರವಾಗಿ ಅನೇಕ ಹೊಸ ರಾಷ್ಟ್ರಗಳ ಉದಯವಾಗುತ್ತದೆ. ಜಾರ್ಜಿಯಾ ಅದರಲ್ಲಿ ಒಂದು. ತೂಬಿಲಿಸಿ ಜಾರ್ಜಿಯಾದ ರಾಜಧಾನಿ. ಮಧ್ಯಮ ಯುಗದ ಜಾರ್ಜಿಯಾ ಸಮೃದ್ಧವಾಗಿತ್ತು. ಕಪ್ಪು ಸಮುದ್ರವನ್ನ ನೋಡಲು ಬರುವ ಜನರ ಆರೈಕೆಯಲ್ಲಿ ಟೂರಿಸಂ ಬಹಳ ಚನ್ನಾಗೇ ಅಭಿವೃದ್ಧಿ ಹೊಂದಿತ್ತು. 
ಮ್ಯಾಂಗನೀಸ್ ಮತ್ತು ತಾಮ್ರವನ್ನ ಗಣಿಗಾರಿಕೆ ಮಾಡಿ ಕೂಡ ಸಾಕಷ್ಟು ಹಣವನ್ನ ಸರಕಾರ ಗಳಿಸುತ್ತಿತ್ತು . ಜೊತೆಗೆ ಸಿಟ್ರಸ್ ಮೂಲದ ಹಣ್ಣುಗಳನ್ನ ಬೆಳೆಯುವುದು ಕೂಡ ಸಾಕಷ್ಟು ಲಾಭ ತಂದುಕೊಡುವ ಉದ್ಯಮವಾಗಿತ್ತು. ಅಲ್ಲದೆ ಟೀ ಮತ್ತು ದ್ರಾಕ್ಷಿ ಹಣ್ಣು ಬೆಳೆಸುವುದು ಕೂಡ ಲಾಭದಾಯಕ ಉದ್ದಿಮೆಯಾಗಿತ್ತು. ಇವೆಲ್ಲವುಗಳ ಜೊತೆಗೆ ಕೈಗಾರೀಕರಣ ಕೂಡ ಬಹಳವಲ್ಲದಿದ್ದರೂ ಸಾಕಷ್ಟು ಇತ್ತು. ಮೆಟಲ್, ಮಷಿನರಿ, ಕೆಮಿಕಲ್ ಮತ್ತು ಟೆಕ್ಸ್ ಟೈಲ್ ಕೈಗಾರಿಕೆಗಳು ಕೂಡ ಸರಕಾರದ ಖಜಾನೆ ತುಂಬಿಸುವ ಆದಾಯದ ಮೂಲವಾಗಿದ್ದವು. 
ಜನ ಸಾಕಷ್ಟು ನೆಮ್ಮದಿಯಿಂದ ಬದುಕುತ್ತಿದ್ದರು. ಜನರ ನೆಮ್ಮದಿಯನ್ನ ಎಂದೂ ಗಣನೆಗೆ ತೆಗೆದುಕೊಳ್ಳದ ಒಂದಷ್ಟು ಶಕ್ತಿ ಕೇಂದ್ರಗಳು  ಜಾಗತಿಕವಾಗಿ ಪ್ರಬಲ ಶಕ್ತಿಯಾಗಲು ಹೊಡೆದಾಟ ನಡೆಸುತ್ತಲೆ ಬಂದಿವೆ. ಅಮೆರಿಕಾ ಜೊತೆಗಿನ ರಷ್ಯಾದ ಶೀತಲ ಸಮರದಲ್ಲಿ ರಷ್ಯಾ ಛಿದ್ರವಾಗುತ್ತೆ. ಅದರೊಂದಿಗೆ ಜಗತ್ತು ಬದುಕುವ ರೀತಿ ಕೂಡ ಬದಲಾಗುತ್ತೆ. ಅನಂತರ ಒಂದೂವರೆ ದಶಕಗಳ ಕಾಲ ಅಮೆರಿಕಾಕ್ಕೆ ಸೆಡ್ಡು ಹೊಡೆಯುವರು ಯಾರು ಇರಲಿಲ್ಲ ಎನ್ನಬಹದು. ಚೀನಾದ ಪ್ರವೇಶದೊಂದಿಗೆ ಅಮೆರಿಕಾ ಮತ್ತೆ ಪ್ರಬಲ ಪೈಪೋಟಿಗೆ ಮುಖ ಮಾಡಿದೆ. ಚೀನಾ ಜೊತೆಗೆ ಭಾರತ ಕೂಡ ಅಮೆರಿಕಾದ ಸಾರ್ವಾಭೌಮತ್ವಕ್ಕೆ ಸವಾಲಾಗಿ ನಿಂತಿದೆ. ಈ ಸಮಯದಲ್ಲಿ ಟೆಕ್ನಾಲಜಿ ಎನ್ನುವುದು ಜಗತ್ತು ಊಹಿಸಲಾಗದ ವೇಗದಲ್ಲಿ ಜಗತ್ತನ್ನ ಮತ್ತು ಜನರನ್ನ ಆಕ್ರಮಿಸಿದೆ. ತಿಂಗಳುಗಳು ತೆಗೆದುಕೊಳ್ಳುತ್ತಿದ್ದ ಕೆಲಸಗಳು ದಿನಗಳಲ್ಲಿ ಅಥವಾ ಗಂಟೆಗಳಲ್ಲಿ ಮುಗಿದುಹೋಗುವ ವೇಗ ಪಡೆದುಕೊಂಡಿದೆ. ತಂತ್ರಜ್ಞಾನ ಬಳಕೆ ಮಾಡಿಕೊಂಡು ಬಹಳಷ್ಟು ದೇಶಗಳು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿವೆ. ಒಂದು ನಾಣ್ಯಕ್ಕೆ ಎರಡು ಮುಖವಿರುವಂತೆ ತಂತ್ರಜ್ಞಾನ ತನ್ನೊಂದಿಗೆ ಒಂದಷ್ಟು ಘಾತುಕ ವಿಷಯಗಳನ್ನ ಕೂಡ ಹೊತ್ತು ತಂದಿದೆ. ಜಪಾನ್ ದೇಶ ಆನ್ಲೈನ್ ಆಟಗಳಿಗೆ ಅಡಿಕ್ಟ್ ಆಗಿರುವುದು ಮತ್ತು ಜನ ವರ್ಚುಯಲ್ ವರ್ಲ್ಡ್ ನಲ್ಲಿ ಮುಳುಗಿರುವುದು ತಿಳಿದ ವಿಷಯ. ಜಾರ್ಜಿಯಾ ಕೂಡ ತಂತ್ರಜ್ಞಾನದ ಸೈಡ್ ಎಫೆಕ್ಟ್ ನಿಂದ ಜರ್ಜರಿತವಾಗಿದೆ. ಏನು? ಎತ್ತ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ  ಮಾಡೋಣ. 
ಜಾರ್ಜಿಯಾ  ಒಟ್ಟು ಜನಸಂಖ್ಯೆ 39 ಲಕ್ಷ. ಅಂದರೆ ಬೆಂಗಳೂರಿನ ಜನಸಂಖ್ಯೆಯ ಒಂದನೇ ಮೂರು ಭಾಗದಷ್ಟು!! ಯುಎಸ್ಎಸ್ಆರ್ ಭಾಗವಾಗಿ ಹೊಸ ಹದಿನೈದು ದೇಶಗಳ ಉಗಮವಾಗುತ್ತದೆ. ಅದರಲ್ಲಿ ಜಾರ್ಜಿಯಾ ಒಂದು. 80 ಪ್ರತಿಶತ ಕ್ರಿಶ್ಚಿಯನ್, 11 ಪ್ರತಿಶತ ಮುಸ್ಲಿಂ ಮತ್ತು ಉಳಿದ ಧರ್ಮದ ಜನ ಇಲ್ಲಿದ್ದಾರೆ. ನಲವತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆಯ ಜಾರ್ಜಿಯಾ ಸುಖವಾಗೇ ಇತ್ತು. ಎಲ್ಲಿಯವರೆಗೆ ಆನ್ಲೈನ್ ಜೂಜಾಟ ಅಥವಾ ಗ್ಯಾಂಬಲಿಂಗ್ ಇರಲಿಲ್ಲವೂ ಅಲ್ಲಿಯವರೆಗೆ. ಇದೀಗ ಇಲ್ಲಿನ 7 ಲಕ್ಷ ಜನಸಂಖ್ಯೆ ಈ ಜೂಜಾಟದ ದಾಸರಾಗಿದ್ದಾರೆ. ಅಂದರೆ ಜನಸಂಖ್ಯೆಯ 18 ಪ್ರತಿಶತ ಇಂತಹ ಒಂದು ಅಡ್ಡಿಕ್ಷನ್ ಗೆ ತುತ್ತಾಗಿದ್ದಾರೆ. ಇಂತಹ ಆಟವನ್ನ ಆಡಲು 18 ವರ್ಷ ತುಂಬಿರಬೇಕು. ಇದು ಯೂರೋಪಿನ ದೇಶಗಳಲ್ಲಿ 21 ಅಥವಾ 23 ಇದೆ. ಆದರೆ ಜಾರ್ಜಿಯಾದ ಯುವಜನತೆಗೆ ಇದೊಂದು ತರ ಹುಚ್ಚು ಹಿಡಿದಿದೆ. ಬಹಳಷ್ಟು ಯುವ ಜನತೆ ತಮ್ಮ ಪೋಷಕರ ಅಥವಾ ಸಂಬಂಧಿಗಳ ಗುರುತನ್ನ ಬಳಸಿ ಇಂತಹ ಆನ್ಲೈನ್ ಅಡ್ಡಗಳಲ್ಲಿ ಆಟ ಆಡಲು ಬರುತ್ತಾರೆ. ಇದು ಅವರ ಮುಂದಿನ ದಾರಿಯನ್ನ ಮುಚ್ಚು ಬಿಟ್ಟಿದೆ. ಮಧ್ಯಮ ವಯಸ್ಸಿನ ಜನ ಇದರಿಂದ ಸಂಸಾರದಲ್ಲಿ ಬಿರುಕು ತಂದು ಕೊಂಡಿದ್ದಾರೆ. ಜಾರ್ಜಿಯಾ ಇಂದು ಒಡೆದ ಮನೆ. ಜನರಲ್ಲಿ ಮಾನಸಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದು ಈಗ ರಾಷ್ಟ್ರಿಯ ಸಮಸ್ಯೆಯಾಗಿ ಅಲ್ಲಿನ ಸಂಸದರು ಇದಕ್ಕೆ ಪರಿಹಾರ ಹುಡುಕುತ್ತಿದ್ದಾರೆ. ಇದರ ಪಲವಾಗಿ ಇಂತಹ ಆಟಗಳ ಮೇಲಿನ ತೆರಿಗೆಯನ್ನ ದುಪಟ್ಟು ಗೊಳಿಸಲಾಯಿತು. ಹೀಗೆ ತೆರಿಗೆಯನ್ನ ದುಪಟ್ಟು ಗೊಳಿಸಿದ್ದರಿಂದ ಸರಕಾರದ ಖಜಾನೆಗೆ ಹೇರಳವಾಗಿ ಹಣ ಹರಿದು ಬರಿತ್ತಿದೆ. 2016 ರ ಅಂಕಿಅಂಶಕ್ಕೆ ಹೋಲಿಸಿದರೆ 2017 ಮತ್ತು 2018ರಲ್ಲಿ ಸಂಗ್ರಹವಾದ ಹಣದ ಮೊತ್ತ ಅಚ್ಚರಿಗೊಳಿಸುತ್ತದೆ. ಸರಕಾರಕ್ಕೆ ಇಷ್ಟು ಹಣ ಬರುತ್ತಿರಬೇಕಾದರೆ ಇನ್ನು ಇಂತಹ ಕ್ಯಾಸಿನೊ ನೆಡೆಸುವ ಜನರ ಜೇಬಿಗೆ ಎಷ್ಟು ದುಡ್ಡು ಬರುತ್ತಿರಬಹದು? ಹೀಗೆ ಬಹಳ ಹಣ ಸಂಪಾದಿಸರುವ ಈ ಜನ ಕ್ಯಾಸಿನೊ ಮುಚ್ಚಲು ಬಿಡದೆ ಲಾಬಿ ಮಾಡುತ್ತಿದ್ದಾರೆ. ಹೇಗಾದರೂ ಸರಿಯೇ ಜನರನ್ನ ದಾಸರನ್ನಾಗಿಸುವ ಈ ಆನ್ಲೈನ್ ಕ್ಯಾಸಿನೊಗಳನ್ನ ಮುಚ್ಚಿಸಬೇಕು ಎಂದು ಅಲ್ಲಿನ ಕೆಲವು ಕನ್ಸೆರ್ವೆಟಿವ್ ಪಕ್ಷದ ಹೋರಾಟ ಬಹಳಷ್ಟು ವರ್ಷಗಳಿಂದ ಜಯ ಕಂಡಿಲ್ಲ. 
ತೂಬಿಲಿಸಿ ನಗರದಲ್ಲಿ ಹೆಜ್ಜೆ ಹೆಜ್ಜೆಗೆ ಸ್ವರ್ಗವನ್ನ ನಾಚಿಸುವ, ಪ್ರಜ್ವಲಿಸುವ ಕ್ಯಾಸಿನೋಗಳು ಕಾಣಸಿಗುತ್ತವೆ. ಇಲ್ಲಿ ಆಡಲು ಬಂದವರು ನಶೆಗೆ ಒಳಗಾದವರಂತೆ ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ. ಸೋಲು ಅವರನ್ನ ಸಾಲದ ಸುಳಿಗೆ ತಳ್ಳುತ್ತದೆ. ಹೀಗೆ ಸಾಲದ ಸುಳಿಯಲ್ಲಿ ಸಿಕ್ಕವರ ಸಂಖ್ಯೆಯೂ ಅಸಂಖ್ಯ. ವಿದ್ಯಾಭ್ಯಾಸ ಮುಂದುವರಿಸಲಾಗದ ಯುವಜನತೆ, ಕೆಲಸ ಮಾಡಲಾಗದ ಜನತೆ, ಸಂಸಾರವನ್ನ ಕಳೆದುಕೊಂಡ ಜನತೆ ಹೀಗೆ ಜಾರ್ಜಿಯಾ ಹೊಸದೊಂದು ಸಮಸ್ಯೆಯ ಸುಳಿಯಲ್ಲಿದೆ. 
ಸರಕಾರ ದೇಶದ ಇತರ ನಾಗರಿಕರಿಗೆ ಈ ವೈರಸ್ ಹರಡುವ ಮುಂಚೆ ಹೀಗೆ ವ್ಯಸನಕ್ಕೆ ತುತ್ತಾದವರ ಹೊರತರಲು ಮನೋಶಾಸ್ತ್ರಜ್ಞರ ಮೊರೆ ಹೋಗಿದೆ. ಇಲ್ಲಿನ ಮನೋಶಾಸ್ತ್ರಜ್ಞರ ಪ್ರಕಾರ ಹೀಗೆ ವ್ಯಸನಕ್ಕೆ ಸಿಕ್ಕ ಜನತೆಯನ್ನ ಮರಳಿ ದಾರಿಗೆ ತರಲು ಸಮಯ ಬೇಕು ಎನ್ನುತ್ತಾರೆ. ಹಾಗೊಮ್ಮೆ ಈ ವ್ಯಸನದಿಂದ ಹೊರಬಂದ ವ್ಯಕ್ತಿ ಹೆಜ್ಜೆ ಹೆಜ್ಜೆಗೆ ಕಾಣುವ ಕಣ್ಣು ಕೋರೈಸುವ ಕ್ಯಾಸಿನೊ ಬಲೆಗೆ ಬೀಳುವುದು ಕಷ್ಟವೇನಲ್ಲ. ಕ್ಯಾಸಿನೊ ಬೇಡ ಎನ್ನುವರ ಸಂಖ್ಯೆ ಕಡಿಮೆಯೇನಿಲ್ಲ ಆದರೆ ಅದರ ಸದ್ದು ಮಾತ್ರ ಎಷ್ಟಿರಬೇಕು ಅಷ್ಟಿಲ್ಲ. ಕ್ಯಾಸಿನೊ ಪರವಾಗಿ ಲಾಬಿ ಮಾಡುವ ಜನ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚು ಹಣ ಮಾಡಿಕೊಂಡು ನಗುತ್ತಿದ್ದಾರೆ. 
ಇಂತಹ ಸಮಸ್ಯೆಯನ್ನ ಕೂಡ ಹಲವಾರು ವರ್ಷದಿಂದ ಸರಕಾರ  ಮುಂದೂಡಿಕೊಂಡು ಬಂದಿದೆ ಎಂದರೆ ಲಾಭಿಕೋರರ ಶಕ್ತಿ ಎಷ್ಟಿರಬಹದು? ಕೊನೆಗೆ ಒತ್ತಾಯ ತಡೆಯಲಾರದ ಸರಕಾರ ಕ್ಯಾಸಿನೊ ಬೇಕೋ ಬೇಡವೋ ಎನ್ನುವುದನ್ನ ಜನ ಮತ ಚಲಾಯಿಸಿ ನಿರ್ಧರಿಸಲಿ ಎಂದು ಹೇಳಿ ಕೈ ತೊಳೆದುಕೊಂಡಿದೆ. 
2014ರಲ್ಲಿ ಜಾರ್ಜಿಯಾ ಯೂರೋಪಿಯನ್ ಎಕನಾಮಿಕ್ ಝೋನ್ ನಲ್ಲಿ ಸದಸ್ಯತ್ವ ಪಡೆಯಿತು. ಅಂದರೆ ಇಲ್ಲಿ ಫ್ರೀ ಟ್ರೇಡ್ ಗೆ ಅವಕಾಶವಿದೆ. ಹೆಚ್ಚಿನ ತೆರಿಗೆ ಮತ್ತು ಪೇಪರ್ ವರ್ಕ್ ಇಲ್ಲದೆ ವ್ಯಾಪಾರ ಮಾಡಬಹದು. ಹೀಗಾಗಿ ಯೂರೋಪಿಯನ್ ಯೂನಿಯನ್ ಜಾರ್ಜಿಯಾದ ಮುಖ್ಯ ಟ್ರೇಡ್ ಪಾರ್ಟ್ನರ್. ಯೂರೋಪಿನಲ್ಲಿ ಸದ್ಯಕ್ಕೆ ಇರುವ ಸಮಸ್ಯೆಗಳಿಗೆ ಅವರು ಉತ್ತರ ಹುಡುಕುತ್ತಿದ್ದಾರೆ. 2007 ರಲ್ಲಿ ಅಮೆರಿಕಾದಲ್ಲಿ ಶುರುವಾದ ಹಣಕಾಸು ಮುಗ್ಗಟ್ಟು 2009ರಲ್ಲಿ ಯೂರೋಪನ್ನ ಆಕ್ರಮಿಸಿತ್ತು. ಅಂದಿನಿಂದ ಇಂದಿನ 2019ರಲ್ಲಿ ಕೂಡ ಯೂರೋಪ್ ಚೇತರಿಸಿಕೊಳ್ಳುವ ಹಂತದಲ್ಲೇ ಇದೆ. ಕಳೆದ ಎರಡು ವರ್ಷದಿಂದ ಯೂರೋಪಿನ ಮುಖ್ಯ ಎಂಜಿನ್ ಜರ್ಮನಿ ಕೂಡ ಸ್ವಲ್ಪ ನಿಧಾನಗತಿ ಕಂಡಿದೆ. ಬಹುತೇಕ ಯೂರೋಪ್ ದೇಶಗಳು ಹೇಳಿಕೊಳ್ಳುವ ಅಭಿವೃದ್ಧಿ ಕಾಣುತ್ತಿಲ್ಲ. ಜಾರ್ಜಿಯಾ ಎನ್ನುವ ದೇಶದಲ್ಲಿ ಎಲ್ಲವೂ ಸರಿಯಾಗಿದ್ದರೂ ಯೂರೋಪಿನ ಅವಲಂಬನೆಯಲ್ಲಿ ಬದುಕಬೇಕಾದ ಸ್ಥಿತಿಯಿದೆ. ಪರಿಸ್ಥಿತಿ ಹೀಗಿದ್ದೂ ಜಾರ್ಜಿಯಾ ಆಂತರಿಕವಾಗಿ ಕೂಡ ಸಮಸ್ಯೆಯಿಂದ ಬಳಲುತ್ತಿದೆ. 
ಕೊನೆ ಮಾತು: ಜಾರ್ಜಿಯಾ ಇಂದಿಗೆ ಇಂದೇ ಸಮಸ್ಯೆಯ ಸುಳಿಯಿಂದ ಹೊರಬಂದರೂ ಆರ್ಥಿಕವಾಗಿ ಸಬಲವಾಗಲು ಸಮಯ ಬೇಕು. ಜಗತ್ತಿನ ಕೆಲವು ಬಲಿಷ್ಠ ಮನೆತನಗಳು ಮತ್ತಷ್ಟು ಹಣವಂತರಾಗಲು ಮತ್ತಷ್ಟು ಜಗತ್ತಿನ ಮೇಲೆ ಹಿಡಿತ ಸಾಧಿಸುವ ಆಟದಲ್ಲಿ ಒಂದು ವರ್ಗದ ಜನ, ಒಂದು ತಲೆಮಾರು ಭವಿಷ್ಯವೆ ಇಲ್ಲದೆ ಜೀವವಿರುವ ಶವಗಳಾಗಿ ಹೇಗೆ ಕಳೆದು ಹೋಗುತ್ತಾರೆ ಎನ್ನುವುದು ಆಶ್ಚರ್ಯ ಹುಟ್ಟಿಸುತ್ತದೆ. ಅದರ ಜೊತೆ ಜೊತೆಗೆ ಕಣ್ಣ ಮುಂದಿರುವ 'ಟ್ರ್ಯಾಪ್ /ಬಲೆಯನ್ನ ' ಗಮನಿಸಿದೆ ಅಷ್ಟೊಂದು ದೊಡ್ಡ ಸಂಖ್ಯೆಯ ಜನ ಹೇಗೆ ಬಲಿಯಾಗುತ್ತಾರೆ ಎನ್ನವುದು ಕೂಡ ಕುತೂಹಲದ ಪ್ರಶ್ನೆ. ಜಗತ್ತಿನ ಮೇಲಿನ ಹಿಡಿತದ ಹೊಡೆದಾಟದಲ್ಲಿ ರಷ್ಯಾ ಛಿದ್ರವಾದ ಹಾಗೆ ಆಕಸ್ಮಾತ್ ಚೀನಾ ಛಿದ್ರವಾದರೆ?? ನಿಮ್ಮ ಮನೆಯಲ್ಲಿ ಮುಸುರೆ ತಿಕ್ಕಲು ಚೀನಿ ಹುಡುಗಿ ಇರುತ್ತಾಳೆ ಖಂಡಿತ!. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com